ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ
ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ
ಅದೇ ಕನ್ನಡಕದಲಿ ನಗು ಬೀರಿದ ನೆನಪು!
ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ
ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ
ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!
ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು
ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ-
ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ
ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ!
ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು
ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ
ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ!
ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು
ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು
ನೂರರ ನೋಟಿನಲಿ ನೂರೆನುವಾಗಲೂ
ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ!
ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ
ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ
ಮತ್ತೆ ಐನೂರರ ಗಾಳಿ ಬೀಸುವಾಗಲೂ
ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!
=======
