ಭಾನುವಾರ, ಸೆಪ್ಟೆಂಬರ್ 23, 2012

ಒಣಹುಲ್ಲು ಮತ್ತು ಮರಳಿ ಬಂದವರು!

ಮರಳಿ ಬಂದಿದೆ ನನ್ನ ಕರುವು ಮನೆಬಾಗಿಲಿಗೆ
ಹಗ್ಗವಿಲ್ಲದ ಬರಿದು ಕುತ್ತಿಗೆ ರೋಮವಿಲ್ಲದೆ,
ನೆತ್ತರು ಬತ್ತಿರಬಹುದು ಒಡಲೊಳಗೆ, ದೇವಬಲ್ಲ!

ಮೂರುತಿಂಗಳ ಬದುಕು ಅಮ್ಮನಿಲ್ಲದ ಬೇಗೆ
ಕಾಡಪೊದೆಯೊಳಗೆ ಕತ್ತಲೊಳು ನರಳಾಟ
ಹೆತ್ತವರವರೇ? ನಿನ್ನ ಮಗುವೆನಲು ಹಾಲುಣಿಸಿ?

ಬೆತ್ತಲಾಗಿದೆ ಮನವು ನನ್ನ ಕರುವಿನದು
ಎತ್ತಿ ಮುದ್ದಾಡಲು ಕಸುವಿಲ್ಲ, ಮುದಿಗೂಬೆ
ಬತ್ತಿದೆ ಕೆಚ್ಚಲು, ಹಾಲುದುರದೆ ಬರಿನೆತ್ತರು!

ಮಗುವೇ, ಮತ್ತೆ ಹೋಗದಿರು ಹುಲಿಪೊದೆಗೆ
ಮುಖವಾಡ ಹೊತ್ತವರಿಹರು ಹಲ್ಲುನಂಜು!
ನೀರ ಕುಡಿ ತೊರೆಯ ಗುಂಡಿಯಲಿರೆ ಹನಿ
ಒಣಹುಲ್ಲ ಎಸಳಿದೆ ಎನ್ನ ಬಳಿ ನಿನ್ನನುಣಿಸಲು!
=====
ಚಿತ್ರಕೃಪೆ: ಗೂಗಲ್ ಇಮೇಜಸ್


ಭಾನುವಾರ, ಸೆಪ್ಟೆಂಬರ್ 2, 2012

ಕೊಳವೆಬಾವಿ ಮತ್ತು ಕವಿ!

ಶಬ್ದ ಮಾಡುತ್ತಲೇ ಇದೆ ಯಂತ್ರ
ಮುಂಜಾವಿನಿಂದ ನಡುರಾತ್ರಿವರೆಗೂ
ಹನಿ ಚಿಮ್ಮಲು ಸಾವಿರದಡಿ ಕೊರೆತ!

ಮುನ್ನೂರಕೆ ಬಂದದ್ದೆಲ್ಲ ಬರಿ ಹುಲ್ಲು
ಆರ್ನೂರರ ಆಳಕ್ಕೆಲ್ಲ ಕರಿ ಧೂಳು
ಕೊರೆದಷ್ಟು ಬರಲಿ ಜೇಡಿ ನುಣುಪು!

ಹುಡುಕಬೇಕು ತಳ ಚಿಮ್ಮಲದು ಜಲ
ಬಿಸಿಯೇರದಿರದೇ ಬಸಿಯಲು ನೀರ
ಕೊರೆವ ಕೊಳವೆಗೆ ಕಲ್ಲ ರುಚಿ!

ನಿಟ್ಟುಸಿರು, ಸುಸ್ತು ಯಂತ್ರ
ತಳದಿ ನೀರು ಬರಲೆಂಬ ತವಕ
ಕೊರೆಕೊರೆದು ಚಿಮ್ಮುವ ತನಕ !

ಸ್ವಗತಃ;
ಬರವಿಲ್ಲಿ ಬಸಿರ ಮೋಡವು ಉಸಿರುಬಿಡದೇ
ಕೊರೆಯಲೇ ಬೇಕಲ್ಲ ಹೊಟ್ಟೆ ತಣಿಸಲು
ಸುಸ್ತಾಗಲೊಲ್ಲೆ ಹನಿಚಿಮ್ಮಿಸುವ ಕಾಯಕದಿ!
====
ಚಿತ್ರಕೃಪೆ: ಗೂಗಲ್ ಇಮೇಜಸ್