ಬುಧವಾರ, ಸೆಪ್ಟೆಂಬರ್ 28, 2011

"ದಾಳ"

ಅಲ್ಲಿ ಪಾಚಿಗಟ್ಟಿದ ಬಾವಿ, ಮೂರಡಿಯ ನೀರು
ಏಡಿ ಕೊರೆದ ತೂತು ಅಲ್ಲಲ್ಲಿ, ಕಪ್ಪೆಗಳ ಗೂಡು
ಲೆಕ್ಕವಿಲ್ಲದ ಹಿಂಡು ಹಿಂಡು ಮೀನುಗಳ ಸಾಲು

ಮೇಲೆ ಶುಭ್ರಾಕಾಶ, ನೀಲ ಬಾನಿನ ಮುಗುಳ್ನಗೆಗೆ
ನೀರು ನೀಲಿಯಾಗಿದೆ, ಪಾಚಿ ಎಂಬುದ ಮರೆತಿದೆ
ತಳ, ಕೆಸರ ತುಂಬಿ ಗಹ ಗಹಿಸಿದ್ದು ಕಾಣಲೇ ಇಲ್ಲ
ದಂಡೆಯಲಿ ಎರಡು ಹಸಿರು ಹುಲ್ಲ ನಗುವಿನಲ್ಲೆಲ್ಲ

ನೀರಹಾವಿನ ಸೀಳುನಾಲಿಗೆಗೂ ಮರಿಮೀನಿನ ರುಚಿ
ವಟಗುಡುವ ಕಪ್ಪೆಯೂ ರಾಗ ಮುದುಡಿಸಿದೆ ಬೆದರಿ
ಕಣ್ಣ ಮಿಟುಕಿಸುವ ಮಿಂಚುಳ್ಳಿಯದೂ ತವಕದ ಗಾಳ
ಕೊಕ್ಕ ನಡುವೆ ಮೀನ ಹೆಕ್ಕಿದ್ದೂ ತಿಳಿಯದಾ ದಾಳ

ರಾಟೆಯೊಳು ಇಳಿಬಿಟ್ಟ ಕೊಡದ ಒಳಗೂ ಮೀನು
ಇಣುಕಿ ಕೂತದ್ದು, ಪುಟ್ಟ ಬಾವಿಯ ಬಿಟ್ಟು, ನೀಲ
ಬಾನಿನ ಮುತ್ತಿಕ್ಕುವ ಆಸೆಗೆ, ಬರಿದಾಗಿ ಹಂಬಲ
ವಿಲ ವಿಲ ಒದ್ದಾಟದ ಕೊನೆಯ ಉಸಿರಿನ ಛಲ
ಹೆಪ್ಪುಗಟ್ಟಿದ್ದು ಕಲ್ಲು ತುಂಬಿದ ನೆಲದೊಳಗೆ.....

ಭಾನುವಾರ, ಸೆಪ್ಟೆಂಬರ್ 25, 2011

ಎಲ್ಲಿರುವೆ ಹುಡುಗ?

ಬೀಗ ಸ್ವಾಗತಿಸಿದೆ, ಬಾಗಿಲು ನಕ್ಕಿದೆ
ಕಿಟಕಿಯಲಿ ನಿಂತು ನೋಡಿದರೂ
ನಾ ಪ್ರೀತಿಯಲಿ ಕೂತ, ಓದಿದ
ಧೂಳು ಹಿಡಿದ ಬೆಂಚು, ಮೇಜುಗಳ
ಅಳುವ ಆಕ್ರಂದನ ಸಹಿಸಲಾಗಲಿಲ್ಲ..
ಗೋಡೆಗಾನಿಸಿದ ಕರಿಯ ಹಲಗೆ
ಬೊಬ್ಬಿರದಂತೆ, ನಾ ಕಲಿತ..
ಅ, ಆ, ಇ ಈ, ಉ, ಊ ಗಳು
ಕಿವಿ ತಮಟೆ ಯಲಿ ಕಿರುಚಿದಂತೆ
ಒಂದು, ಎರಡು ಬಾಳೆಲೆ ಹರಡು
ನೆನಪುಗಳ ಸರಮಾಲೆಯಾ ಮಗ್ಗಿ
ಗಾಳಿ ಮರದ ಚಾಟಿ, ಕೇಪುಲದ ಕೋಲಿನ
ರುಚಿಯಲ್ಲಿ ಕಲಿತ ಎ, ಬಿ, ಸಿ, ಡಿ
ಪ್ರೀತಿಯ ಲಿಲ್ಲಿ ಟೀಚರ್ ಇಂಗ್ಲಿಷ್,
ಆತ್ಮೀಯ ಅಂತು ಟೀಚರ್ ಗಣಿತ
ಎರಡ ಒಂದ್ಲಿ ಎರಡು, ಎರಡ ಎರಡ್ಲಿ ನಾಕು
ಎಲ್ಲ ನೆನಪುಗಳ ಮೆಲುಕು, ಉಳಿದದ್ದು
ಶಾಲೆಯ ಬಾವಿ ಕಟ್ಟೆ, ಧ್ವಜ ಸ್ಥಂಭ
ಅಲ್ಲಿ ನಾ ನೀರೆರದ ಗುಲಾಬಿಯ ಕಾಂಡ
ಒಣಗಿ ನನ್ನೇ ಕೇಳಿತ್ತು ಎಲ್ಲಿರುವೆ ಹುಡುಗ?

(ನಾನು ಒಂದರಿಂದ ಐದನೇ ತರಗತಿ ವರೆಗೆ ಓದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿತ್ರಬೆಟ್ಟು, ಶಿರ್ವ, ಉಡುಪಿ ತಾಲೂಕು ಈ ವರ್ಷದಲ್ಲಿ ಆಂಗ್ಲ ಮಾಧ್ಯಮದ ಹೊಡೆತಕ್ಕೆ ಸಿಲುಕಿ, ವಿಧ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದೆ, ನಾ ಕಲಿತ ಶಾಲೆಯ ಸವಿ ನೆನಪಿನ ಅಂಗಳ ದಿಂದ ನನಗನಿಸಿದ್ದನ್ನು ಅರ್ಪಿಸೋಣವೆನ್ನಿಸಿತು.. ಅದಕ್ಕೆ ಈ ಅರ್ಪಣೆ...)

"ತುಡಿತ"


ಅಲ್ಲೊಂದು ನದಿ, ತುಂಬಿದೆ, ತುಳುಕಾಡಿದೆ
ಆಷಾಡದ ಮಳೆ, ಉಕ್ಕಿ ಹರಿಯುತ್ತಿದೆ
ಮೇಲೆ ಮೋಡ, ಅದು ಕರಿಯ ಬಸುರು
ನದಿಯೊಳಗಿನ ಬಂಡೆಗಳೂ ಪಿಸುಗುಡುತ್ತಿವೆ
ತೀರದ ಹೊಯ್ಗೆಗಳದೂ ಮೌನ ರಾಗ
ಎಡ ಬದಿಯ ತೀರದಲಿ ಬಿದಿರು ಹುಲ್ಲು
ತನ್ನಷ್ಟಕೆ ತಾ ಮುಗುಳ್ನಕ್ಕಿದೆ ಮನಸೋತು
ಹರಿವ ನೀರಿನ ತಾಳದ ಇಂಚರಕೆ
ಅಲ್ಲಲ್ಲಿ ಹಸಿರು ಕೆಸರ ಮೆತ್ತಿಕೊಂಡು
ಬುಡದಲ್ಲೆಲ್ಲೋ ನೀರ ಕಚಗುಳಿಯು
ಅಲೆಯ ನರ್ತನಕೆ ತೆಪ್ಪದ ತೊಳಲಾಟ
ಅಲ್ಲೂ ಬಿಡಲಿಲ್ಲ ಅಂಬಿಗನ ಹಠ
ರಭಸ ಎಲ್ಲಿಯದೂ? ಹುಟ್ಟಿನ ಎದುರು?
ಸುರಿದ ಮಳೆಯ ಸಿಂಚನಕೆ ಬೆವರು
ನದಿ ನೀರಲಿ ಪುಳಕಗೊಂಡಿದ್ದು...
ಉಪ್ಪ ಬಿಟ್ಟು ಸಿಹಿಯಾದದ್ದು....
ಎರಡರ ಪರಿವೆಯಿಲ್ಲದೆ ಅಂಬಿಗನ
ಕೈಯ ಬಲದ ಮುಂದೆ ತೆಪ್ಪವೂ
ತಿರುಗು ಹೊಡೆದಿತ್ತು ಮನ ತುಡಿದಂತೆ..

ಗುರುವಾರ, ಸೆಪ್ಟೆಂಬರ್ 22, 2011

ಸಾಂತ್ವನ

ಕಡು ಬೇಸಗೆಯ ಧೂಳ ರಾಶಿ
ನೆತ್ತಿ ಮೇಲೆ ಸುಡುವ ಸೂರ್ಯ
ಕೆಂಪಡರಿದ ಹುಲ್ಲ ಕುಡಿ ಅಲ್ಲಲ್ಲಿ

ಉದುರಿದರೂ ನೀಲ ಬಾನ
ಬಿಳಿಮೋಡದ ಒಂದೆರಡು
ಸಾಂತ್ವನದ ಹನಿಗಳ ತೊಟ್ಟು,
ಹಸಿರಾಗಲಿಲ್ಲ ಆ ಹುಲ್ಲ ಕುಡಿ
ಧೂಳಿನಲೆ ಮತ್ತೆ ಕೆಂಪಾಗಿ
ಬೆಂದಿತ್ತು ಕಡು ಉರಿಯೊಳಗೆ

ಉರಿವ ಸೂರ್ಯನೂ ಮೌನಿ
ಧೂಳ ಕಣಗಳು ನಕ್ಕಿದ್ದವೂ,
ಬಳಲಿಕೆಯೊಂದೇ ಬತ್ತಳಿಕೆಯೊಳಗೆ
ಹುಲ್ಲ ಕುಡಿ ಮುದುಡಿ ಎರಗಿದ್ದು
ಇಂದಲ್ಲ ನಾಳೆ ಹಸಿರ ತಂಪನೀವ
ಭೂತಾಯೀ ಮಡಿಲೊಳಗೆ....

ಶನಿವಾರ, ಸೆಪ್ಟೆಂಬರ್ 17, 2011

ಬದುಕು ಅಡುಗೆ ಮನೆ

ಕಣ್ಣ ಹನಿ ರೆಪ್ಪೆಯಿಂದಿಳಿದು ಕೆನ್ನೆಗೆ
ಈರುಳ್ಳಿಯ ಘಾಟು ಘಮಕೂ,
ಸಾಸಿವೆ ಕಾಳು, ಜೀರಿಗೆಯ ನಗು
ಕುದಿವ ಎಣ್ಣೆಯಲೂ ಚಟ ಪಟ
ಹಿತವಾಗಿದೆ ಒಗ್ಗರಣೆಯ ರುಚಿ,
ಮುದವ ನೀಡಿದ್ದು, ಅರೆ ಬೆಂದರೂ
ತರಕಾರಿಯ ತಂಪು ಮನಸು
ಬೆಂಕಿ ನಾಲಗೆಯ ಮೇಲೆ ಬೆಂದು
ಕೊತ ಕೊತ ಕುದಿವ ನೀರ ಹಬೆಯಲ್ಲೂ
ಅನ್ನ ಶುಭ್ರ ನಗೆಯ ಬೀರಿ ಕೆಂಪಗಾಗದೆ
ಬಿಳಿಯ ಹೂವಾಗಿತ್ತು....

ಗುರುವಾರ, ಸೆಪ್ಟೆಂಬರ್ 15, 2011

ನೋವ ಬಿಸಿಲಿನ ಜಳದ ಸ್ಪರ್ಶ

ಹೂವ ಪಕಳೆಯಾಗಿತ್ತು ಹೃದಯ,
ಕರುಣೆಯ ಮಂಜು ತುಂಬಿದ ಕೊಡ
ಕರಗುತ್ತಿತ್ತು ಅನ್ಯರ ನೋವ ಬಿಸಿಲಿನ
ಜಳದ ಸ್ಪರ್ಶಕೂ, ಕೊರಡು ಮಳೆ
ಹನಿಯಾ ಇಬ್ಬನಿಯಾಗಿಸಿತ್ತಂದು
ಇಂದು ಸ್ವಾರ್ಥದ ಕಿರು ಸೂಜಿಯಾ
ಚುಚ್ಚಿ ಹೊರಟು ನಿಂತಿದ್ದನನ್ಯ,
ಮುಚ್ಚ ಲಾದೀತೇ ಸೋರಿ ನಿಂತ
ಸಂಬಂಧಗಳ ನದಿಯ ಒಡಲ?

ಮಂಗಳವಾರ, ಸೆಪ್ಟೆಂಬರ್ 13, 2011

ಪಯಣ ಮತ್ತದೇ ಬೆಂಗಾಡಿಗೆ

ನನ್ನ ಬಿಳಿಯ ಬಣ್ಣದ
ಕರವಸ್ತ್ರದ ಮುಖವೂ
ಕೆಂಪಗಾಗಿತ್ತು ಧೂಳ
ಸಿಂಚನವನುಂಡು....
ಕೆಸರ ರಾಡಿಯೊಳಗಿಂದ
ಎದ್ದು ಬಂದ ಹಂದಿಯದೂ
ಸವಿ ಚೀತ್ಕಾರ, ಶುಭಸ್ವಾಗತ,
ಜಡಿ ಮಳೆಗೆ ಹಿಡಿ ಶಾಪ
ಸೆಗಣಿ, ಧೂಳುಗಳೆಲ್ಲದರ
ವರ್ಣ ಚಿತ್ತಾರ ನಾ ತೊಟ್ಟ
ನೀಲಿ ಜೀನ್ಸಿನಲೂ ವೈಯಾರ..
ಕಿವಿಗಡರಿದ "ಏನ್ರೀ ಸರ್ರ"
ಆರಾಮದಿರೇನು? ಗಳ ನಡುವೆ
ಕ್ಷಣ ನಿಟ್ಟುಸಿರು ಬಿಟ್ಟು "ಹ್ಞೂ ರೀ"
"ಯಪ್ಪಾ", "ನೀವ್ರಿ ಸರ್ರ" ಮರು
ಪ್ರಶ್ನೆ ಒಗೆದಿದ್ದೆ .. ಕಾಲ ಮರೆಸಿತ್ತು
ಇಂದು ಪಯಣ ಮತ್ತದೇ ಬೆಂಗಾಡಿಗೆ
ರೊಕ್ಕದ ಬೆನ್ನ ಹತ್ತಿ, ಪಾದಗಳಿಗೆ
ಧೂಳು ಸೆಗಣಿಗಳ ನೆನಪ ಬಿಟ್ಟು.....

ಶನಿವಾರ, ಸೆಪ್ಟೆಂಬರ್ 10, 2011

ಜಗವ ಮರೆತ್ತಿದ್ದೇನೆ ಇಂದು ಜನುಮವೆತ್ತಲ್ಲಿ....

ಹಸಿರು ಹುಲ್ಲ ಹಾಸಿನ ಕೋಮಲತೆಯ
ಸವಿ ಮುತ್ತು ಪಾದ ಪಂಕ್ತಿಗಳಿಗೆ,
ಮನಸ್ಸು ಉಲ್ಲಸಿತ, ತೊರೆಯ
ಶುಭ್ರ ಜುಳು ಜುಳು ನಾದದ
ಕಂಪು ಕಿವಿ ತಮಟೆಯೊಳಗೆ,
ಬಾಳೆ ಗೊನೆಯೊಂದು ನಕ್ಕು
ಕನಕಾಂಬರ ಕಡು ಹಸಿರೆಲೆಗಳ
ನಡುವೆ ಕಡುಕೆಂಪು ಹೂವುಗಳು
ನನ್ನಕ್ಷಿಗಳಲಿ ಅಚ್ಚೊತ್ತಿವೆ ಆಹ್ಲಾದ,
ಮೇಲೆ ಸೂರ್ಯನೂ ಇಣುಕಿ
ನಗುತ್ತಿದ್ದಾನೆ, ಮೋಡಗಳ ಎಡೆಯಿಂದ
ಆನಂದ ಬಾಷ್ಪ ಹನಿ ಮಳೆಯದ್ದೂ.....
ಗಾಳಿಯೂ ಹೆತ್ತವಳ ಕೈರುಚಿಯ
ಸುವಾಸನೆಯ ಹೊತ್ತು ತಂದಿದೆ
ಜಗವ ಮರೆತ್ತಿದ್ದೇನೆ ಇಂದು ಜನುಮವೆತ್ತಲ್ಲಿ....

ಬುಧವಾರ, ಸೆಪ್ಟೆಂಬರ್ 7, 2011

ಕಾಮುಕರು

ಸುತ್ತ ಬಿಳಿಬಣ್ಣದ ನಾಲ್ಕು ಗೋಡೆ,
ಕೊಳವೆ ದೀಪದ ಬೆಳ್ಳಂಬೆಳಗು,
ಗೋಡೆಗೆ ಬಳಿದ ನೀರು ಸುಣ್ಣಕೂ
ಕಣ್ಣು ಮಿಟುಕಿಸುವಾಸೆ..........
ಗಣಕ ಯಂತ್ರದ ಕೀಲಿಮಣೆಯ
ಮೇಲಾಡುತ್ತಿರುವ ಕೈ ಬೆರಳಿನಲೂ
ಉದ್ರೇಕ, ಮನಸು ಮರ್ಕಟ..
ಗಿರಿಶಿಖರಗಳ ನೆನಪು, ಹಾರಾಟ
ಬಾನೆತ್ತರಕೆ, ಮನಸು ಬೆಲ್ಲದ ಮಂಡಿಗೆ,
ಇಲ್ಲಿ ಇರುವೆಗಳು ಒಂದೆರಡಲ್ಲ, ಸಾಲು
ಸಾಲು, ಮುತ್ತುವ ತವಕ.. ಮೆಲ್ಲನೆ
ಸೂರೆಗೊಳ್ಳುವುದೆಂದು?.. ನಗ್ನತೆ
ಬೆಳೆಯುತ್ತಿದೆ ಕನಸ ಹೊತ್ತು....
ಸಾಕಾರದ ದುಷ್ಟ ಗುರಿಯೆಡೆಗೆ
ವಿಫಲ ಪ್ರಯತ್ನ,ವ್ಯರ್ಥತೆಯ ಸುಖ
ಪಡೆದದ್ದು ಅವಳ ಮುಖದ ಚಿತ್ರವ
ಕಣ್ಣ ಪರದೆಯೊಳಗಿಟ್ಟು........

ಶನಿವಾರ, ಸೆಪ್ಟೆಂಬರ್ 3, 2011

ತೊಳಲಾಟ

ಒಂಟಿ ಜೀವ, ಕಣ್ಣ ನೀರ ಹನಿ
ಬಾಡಿದ ಕೆನ್ನೆಯ ಮೇಲೆ,
ಸುಕ್ಕುಗಟ್ಟಿದ ಮಿದುಳೊಳಗೆ
ಸಾವಿರ ನೆನಪ ಮಿಂಚುಗಳು

ಕೆಂಪಡರಿದ ಕಬ್ಬಿಣದ ಸಲಾಖೆಯ
ಬರೆಯೆಳೆದಂತೆ ಎದೆಯಲೆಲ್ಲೋ
ನಾ ಮಾಡಿದ ತಪ್ಪುಗಳ ಪ್ರಪಾತ
ಹೊಟ್ಟೆ ಬಗೆದು ಕರುಳು ಕೀಳುವ
ನೋವ ಬಿರುಮಳೆ... ಪ್ರಾಯಶ್ಚಿತ್ತವೆಲ್ಲಿ...?

ಕ್ಷಣ ನಿಶ್ಚಲ.. ಮೇಲೆ ಕರಿಮೋಡದ
ಆಕಾಶ, ಬದುಕು ಬರ್ಬರ..
ನೀರ ಮೇಲೆತ್ತಿದ ಮೀನಾಗುವ
ಬಯಕೆ, ಮರೆತು ಬಿಟ್ಟೀತೆ
ಜಗವು ನನ್ನ ಆ ಕೊಳಕುಗಳ?

ಧೃಡ ಮನಸ್ಸು, ಅಚಲತೆ...
ಮತ್ತೆ ಮಲ್ಲಿಗೆಯ ಹೂವಾಗುವೆ
ಮತ್ತದೇ ಪ್ರಶ್ನೆ.. ಕೊಳಕು ನಾರಿದ
ತಪ್ಪುಗಳ ಮೇಲೆ ಮಲ್ಲಿಗೆಯ
ಪರಿಮಳವು ಕಂಪನಿತ್ತೀತೆ..?