ಶನಿವಾರ, ಜೂನ್ 23, 2012

ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!

ಧೂಳೆಬ್ಬಿಸುವ ಹಗ್ಗಕೆ ತೊಟ್ಟಿಲು ತೂಗುವಾಗ
ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ
ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ
ಅದೇ ಕನ್ನಡಕದಲಿ ನಗು ಬೀರಿದ ನೆನಪು!

ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ
ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ
ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!

ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು
ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ-
ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ
ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ!

ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು
ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ
ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ!

ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು
ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು
ನೂರರ ನೋಟಿನಲಿ ನೂರೆನುವಾಗಲೂ
ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ!

ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ
ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ
ಮತ್ತೆ ಐನೂರರ ಗಾಳಿ ಬೀಸುವಾಗಲೂ
ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!
=======


ಮಂಗಳವಾರ, ಜೂನ್ 19, 2012

ನಿರಾಳ!

ತಲೆಯಲೊಂದಿಷ್ಟು ಕೂದಲು, ಮೂರಿಂಚಿನ ಹಣೆ
ಕಣ್ಣು ಬಿಟ್ಟು ಕೂತವಗೆ ಮೂಗು ಜೊತೆಗಾರ
ಚಪಲಕೆ ಬಾಯುಂಟು ಇಣುಕ ಬಿಟ್ಟು ನಾಲಗೆಯ!

ತಲೆಯಲ್ಲಾಡಿಸುತ್ತದೆ ಕುತ್ತಿಗೆ ಅಹುದೆನುತ
ಎಲ್ಲದಕೂ ಕೈ ಮುಂದು ಎದೆಗಾನಿಸಿ ನಿಂತು!
ಉಸಿರ ಹಿಡಿದದ್ದು ಬಿಟ್ಟದ್ದು ಶ್ವಾಸಕೋಶದ ಒಳಗೆ
ತಿಂದದ್ದು ತಿಂದುಳಿದದ್ದು ಜಠರ ಹೊತ್ತ ಹೊಟ್ಟೆಯದು!

ರಾತ್ರಿ ಕಳೆದು ಮುಂಜಾನೆ ಹೊರನಡೆಯುತ್ತದೆ ನಿನ್ನೆ,
ಅದರ ಜೊತೆಗೊಂದಿಷ್ಟು ಕಲ್ಮಶ ತೂತ ಹೊರಗೆ
ನೀರೋ, ಘನವೋ ನಿನ್ನೆ ತೇಗಿದ್ದು ಇಂದು ರದ್ದಿ,
ಕಾಲು ನೆಲವೂರಿದ ರಭಸಕೆ ಎರಡಡಿಯ ಮಣ್ಣು ಗಟ್ಟಿ
ಬಾಗಿಲಲಿ ನಿಂತು ಬದುಕು ದೂಡುವವಗೆ!
====

ಶನಿವಾರ, ಜೂನ್ 9, 2012

ಚಳಿ, ಉಬ್ಬು ಮತ್ತು ಸೊಕ್ಕು!

ನಡುಕ, ಚಳಿಯಿತ್ತು, ಅಮಾವಾಸ್ಯೆಯ ಕತ್ತಲು
ಧನುರ್ಮಾಸದ ಕುಳಿರ್ಗಾಳಿ ಕಳೆದು ಮಕರ,
ನಡುರಾತ್ರಿಯ ಅಪ್ಪುಗೆ, ಕೈಗೊಂದಿಷ್ಟು ಖುಷಿ
ಕಾಲು ಕುಣಿದು ಸುಸ್ತು, ಬೆಳಗು ಹರಿದ ಹೊತ್ತು!
ಬಾನ ಮೇಲಿನ ಬೆಳಕಿಗೆ ಶಾಂತ ಸಾಗರ!

ಬಿಳಿಯ ಮೋಡದ ಸಾಲು ಆಕಾಶದಲಿ ಕಪ್ಪು,
ಮೊನ್ನೆ ಮೇ ತಿಂಗಳಿನಲ್ಲಿ ಸೂರ್ಯ ಕಾಮುಕ,
ಬಿಸಿಲ ಹೊಡೆತಕೆ ಕಡಲ ನೀರು ವೀರ್ಯವಾಗಿ,
ಮೋಡ ಬಸುರಿ, ನಗುವುದಷ್ಟೇ ಬಾಕಿ ಮಳೆಮಗು!

ಮೇ ತಿಂಗಳ ಕಾಲಗರ್ಭದಿ ಬಿಸಿಲ ಕಾಮ
ನೀರು ಮೇಲೇರಿ ಹೆಪ್ಪುಗಟ್ಟಿ ಕರಿಮೋಡ!
ಹೊಟ್ಟೆಯುಬ್ಬಿ ಮೂರು ತಿಂಗಳು, ಅಲ್ಲಿ ವಾಂತಿ!
ನೀಲಿ ಬಾನಿಗೆ ಬಾಣಂತನ ಮಾಡುವ ಭಾಗ್ಯ!

ಅಳುವೆಲ್ಲಿ? ಕೈಕಾಲು ಬಿಟ್ಟ ಮಗುವಿನದು
ಹನಿ ನೀರು ಘನೀಭವ, ಮತ್ತೆ ಭುವಿಗೆ,
ಒಂದೆರಡು ಹುಲ್ಲುಹುಟ್ಟಿಸುವ ತವಕ,
ಹಲ್ಲು ಬಿಟ್ಟು ಹುಲ್ಲು ನಗುತ್ತದೆ ಚಿಗುರಿ!
ಒಂದಿಷ್ಟು ಗಾಳಿಗೆ ಕೈಕಾಲು ಬಿಡುತ್ತವೆ
ತಲೆಯಲ್ಲಾಡಿಸಿ ತೂಗುತ್ತವೆ, ಬಲಿತ ಹುಲ್ಲು!

ಮೋಡ ಬಸುರಾಗುತ್ತಲೇ ಇದೆ, ಸೂರ್ಯ-
ತೃಷೆ, ಕಡಲು ಖಾಲಿಯಾಗುವ ತನಕ!
ಬಾಣಂತನದ ಹೊರೆ ಹೊತ್ತ ನೀಲಿ ಬಾನು
ನೀಲಿಯಾಗಿಯೇ ಉಳಿಯಬಹುದೇನೋ
ನಾನು, ಮಗು ಮತ್ತು ಹುಲ್ಲು ಒಣಗಿದರೂ!
=======
ಚಿತ್ರಕೃಪೆ: ಗೂಗಲ್