ಭಾನುವಾರ, ಜನವರಿ 22, 2012

ಬೇಲಿ, ಹೂ ಮತ್ತು ನಾನು

ಉದ್ಯಾನಕ್ಕೊಂದು ಬೇಲಿ
ಒಳಗೆ ಚಿತ್ರ ಚಿತ್ತಾರಗಳ
ಬಣ್ಣದಂಗಳಕೆ ಕಾವಲು ನಾ!
ಅಂದು ಕೊರಡಾಗಿದ್ದೆ
ಇಂದು ಬೇಲಿಯಲಿ
ಹಸಿರು ಪೂಸಿ ನಗುತ್ತಿದ್ದೇನೆ
ಅಲ್ಲಲ್ಲಿ ಮೊಗ್ಗುಗಳ ಮುಖದಲ್ಲಿ ನಗು
ನನ್ನ ಕಾವಲಿದೆ ಅನವರತ
ಒಳಗರಳಿ ನಿಂತ ಸುಮಗಳು
ಆಗಾಗ ನನಗೊಂದಿಷ್ಟು
ಪರಿಮಳದ ಕಾವ ನೀಡಿ
ಹರಸುತ್ತವೆ ನನ್ನ ಸತತ
***
ನನ್ನುಸಿರ ಬೇಲಿಯಲಿ
ಅರಳಿ ನಿಂತ ಸುಮಗಳೇ
ನಿಮಗೆ ನೋವಾಗದಿರಲೆಂದು
ನನ್ನ ಹಸಿರ ಚಿಗುರಗಳ
ಊಟವಿತ್ತಿದ್ದೇನೆ ಹಸಿದು
ಬಂದ ಕುರಿಮಂದೆಗಳಿಗೆ
ಭಯವಿತ್ತು ನನಗೆ ನಿಮ್ಮುಸಿರ
ಕಸಿಯಬಹುದೆಂದು ಕುರಿಗಳು..

ಮರೆಯದಿರಿ ಸುಮಗಳೇ
ನಿಮ್ಮ ನೆನಪ ಜೋಳಿಗೆಯಲ್ಲಿಡಿ
ಕಾಯುವ ಈ ಮನಸ ಮರೆಯದಿರಿ
****

7 ಕಾಮೆಂಟ್‌ಗಳು:

 1. ಚಂದದ ಕವನ...
  ಬೇಡಿಕೆಯ ಭಾವ ಮನಸ್ಸನ್ನ ಹಾಗೆ ತಾಕುತ್ತದೆ...

  nice one

  ಪ್ರತ್ಯುತ್ತರಅಳಿಸಿ
 2. ಕಾವಲು ಕಾಯುವ ಬೇಲಿಯ ಅಂತರಂಗ ಸೊಗಸಾಗಿ ಮೂಡಿ ಬಂದಿದೆ.

  ಭಾವನೆಗಳಲ್ಲಿ ಹಿಡಿತ ಮತ್ತು ಸಮಯೋಚಿತ ಭಾವಗಳ ಭಿನ್ನಹ ಈ ಕವನದ ಜೀವಾಳ.

  ಭೇಷ್!

  ಪ್ರತ್ಯುತ್ತರಅಳಿಸಿ
 3. ಸುಂದರ ಉಪಮೆ ಮತ್ತು ರೂಪಕಗಳಿಂದ ಕವನವು ಶಕ್ತಿಯುತವಾಗಿ,ಸತ್ವಶಾಲಿಯಾಗಿ ಮೂಡಿದೆ.ಕವಿಗಿರುವ ಸಮಾಜಮುಖಿ ಒಲವು ಕವಿತೆಯಲ್ಲಿ ಅಗೋಚರವಾಗಿ ಮೂಡಿದೆ.ಚಿತ್ತಾಕರ್ಷಕ ನುಡಿ ಪುಷ್ಪಗಳು ನಲಿದಾಡಿ ಕುಣಿದಾಡಿ ಫುಳಕಗೊಳಿಸಿವೆ.
  ನನ್ನುಸಿರ ಬೇಲಿಯಲಿ
  ಅರಳಿ ನಿಂತ ಸುಮಗಳೇ
  ನಿಮಗೆ ನೋವಾಗದಿರಲೆಂದು
  ನನ್ನ ಹಸಿರ ಚಿಗುರಗಳ
  ಊಟವಿತ್ತಿದ್ದೇನೆ ಹಸಿದು
  ಬಂದ ಕುರಿಮಂದೆಗಳಿಗೆ
  ಭಯವಿತ್ತು ನನಗೆ ನಿಮ್ಮುಸಿರ
  ಕಸಿಯಬಹುದೆಂದು ಕುರಿಗಳು.......ಈ ಸಾಲುಗಳಂತೂ ಬಹುವಾಗಿ ಆಕರ್ಷಿಸಿತು.ನನ್ನುಸಿರ ಬೇಲೆಯಲಿ ಎನ್ನುವ ರೂಪಕವಂತೂ ಮನಮೋಹಕವಾಗಿದ್ದು ಜೀವನಕ್ಕೆ ಬೆಳಕು ತೋರಿಸುವುದು.ಕುರಿಗಳು ಕವನದ ಪ್ರತಿಮೆಯಾಗಿದ್ದರೂ ವಿಶಾಲಾರ್ಥದಲ್ಲಿ ಅದು ಮಾನವ ಜನತೆಯನ್ನುದ್ದೇಶಿಸಿ ಹೇಳಲಾದ ಕನವರಿಕೆ,ಕಾಳಜಿ,ಆಲಾಪನೆಯಾಗಿದೆ.ಭಾವಸ್ಪುರಣಗೊಂಡು ಅರ್ಥಪೂರ್ಣವಾಗಿ ಮೂಡಿಬಂದಿರುವ ಕವನದ ಲಹರಿ ಚಿತ್ತಾಕರ್ಷಕ,ತಾಳಮೇಳಗಳೊಳಗೂಡಿ ಮೈದಳೆದ ಅತೀ ಸುಂದರ ಅನುಭೂತಿ ನೀಡುವ ಕವಿತೆ ಇದು.ತುಂಬಾ ಇಷ್ಟವಾಯಿತು ಪುಷ್ಪಣ್ಣ.ಆನಂದಿಸಿದೆ.

  ಪ್ರತ್ಯುತ್ತರಅಳಿಸಿ
 4. ತು೦ಬಾ ಕಾಳಜಿವಹಿಸಿದ ಮಾತುಗಳು ಚೆನ್ನಾಗಿ ಮೂಡಿ ಬ೦ದಿದೆ ಮನಸಿಗೆ ನಾಟುವ೦ತಿದೆ ....

  ಪ್ರತ್ಯುತ್ತರಅಳಿಸಿ
 5. ಎಷ್ಟು ಸಲ ಓದಿದರೂ ನಿಮ್ಮ ಹಸಿರು ಮತ್ತು ನೀವು ಕಾಯುತ್ತಿರುವ ಸುಮಗಳ ಗಮ ಮೂಗಿಗೆ ಬಡಿದೇ ಬಡಿಯುತ್ತದೆ.. ಬೇಲಿ ಕಾವಲು ಕಾಯುತ್ತ ಜೀವ ಸವೆಸುತ್ತದೆ.. ಕುಸುಮಗಳು ನಲ್ಲನ ಸ್ಪರ್ಷಕ್ಕೆ ನುಲಿಯುತ್ತವೆ, ಇಲ್ಲವೇ ನಲ್ಲೆಯ ಮುಡಿಯೇರುತ್ತವೆ.. ಕಾಯ್ದಿದ್ದಷ್ಟೆ ಬೇಲಿಗೆ ಭಾಗ್ಯ.. ಸುಮಗಳು ಮರೆತರೂ ಭಗವಂತ ಪೊರೆಯುತ್ತಾನೆ.. ಅವನಿಗೆ ಮಾತ್ರ ಗೊತ್ತು ಬೇಲಿ ಕಾಯ್ದ ಹೂಗಳ ಸಂಖ್ಯೆ.. ಬೇಲಿ ನಗಲಿ ಎಂಬ ಹಾರೈಕೆ ನನ್ನದು.. ಕವಿತೆ ಮಾರ್ಮಿಕವಾಗಿ ಮಾತನಾಡಿದಾಗ ಓದುಗರಿಗೂ ತಲೆದೂಗಬೇಕೆನಿಸುತ್ತದೆ.. ಪ್ರತಿಮೆ ಚೆನ್ನಾಗಿದೆ ಪುಷ್ಪಣ್ಣ..:)

  ಪ್ರತ್ಯುತ್ತರಅಳಿಸಿ
 6. ಒಳಗರಳಿ ನಿಂತ ಸುಮಗಳು
  ಆಗಾಗ ನನಗೊಂದಿಷ್ಟು
  ಪರಿಮಳದ ಕಾವ ನೀಡಿ
  ಹರಸುತ್ತವೆ ನನ್ನ ಸತತ!!
  ಏನೋ ಒಂಥರಾ ಸೆಳೆತವಿದೆ ನಿಮ್ಮ ಸಾಲುಗಳಲ್ಲಿ ..........

  ಪ್ರತ್ಯುತ್ತರಅಳಿಸಿ
 7. ವಾಹ್..!! ಎಂಥಹಾ ಸಾಲುಗಳು, ಮುದ ನೀಡುತ್ತವೆ. ಇಂತಹ ಕಾಯುವನಿದ್ದರೆ ಆ ಬೇಲಿಯು ಸೌಖ್ಯ ಒಳಗಿರುವ ಹೂಗಳು ಸೌಖ್ಯ

  ಪ್ರತ್ಯುತ್ತರಅಳಿಸಿ