ಶನಿವಾರ, ಜೂನ್ 9, 2012

ಚಳಿ, ಉಬ್ಬು ಮತ್ತು ಸೊಕ್ಕು!

ನಡುಕ, ಚಳಿಯಿತ್ತು, ಅಮಾವಾಸ್ಯೆಯ ಕತ್ತಲು
ಧನುರ್ಮಾಸದ ಕುಳಿರ್ಗಾಳಿ ಕಳೆದು ಮಕರ,
ನಡುರಾತ್ರಿಯ ಅಪ್ಪುಗೆ, ಕೈಗೊಂದಿಷ್ಟು ಖುಷಿ
ಕಾಲು ಕುಣಿದು ಸುಸ್ತು, ಬೆಳಗು ಹರಿದ ಹೊತ್ತು!
ಬಾನ ಮೇಲಿನ ಬೆಳಕಿಗೆ ಶಾಂತ ಸಾಗರ!

ಬಿಳಿಯ ಮೋಡದ ಸಾಲು ಆಕಾಶದಲಿ ಕಪ್ಪು,
ಮೊನ್ನೆ ಮೇ ತಿಂಗಳಿನಲ್ಲಿ ಸೂರ್ಯ ಕಾಮುಕ,
ಬಿಸಿಲ ಹೊಡೆತಕೆ ಕಡಲ ನೀರು ವೀರ್ಯವಾಗಿ,
ಮೋಡ ಬಸುರಿ, ನಗುವುದಷ್ಟೇ ಬಾಕಿ ಮಳೆಮಗು!

ಮೇ ತಿಂಗಳ ಕಾಲಗರ್ಭದಿ ಬಿಸಿಲ ಕಾಮ
ನೀರು ಮೇಲೇರಿ ಹೆಪ್ಪುಗಟ್ಟಿ ಕರಿಮೋಡ!
ಹೊಟ್ಟೆಯುಬ್ಬಿ ಮೂರು ತಿಂಗಳು, ಅಲ್ಲಿ ವಾಂತಿ!
ನೀಲಿ ಬಾನಿಗೆ ಬಾಣಂತನ ಮಾಡುವ ಭಾಗ್ಯ!

ಅಳುವೆಲ್ಲಿ? ಕೈಕಾಲು ಬಿಟ್ಟ ಮಗುವಿನದು
ಹನಿ ನೀರು ಘನೀಭವ, ಮತ್ತೆ ಭುವಿಗೆ,
ಒಂದೆರಡು ಹುಲ್ಲುಹುಟ್ಟಿಸುವ ತವಕ,
ಹಲ್ಲು ಬಿಟ್ಟು ಹುಲ್ಲು ನಗುತ್ತದೆ ಚಿಗುರಿ!
ಒಂದಿಷ್ಟು ಗಾಳಿಗೆ ಕೈಕಾಲು ಬಿಡುತ್ತವೆ
ತಲೆಯಲ್ಲಾಡಿಸಿ ತೂಗುತ್ತವೆ, ಬಲಿತ ಹುಲ್ಲು!

ಮೋಡ ಬಸುರಾಗುತ್ತಲೇ ಇದೆ, ಸೂರ್ಯ-
ತೃಷೆ, ಕಡಲು ಖಾಲಿಯಾಗುವ ತನಕ!
ಬಾಣಂತನದ ಹೊರೆ ಹೊತ್ತ ನೀಲಿ ಬಾನು
ನೀಲಿಯಾಗಿಯೇ ಉಳಿಯಬಹುದೇನೋ
ನಾನು, ಮಗು ಮತ್ತು ಹುಲ್ಲು ಒಣಗಿದರೂ!
=======
ಚಿತ್ರಕೃಪೆ: ಗೂಗಲ್

7 ಕಾಮೆಂಟ್‌ಗಳು:

  1. ಅದ್ಭುತ ಪರಿಕಲ್ಪನೆ..!!
    ಜಗತ್ತನ್ನು ವಿಭಿನ್ನವಾಗಿ ನೋಡುವವನು ಕವಿಯಾಗಬಲ್ಲ ಎಂಬ ಉಕ್ತಿ, ಅಕ್ಷರಶಃ ನಿಜವೆನ್ನಿಸುವಂತಿದೆ ಈ ಕವನಪುಷ್ಪ..!!

    ಪ್ರತ್ಯುತ್ತರಅಳಿಸಿ
  2. ನೀಲಿ ಬಾನು ಈ ಜಗದ ವಿಶಾಲ ಚಿತ್ರಣ. "ನಾನು" ಎನ್ನುವುದು ಎಲ್ಲವನ್ನು ದೂರದಿಂದ ನೋಡುತ್ತಿರುವವನ ದೃಷ್ಟಿಕೋನ. ಬಾನು ಬಸುರಾಗಿ ಹಲವು ಮಕ್ಕಳನ್ನು ಹೆರುತ್ತದೆ(ಮಳೆ ಹನಿಗಳು). ಯಾವುದೋ ಹನಿ ಯಾವುದೋ ಒಂದು ಹುಲ್ಲನ್ನು ಚಿಗುರಿಸುತ್ತದೆ. ಕೆಲವು ಹುಲ್ಲುಗಳಲಿ ಕೃತಜ್ಞ ಭಾವ. ಕೆಲವದರಲ್ಲಿ ಎಲ್ಲ ಮರೆತು ಕ್ರತಘ್ನ ಭಾವ. ಕೊನೆಯ ಸಾಲಿನಲ್ಲಿ ನೋಡಿದರೆ ಕೆಲವು ಹನಿಗಳಿಗೆ ನಾನೇ ಮಾಡಿದ್ದು ಎಂಬ ಅಹಂಕಾರ. ಮಧ್ಯದಲ್ಲಿ "ನಾನು" ಎಂಬ ವೀಕ್ಷಕನ ವಿಮರ್ಶೆ. ಯಾರು ಏನಾದರೂ ಜಗ ಹಾಗೇ ನಡೆಯುವುದೆಂಬ ವಿಶಾಲ ಸಂದೇಶ ಕೊನೆಯಲ್ಲಿ.

    ಇದು ಹಲವು ಬಾರಿ ಓದಿದ ಮೇಲೆ ನಾನು ಅರ್ಥೈಸಿಕೊಂಡ ರೀತಿ.. ಬಹಳ ಯೋಚನೆಗೆ ಹಚ್ಚಿದ ಕವಿತೆ. ಶುಭವಾಗಲಿ ಪುಷ್ಪಣ್ಣ:))

    ಪ್ರತ್ಯುತ್ತರಅಳಿಸಿ
  3. ಪಕ್ವ ಸಾಲುಗಳು ಮನಸ್ಸನ್ನು ಯೋಚನೆಗೆ ಹಚ್ಚಿದವು., ಅರ್ಥ ಒಳಾರ್ಥಗಳ ಸುರುಳಿಯ ಬಿಡಿಸುತ್ತಲೇ ನಿಮ್ಮ ಕಾವ್ಯ ಪ್ರೌಢಿಮೆಯ ಅನಾವರಣವಾಯಿತು ಪುಷ್ಪಣ್ಣ..
    ಬೇಸಿಗೆಯಲ್ಲಿ ಭುವಿಯ ನೀರಿನ ಪಸೆಯನ್ನು ಒಣಗಿಸಿದ ಕಾಮುಕ ಸೂರ್ಯನ ಅಟ್ಟಹಾಸದಿಂದ ಬಸುರಾದ ಮೋಡ., ಮಳೆಗಾಲದಲ್ಲಿ ಬಾಣಂತನವಾಗಿ ನಸುನಗುವುದು ಮಳೆ., ಹೊಳೆಯುವುದು ಜೀವಕಳೆ.. ನೀರಿನ ಸರಪಳಿಯನ್ನು ಕಾವ್ಯ ಮುಖೇನ ಮನೋಹರವಾಗಿ ಬಿತ್ತರಿಸಿದ್ದೀರಿ ಪುಷ್ಪಣ್ಣ.., ಎಷ್ಟು ಬಣ್ಣಿಸಿದರೂ ಸಾಲದು.., ಹೆಚ್ಚೇನೂ ಹೇಳಲೊಲ್ಲೆ., ಹೀಗೇ ಬರೆಯುತ್ತಿರಿ.., ಶುಭವಾಗಲಿ ನಿಮಗೆ..

    ಪ್ರತ್ಯುತ್ತರಅಳಿಸಿ
  4. ಹೂವಪ್ಪಾ ಕವನದ ಶೀರ್ಷಿಕೆಯಲ್ಲಿ ಬರುವ ಮೂರೂ ಪಾತ್ರಗಳ ವಿಶ್ಲೇಷಣೆ ಕವನಾದ್ಯಂತ ಸಮರ್ಥವಾಗಿ ಮೂಡಿಬಂದಿದೆ.

    ಪ್ರತ್ಯುತ್ತರಅಳಿಸಿ
  5. ಒಂದು ಸಾರಿ ಓದಿದಾಗ ,ಪುಷ್ಪಣ್ಣನವರು ಸೂರ್ಯ,ಮೋಡ ,ನೀಲಿ ಬಾನುಗಳ ಮೇಲೆಯೇ ಚಂದದ ಕವಿತೆ ಬರೆದದ್ದೋ ಅಂಥ ಎನಿಸಿದೆ .ಪರೇಶ್ ರವರು ವಿಶ್ಲೇಷಣೆ ಕಂಡ ಮೇಲೆ ಕವಿತೆಯ ಪೂರ್ಣ ಸಾರಾಂಶ ಅರ್ಥವಾಯಿತು .ಶಕ್ತಿಯುತವಾದ ಕವಿತೆ ಕಟ್ಟುವಲ್ಲಿ ನಿಮ್ಮನ್ನು ನೋಡಿ ಕಲಿಯಬೇಕು ಪುಷ್ಪಣ್ಣ .:)

    ಪ್ರತ್ಯುತ್ತರಅಳಿಸಿ
  6. ಕಥೆ,ಕವನ,ಭಾವನೆಗಳಿಗಳನ್ನು ಹೃದಯಕ್ಕೆ ಹಚ್ಚಿಕೊಂಡು ಮಾಗಿ ಪಕ್ವಗೊಂಡು ನೋಡುವ ದೂರದೃಷ್ಠಿ ನೋಟಕ್ಕೆ ಮಾತ್ರ ಸಂವೇದನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇನೋ.ಅಂತಹ ವ್ಯಾಪಕಾರ್ಥವು ಕವಿತೆಯ ಅಗಮ್ಯ ಶಕ್ತಿ.ಸುಲಭಕ್ಕೆ ಅರ್ಥಕ್ಕೆ ಸಿಗದ ಕವಿತೆಯನ್ನು ಮನಸಿಗೆ ಹಿತವಾಗಿಸಿಕೊಂಡು ಅನುಭವಿಸಿದಾಗಲೇ ಭಾವನೆಗಳ ಮಧುರ ಻ನುಭವ,ಆಶಯ ಗೊತ್ತಾಗಲು ಸಾಧ್ಯ.ಒಂದು ಸುಂದರ,ಚಿಂತನಾರ್ಹ ಮತ್ತು ಅರ್ಥಪೂರ್ಣ ಸಂವೇದನೆಗಳುಳ್ಳ ಮುದ್ದಾದ ಕವಿತೆ.ಆಸ್ವಾದಿತನಾದೆ.

    ಪ್ರತ್ಯುತ್ತರಅಳಿಸಿ