ಶನಿವಾರ, ಡಿಸೆಂಬರ್ 15, 2012

ನಕ್ಕು ಬಿಡು!

ಬೆರೆಯಗೊಡು ತೆರೆದು ಹಗುರವಾಗಲಿ
ಮನವು ಮಗುವ ಮಂದಹಾಸದಲಿ ತೇಲಿ
ಸುಳ್ಳ ಸುಳಿವಿರದ ಮನದಾಳದ ಕೋಡಿ
ಹರಿದು ತಿಳಿನೀರ ತೊರೆಯಂದದಿ ಮೋಡಿ!

ತೋಳತೆಕ್ಕೆಯಲಪ್ಪಿ ಬಲು ಹರುಷದಲಿ
ಮರೆವೆ ನನ್ನ ನಾ ಮುದವಿತ್ತು ಮನದಿ
ಏನನಿಟ್ಟಿರುವೆ ಬಾಲೆ ನಿನ್ನ ನಗುವೊಳಗೆ
ಎನ್ನ ಹೃದಯದ ನೋವ ಅಳಿಸುವಂದಕೆ!

ನಾ ಮಗುವಾಗಿ ಜಗದಿ ನಲಿಯಬೇಕು
ಗುರುವಾಗೆನಗೆ ನಗೆಯ ಧಾರೆಯೆರೆದು
ಹಗುರಾಗಿಬಿಡಬೇಕು ಮನವು ನಿನ್ನಂತೆ
ತೊದಲಬೇಕಿನ್ನು ತೊರೆದು ಚಿಂತೆ!

ನಕ್ಕು ಬಿಡು ನಕ್ಕು ಬಿಡು ನೀ ಮಗುವೇ
ನೋವ ಸಿಕ್ಕ ಬಿಡಿಸಿಬಿಡು ಬಾ ನಗುವೇ!
====

5 ಕಾಮೆಂಟ್‌ಗಳು:

 1. ಮಗುವು ಜಗದ ಸೊಬಗು. ನಿಶ್ಕಲ್ಮಷ ನಗೆಯ ಸಂಕೇತ.

  ಬಿಗುವಿನ ಮನೆ ವಾತಾವರಣವನ್ನೂ, ಮರಗಟ್ಟಿದ ಮನಗಳನ್ನೂ ಚೇತೋಹಾರಿಯಾಗಿಸುವ ಶಕ್ತಿ ಮಗುವಿನದು.

  ಒಳ್ಳೆಯ ಕವನ.

  ಪ್ರತ್ಯುತ್ತರಅಳಿಸಿ
 2. ಚೌಟರೇ,
  ನಿಜವಾಗಿಯು ಮಗುವಿನಂತೆಯೇ ಇರಬೇಕು ಮನಸ್ಸು...
  ಆ ಮುಗ್ಧತೆಯನ್ನು,ಕಪಟವರಿಯದ ಬುದ್ಧಿಯನ್ನೂ ಸುಂದರವಾಗಿ ಹೇಳಿದ್ದೀರಿ...
  ಬಹಳ ಸರಳ ಶಬ್ದಗಳಲ್ಲಿ ಬರೆದ ರೀತಿ ನನಗಂತೂ ಇಷ್ಟವಾಯ್ತು..

  "ಗುರುವಾಗೆನಗೆ ನಗೆಯ ಧಾರೆಯೆರೆದು"
  ಈ ಸಾಲಿನಲ್ಲಿಯ ಕಲ್ಪನೆ ಬಹಳ ಇಷ್ಟವಾಯ್ತು..
  ವಯಸ್ಸು ಎಷ್ಟೇ ಆದರೂ ಆ ಮಕ್ಕಳಿಂದ ಕಲಿಯುವುದು ತುಂಬಾ ಇರುತ್ತದೆ..
  ಆ ಶಬ್ದಗಳೂ ಆಷ್ಟೇ ಅಚ್ಚುಕಟ್ಟಾಗಿ ಕೂತಿವೆ,ಕೂತು ಮಂದಹಾಸ ಬೀರುತ್ತಲಿವೆ...

  "ತೊದಲಬೇಕಿನ್ನು ತೊರೆದು ಚಿಂತೆ!"..ಮತ್ತೊಂದು ಇಷ್ಟವಾದ ಸಾಲು...
  ಬರಬರುತ್ತಾ ನಾವು ಒಂದೊಂದು ಸಲ ನಮ್ಮತನವನ್ನು ಅಭಿವ್ಯಕ್ತಪಡಿಸುವುದನ್ನೇ ಮರೆಯುತ್ತೇವೆಯೋ ಅನಿಸಿಬಿಡುತ್ತದೆ...ಆ ನಿರ್ಭೀತ ಮಾತುಕತೆ ಮರೆಯಾಗಿಬಿಡುತ್ತದೆ...
  ಜೊತೆಗೆ ಚಿತ್ರವೂ ಕೂಡಾ ಅಷ್ಟೇ ಸುಂದರವಾಗಿದೆ...
  ಬರೆಯುತ್ತಿರಿ..
  ನಮಸ್ತೆ :)

  ಪ್ರತ್ಯುತ್ತರಅಳಿಸಿ
 3. ನಗುವಿದ್ದರೆ ದಿನಕರನು ಬೆಳಕ ತೋರುತ್ತಾನೆ.
  ಅಂಥಹ ನಗುವಿನ ಪದಗಳ ಮೆರವಣಿಗೆ ಸುಲಲಿತವಾಗಿ ಮೂಡಿಬಂದಿದೆ..
  ಅಭಿನಂದನೆಗಳು ಹೂವಿನರಾಜರೆ!

  ಪ್ರತ್ಯುತ್ತರಅಳಿಸಿ
 4. ಹೆಚ್ಚು ಒತ್ತಕ್ಷರಗಳಿಲ್ಲದ ಸರಳ ಪದಗಳ ಕವನ ಕಟ್ಟುವಿಕೆ ಚೆನ್ನಾಗಿದೆ.
  ಮಗು ನಗು ಎಂದೆಂದಿಗೂ ಒಟ್ಟಿಗೆ ಹುಟ್ಟಿರುತ್ತವೆ,...ನಮ್ಮ ದುಃಖಕ್ಕೆ ಸಾವ ನೀಡಲು!!

  ಪ್ರತ್ಯುತ್ತರಅಳಿಸಿ