ಸೋಮವಾರ, ಫೆಬ್ರವರಿ 4, 2013

ಚರಂಡಿ ಮತ್ತು ನನ್ನೆದೆ!

ಯಾರದೋ ಬಚ್ಚಲೊಳಗಿಂದೊಸರುವೊಂದಷ್ಟು ರಾಡಿಗೆ,
ಕೊಳೆತು ನಾರಿದವೆಲ್ಲವೂ ಒಳಸೇರುತ್ತವೆ ಎಲ್ಲಿಂದಲೋ
ಇಣುಕುತ್ತವಲ್ಲಲ್ಲಿ ಹುಳು ಇಲಿ ಹೆಗ್ಗಣಗಳು ಒಳನುಸುಳಲು!

ಒಳಗೊಳಗಿನ ವಾಸನೆಗೆ ಹಾಸಿದ ಕಲ್ಲುಚಪ್ಪಡಿ ಮೌನ
ಹಾಯ್ವ ದಾರಿಹೋಕರ ಮೂಗಿಗೊಂದಿಷ್ಟು ದಿವ್ಯದ್ರವ್ಯ
ಅವರಿವರು ಉಗಿವ ಜೊಲ್ಲನೀರ ಜೊತೆ ಧೀರ್ಘಧ್ಯಾನ!

ಸಾಗುತ್ತಿದೆ ಪಯಣ ತೆರೆ ತೆರೆದು ಹರಿಹರಿದು ಮತ್ತಷ್ಟು
ಕೊಳಕಿಗೇನು ಬರವೇ ಇಲ್ಲೆಲ್ಲ, ಉಚಿತ ಸುರಿವವರಿರುವೆಡೆ
ಎಸೆದೆಸೆದು ಕಸವ ನನ್ನೆದೆಯ ಹರಿವಿಗೆ, ಸುರಿಸುರಿದು!

ಇನ್ನೇನು ಕಾಲಬರಬೇಕು ಬಾನೊಳು ಮೋಡಮೂಡಲು
ನೀರ ಬಸಿರಹೊತ್ತು ನಲಿನಲಿದು ಬಿರುಸಿನಲಿ ಹರಿದುಬರಬೇಕು
ಕೊಳೆಯುಳಿಸದಂತೆ ಚರಂಡಿಯೆನುವ ನನ್ನೆದೆಯಲಿ!

==============================
ಚಿತ್ರಕೃಪೆ: ದಿ ಹಿಂದು ಡಾಟ್ ಕಾಮ್.

1 ಕಾಮೆಂಟ್‌:

  1. ವೃಷಭಾವತಿ ಮತ್ತು ಟ್ಯಾನಿ ರೋಡಿನ ನಾಲೆಗಳು ನೆನಪಾದವು. ಸಾಂದ್ರ ಕೊಳಕದು ತೊಳೆಯಲು ಮುಗಿಲು ಕನಿಕರಿಸಿ ಭೋರ್ಗರೆವ ಕಾಲ ಸನ್ನಿಹಿತ.

    ಉಳಿದ ಚರಂಡಿಗಳ ತೊಳೆಯಲಾರವು ನೂರ್ಮಳೆ!

    ಪ್ರತ್ಯುತ್ತರಅಳಿಸಿ