ಶನಿವಾರ, ಡಿಸೆಂಬರ್ 3, 2011

ಸಮಾಧಿ ಮತ್ತು ಮುಕ್ತಿ!

ಕಿವಿಗೊಟ್ಟು ಕೇಳಿದೆ
ಸಾಲುಗಟ್ಟಿದ ಇರುವೆಗಳ
ಕಾಲ ಸಪ್ಪಳದ ದನಿ ಕೇಳಿತು
ಏರಿಳಿತವಿಲ್ಲ ಎಲ್ಲವೂ ಒಂದೇ ರಾಗ

ಕಣ್ಣ ಅರಳಿಸಿದೆ, ತೆರೆದ ಕಿವಿ ಹಾಗೆ ಇತ್ತು
ಸತ್ತ ನೊಣದ ವಾಸನೆಗೆ
ಇರುವೆಯೊಂದು ಸಾಲು ಬಿಟ್ಟು
ನನ್ನ ಕಾಲ ಬುಡದಲಿ ನಗುತಿತ್ತು,
ಒಂದರೆಕ್ಷಣ ಈ ಒಂಟಿ ಇರುವೆಯ
ಬೆನ್ನ ಹತ್ತಿ ನಾಕಿರುವೆಗಳು....

ಮನಸು ತೆರೆದು ಕೊಂಡಿತು
ವಾಸ್ತವದ ಲೋಕ, ಅಲ್ಲಿ ಶವಯಾತ್ರೆ
ನೊಣವ ಹೊತ್ತ ನಾಲ್ಕಿರುವೆಗಳು,
ಯಾರಿಗಾರೋ ಬಾಂಧವರು
ಒಂದಕ್ಕೊಂದು ನಂಟಿಲ್ಲ,
ಕಾಲು, ಬುಡ, ತಲೆ, ಹೊಟ್ಟೆ
ಕಚ್ಚಿ ಹೊತ್ತೊಯ್ಯುತ್ತಿದ್ದವು
ಮೂಲೆ ಗೂಡಿನೊಳಗೆ

ಬಿಟ್ಟ ಕಣ್ಣು, ತೆರೆದ ಮನವ ಮೀರಿ
ನನ್ನ ನಾಲಗೆ ಪಿಸುಗುಟ್ಟಿತ್ತು
ಮುಕ್ತಿ ಯಾರಿಗೆ? ಹೌದು ಎಲ್ಲದಕೂ!

ಹೊತ್ತವರಿಗೆ ಸತ್ತದ್ದೂ ಶವವಾಗಲಿಲ್ಲ
ಹಸಿದ ಹೊಟ್ಟೆಯ ಬೆಂಕಿ ಸಮಾಧಿಗೆ
ಒಂದು ಹೂವಾಗಿತ್ತು ಉಸಿರು ನಿಲ್ಲಿಸಿದ ನೊಣ!

3 ಕಾಮೆಂಟ್‌ಗಳು:

  1. ನಿಮ್ಮ ಕವಿತೆಯ ಶೈಲಿ ಚೆನ್ನಾಗಿದೆ ಪುಷ್ಪಣ್ಣ. ವಿಚಾರವನ್ನು ಹದ ತಪ್ಪದಂತೆ ಅದರ ಆಳಕ್ಕೆ ಇಳಿದು, ಮತ್ತಷ್ಟು ಇಳಿದು ಕೆದಕುತ್ತೀರಿ. ಈ ಕವಿತೆಯ ಸಾಲುಗಳನ್ನು ಆಳಕ್ಕಿಳಿದ ಅನುಭವವಾಯಿತು. ಸುಂದರ ಕವಿತೆ.

    ಪ್ರತ್ಯುತ್ತರಅಳಿಸಿ
  2. ಹೃದಯಮಿಡಿದು ಆಳವಾದ ಆನುಭೂತಿಹೊಂದಿ ಬದುಕಿನ ವಾಸ್ತವತೆಗೆ ಕನ್ನಡಿ ಹಿಡಿದು ರಚಿತವಾದ ಮನೋಹರ ಕವಿತೆ ಇದಾಗಿದೆ.ಕವಿಯ ಭಾವಸ್ಪುರತೆಗೆ,ಮನಸಿನ ತಾಕಲಾಟಕ್ಕೆ,ಜೀವನದ ಹೊಯ್ದಾಟಕ್ಕೆ ಜೀವತುಂಬಿ ನುಡಿನಮನ ಅರ್ಪಿಸಿದ ಕವಿಯ ಭಾವ ಲಹರಿಯೇ ಹೃದಯ ಸ್ಪರ್ಷಿಯಾದುದು.ಸುಂದರ ಪ್ರತಿಮೆಯೊಂದಿಗೆ ಮುದ್ದಾಗಿ ರಚಿತವಾದ ಕವಿಯ ಲಹರಿ ಸೊಗಸಾಗಿದೆ.

    ಪ್ರತ್ಯುತ್ತರಅಳಿಸಿ
  3. ಇಂತಹ ಕವಿತೆ ಬರೆಯಲು , ಮನಸ್ಸು ನಿಜವಾಗಿಯೂ ಸಮಾಧಿ ಸ್ಥಿತಿ ಹಾಗೂ ಪರಿಸರದ ಮುಕ್ತ ಸ್ಥಿತಿಯೂ ಅನಿವಾರ್ಯ ಪುಷ್ಪಣ್ಣಾ.. ಧ್ಯಾನಕೆ ಕುಳಿತ ಯೋಗಿಯ ಏಕಾಗ್ರತೆಯ ಪ್ರಭಾವವುಳ್ಳಷ್ಟು ಕವಿತೆ... ಇಷ್ಟವಾಯ್ತು..

    ಪ್ರತ್ಯುತ್ತರಅಳಿಸಿ