ಮಂಗಳವಾರ, ಜನವರಿ 31, 2012

ಮುಳುಗದಿರು ಕರುವೇ!

ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ

ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!

ಮುಂಜಾನೆಯ ಹೊಂಗಿರಣದ ಹಿತವ ಉಂಡು
ಕಣ್ಣು ತಂಪುಗೊಳಿಸಲು ಬರದದಕೆ
ಅಲ್ಲಿರಲಿಲ್ಲ ಹುಲ್ಲ ಹೊದಿಕೆಯ ಮೈದಾನದೊಳಗೆ
ಕಣ್ಣರಳಿಸಿ ಸವಿಯ ಉಣಬರದದಕೆ!

ಬರಡು ಆಲದ ಬುಡದ ಬಾವಿಯಲಿ ಇಣುಕಿದೆ
ಇಲ್ಲ, ಸುಳಿವಿಲ್ಲ ಕಲ್ಲು ಮುಳ್ಳಿನ ಕಾಡು ದಾರಿಯಲೂ
ಎತ್ತ ಓಡಿದೆ? ಅದೆಷ್ಟೂ ದೂರ? ಒಂಟಿಯದು
ನಿನ್ನೆ ಹುಟ್ಟಿದಷ್ಟೇ ಇನ್ನೂ ಬಲಿತಿಲ್ಲ ಹಲ್ಲುಗಳು!

ಮೊನ್ನೆ ಗರ್ಭದೊಳಗಿತ್ತು, ಇಂದು ಜಗದೊಳಗೆ
ಹೊಟ್ಟೆಯೊಳಗೆ ಕಾಲು ಅಲ್ಲಾಡಿಸುತ್ತಿರಲಿಲ್ಲ
ಇಂದು ಕೈಕಾಲು ನೆಗೆದಿದೆ, ಬಾಲ ನಿಗುರಿದೆ
ಓಟ, ಹರಿವ ನದಿಯ ಮೇಲೆ, ನೀರು ಬಂಡೆಯೇ?
ಮುಳುಗದಿರಲಷ್ಟೇ ಸಾಕು, ಕರಗದಿರಲಿ ಉತ್ಸುಕ!

4 ಕಾಮೆಂಟ್‌ಗಳು:

  1. ಸುಂದರ ಅಭಿವ್ಯಕ್ತಿಯ ಕವಿತೆ. ನಿಮ್ಮ ಮನಸ್ಸು ತುಂಬಾ ಮುಗ್ದವಾದುದು. ಅದರ ಹುಡುಕಾಟಕ್ಕೆ ಕವಿ ಹೆಜ್ಜೆಯಿರಿಸುತ್ತಾನೆ. ಈ ಭಾವ ಚೆನ್ನಾಗಿದೆ ಕವಿತೆಯ ಅಭಿವ್ಯಕ್ತಿಯೊಳಗೆ. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  2. ತು೦ಬಾ ಕಾಳಜಿವಹಿಸಿದ ಮಾತುಗಳು ...... ಚೆನ್ನಾಗಿ ಮೂಡಿ ಬ೦ದಿದೆ

    ಪ್ರತ್ಯುತ್ತರಅಳಿಸಿ
  3. ಕರುವ ಮೇಲಿನ ಅಕ್ಕರೆಯು ಕವಿಭಾವಕ್ಕೆ ಪುಷ್ಟಿ ನೀಡಿ ಜೀವತುಂಬಿ ಮೈದೆಳೆದುಕೊಂಡ ಒಲವ ಕವಿತೆ ಇದು.ಕವಿನೋಟದ ಸೋಜಿಗ,ಮುಗ್ಧತೆ,ಕನವರಿಕೆ ಅಚ್ಚುಕಟ್ಟಾಗಿ ರೂಪಿತವಾಗಿ ಒಂದು ಸುಂದರ ಪ್ರತಿಮೆಯನ್ನು ಕಣ್ಣೆದುರಿಗೆ ತಂದು ನಿಲ್ಲಿಸಿದ ಪರಿ ಆಕರ್ಷಕವಾದುದು.
    ................................................

    ಪ್ರತ್ಯುತ್ತರಅಳಿಸಿ
  4. ಭಾವನೆಗಳ ಬಚ್ಚಿಟ್ಟು ಸಾಲುಗಳಲ್ಲಿ ಜನಮನ ಸೆಳೆಯುವ ಭಾವಪೂರ್ಣ ಪದಗಳ ಸರಿಸಮ ಜೋಡಣೆಯಲ್ಲಿ ಜೀವನದ ಮುಗ್ದತೆಯ ವರ್ಣಿಸಿದ ಪರಿಯು ಬಲು ರೋಚಕ ಅನುಭವ ಕವಿತೆಯನ್ನು ಆನಂದಿಸುವಾಗ.. ಕೊನೆಯ ಚರಣ ತುಂಬಾ ಇಷ್ಟವಾಯಿತು.. :)

    ಪ್ರತ್ಯುತ್ತರಅಳಿಸಿ