ಭಾನುವಾರ, ಏಪ್ರಿಲ್ 22, 2012

ರಸ್ತೆಗಳು ನಕ್ಕಿವೆ.....!

ನಿನ್ನೆ ಕಾಲೆಡವಿನಂತಿದ್ದ ಕಲ್ಲು ತುಂಬಿದ ದಾರಿ
ಇಂದು ರಸ್ತೆಗಳಾಗಿ ನಕ್ಕಿವೆ ನಯವಾಗಿ ಜಾರಿ!
ಮೂರಡಿ ಅಗಲ, ಮೂವತ್ತು ಮೈಲು ನಿನ್ನೆಗೆ
ನೂರರ ವಿಸ್ತಾರ, ನಿಲುಕದ ದೂರ ನಾಳೆಗೆ!

ಮೇಲೆ ಮಳೆಮೋಡ, ಬಸುರ ಹನಿ ಒಳಮಣ್ಣಿಗೆ,
ಕೆಸರು ಉಬ್ಬಿ, ಅಲ್ಲಲ್ಲಿ ಹೊಟ್ಟೆ ಬಿಡುತ್ತವೆ ರಸ್ತೆಗಳು!
ಬಸುರ ಬಸಿದು ತೇಪೆ, ಉಬ್ಬು ಎಗರಿ ಮತ್ತೆ ಕೇಕೆ,
ಮಣ್ಣು ಎರಚಿ ನಿಂತು ರಾಡಿಯೊಳಗಿನ ಕನಸು!

ಎಲ್ಲ ಹೀರಿ ರಸ್ತೆಗಳು ನಕ್ಕಿವೆ.....!

ನಡುವೆ ಬಿಳಿಪಟ್ಟಿ ಇಬ್ಭಾಗ, ಧೂಳತಿಪ್ಪೆ ತೀರಕೆ
ಅಡ್ಡಗೋಡೆಯ ಸೇತುವೆ ನೀರು ಬತ್ತಿದ ನದಿಗೆ!
ಕ್ಷಣ ನಿಂತು ಮತ್ತೆ ಸಾಗಿದೆ ಅಲ್ಲಿ ಎಡತಿರುವು
ಪಕ್ಕಕ್ಕೆ ಕೊಂಚ ದಿಣ್ಣೆಗಳ ಏರು, ಮುಂದೆ ಕಾಣದೆ!

ಏರಿ ನಿಂತಂತೆತ್ತರಕ್ಕೇರಿದಷ್ಟು ಮತ್ತೆ ಕವಲು
ತಿರುಗಬೇಕೆಲ್ಲಿ ಎಡಕ್ಕೋ, ಇಲ್ಲ ಬಲಕ್ಕೋ?
ಗುಂಡಿ ಬಿದ್ದ ಒಂಟಿತನದಲೂ ಉಬ್ಬು ತಗ್ಗುಗಳ
ನೋವ ಬಿಗಿದಪ್ಪಿ ಮತ್ತಿಷ್ಟಗಲ ತೆರೆದು ನಗು!

ಎಲ್ಲ ಮೀರಿ ರಸ್ತೆಗಳು ನಕ್ಕಿವೆ.....!

ಮತ್ತೆ ಓಡುತ್ತವೆ ರಸ್ತೆಗಳು ಕಡಲ ತಡಿಯ
ಬುಡ, ಗುಡ್ಡಬೆಟ್ಟಗಳೆತ್ತರ ಸೀಳಿ, ಕವಲು
ಜಲಪಾತದಂಚಿಗೆ ಹರಿದು ಭೋರ್ಗರೆತ,
ಹಿಮಕಲ್ಲುಗಳೆರಚಿಕೊಂಡು ತಣ್ಣಗೆ ಬೆತ್ತಲು!

ಊರಕೇರಿಯಲಿ ಮೂರು ಭಾಗ, ಅಂಕುಡೊಂಕು
ಕಟ್ಟಡಗಳ ಸಂದಿನಲಿ ಪಟ್ಟಣ, ಉದ್ದಾನೇರವಲ್ಲಿ
ಕೈಮುಗಿದು ಧೂಳ ಚುಕ್ಕಿಯಿಟ್ಟ ರಂಗೋಲಿ
ಉಳಿದದ್ದು ಅಳಿದುಳಿದ ನಗು ಸವೆದು ಸವೆದು!

ಮತ್ತೆ ನಕ್ಕಿವೆ ರಸ್ತೆಗಳು ಹೀರಿ ಎಲ್ಲವನೂ ಮೀರಿ!
====

ಚಿತ್ರಕೃಪೆ:ಗೂಗಲ್ ಇಮೇಜಸ್

5 ಕಾಮೆಂಟ್‌ಗಳು:

  1. ಕಾಲ ಕಳೆದಷ್ಟೂ ರಸ್ತೆಗಳು ಮಾಗುತ್ತವೆ.. ಎಲ್ಲಾ ಭಾವಗಳನ್ನು ತನ್ನ ಒಡಲೊಳಗರಗಿಸಿಕೊಂಡು ಮತ್ತೆ ನಗುತ್ತವೆ ರಸ್ತೆಗಳು.. ರಸ್ತೆಗಳು ಜೀವನಾನುಭವ, ನೆನಪು, ಕನಸು, ಸಂಬಂಧಗಳು ಮತ್ತು ವಾಸ್ತವಗಳ ನಡುವಿನ ಅಂತರವಾಗಿ ಗೋಚರಿಸುತ್ತಿದೆ ನನಗೆ.. ಮಾರ್ಮಿಕವಾದ ಅಭಿವ್ಯಕ್ತಿ ಪುಷ್ಪಣ್ಣ.. ಮತ್ತೆ ಕವಿತೆಯಲ್ಲಿ ಭಾವಗಳು ಸುರುಳಿ ಬಿಚ್ಚಿವೆ, ಒಂದು ಭಾವವನ್ನು ಹೆಕ್ಕುವಾಗ ಮತ್ತೊಂದು ಭಾವ ಕೊರಳು ಸುತ್ತುತ್ತದೆ.. ಚೆಂದದ ಕವಿತೆ..
    ಈ ಸಾಲುಗಳು ಖುಷಿ ನೀಡಿದವು:
    ಮತ್ತೆ ಓಡುತ್ತವೆ ರಸ್ತೆಗಳು ಕಡಲ ತಡಿಯ
    ಬುಡ, ಗುಡ್ಡಬೆಟ್ಟಗಳೆತ್ತರ ಸೀಳಿ, ಕವಲು
    ಜಲಪಾತದಂಚಿಗೆ ಹರಿದು ಭೋರ್ಗರೆತ,
    ಹಿಮಕಲ್ಲುಗಳೆರಚಿಕೊಂಡು ತಣ್ಣಗೆ ಬೆತ್ತಲು!

    ಪ್ರತ್ಯುತ್ತರಅಳಿಸಿ
  2. ಮೂರಡಿ ಅಗಲ, ಮೂವತ್ತು ಮೈಲು ನಿನ್ನೆಗೆ
    ನೂರರ ವಿಸ್ತಾರ, ನಿಲುಕದ ದೂರ ನಾಳೆಗೆ!
    : ಅಷ್ಟನ್ನು ಕಲಸಿ,ಮೆದ್ದಿ ಕ್ಷಣ ಕ್ಷಣಗಳಿಗೆ ಭಾವಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದ ಪರಿಶ್ರಮವನ್ನು ಇಲ್ಲಿ ನೋಡುತ್ತಿದ್ದೇನೆ. ಸುಮ್ಮನೆ ಹುಟ್ಟಲಿಲ್ಲ ಅಂದುಕೊಳ್ಳುತ್ತೇನೆ. ದಟ್ಟ ತಾಳ್ಮೆ ಇಲ್ಲಿ ಗೋಚರಿಸಿತು. ಚೆನ್ನಾಗಿದೆ ಲಯ ಮತ್ತು ಭಾವಗಳ ತಲ್ಲಣಗಳು.

    ಪ್ರತ್ಯುತ್ತರಅಳಿಸಿ
  3. ಸಂಬಂಧಗಳು ಎಡತಾಕುವುದೇ ಹೀಗೆ. ಕೆಲವು ಸಂಬಂಧಗಳು ಮೊಸರಲ್ಲಿ ಸಿಗುವ ಕಲ್ಲಿನಂತೆ. ಮತ್ತೆ ಕೆಲವು ಬಂಧಗಳು ಶ್ರೀಗಂಧ ಕೊರಡಿನ ಘಮಲಿನಂತೆ. ನುಣುಪೆಂದು ಹೊರಟು ಒಳ ಹೊಕ್ಕು ನೋಡಿದಾಗ ಉಬ್ಬು ತಗ್ಗಿನ ತೇಪೆ ಹಚ್ಚಿದ ರಸ್ತೆಯಲ್ಲಿ ಸಿಗುವ ಗುಂಡಿಗಳು. ಇದುವೇ ಸಂಬಂಧದ ಬಳ್ಳಿ ಕಾಲಿಗೆ ತೊಡರುವುದು ಎಂಬಂತೆ, ವಾಸ್ತವದ ಬದುಕಿನ ಹಿನ್ನೋಟ ಮುನ್ನೋಟಗಳು ರಸ್ತೆಯ ಪ್ರತಿಮೆಯಲ್ಲಿ ಸಂಬಂಧದ ರೂಪದಲ್ಲಿ ಜೀವನದಲ್ಲಿನ ಸಂಕೀರ್ಣತೆಯ ಸಂಬಂಧಗಳನ್ನು ತೆರೆದ ಪುಸ್ತಕದಂತೆ ನಮ್ಮ ಮುಂದೆ ಬಿಚ್ಚಿಟ್ಟಿರುವ ಪುಷ್ಪಣ್ಣ, ನಿಮ್ಮ ನೆನಪುಗಳ ಸೊಗಸಾದ ಲಯಬದ್ಧ ಕವಿತೆ ಇದು.

    ಪ್ರತ್ಯುತ್ತರಅಳಿಸಿ
  4. ಅದ್ಭುತ ಅದ್ಭುತ ಅದ್ಭುತ. ಉದ್ದಕ್ಕೆ ಹೆಬ್ಬಾವಿನ ಹಾಗೆ ಜಡವಾಗಿ ಬಿದ್ದ ಹೆದ್ದಾರಿಗೂ ಜೀವಭಾವ ಅರೋಪಿಸಿದಿರಿ. ಸೂಪರ್

    ಪ್ರತ್ಯುತ್ತರಅಳಿಸಿ