ಸೋಮವಾರ, ಮಾರ್ಚ್ 18, 2013

ಬರೆವವರು!

ಬಣ್ಣಬಳಿದ ಗೋಡೆಗಂಟಿದ ಹಲಗೆಯಲೊಂದಿಷ್ಟು
ರೇಖೆಗಳ ಎಳೆದು ಬಿಡಿಸಿ ಗೀಚಿಹೋದವರೆಷ್ಟೋ?
ನಿನ್ನೆ ಬಂದವರಿಂದಿಲ್ಲ,ಇಂದಿನವರದು ಮುಂದಿಲ್ಲ
ನಿಂತಲ್ಲೇ ನಿಲಲಿಲ್ಲ, ಭಿನ್ನವದು ಚಿತ್ರ ಹಲಗೆಯೊಳು!

ಕರಿಬಣ್ಣದ ಕಡ್ಡಿಯೊಳು ಬರೆಯೆಳೆವ ಹಲವರು
ಹಲಗೆ ಬಿಳಿ ಕಂಡರಾಗದಂತೆ ಕೆಂಡವವರ ಮೊಗ,
ಅರಿಯಲಾಗದಕ್ಷರಗಳ ಬರವಣಿಗೆ ಕೆಲವರದು
ಮೊಂಡ-ಮೋಟು ಗೀಚುಗಳಲ್ಲೇ ನೀತಿಪಾಠ!

ಕರಿಯದಾದರೇನು ಕಡ್ಡಿ, ಗೀಚಿ ದುಂಡಗೆ
ದೋಚುವವರಿಹರು ಮನಸ, ಬೆರೆಯುವರು
ಗೆರೆಗಳಲೇ ಬರೆದು, ಬರೆಗಳ ಬಿಡಿಸೊರೆಸಿ
ಮರೆಯಲಾಗದಂತೆ ಮರೆಯಾಗುವವರಿಹರು!

ಬಂದವರೆಲ್ಲ ಬಳಿಯಿರಲಿ, ಬರೆಯುತಲಿ ದಿನವೂ
ಬರೆಯಾದರೂ ಬರೆಯಿರಿ, ಬರೆದು ಬೆರೆಯಿರಿ
ಮರೆಯದಿರಿ ಹಲಗೆಯ ನಿಮ್ಮದೇ ಗೀಚುಗಳಲಿ
ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ!

=====
ಚಿತ್ರಕೃಪೆ: ಗೂಗಲ್ ಇಮೇಜಸ್

4 ಕಾಮೆಂಟ್‌ಗಳು:

  1. ಹಲಗೆಯ ಮೇಲೆ ಮೂಡುವ ಪದಗಳು ಬದುಕಿನ ದಾರಿಗೆ ಹೂವುಗಳ ಹಾಸುತ್ತವೆ ಕಲಿತ ಮಾತು, ವಿಧ್ಯೆ ಎಲ್ಲವು ಸೊಗಸು. ಆ ಬರಹಗಾರ ಮಾಸ್ತರ ನೆರಳಲ್ಲಿ ಅರಳಿರುವ ಕಾಲವನ್ನು ನೆನೆಸಿಕೊಳ್ಳುವ ಸುಂದರ ಕವನಗಳು ಇಷ್ಟವಾಯಿತು

    ಪ್ರತ್ಯುತ್ತರಅಳಿಸಿ
  2. ಕಪ್ಪು ಹಲಗೆಯೊಳಗಿನ ಬಿಳಿಯ ಗೆರೆಗಳಿಗೆಷ್ಟು ಅರ್ಥ.. ತುಂಬಾ ಚೆನ್ನಾಗಿದೆ ಕವನ

    ಪ್ರತ್ಯುತ್ತರಅಳಿಸಿ
  3. ಎರಡು ತಿಂಗಳಿನಿಂದ ನಿಮ್ಮಲ್ಲಿ ಇಂಥದ್ದೊಂದು ಕವಿತೆ ಹುಡುಕುತ್ತಿದ್ದೆ, ಇಲ್ಲಿ ಸಿಕ್ಕಿದೆ. ಮನಸ ಹಲಗೆಯಾಗಿಸಿ, ಬೇರೆಯವರು ನಿಮ್ಮ ಮನಸ್ಸಿನ ಮೇಲೆ ಬರೆದ ಗೀಚುಗಳು ಈ ಕಪ್ಪು ಹಲಗೆಯ ಮೇಲೆ ಚಿತ್ತಾರವಾವೆ. ರೂಪಕಗಳು ಮತ್ತು ಉಪಮೆಗಳನ್ನು ಭರಪೂರ ದುಡಿಸಿದ್ದೀರಿ. ಕೊಳದೊಳಗಿನ ತಿಳಿ ಜಲದಂಥ ಕಾವ್ಯ ಪ್ರತಿಮೆಯನ್ನು ಕಟ್ಟಿಕೊಟ್ಟಿದ್ದೀರಿ.

    ಬಂದವರೆಲ್ಲ ಬಳಿಯಿರಲಿ, ಬರೆಯುತಲಿ ದಿನವೂ
    ಬರೆಯಾದರೂ ಬರೆಯಿರಿ, ಬರೆದು ಬೆರೆಯಿರಿ
    ಮರೆಯದಿರಿ ಹಲಗೆಯ ನಿಮ್ಮದೇ ಗೀಚುಗಳಲಿ
    ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ!
    ಈ ಸಾಲುಗಳನ್ನು ಓದುವ ಹೊತ್ತಿಗೆ ನಿಮ್ಮ ಕಪ್ಪುಹಲಗೆಯೊಳಗೆ ನನ್ನ ಮನಸ್ಸನ್ನೂ ಸಮೀಕರಿಸಿ, ಒಡನಾಡಿಗಳ ಗೀಚುಗಳಿಗೆ ಸಂಪೂರ್ಣ ಒಡ್ಡಿಕೊಂಡೆ. ’ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ’ ವ್ಹಾ.. ಎಂಥಾ ಅರ್ಪಣೆ. ಬಹಳ ಚೆಂದದ ಕವಿತೆ ಪುಷ್ಪಣ್ಣ :)

    ಪ್ರತ್ಯುತ್ತರಅಳಿಸಿ
  4. ಬದುಕನ್ನು ಕಾರೀ ಹಲಗೆಗೆ ಸಮೀಕರಿಸಿದ ಕವಿಯ ಜಾಣ್ಮೆಗೆ ಮೊದಲ ಅಂಕ. ಕೆಲವರು ಬರೆಯುವ ಉಮೇದಿಯಲ್ಲಿದ್ದಾರೆ ಹಲವರಿಗೆ ಅಳಿಸುವುದೇ ಕಾಯಕ. ನಡುವೆಲ್ಲೋ ಒಂದಿನಿತು ಉಪಯುಕ್ತ ಮಾಹಿತಿ ಸಿಕ್ಕೀತು ಅಂತ ನೆನಪಿಡಳು ಹೋದರೆ ಯಾರೋ ಅಳಿಸಿ ಬಿಟ್ಟಿರುತ್ತಾರೆ!

    ಅದೆಲ್ಲ ಹೊರತು ಪಡೆಸಿ, ಕವಿಯ ಆಶಯದಂತೆ :
    " ಬಂದವರೆಲ್ಲ ಬಳಿಯಿರಲಿ, ಬರೆಯುತಲಿ ದಿನವೂ
    ----------
    ----------
    ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ!

    ಪ್ರತ್ಯುತ್ತರಅಳಿಸಿ