ಒಂದು ಬಡ ಜೀವ... ಮೂಳೆಯೇ ಮಾಂಸ ಖಂಡಗಳು
ತೂತು ಚಾಪೆಯ ಮೇಲೆ ಬೋರಲು,
ಕಂಬನಿಯ ಸುಳಿವಿಲ್ಲ, ತೊಟ್ಟಿಕ್ಕುವ ಮಳೆ ಹನಿಯ
ಸದ್ದು ಗೋಡೆಯಿಲ್ಲದ ಜೋಪಡಿಯೊಳಗೆ,
ನೊಣದ ಝೇಂಕಾರ ನೀರ ಲೋಟದ ಮೇಲೆ,
ನಾಯಿ ಬೊಗಳಿದ ಕೂಗು ಎಲ್ಲೋ ದೂರದಲಿ
ತಡಪಡಿಸುತಿದೆ ಒಂಟಿ ಜೀವ, ಆಸರೆಯ ಹಂಬಲ
ತುಟಿ ಕಲ್ಲು ಬಂಡೆ, ನಾಲಗೆಯೂ ಮರುಭೂಮಿ,
ಒಂದಿಂಚಿನ ಉಸಿರು ಮೂಗ ಹೊರಳೆಯೊಳಗೆ
ಕಾಲು ಮರಗಟ್ಟಿದೆ, ಕೈ ಬೆರಳು ಒಣ ಕೊರಡು,
ಹುಳಗಳೂ ಸತ್ತು ಮಲಗಿವೆ ಉದರದೊಳಗೆ....
ಉಸಿರುಗಟ್ಟಿದ ಮೆದುಳ ಮೂಲೆಯೊಳಗೆ ದೇವರ
ಹೆಸರ ಪಟ್ಟಿ, ಎಲೆಯಿಲ್ಲದ ಒಣಮರಗಳ ಸಾಲುಗಳಲಿ
ಸವೆದ ಬದುಕ ದಾರಿಯ ನೆನಪ ಹತ್ತಿ.....................
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ