ಸೋಮವಾರ, ಫೆಬ್ರವರಿ 20, 2012

ರಸ್ತೆ ಮತ್ತು ಗಮ್ಯ!

ರಸ್ತೆ, ಸಾಗುತ್ತಲೇ ಇದೆ,
ಇಂದು ನಿನ್ನೆಯದಲ್ಲ
ಅಂದು ಕಾಲು ದಾರಿ
ಇಂದು ಕಪ್ಪುಡಾಂಬರು
ಮೆತ್ತಿ, ಅಲ್ಲಲ್ಲಿ ಹೊಳಪು!


ಚಾಚುತ್ತದೆ ಕೆಲವೊಮ್ಮೆ
ಒಣತುಟಿಯ ಸೀಳುನಗೆ
ಅಲ್ಲಲ್ಲಿ ತಿರುವು, ಕೊಂಕು!
ಕರೆಯುತ್ತದೆ ಕೈ ಬೀಸಿ
ದೂರದೂರದ ಹಸಿರು!

ಕೆಳಗಿಳಿಯುತ್ತೇವೆ,
ಮತ್ತಷ್ಟೂ ನುಣುಪು
ಅಲ್ಲೆರಡು ಉಬ್ಬು,
ಆಸೆಯ ವೇಗಕ್ಕೆ ತಡೆ,
ಉಬ್ಬುಗಳ ಸವರಿ
ಮತ್ತೆ ಪಯಣ
ಇಳಿದಷ್ಟೂ ಬೆವರಸುಖ!

ಹಿತಗಾಳಿ, ಉಸಿರಬಿಸಿ,
ರಸ್ತೆ ಮೈದೊಡವುತ್ತದೆ
ಅಲ್ಲಲಿ ಸುಖದ ಅಮಲು,
ಕುಲುಕಾಟ ಮೈಮೇಲೆ
ಗುಳಿಯೊಳಗೆ ಬಿದ್ದೆದ್ದು!

ಸಾಗುತ್ತಲೇ ಇದೆ
ಪಯಣ, ರಸ್ತೆ ಸುಸ್ತೋ!
ಪ್ರಪಾತದಲೊಂದು ಇಣುಕು
ಕಣ್ತಂಪಿಗೊಂದು ವೇಗ
ಗಮ್ಯ ಸೇರುವ ತವಕ!

ಭಾನುವಾರ, ಫೆಬ್ರವರಿ 12, 2012

ಬದುಕು ಬಂಡೆಯೇ........!?

ಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!

ಅಲ್ಲಲ್ಲಿ ನೀರಾಳದ ಮೀನುಗಳ
ಮೆದುತುಟಿಯ ಮುತ್ತು, ಖುಷಿ,
ನನಗೆ ಕಚಗುಳಿ, ಅದೂ ಕ್ಷಣಿಕ
ಮತ್ತೆ ಪಾಚಿಗಟ್ಟುತ್ತವೆ ಮೈಮೇಲೆ
ನಿನ್ನೆ ಹರಿದ ಕೆಸರ ರಾಡಿಗೆ;
ಆಮೆ ಬೆನ್ನೊರೆಸುತ್ತದೆ,
ಸೀಳುನಾಲಿಗೆ ಹಾವ ನಗು
ಅಲ್ಲಲ್ಲಿ ಭಯ ಹುಟ್ಟಿಸುತ್ತದೆ!

ಮೀನ ಹುಡುಕಿ ಮಿಂಚುಳ್ಳಿ
ನನ್ನ ತಲೆಮೇಲೆ ಹೊಂಚು
ಒಂದು ಜೀವ ಕೊಕ್ಕಿನಲಿ
ಹೊಟ್ಟೆಪಾಡು ಅದರದ್ದು,
ನನಗದರ ದುರ್ನಾತ,
ತಲೆಕೆರೆಯುತ್ತೇನೆ ಅಲ್ಲಲ್ಲಿ!

ತೇಲಿಬರುವ ಮರದ ದಿಮ್ಮಿ
ಜೀವ ಬಿಟ್ಟ ಮೀನ ಮರಿ
ಎಲ್ಲ ತಿವಿಯುತ್ತವೆ ನನಗೆ,
ನಾನೋ ನಿಂತಂತೇ ಅಲ್ಲೇ
ಕಲ್ಲು, ಗಟ್ಟಿ ಕಲ್ಲು ಬಂಡೆ,
ನದಿ ಮಾತ್ರ ಹರಿಯುತ್ತಲೇ ಇದೆ,
ಹೊಸ ನೀರ ಹೊತ್ತು ತಂದು
ರಾಡಿಯೋ, ತಿಳಿಯೋ
ಪರಿವೇ ಇಲ್ಲದೇ!


[ಚಿತ್ರಕೃಪೆ: ಗೂಗಲ್ ಇಮೇಜಸ್]