ಸೋಮವಾರ, ಡಿಸೆಂಬರ್ 26, 2011

ದೈವವೆಲ್ಲಿದೆ ಗುಡಿಯೊಳಗೆ?

ಒಳಗೊಂದು ಮನುಷ್ಯ, ಸಿಂಗರಿಸಿ ಹೂವ ಮುಡಿಸಿ
ಸೊಂಟಕ್ಕೆ ಬೆಳ್ಳಿಯ ಪಟ್ಟಿ, ರೇಶಿಮೆಯ ಕೆಂಪು
ಹಣೆಗೆ ನಾಮ, ಉಗ್ರತೆಗೆ ವಿಚಿತ್ರ ರೂಪ ಬೊಟ್ಟು
ವೀಳ್ಯ, ಸುಣ್ಣ, ಅಡಿಕೆ ಮಿಶ್ರಿತ ರಂಗೋಲಿ ನಾಲಿಗೆ
ಆತನೀಗ ದೈವ ಸ್ವರೂಪಿ, ನಗಾರಿ, ನಾಗಸ್ವರಗಳಲಿ

ಹಿಂಗಾರದ ತುಂಡು, ಮಲ್ಲಿಗೆ ಎಸಳು, ಅಕ್ಕಿ ಕಾಳು
ಮುಖಕ್ಕಿಷ್ಟು ಮಂಗಲ ಅರಿಶಿನ, ಕುಂಕುಮಗಳ ಮೆತ್ತೆ
ಕಾಲಿನಲಿ ಗೆಜ್ಜೆದನಿ, ಎಡಕೈಲಿ ಘಂಟಾಮಣಿ ಸದ್ದು
ಚಿನ್ನ ಮುಚ್ಚಿದ ಕತ್ತಿ ಕಡಸಾಲೆಗಳ ಹೊಳಪು, ಭಯ
ರೌದ್ರ ಕಾಡಿಗೆಯ ಕಣ್ಣು ಉರಿವ ಸೂರ್ಯನಿದ್ದಂತೆ

ನಾಲ್ಕು ಗೋಡೆಯ ಮಧ್ಯೆ ಒಂದು ಕಲ್ಲುಗುಂಡ
ಮರದ ಪೀಠದ ಮೇಲೆ ಕುಳಿತ ದೈವವಾತ
ಅರೆ ಗಳಿಗೆಯ ಮುಂಚೆ ಮದ್ಯದಮಲಿನಲಿ ತೇಲುತ್ತಿದ್ದ
ಇವನು ಈಗ ಶುದ್ಧ, ಒಂದು ಕೊಡಪಾನದ ನೀರ ಸ್ನಾನ
ಮೈಮೇಲೆ ಆತನೇರಿದ್ದಾನೆ, ಕೈ ಕಾಲು ನಡುಗಿಸುತ್ತಾನೆ

ನುಡಿ ಕೊಡುತ್ತಾನೆ ನಡುಗುವ ಮೈ, ಒದರುವ ನಾಲಗೆ
ಮಾತು ಮಧು ಕೈ ಕಟ್ಟಿ ನಿಂತ ಕಲ್ಲು ಕೊರಡುಗಳಿಗೆ,
ಶೃಂಗಾರ ಹೂವ ಎಸಳಿನ ರಸಮಯ ವಾಸನೆಗೂ
ಒದ್ದೋಡದ ಕಲ್ಮಶ ಹೃದಯದ ಹುಲು ಮನಸುಗಳು
ಕೈ ಕಟ್ಟಿ ನಿಂತಿವೆ, ಸರಿ ಪಡಿಸುತ್ತಾನಂತೆ ಆ ಮಾಯಾವಿ

ತೇದಿದ ಗಂಧ ಹಲಸಿನೆಲೆಯ ಮಧ್ಯೆ, ಹಣೆಗೊಂದು ಬೊಟ್ಟು
ಹೊದ್ದ ಬಿಳಿಯ ಶಾಲಿನ ಮನಸಿನೊಳಗೆ ಮಸಿ ಕರಕಲು
ನಿಜವ ನುಡಿವುದಂತೆ ದೈವ, ಭರವಸೆಯ ಸಾಲುಮಾತು
ಕೇಳುತ್ತದೆ ಭೋಗ ಬರುವ ವರುಷದ ತವಕ, ಸ್ವರ್ಣದಾಸೆ
ಗುಡಿಗೋಪುರದ ವೈಭೋಗ ಭಾಗ್ಯ ಎಲ್ಲಾ ತೊರೆದವರಿಗೂ

ತಲೆಯಲ್ಲಾಡಿಸಿದ ತನುಗಳು ಹೊರಟು ನಿಂತಿವೆ ಎಲ್ಲಾ ಮರೆತು
ಒಪ್ಪಿದ್ದು ಗುಡಿಯೊಳಗಷ್ಟೆ, ಮನದೊಳಗಣ ಮಾತಲ್ಲ ನಾಲಗೆ ಮೇಲೆ
ಮೆದುಳು ಲೆಕ್ಕದ ಪರಿ ಕ್ಷಣ -ಹರಕೆ ಕುರಿಗಳ ತಲೆ ಕಡಿಯೋಣ
ಖುಷಿ ಪಟ್ಟಾನು, ಕಲ್ಲು ಗೋಡೆಯ ಮರದ ಗುಂಡದ ಒಳಗೆ
ನಾಲಗೆ ಹೊರಚಾಚಿ ಕಣ್ಣು ಬಿಟ್ಟು ಕೂತ ಮೂರ್ತಿಯೂ!

ಶನಿವಾರ, ಡಿಸೆಂಬರ್ 10, 2011

ತೃಪ್ತಿ!

ತಟ್ಟೆಯೊಳಗನ್ನ, ಒಂದು ಕ್ಷಣ ಮೌನ
ನೆಕ್ಕಲುಪ್ಪಿನ ಕಾಯಿ, ಹುಳಿ ಮೊಸರು!

ಹೊರಗೊಂದು ನಾಯಿ ಬಾಗಿಲ ಮುಂದೆ
ಎಲುವ ತಿನ್ನುವ ತವಕ, ಬೇಡುತ್ತಿದೆ ಕಣ್ಣಲಿ

ಹೊಟ್ಟೆ ಚುರುಗುಡುತಿತ್ತು, ಹಸಿವೆಯ ಬೆಂಕಿ
ನಾಲಗೆಯ ತುಂಬೆಲ್ಲಾ ಜೊಲ್ಲು, ನಾಯಿಯಂತೆ!

ಮುಷ್ಟಿಯಲಿ ತುತ್ತು, ತುಂಡು ಉಪ್ಪಿನಕಾಯಿ
ಬಾಡಿದ್ದ ಕರುಳು ಹೊಟ್ಟೆಯೊಳಗೆ ನರ್ತನ!

ತಟ್ಟೆಯೆತ್ತಿ ನಡೆದೆ, ಬಾಲ ಅಲುಗಾಡಿಸಿತ್ತು
ಕಚ್ಚಲು ಎಲುಬಿಲ್ಲದಿದ್ದರೂ ಅನ್ನದಗುಳಿತ್ತು!

ತಿಂದು ತೇಗಿ ಮೂಗಿಗೆ ನಾಲಗೆ ಒರೆಸಿ
ಒಂದು ದೃಷ್ಟಿ! ತೃಪ್ತಿ, ನನಗೂ ನಾಯಿಗೂ!

===
ಚಿತ್ರಕೃಪೆ: ಗೂಗಲ್ ಇಮೇಜಸ್

ಶನಿವಾರ, ಡಿಸೆಂಬರ್ 3, 2011

ಸಮಾಧಿ ಮತ್ತು ಮುಕ್ತಿ!

ಕಿವಿಗೊಟ್ಟು ಕೇಳಿದೆ
ಸಾಲುಗಟ್ಟಿದ ಇರುವೆಗಳ
ಕಾಲ ಸಪ್ಪಳದ ದನಿ ಕೇಳಿತು
ಏರಿಳಿತವಿಲ್ಲ ಎಲ್ಲವೂ ಒಂದೇ ರಾಗ

ಕಣ್ಣ ಅರಳಿಸಿದೆ, ತೆರೆದ ಕಿವಿ ಹಾಗೆ ಇತ್ತು
ಸತ್ತ ನೊಣದ ವಾಸನೆಗೆ
ಇರುವೆಯೊಂದು ಸಾಲು ಬಿಟ್ಟು
ನನ್ನ ಕಾಲ ಬುಡದಲಿ ನಗುತಿತ್ತು,
ಒಂದರೆಕ್ಷಣ ಈ ಒಂಟಿ ಇರುವೆಯ
ಬೆನ್ನ ಹತ್ತಿ ನಾಕಿರುವೆಗಳು....

ಮನಸು ತೆರೆದು ಕೊಂಡಿತು
ವಾಸ್ತವದ ಲೋಕ, ಅಲ್ಲಿ ಶವಯಾತ್ರೆ
ನೊಣವ ಹೊತ್ತ ನಾಲ್ಕಿರುವೆಗಳು,
ಯಾರಿಗಾರೋ ಬಾಂಧವರು
ಒಂದಕ್ಕೊಂದು ನಂಟಿಲ್ಲ,
ಕಾಲು, ಬುಡ, ತಲೆ, ಹೊಟ್ಟೆ
ಕಚ್ಚಿ ಹೊತ್ತೊಯ್ಯುತ್ತಿದ್ದವು
ಮೂಲೆ ಗೂಡಿನೊಳಗೆ

ಬಿಟ್ಟ ಕಣ್ಣು, ತೆರೆದ ಮನವ ಮೀರಿ
ನನ್ನ ನಾಲಗೆ ಪಿಸುಗುಟ್ಟಿತ್ತು
ಮುಕ್ತಿ ಯಾರಿಗೆ? ಹೌದು ಎಲ್ಲದಕೂ!

ಹೊತ್ತವರಿಗೆ ಸತ್ತದ್ದೂ ಶವವಾಗಲಿಲ್ಲ
ಹಸಿದ ಹೊಟ್ಟೆಯ ಬೆಂಕಿ ಸಮಾಧಿಗೆ
ಒಂದು ಹೂವಾಗಿತ್ತು ಉಸಿರು ನಿಲ್ಲಿಸಿದ ನೊಣ!

ಭಾನುವಾರ, ನವೆಂಬರ್ 27, 2011

ಒಂದು ಹುಳು ಮತ್ತು ಸಾವಿನ ಬೆಳಕು

ಒಂಟಿ ಕೊಳವೆ ದೀಪ, ಒಂದು ಹುಳು
ಜೊತೆಗೆ ನಾನು, ಸವಿದದ್ದು ಬೆಳಕು
ಅದೂ ಒಂಟಿ ನನ್ನ ಹಾಗೆ, ಬೆಳಕ
ಅರಸಿ ನನ್ನ ಜೊತೆಗೂಡಿತ್ತು!

ಎಲ್ಲಿತ್ತೋ ಈ ಮೊದಲು
ಯಾವ ಬೆಳಕ ಮೂಲೆಯಾ
ಆಸರೆಯ ಬಿಗಿದಪ್ಪಿ, ನನ್ನ ಹಾಗೆ
ಕೊರಗುತಿತ್ತೋ ಕತ್ತಲಿಲ್ಲದ
ಕೋಣೆಯೊಳಗೆ ಬಂಧಿಯಾದಂತೆ.

ಎದೆಯ ಒಂದು ನರದೊಳಗೆ
ನಡುಗಿಸಿದ್ದು ಭಯದ ಹನಿ ರಕ್ತ
ಹಲ್ಲಿ ಲೊಚಗುಟ್ಟಿದಂತೆ, ಹೇಳಿ
ಬರದ ಕೊನೆ ಎಂಬ ಅಳುಕು!
ಹಲ್ಲಿಯದೋ ಹೊಟ್ಟೆಪಾಡು
ಹುಳಕ್ಕೆ ಇವತ್ತು ಸಾವೇನೋ
ನನ್ನದು(?) ಉತ್ತರ ಗೊತ್ತಿಲ್ಲದ ಪ್ರಶ್ನೆ!

ನೋಡುತ್ತಲೇ ಇದ್ದೆ,
ಹಲ್ಲಿ ಹೊಟ್ಟೆ ತುಂಬಿಸಿ ಕೊಂಡಿತ್ತು
ನನ್ನದಿನ್ನೂ ಊಟವಾಗಿಲ್ಲ
ಅನ್ನದ ತಟ್ಟೆ ಕರೆದರೂ
ಹುಳ ನನ್ನ ಹೊಟ್ಟೆಯೊಳಗೆ
ಮರುಗಿದಂತಿತ್ತು,

ದೀಪ ಮಾತ್ರ ಬೆಳಗುತ್ತಲೇ ಇತ್ತು
ಎಲ್ಲದರ ಅರಿವ ಬಿಟ್ಟು
ಅದಕ್ಕೇನು ದಿನ ರೂಢಿ
ಇಂದು ಹುಳ, ನಾಳೆ ನಾನು
ಮತ್ತದೇ ಬೆಳಕು, ಮತ್ತೊಂದು ದಿನ
ತಿಂದು ತೇಗಿದ ಹಲ್ಲಿ ಕೂಡ
ಕರಗಲೇ ಬೇಕು ಅದರ ಬೆಳಕೊಳಗೆ..

ಶನಿವಾರ, ನವೆಂಬರ್ 26, 2011

ಸಿಕ್ಕವಳು ನನ್ನ ತಂಗಿ, ಮತ್ತೊಂದು ಬಿಳಿ ಹಾಳೆ

ಬರೆಯುತ್ತಾ ಹೋದೆ,
ಮೊದಲಿಗೆ ಹುಡುಗಿ ಸಿಕ್ಕಳು,
ತಲೆ ನೇವರಿಸಿ ತಂಗಿ ಎಂದು ಕರೆದೆ,
ತಲೆ ಭುಜಕಾನಿಸಿ ಅಣ್ಣ ಎಂದಳು
ಜೊತೆಯಿರುವೆ ಎಂದೆ ಎಂದೆಂದೂ
ಇನ್ನೇನು ಎರಡು ಸಾಲು ಬರೆಯಬೇಕೆಂದೆ..
ಹಿಂದೆಯೇ ನಾಯಿಯೊಂದು ಬಂದು ನಿಂತಿತು
ಬೊಗಳುತ್ತಿಲ್ಲ, ಕಣ್ಣು ಬಿಡುತಿದೆ
ನನ್ನ ನೋಡುತ್ತಿಲ್ಲ, ತಂಗಿಯ ಎದೆಯಲ್ಲಿ
ಅದರ ಕಣ್ಣು, ಮೂಗು ಅರಳಿಸಿ, ಜೊಲ್ಲು...
ಬರಹದೊಳಗೆ ಅವಳ ಇಟ್ಟೆ,
ನಾಯಿ ಬೊಗಳಿತು, ಬರಹಕ್ಕೆ
ಮೂಳೆ ಹೆಕ್ಕಿ ತಂದು ಬಿಸುಟಿದೆ
ನಾಯಿ ಹೋಗಲೊಲ್ಲದು, ಯಾಕೋ?
ನನ್ನ ಲೇಖನಿಯಲೇ ತಿವಿದೆ, ಕಚ್ಚುವ ಭಯವಿತ್ತು,
ಇಲ್ಲ, ಅಲುಗಾಡಲಿಲ್ಲ, ಜೊಲ್ಲು ಇನ್ನೂ
ಸುರಿಯುತ್ತಲೇ ಇತ್ತು, ಕಣ್ಣು ನೀಲಿಯಾಗಿತ್ತು
ಹ್ಮ್, ಇಲ್ಲ ನಾಯಿಯದು, ಮತ್ತದೇ ರಾಗ
ನನ್ನ ಬರಹವ ದಾಟಿ ಅವಳೆದೆಯ ಮೇಲೆ
ತನ್ನ ಜೊಲ್ಲ ಕಲಶವ ಇಡುವ ಆಸೆಯೇನೋ?
ನನ್ನ ಮನಸು ಒಂದು ಕ್ಷಣ ನಿರ್ದಯಿ
ಮುಳ್ಳಾಯಿತು ಪೆನ್ನು, ಚುಚ್ಚಿದೆ ನೀಲಿ ಕಣ್ಣ
ಅಲ್ಲಿ ರಕ್ತದೊಸರು, ಬರಹ ಕೆಂಪಾಗಿತ್ತು,
ನಾಯಿ ಓಡಿದರೂ, ತಂಗಿ ಉಳಿದಿದ್ದಳು
ಜೊಲ್ಲು ಸೋಕದ ನನ್ನ ಬರಹದ
ಬಿಳಿ ಹಾಳೆಯ ಮೇಲೆ ನಗುವ ಕಣ್ಣಿನ
ಮಂದಹಾಸವ ಬೀರುತ್ತಾ ಇಂದಿಗೂ...

ಶುಕ್ರವಾರ, ನವೆಂಬರ್ 25, 2011

ಅವಳ ನೆನಪಲಿ......

ಅಂಗಳದಲಿ ನಿಂತಿದ್ದೆ, ಅವಳ ನೆನೆಯುತ್ತ
ನೆನಪು ಮಾತ್ರ ಅವಳು, ಈ ಇಳಿ ಸಂಜೆಗೆ

ಮನೆ ಮುಂದೆ ಒಂದು ಗಿಡ, ಕೆಂಪು ಬಣ್ಣ,
ದಾಸವಾಳದ ಹೂವು ನಕ್ಕಿತ್ತು, ಎಳೆ ನಗು,
ಅವಳದೇ ಮುದ್ದು ನಗುವಿನಂತೆ, ಆಹ್ಲಾದ..

ಕಲ್ಲು ಮಣ್ಣೊಳಗಿಂದೆದ್ದ ಕುರುಚಲು ಹುಲ್ಲುಗಳ
ನಡುವೆ ಕಾಲ ಮೇಲೆತ್ತಿ ಬಂದ ಇರುವೆ ಕೂಡ
ನನ್ನ ಮೆದುಳೊಳಗೆ ಹರಿದಂತೆ ಕಚಗುಳಿ..
ಅಪ್ಪಿ ಅವಳಿತ್ತ ಮುತ್ತಿನಂತೆ, ರಸಸ್ವಾದ..

ಅಂಗಳದಲಿ ಚಳಿ ಹೊತ್ತ ತಿಳಿಗಾಳಿ ನನ್ನ
ಕಿವಿ ಕಚ್ಚಿ ಎಳೆದಾಗ ಅದರಲೂ ಅವಳದೇ
ನೆನಪು, ತಲೆಯಾನಿಸಿ ಭುಜಕೆರಗಿ ಕೂತಂತೆ
ಅವಳದೇ ಮನದ ತಣ್ಣನೆಯ ಪಿಸುಮಾತು
ನನ್ನ ಕಿವಿಯೊಳಗೆ ಗುನುಗುನಿಸಿದಂತೆ....

ಅಂದು ಇಳಿಸಂಜೆಯಲಿ ಬದುಕಿಗೆ
ಬಣ್ಣದ ಚಿತ್ತಾರ ಬರೆದ ಅವಳು, ಇಂದು
ಕತ್ತಲೆಯ ಮುಸುಕೆಳೆದು ಸೂರ್ಯನಂತೆ
ಮರೆಯಾಗುತ್ತಾಳೆ ಎಲ್ಲೋ ನೆನಪ ಬರೆದು
ಹೂವು, ಇರುವೆ, ಗಾಳಿಗಳ ಮಧ್ಯೆ ಬಂದು
ತೂರುತ್ತಾಳೆ, ಕಚಗುಳಿಯಿಡುತ್ತಾಳೆ
ನಾನೆಷ್ಟೇ ಬೇಡವೆಂದರೂ...!

ಶನಿವಾರ, ನವೆಂಬರ್ 12, 2011

ಎಲ್ಲಾ ಮುಗಿದ ಮೇಲೆ !!!

ಅಲ್ಲಿ ಮೌನ, ಹಾಸಿದ ಕಲ್ಲುಗಳೂ ಮಲಗಿದ್ದಾವೆ, ನಿಶ್ಯಬ್ದ
ಆ ಕಲ್ಲುಗಳ ಮೇಲೆ ಕೆತ್ತಿದ ದುಂಡನೆಯ ಹೆಸರು ಕೂಡ,
ಮಣ್ಣು ಮುಚ್ಚಲಾಗಿದೆ, ಎಂದೋ ಮಣ್ಣಿನ ಆಸೆಗೆ ಕೊನರಿ
ಹಾರಿದ ಜೀವಗಳೂ, ಆರಡಿಯ ಗುಂಡಿಯೊಳಗೆ ಈಗ ಸದ್ದಿಲ್ಲ!

ಮೇಲೆ ಮೂರಡಿಯ ಮಣ್ಣು, ಕಲ್ಲ ಹೊದಿಕೆಯ ಚಪ್ಪರ
ಮನಸು ಮೇಲೆ ಬಂದು ಕೂತಂತೆ, ಒಳಗೆ ಹೂತಿಟ್ಟ
ತನ್ನದೇ ಹೆಣವ ಮೆಟ್ಟಿ ನಿಂತು, ರೋದನ ಸದ್ದಿಲ್ಲದೇ!

ದೂರದಲ್ಲೆಲ್ಲೋ ಸುಟ್ಟ ಮಾಂಸದ ಒಗರು ವಾಸನೆ
ಅಂದು ತಾನಿಟ್ಟ ಕೊಳ್ಳಿಗೆ ಮುನ್ನೂರು ದೇಹಗಳು
ಕರಕಲಾದರೂ, ಸುಗಂಧ ಬೀರಿತ್ತು ಈ ಮೂಗು,
ಕೊರಗುತಿತ್ತು ಮನ ಎಲ್ಲಾ ಮುಗಿದ ಮೇಲೆ.. ಈಗ ನಿಶ್ಚಲ!

ಅಲ್ಲಲಿ ಬಿಸುಟ ಮೂಳೆಗಳು, ಜೊಲ್ಲ ಸುರಿಸಿ ನೆಕ್ಕಲು
ಒಂದು ನಾಯಿಯೂ ಬಂದಂತಿಲ್ಲ, ಬರಿಯ ಟೊಳ್ಳು,
ಮಾಂಸವಿಲ್ಲದೆ, ಈ ಸ್ಮಶಾನದ ಕಲ್ಲುಗಳಂತೆ..

ಬೆಳೆದು ನಿಂತ ಒಂಟಿ ಮರ ಕೂಡ ಭೀಭತ್ಸ ರಕ್ಕಸ,
ನೀರ ಹನಿಗಳಿಲ್ಲದಿದ್ದರೂ ರಕ್ತ ಕುಡಿದ ಮಣ್ಣ ಹೀರಿ,
ಮಂದ ಗಾಳಿಯೂ ಮೌನಿ, ತರಗೆಲೆ ಅಲುಗಾಡದಷ್ಟು

ತನ್ನೆದೆಯ ಮೇಲಿಟ್ಟ ಕಲ್ಲ ಚಪ್ಪಡಿಯ ಮೇಲೆ ಕೂತು
ತನ್ನದೇ ಮನಸು ನಕ್ಕಿದ್ದು ಎಲ್ಲೂ ಕೇಳಲೇ ಇಲ್ಲ
ಅಲ್ಲಿ ಯಾರಿಗೂ ಕೇಳಿಸದ ಮೌನ, ಎಲ್ಲರೂ ಮೌನಿ,
ತಾನೂ ಚಿರಮೌನಿ ಮೂರಡಿಯ ಮಣ್ಣೊಳಗೆ ಆರಡಿಯ ನಿದ್ದೆ !!!
=========
ಚಿತ್ರಕೃಪೆ: ಗೂಅಲ್ ಇಮೇಜಸ್

ಮಂಗಳವಾರ, ನವೆಂಬರ್ 8, 2011

ಎಲ್ಲ ಶೂನ್ಯ ಅದರೊಳಗೊಂದು ಮೌನ....!!!

ಒಂದು ಕೆರೆ ತಟದ ಕಲ್ಲು ಬಂಡೆಯ ಮೇಲೆ ಕೂತಿದ್ದೆ
ಮುಷ್ಠಿ ತುಂಬಿಟ್ಟಿದ್ದ ಕಲ್ಲುಗಳು ಒಂದೊಂದಾಗಿ
ಕೆರೆ ನೀರ ಮೌನವ ಮುರಿದು ವೃತ್ತ ರಂಗೋಲಿ
ಮಾತು ಹೊರಡುತ್ತಿಲ್ಲ, ಮೌನ ಮಡುಗಟ್ಟಿ...

ಕಿರಣಗಳ ರೆಕ್ಕೆ ಬಿಚ್ಚಿದ್ದ, ತಲೆಯ ಮೇಲೆ ಸೂರ್ಯ,
ಬಿಸಿ ಉಸಿರ ಮಳೆ, ಮನದ ಮೂಲೆಯಲಿ
ಬಿಳಿ ಮೋಡದ ಒಂದು ತುಂಡು ಹೊತ್ತ ಬಾನು
ಕಪ್ಪು ಅಡರಿ ಶುಭ್ರ ನೀಲಿ ಮರೆ ಮಾಚಿತ್ತು ...

ಎಲ್ಲಿ? ಗಾಳಿಯು ಮುಸುಕು ಹೊದ್ದು ಮಲಗಿತ್ತೇನೋ?
ತಿಳಿಯಲಿಲ್ಲ, ಅಲುಗಾಡದ ಮರದ ಎಲೆಗಳ ಮೇಲೆ
ನಿನ್ನೆ ರಾತ್ರಿಯೇ ಬಿದ್ದ ಮಂಜು ಹನಿ, ಕಣ್ಣೀರ
ಪೋಣಿಸಿ ಇಟ್ಟಂತೆ ಭಾಸ, ಅದು ಕಣ್ಣೀರಲ್ಲ!

ಚಿಟ್ಟೆಯೊಂದು ಹೆಗಲ ತಾಕಿ, ಹುಡುಕಿತ್ತು
ಅಲ್ಲಿ ಮಕರಂದವೆಲ್ಲಿಯದು, ಬರಿಯ ಚರ್ಮ
ಮತ್ತೆ ಹೂವ ಅರಸಿ ನಿಂತಾಗ ಅದರ ರೆಕ್ಕೆಯಲಿ
ಕಂಡ ಬಣ್ಣ ಚಿತ್ತಾರ ಕಣ್ಣ ಒಳಗೆ ಅಂಟಿಕೊಳಲಿಲ್ಲ!

ದಿಟ್ಟಿಸಿದೆ, ಎಲ್ಲೋ ಕಂಡ ತೀರ ಅತ್ತ ಕಡೆ
ಒಂದು ದೋಣಿ, ಹುಟ್ಟು ಹಾಕುವವನ ಕೈ
ಅಲುಗಾಟವಷ್ಟೇ ಕಂಡಿದ್ದು ತೇವ ತುಂಬಿದ
ಕಣ್ಣುಗಳ ನೀರ ಪರದೆಯಲ್ಲಿ, ಅವಿತು ನಿಂತು!

ಶನಿವಾರ, ಅಕ್ಟೋಬರ್ 29, 2011

ಅವಳು ಬೇಕಾಗಿದ್ದಾಳೆ!!!

ಅಂದು ಅವಳಿಟ್ಟ ಮುತ್ತು ಕೆನ್ನೆ ತುಂಬಿದಾಗ
ತುಟಿ ಅದುರಿತ್ತು, ಕಾಮವಾಂಛೆಯ ಹಂಬಲ
ಇಂದವಳ ಮುದ್ದು ಮುಖ ನನ್ನ ಕಣ್ಣೊಳಗೆ
ಹನಿಯಾಗಿ ನಿಂತಾಗ, ತುಟಿ ಕಂಪಿಸಿತ್ತು

ನಾಲಗೆಯೂ ಅವಳ ಪ್ರೀತಿಯ ಅಳೆಯಲಿಲ್ಲ
ನನ್ನ ಕಿವಿಯೂ ಓಗೊಡಲಿಲ್ಲ, ಅವಳು ಬಯಸಿದ್ದ
ಹಿತದ ಬದುಕ, ನೋವ ನುಂಗಿ, ನಗುವ
ಉಣಿಸುವ ಹೃದಯ ವೈಶಾಲ್ಯತೆಯ ಪರಿ

ಅಲ್ಲಿ ಪ್ರೀತಿಯಿತ್ತು, ಪ್ರೇಮವಿತ್ತು, ಅದೇ
ಕಾಮದಳ್ಳುರಿಯ ಕಹಿ ಮಾರು ದೂರವಿತ್ತು
ಅಧಮ ನಾನು, ಕ್ಷಣಿಕ ಸುಖದ ಅಮಲು
ನನ್ನ ಕರುಳೊಳಗೆ ಬೆಂಕಿಯಿಟ್ಟಾಗ, ಬೂದಿ
ಆದದ್ದು ಕಪಟವಿಲ್ಲದ ಅವಳ ಒಲವ ದನಿ

ಈಗ ಮತ್ತೆ ಕಮರಿದೆ, ಹುಡುಕ ಬೇಕು
ನನ್ನ ಅಧಮತನದ ಕೊಳಕಿಗೆ ವಿಷವ
ಬೆರೆಸಿ ಹೊಡೆದೋಡಿಸುವ ಪ್ರೀತಿ ಬುಗ್ಗೆ
ಎಲ್ಲಿ ಎಲ್ಲಿ ಎಲ್ಲಿದೆ, ಅವಳಿಲ್ಲದೆ ನನಗೆ
ಸಿಗುವುದೇ ಅದರ ಸಿಹಿ ಸಿಂಚನ?

ಗುರುವಾರ, ಅಕ್ಟೋಬರ್ 27, 2011

ಬಲಿ(ತು) ಬಿದ್ದವರು!

ಇಂದು ಕಂದು ಕುಡಿ, ಮೊಗ್ಗೆನಲೇ?
ಸುಳಿವ ಗಾಳಿಗೆ ಕಿವಿ ನಿಮಿರಿಸಿ
ಜೀವವಿತ್ತ ಕೊಂಬೆಯ ರಸವ ಹಿಂಡಿ
ಬಣ್ಣ ಬದಲಾಯಿಸಿ,ಮತ್ತೆ ಹಸಿರ
ನರಗಳು ಬಲಿತಾಗ ಕ್ಷಣ ನಕ್ಕೆ..

ಈಗ ಎದೆಯೊಡ್ಡಿ ನಿಲ್ಲುವ ಚಿಗುರು,
ಗಾಳಿಯೇನು? ಬಿರುಗಾಳಿಯಾಗಲಿ,
ಕೊಂಬೆಯ ಹೊಯ್ದಾಟ, ಶಕ್ತಿಹೀನ
ಮತ್ತೆ ನಕ್ಕಿದ್ದು ಬಲಿತ ಹಸಿರ ಎಲೆ
ಉಸಿರಾಟದಲೇ ಗಾಳಿಯ ತಿಂದು
ಸಿಪ್ಪೆ ಎದ್ದ ಕೊಂಬೆಗಳ ಹಳಿದು

ಮೂರು ದಿನ ಎಲ್ಲೋ ತೂತು
ಹೊಡೆದಿತ್ತು, ಮೂರು ಎಲೆಗಳ
ಒಟ್ಟು ಪೋಣಿಸಿ, ಗೂಡು ಕಟ್ಟಿ
ಇರುವೆ ನಕ್ಕಾಗ ಹಸಿರೆಲೆಯ
ತೊಟ್ಟು ಕಮರಿ, ನೇತಾಡಿದ್ದು
ಇರುವೆ ಬಾಯಿಯ ಹುಳಿಯಂಟಿಗೆ

ಮತ್ತದೇ ಕಂದುಗಟ್ಟಿತ್ತು, ಹೊದಿಕೆ
ಕಳಚಿ ನಿಂತು, ನರ ನಾಡಿ ಮಾತ್ರ,
ಈಗ ಎಲೆಯಲ್ಲ, ತರಗೆಲೆ ಕಾಲಡಿ
ಗಾಳಿಯೂ ಮೂಸಿ ನೋಡದ
ಇರುವೆಯೂ ಮುತ್ತದ, ಮುದಿಗೊಡ್ಡು
ಮಲಗಿದ್ದು ಅಂಗಾತ, ಕಿಡಿ ಹತ್ತುವ
ಪುಡಿಗಲ್ಲುಗಳ ರಾಶಿಯ ಜೊತೆ...!
-------
ಚಿತ್ರಕೃಪೆ: ಗೂಗಲ್ ಇಮೇಜಸ್

ಭಾನುವಾರ, ಅಕ್ಟೋಬರ್ 23, 2011

ಬಳ್ಳಿ ಬೆಳೆಸಿ ಹಣ್ಣಾಗಿ!

ಒಂದೆಳೆಯ ಬಳ್ಳಿ, ಹದಿಮೂರು ಚಿಗುರುಗಳ ಬಳುಕಲಿ
ತೆಂಗಿನ ಮರವಪ್ಪಿ ಆಕಾಶ ನೋಡುವ ಆಸೆಯೇನೋ
ಮೊನ್ನೆ ಊರಿನಂಗಳದಿಂದ ಕಿತ್ತು ತಂದ ಬೇರ ಕುಡಿ
ಇಂದು ಚಿಗುರೊಡೆದು, ನನ್ನನೇ ಏರಿ ನಿಂತು
ಹಸಿರಲೇ ನಕ್ಕು ಕಿಸಕ್ಕೆಂದಾಗ, ಮೆದುಳಿಗೆ ಸೂಜಿ...!

ಪೋಷಿಸಿದ್ದೆ, ಎಲ್ಲಿಂದಲೋ ಎಮ್ಮೆ ಕರುಗಳ ಸೆಗಣಿ ಎತ್ತಿ
ನನ್ನ ನಯವಾದ ಕೆಂಪನೆಯ ಸೂಕ್ಷ್ಮ ಅಂಗೈಗಳಿಗೆ ಮೆತ್ತಿ,
ಮೂಗಿನ ನರಗಳೂ ಅದುರಿದ್ದವು ನಾತಕೆ, ಹಿತವಿತ್ತು
ಬಯಕೆ ಕಂಗಳ ಹೊತ್ತ ಹೊಟ್ಟೆಗೆ ಅನ್ನದಗುಳಿನ ತುತ್ತು!

ಇಂದು ನಕ್ಕರೂ ಬೇರ ಬುಡಕೆ ನೀರನೀವೆ ಎಲ್ಲ ಮರೆತು
ಮತ್ತದೇ ಸೆಗಣಿಯ ಅಮೃತ ಕೊಂಕ ತೊರೆದು,
ಏರಿ ನಿಂತ ಬಳ್ಳಿಗದೋ ಕುಹಕ, ಭುಜ ನೆಕ್ಕುವ
ಕಾಗೆಯ ಹಸಿ ಹಿಕ್ಕೆಯಾ ಕಂಡು ನಕ್ಕಿತ್ತೇನೋ?

ಕ್ಷಣ ಯೋಚಿಸುವೆ, ಕುಡುಗೋಲು ಕೈಗೆತ್ತಿಕೊಳಲೇ
ಒಂದೇಟಿನಲಿ ಬುಡವಿಲ್ಲದೆಯೇ ನಿಂತೀತೆ ಅಹಂ ತೊರೆದು?
ಬೇಡವೆನುತದೆ ಮರುಘಳಿಗೆ ಮನಸು, ಮೆರೆಯ ಬಿಡು...
ಹಸಿರ ಅಹಮಿಗೆ ಹುಳದ ಹುಳುಕ ತೋರಣ ಮೆತ್ತಿ
ಬುಡದ ಬೇರ ಉಸಿರಿನಲೂ ನನ್ನ ಕರೆದೀತು ಎಂಬ ಭಾವ!
=======

ಚಿತ್ರಕೃಪೆ: ಗೂಗಲ್ ಇಮೇಜಸ್

ಶನಿವಾರ, ಅಕ್ಟೋಬರ್ 22, 2011

ಒಂದು ಒಂಟಿ ಪ್ರಶ್ನೆ ಮತ್ತು ಸೂರ್ಯ....

ಒಂಟಿ ತಾನೆಂದು ಬೆಂಕಿಯಾದನೆ ಸೂರ್ಯ
ಹೊತ್ತಿ ಉರಿವವನಿಗೊಂದು ಪ್ರಶ್ನೆ ಕೇಳಬಹುದೇ ?

ಸೂಕ್ತ ಯಾವುದು ಸಮಯ ಯಾವ ಕಾಲ
ಎಷ್ಟು ಹೊತ್ತಿಗೆ ಪ್ರಶ್ನೆಗಳ ಇಡಲೆಂಬ ಕಸಿವಿಸಿ...

ಪೂರ್ವ ತೀರದ ಗರ್ಭ ಸೀಳಿ, ಒಳ ಹೊಕ್ಕು
ಅವನು ಹುಟ್ಟುವ ಮೊದಲೇ ಗುಣುಗುಣಿಸಲೇ?
ಇನ್ನು ಎಚ್ಚೆತ್ತಿರದ ಬಾನಲಿ ನೆತ್ತರ ಬಣ್ಣ ತುಂಬಿ
ಎಳೆ ನಗುವ ಚೆಲ್ಲಿ, ಕಣ್ಣು ಮಿಟುಕಿಸುವ ಕಾಲ
ಮುಂಜಾವಿನಲಿ ಮುದ್ದಿಟ್ಟು ಮಾತನಾಡಿಸಲೇ?
ನಡುನೆತ್ತಿಯಾ ಮೇಲೆ ಕೊತ ಕೊತ ಕುದಿವ
ಬಿಸಿ ಘಳಿಗೆ, ನಡು ಮಧ್ಯಾಹ್ನ, ಕಡು ಹಳದಿ
ಕಿರಣಗಳ ನಡುವೆ ತೂರಿ ಗಹಗಹಿಸಿ ಕೇಳಲೇ?
ಚಿತ್ತಾರದ ಗೋಧೂಳಿ, ಚಿಲಿಪಿಲಿಗಳ ನಾದ,
ಉದರ ತುಂಬಿ ಗೂಡು ಸೇರುವ ತವಕಗಳ
ನಡುವೆ ಪಡುವಣದ ಕಡಲ ತೆಕ್ಕೆಯಲಿ ಸೇರಿ
ನೀಲ ಸಾಗರದ ನೀರ ಬಣ್ಣವ ಕೆಂಪಗಾಗಿಸಿ
ಮೋಕ್ಷ ಪಡೆವ ಕ್ಷಣದಲಿ ನಾ ಅರುಹಲೇ?

ಹೇಳು ಭಾನು, ಮೂಡಣದಲ್ಲಿ ಮುತ್ತ ಸಿಂಚನ
ನಡುನೆತ್ತಿಯ ಮೇಲೆ ಬೆಂಕಿಯುಗುಳು, ಕೆಂಡ,
ಮುಸ್ಸಂಜೆಯಾ ಮುಪ್ಪಿಗೆ ಮುದವನೀವ ನೀನು,
ಹೇಳು ಒಬ್ಬಂಟಿ ಯಾಕಾದೆ ಇಡಿಯ ಬಾನಿಗೆ?

ಶುಕ್ರವಾರ, ಅಕ್ಟೋಬರ್ 21, 2011

ನನ್ನ ಕವಿತೆಯೆಂಬ ಗುಲಾಬಿ ಮತ್ತು ಕೃತಿಚೌರ್ಯ...

ಬಣ್ಣ ಕೆಂಪು ಪಕಳೆಗಳದ್ದು, ಹಸುರ ನಡುವೆ
ನಗುವ ಸೂಸಿ ನಿಂತ ಪರಿ ಕಷ್ಟವಿಲ್ಲದೆ
ಗಾಳಿ ಕೂಡ ಮುತ್ತನಿತ್ತು ಬೇದವಿಲ್ಲದೆ
ಅರಳಿ ನಿಂತ ಗುಲಾಬಿಯ ಚೆಲುವ ಕಂಡು
ನೀಲಾಕಾಶದಿ ಉರಿವ ಸೂರ್ಯನು ಮೋಹಿ
ಕಿರಣಗಳೆಂಬ ಮನ್ಮಥ ಬಾಣವ ಹೂಡಿ..
ಬೇರು ತಾನು ಮಣ್ಣ ಕೆದಕಿ ಸಾರ ಹೀರಿ
ತುತ್ತನಿತ್ತ ನೋವ ಬಲ್ಲವನಾರು ಬಣ್ಣವೀಯಲು?

ಶನಿವಾರ, ಅಕ್ಟೋಬರ್ 15, 2011

ನಿರಾಸೆ

ಆಗಸದೆತ್ತರದಲಿ ಹಾರುವ ಹಕ್ಕಿಯ
ರೆಕ್ಕೆಗಳ ನೆರಳು ಗೋಚರಿಸಿತ್ತು,
ಇಣುಕಿ ನೋಡಿದೆ, ಅಲ್ಲಿರಲಿಲ್ಲ
ಮಾರು ದೂರ ಹಾರಿಯಾಗಿತ್ತು..

ನದಿಯ ತಟ, ಮರಳಿನ ರಾಶಿ
ಹರಿವ ನೀರಲಿ ಮೀನು ರೆಕ್ಕೆ
ಬಿಚ್ಚಿ ಪುಟಿಯುತ್ತಿತ್ತು, ಕ್ಷಣ ಮಾತ್ರ
ಆಳ ನೀರಲಿ ಮಾಯವಾಗಿತ್ತು...

ಧೂಳು ತುಂಬಿದ ದಾರಿಗಳ
ನಡುವೆ ಒಣಗಿದೆಲೆಗಳ ಮರ
ನೋಡಿ ನಕ್ಕಿತ್ತು ನೆರಳ ಕೊಟ್ಟು
ಒಂದು ಘಳಿಗೆಯ ಗಾಳಿ
ನೆರಳ ಸಂತಸ ಕಿತ್ತಿತ್ತು,
ಧೂಳು ತುಂಬಿದ ಕಣ್ಣೀರೊಳಗೆ
ನಕ್ಕ ಮರವೂ ಬೆತ್ತಲಾಗಿತ್ತು...

ಹಡೆದವ್ವ!

ಮೂಡಣದಲಿ ಬಾನ ಯೋನಿ ಗರ್ಭವ
ಸೀಳಿ ಭಾನು ತಾನು ಮುಗುಳ್ನಕ್ಕಿದ್ದ
ಕಡುಕೆಂಪಡರಿತ್ತು ಅವಳ ಕೆನ್ನೆ ನಾಚಿ
ನಿತ್ಯವೂ ಅವಳು ಭಾಸ್ಕರನ ಹಡೆದವ್ವ

ನಡು ಮಧ್ಯಾಹ್ನ, ಬಿಸಿಲ ಬುಗ್ಗೆಯ ಬೆಂಕಿ
ಸುಡುತ್ತಾನೆ ಅವಳೆದೆಯ ನೆನಪಿಲ್ಲದಂತೆ
ಆದರವಳು ಸಹನಾಮೂರ್ತಿ, ಅದೇ ನೀಲವರ್ಣ

ಮತ್ತೆ ಕರುಣಾಮಯಿ, ಇಳಿಬಿಸಿಲ ಸಿಂಚನ
ಅವಳ ತೆಕ್ಕೆಗಳ ತೊಟ್ಟಿಲೊಳಗೆ ಜಾರಿ
ಕರಗುತ್ತಾನೆ, ಸಂಜೆಯ ರಸದಿಂಚರ
ಅವಳೋ, ಆ ತಾಯಿ ಹೃದಯ ಮತ್ತೆ
ರಂಗೇರುತ್ತದೆ ಉರಿ ಬಿಸಿಲ ಮರೆತು...!

======
ಚಿತ್ರಕೃಪೆ: allfreelogo.com


ಸೋಮವಾರ, ಅಕ್ಟೋಬರ್ 10, 2011

ಒಂದು ಕತೆ - "ಅಮ್ಮ ಸಿಕ್ಕಿದಳು ಮತ್ತೊಮ್ಮೆ".

ಇಂದು ಆ ಹಿರಿಯ ಜೀವದ ಕಣ್ಣುಗಳಲಿ ತೊಟ್ಟಿಕ್ಕಿದ ಒಂದು ಹನಿ ಕಣ್ಣೀರ ಧಾರೆ ಆ ಹೆಣ್ಣು ಮುಖದ ಕೆನ್ನೆಗಳಲ್ಲಿ ಕೃತಜ್ಞತೆಯಲ್ಲಿ ಜಾರಿದ ಕಣ್ಣೀರು ಆಸ್ಪತ್ರೆಯ ಹಾಸಿಗೆಯ ಮೇಲೆ ಲೀನವಾದಾಗ ಮತ್ತೊಂದು ತಾಯಿ ಕರುಳ, ಕರುಣೆಯ ಕಣ್ಣಿನ ಆ ಒಲವ ಕಂಡು ಮತ್ತೊಮ್ಮೆ ಆ ಅಮ್ಮನ ಹೊಟ್ಟೆಯಲಿ ಮಗುವಾಗಿ ಭುವಿ ಕಾಣುವ ಆಸೆ ಹುಟ್ಟಿತ್ತು ಮನದಲ್ಲಿ.
**************************************************************
ಸೂರ್ಯನ ನೋಡದ ನಾವುಗಳು ಕಚೇರಿಗೆ ಬರುವುದು ಬೆಳಿಗ್ಗಿನ ಐದುವರೆಗೆ. ಬೆಳಗ್ಗೆ ಸರಿ ಸುಮಾರು ಆರೂವರೆಯ ಸಮಯ. ಲೆಕ್ಕಶಾಸ್ತ್ರದ ಕಾಗುಣಿತ ದಲ್ಲೇ ಮುಳುಗಿದ್ದ ನನ್ನ ತಲೆಗೆ ಎಚ್ಚರದ ಗಂಟೆ ಕೊಟ್ಟಿದ್ದು ನನ್ನ ಡೆಸ್ಕ್ ಫೋನಿನ ರಿಂಗಣ. ಅನಿರೀಕ್ಷಿತ ಕರೆ. ನಂಬರ್ ವೀಕ್ಷಿಸಿದೆ, ತಕ್ಷಣಕ್ಕೆ ಅರಿವಾದದ್ದು ನನ್ನದೇ ಕಚೇರಿಯಲ್ಲಿ ನನ್ನ ತಂಗಿಯೆಂದೆ ಕರೆಯಲ್ಪಡುವ ನನ್ನ ಸಹವರ್ತಿಗೆ ಬಂದ, (ಮದುವೆಯಾದ ಮೇಲೆ ಅಮೇರಿಕ ಪಾಲಾದ) ಅವಳ ಅಕ್ಕನ ಕರೆಯೆಂದು. ಸ್ವೀಕರಿಸಿ ಹಲೋ ಎಂದವನೇ ಕರೆದೆ ತಂಗಿ ಸುನೀತಿಯನ್ನು. ಮತ್ತೆ ಮುಳುಗಿದ್ದು ಅದೇ ಲೆಕ್ಕಾಚಾರದಲ್ಲಿ. ಆದರೂ ನಡು ನಡುವೆ ಕರೆಯಲ್ಲಿ ಮುಳುಗಿದ ಸುನೀತಿಯ ಹಣೆಯಲ್ಲಿ ಮೂಡಿಬಂದ ಗೆರೆಗಳು ನನ್ನ ಕಣ್ಣುಗಳಲ್ಲಿ ಹಾಗೆ ದಾಖಲಾಗುತ್ತಿದ್ದವು.

ಫೋನಿನ ಕರೆ ಮುಗಿಸಿ ಡೆಸ್ಕಿಗೆ ಹಿಂತುರಿಗಿದವಳ ಕಣ್ಣಾಲಿಗಳಲಿ ಕಂಬನಿಯ ಕೆರೆ ಕಂಡು ದಂಗಾದೆ. ಕರೆದ ನನ್ನ ಮೆದು ಮಾತಿನಲಿ ಅವಳ ನೋವ ನಿಗೂಢತೆಯ ಅರಿವ ಹಂಬಲವಿತ್ತು. ಪಾಪ ಒಂಟಿ ಹೆಣ್ಣು ಮಗಳು ಅಮ್ಮನ ಜೊತೆ. ಐದನೇ ತರಗತಿಯಲಿದ್ದಾಗಲೇ ಅಪ್ಪನ ಕಳಕೊಂಡಿದ್ದ ಬಾಲೆ. ಸಂಬಂಧಿಕರ ಕೆಂಗಣ್ಣು, ವಾರೆನೋಟ, ಕುಹಕಗಳಿಗೆ ಬಲಿಪಶು. ಹೆಣ್ಣು ಜೀವಗಳು ಎಂಬ ನಿಷ್ಕೃಷ್ಟ ಮನೋಭಾವ . ಇವಿಷ್ಟು ನನಗೆ ಗೊತ್ತಿತ್ತು. ಈಗಿನ ಕಣ್ಣೀರ ಕತೆ ಕೇಳಿದೆ. ಅಮ್ಮನ ಪರಿಸ್ತಿತಿ ಬಿಗಡಾಯಿಸಿದೆ ಎಂದಳು. ಅನುಮತಿಯಿತ್ತೆ. ಒಂದು ಕ್ಷಣ ಅವಳ ಮುಖ ನೋಡಿ ದಂಗಾದೆ. ಅಷ್ಟೇ.
**************************************************************
ಮನಸು ಹೊರಳಾಡಿತ್ತು , ನನ್ನ ನೆನಪ ಸರಮಾಲೆ ಬೆಂಗಳೂರಿನ ಸೈಂಟ್ ಫಿಲೋಮಿನ ಆಸ್ಪತ್ರೆಯ 'ಈ-ವಾರ್ಡ್' ಕೊಠಡಿ ಸಂಖ್ಯೆ ಹದಿನಾರರಲ್ಲಿ ನೆಟ್ಟಿತ್ತು .ಕಚೇರಿಯಿಂದ ಹೊರಟು, ಆ ಅಮ್ಮನ ಆಸ್ಪತ್ರೆಗೆ ಸೇರಿಸಿ, ಗೈನಾಕಾಲೋಜಿಸ್ಟ್ ಡಾ. ಸುಜಾತರ ಸಲಹೆಯ ನಂತರ ನಿಟ್ಟುಸಿರು ಬಿಟ್ಟು ವಾಪಸು ನಾನು ಮನೆ ತಲುಪಿದ ನಂತರವೂ ಎಲ್ಲೋ ನೋವ ಕ್ಷಣದಲ್ಲೂ ಮನದ ಮೂಲೆಯಲಿ ಮಗದೊಂದು ಮಾತೆಯ ಪ್ರೀತಿಯ ಬಿಸಿಯಪ್ಪುಗೆ.

ಈಗ ಈ ಕತೆ ಬರೆಯುತ್ತ ಕೂತಿದ್ದೇನೆ. ಮೆದುಳು ಮಾತ್ರ ಮೆಲುಕು ಹಾಕಿದ್ದು - "ಅಮ್ಮ ಸಿಕ್ಕಿದಳು ಮತ್ತೊಮ್ಮೆ".

ಶನಿವಾರ, ಅಕ್ಟೋಬರ್ 8, 2011

ಎಲ್ಲಿರುವೆ?

ನಿದ್ದೆ ಬಾರದ ರಾತ್ರಿಗಳ ಯುಗಗಳಲಿ
ಅವಳದೇ ನೆನಪ ಸರಮಾಲೆಯಲ್ಲಿ
ನನ್ನ ಮನ ಬೆಂದು ಬೇಗುದಿಯಾಗಿತ್ತು

ಮಳೆ ನೀರ ಸಿಂಚನದ ಹನಿಯಲ್ಲಿ
ತಂಪ ಕೊಡುವಂತೆ ಅವಳು ಅಂದು,
ನನ್ನ ಬಳಿಯಿಲ್ಲ ಇಂದು, ನೆನಪು
ಎದೆಗೆ ಚುಚ್ಚಿದ ಗುಂಡು ಸೂಜಿ
ಎರಡು ತೊಟ್ಟು ರಕ್ತದ ಪರಿಮಳ


ಹುರಿದುಂಬಿ ಉಕ್ಕಿ ಹರಿವ ನದಿ
ಅಂದು ಅವಳು, ನಾನೂ ತೊರೆ
ಹರಿವ ನದಿಯ ಬಿಗಿದಪ್ಪಿಕೊಳ್ವಂತೆ
ಉತ್ಸುಕದ ಮನ, ಇಂದು ನೀರಿಲ್ಲ
ಎರಡು ಕಲ್ಲ ಕೊರಡುಗಳ ಬರಡು

ಗರಿ ಬಿಚ್ಚಿ ನಲಿವ ನವಿಲು ನರ್ತನ
ಮೇಘಗಳ ಚಿಲಿಪಿಲಿ ಆಗಸದಲಿ ಅಂದು
ಹಾರಿ ಹೋಗಲು ರೆಕ್ಕೆಯಿಲ್ಲದ ಕಾಗೆ
ನಾನಿಂದು, ದನಿಯಿಲ್ಲ ಗಂಟಲಲಿ
ತ್ರಾಣವೆಲ್ಲಿ ಅವಳ ಕೂಗಿ ಅರಸಲು?

ನನ್ನ ಜ್ವರ ಮತ್ತು ಅವಳು ಎಂಬ ಮರೀಚಿಕೆ....

ಮೈಗೆ ಸೋಕಿದ ಜ್ವರಕೂ ಗೊತ್ತು ನಾನು ಬಗ್ಗುವವನಲ್ಲ
ಕುಂತೆ ಬರೆಯಲು, ನನ್ನ ಜ್ವರವ ಇಲ್ಲಿ ಇಳಿಸಿದ್ದೆ ನಿಮಗೆ

ಹಟಮಾರಿ, ಕೆಂಡಗಟ್ಟಿದೆ ನಿನ್ನೆವರೆಗೆ ತಂಪಗಿದ್ದ ಮನ
ಮೂಗ ಹೊರಳೆಯದೋ ಸತ್ಯಾಗ್ರಹ, ಬಾಯಿ ತೆರೆಸಿದೆ
ಜೀವ ಹಿಂಡುತಿದೆ ಗಂಟುಗಳಲಿ ಅಲ್ಲಲ್ಲಿ ನೋವ ಬಾಧೆ

ದವಖಾನೆಯ ಡಾಕ್ಟರ ರದ್ದೂ ಒಂದೇ ರಾಗ, ಅಪ್ಪಿಕೊಳ್ಳಿ
ಹಾಸಿಗೆಯ ಬಿಡದೆ, ಗುಳಿಗೆಗಳ ಪಟ್ಟಿ ಪಟ್ಟಿ ಸರಪಳಿ,
ನಾಲಗೆಗೆ ತಾಕಲೂ ಇಲ್ಲ ಗಂಜಿಗೆ ಹಾಕಿದ ಉಪ್ಪು, ಹುಳಿ
ಮೂರು ಕಂಬಳಿ ಹೊದ್ದರೂ ಬಿಡಲೊಲ್ಲೆನೆಂತು ಮೈಯ ಚಳಿ

ಚಾವಣಿಯ ಬಿಳಿಯ ಬಣ್ಣ ಕಲೆತಿತ್ತು ಕಣ್ಣ ಗೂಡೊಳಗೆ
ಮನಸು ಹುಡುಕಾಡುತಿತ್ತು, ಇಲ್ಲದಾ ಅವಳ ಆರೈಕೆಗೆ
ಒಂದು ಆಸೆ ಕಾದ ಮೈಯ ಬೇಯ್ವ ಮೆದುಳೊಳಗೆ
ಎಂದು ಬರುವಳೋ ಎಲ್ಲಿರುವಳೋ ಎಂಬ ತವಕಕ್ಕೆ
ಜ್ವರದಲೂ ಪುಳಕಗೊಂಡಿದ್ದೆ, ಮನದ ಮುದಕೆ....

ಬುಧವಾರ, ಸೆಪ್ಟೆಂಬರ್ 28, 2011

"ದಾಳ"

ಅಲ್ಲಿ ಪಾಚಿಗಟ್ಟಿದ ಬಾವಿ, ಮೂರಡಿಯ ನೀರು
ಏಡಿ ಕೊರೆದ ತೂತು ಅಲ್ಲಲ್ಲಿ, ಕಪ್ಪೆಗಳ ಗೂಡು
ಲೆಕ್ಕವಿಲ್ಲದ ಹಿಂಡು ಹಿಂಡು ಮೀನುಗಳ ಸಾಲು

ಮೇಲೆ ಶುಭ್ರಾಕಾಶ, ನೀಲ ಬಾನಿನ ಮುಗುಳ್ನಗೆಗೆ
ನೀರು ನೀಲಿಯಾಗಿದೆ, ಪಾಚಿ ಎಂಬುದ ಮರೆತಿದೆ
ತಳ, ಕೆಸರ ತುಂಬಿ ಗಹ ಗಹಿಸಿದ್ದು ಕಾಣಲೇ ಇಲ್ಲ
ದಂಡೆಯಲಿ ಎರಡು ಹಸಿರು ಹುಲ್ಲ ನಗುವಿನಲ್ಲೆಲ್ಲ

ನೀರಹಾವಿನ ಸೀಳುನಾಲಿಗೆಗೂ ಮರಿಮೀನಿನ ರುಚಿ
ವಟಗುಡುವ ಕಪ್ಪೆಯೂ ರಾಗ ಮುದುಡಿಸಿದೆ ಬೆದರಿ
ಕಣ್ಣ ಮಿಟುಕಿಸುವ ಮಿಂಚುಳ್ಳಿಯದೂ ತವಕದ ಗಾಳ
ಕೊಕ್ಕ ನಡುವೆ ಮೀನ ಹೆಕ್ಕಿದ್ದೂ ತಿಳಿಯದಾ ದಾಳ

ರಾಟೆಯೊಳು ಇಳಿಬಿಟ್ಟ ಕೊಡದ ಒಳಗೂ ಮೀನು
ಇಣುಕಿ ಕೂತದ್ದು, ಪುಟ್ಟ ಬಾವಿಯ ಬಿಟ್ಟು, ನೀಲ
ಬಾನಿನ ಮುತ್ತಿಕ್ಕುವ ಆಸೆಗೆ, ಬರಿದಾಗಿ ಹಂಬಲ
ವಿಲ ವಿಲ ಒದ್ದಾಟದ ಕೊನೆಯ ಉಸಿರಿನ ಛಲ
ಹೆಪ್ಪುಗಟ್ಟಿದ್ದು ಕಲ್ಲು ತುಂಬಿದ ನೆಲದೊಳಗೆ.....

ಭಾನುವಾರ, ಸೆಪ್ಟೆಂಬರ್ 25, 2011

ಎಲ್ಲಿರುವೆ ಹುಡುಗ?

ಬೀಗ ಸ್ವಾಗತಿಸಿದೆ, ಬಾಗಿಲು ನಕ್ಕಿದೆ
ಕಿಟಕಿಯಲಿ ನಿಂತು ನೋಡಿದರೂ
ನಾ ಪ್ರೀತಿಯಲಿ ಕೂತ, ಓದಿದ
ಧೂಳು ಹಿಡಿದ ಬೆಂಚು, ಮೇಜುಗಳ
ಅಳುವ ಆಕ್ರಂದನ ಸಹಿಸಲಾಗಲಿಲ್ಲ..
ಗೋಡೆಗಾನಿಸಿದ ಕರಿಯ ಹಲಗೆ
ಬೊಬ್ಬಿರದಂತೆ, ನಾ ಕಲಿತ..
ಅ, ಆ, ಇ ಈ, ಉ, ಊ ಗಳು
ಕಿವಿ ತಮಟೆ ಯಲಿ ಕಿರುಚಿದಂತೆ
ಒಂದು, ಎರಡು ಬಾಳೆಲೆ ಹರಡು
ನೆನಪುಗಳ ಸರಮಾಲೆಯಾ ಮಗ್ಗಿ
ಗಾಳಿ ಮರದ ಚಾಟಿ, ಕೇಪುಲದ ಕೋಲಿನ
ರುಚಿಯಲ್ಲಿ ಕಲಿತ ಎ, ಬಿ, ಸಿ, ಡಿ
ಪ್ರೀತಿಯ ಲಿಲ್ಲಿ ಟೀಚರ್ ಇಂಗ್ಲಿಷ್,
ಆತ್ಮೀಯ ಅಂತು ಟೀಚರ್ ಗಣಿತ
ಎರಡ ಒಂದ್ಲಿ ಎರಡು, ಎರಡ ಎರಡ್ಲಿ ನಾಕು
ಎಲ್ಲ ನೆನಪುಗಳ ಮೆಲುಕು, ಉಳಿದದ್ದು
ಶಾಲೆಯ ಬಾವಿ ಕಟ್ಟೆ, ಧ್ವಜ ಸ್ಥಂಭ
ಅಲ್ಲಿ ನಾ ನೀರೆರದ ಗುಲಾಬಿಯ ಕಾಂಡ
ಒಣಗಿ ನನ್ನೇ ಕೇಳಿತ್ತು ಎಲ್ಲಿರುವೆ ಹುಡುಗ?

(ನಾನು ಒಂದರಿಂದ ಐದನೇ ತರಗತಿ ವರೆಗೆ ಓದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿತ್ರಬೆಟ್ಟು, ಶಿರ್ವ, ಉಡುಪಿ ತಾಲೂಕು ಈ ವರ್ಷದಲ್ಲಿ ಆಂಗ್ಲ ಮಾಧ್ಯಮದ ಹೊಡೆತಕ್ಕೆ ಸಿಲುಕಿ, ವಿಧ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟಿದೆ, ನಾ ಕಲಿತ ಶಾಲೆಯ ಸವಿ ನೆನಪಿನ ಅಂಗಳ ದಿಂದ ನನಗನಿಸಿದ್ದನ್ನು ಅರ್ಪಿಸೋಣವೆನ್ನಿಸಿತು.. ಅದಕ್ಕೆ ಈ ಅರ್ಪಣೆ...)

"ತುಡಿತ"


ಅಲ್ಲೊಂದು ನದಿ, ತುಂಬಿದೆ, ತುಳುಕಾಡಿದೆ
ಆಷಾಡದ ಮಳೆ, ಉಕ್ಕಿ ಹರಿಯುತ್ತಿದೆ
ಮೇಲೆ ಮೋಡ, ಅದು ಕರಿಯ ಬಸುರು
ನದಿಯೊಳಗಿನ ಬಂಡೆಗಳೂ ಪಿಸುಗುಡುತ್ತಿವೆ
ತೀರದ ಹೊಯ್ಗೆಗಳದೂ ಮೌನ ರಾಗ
ಎಡ ಬದಿಯ ತೀರದಲಿ ಬಿದಿರು ಹುಲ್ಲು
ತನ್ನಷ್ಟಕೆ ತಾ ಮುಗುಳ್ನಕ್ಕಿದೆ ಮನಸೋತು
ಹರಿವ ನೀರಿನ ತಾಳದ ಇಂಚರಕೆ
ಅಲ್ಲಲ್ಲಿ ಹಸಿರು ಕೆಸರ ಮೆತ್ತಿಕೊಂಡು
ಬುಡದಲ್ಲೆಲ್ಲೋ ನೀರ ಕಚಗುಳಿಯು
ಅಲೆಯ ನರ್ತನಕೆ ತೆಪ್ಪದ ತೊಳಲಾಟ
ಅಲ್ಲೂ ಬಿಡಲಿಲ್ಲ ಅಂಬಿಗನ ಹಠ
ರಭಸ ಎಲ್ಲಿಯದೂ? ಹುಟ್ಟಿನ ಎದುರು?
ಸುರಿದ ಮಳೆಯ ಸಿಂಚನಕೆ ಬೆವರು
ನದಿ ನೀರಲಿ ಪುಳಕಗೊಂಡಿದ್ದು...
ಉಪ್ಪ ಬಿಟ್ಟು ಸಿಹಿಯಾದದ್ದು....
ಎರಡರ ಪರಿವೆಯಿಲ್ಲದೆ ಅಂಬಿಗನ
ಕೈಯ ಬಲದ ಮುಂದೆ ತೆಪ್ಪವೂ
ತಿರುಗು ಹೊಡೆದಿತ್ತು ಮನ ತುಡಿದಂತೆ..

ಗುರುವಾರ, ಸೆಪ್ಟೆಂಬರ್ 22, 2011

ಸಾಂತ್ವನ

ಕಡು ಬೇಸಗೆಯ ಧೂಳ ರಾಶಿ
ನೆತ್ತಿ ಮೇಲೆ ಸುಡುವ ಸೂರ್ಯ
ಕೆಂಪಡರಿದ ಹುಲ್ಲ ಕುಡಿ ಅಲ್ಲಲ್ಲಿ

ಉದುರಿದರೂ ನೀಲ ಬಾನ
ಬಿಳಿಮೋಡದ ಒಂದೆರಡು
ಸಾಂತ್ವನದ ಹನಿಗಳ ತೊಟ್ಟು,
ಹಸಿರಾಗಲಿಲ್ಲ ಆ ಹುಲ್ಲ ಕುಡಿ
ಧೂಳಿನಲೆ ಮತ್ತೆ ಕೆಂಪಾಗಿ
ಬೆಂದಿತ್ತು ಕಡು ಉರಿಯೊಳಗೆ

ಉರಿವ ಸೂರ್ಯನೂ ಮೌನಿ
ಧೂಳ ಕಣಗಳು ನಕ್ಕಿದ್ದವೂ,
ಬಳಲಿಕೆಯೊಂದೇ ಬತ್ತಳಿಕೆಯೊಳಗೆ
ಹುಲ್ಲ ಕುಡಿ ಮುದುಡಿ ಎರಗಿದ್ದು
ಇಂದಲ್ಲ ನಾಳೆ ಹಸಿರ ತಂಪನೀವ
ಭೂತಾಯೀ ಮಡಿಲೊಳಗೆ....

ಶನಿವಾರ, ಸೆಪ್ಟೆಂಬರ್ 17, 2011

ಬದುಕು ಅಡುಗೆ ಮನೆ

ಕಣ್ಣ ಹನಿ ರೆಪ್ಪೆಯಿಂದಿಳಿದು ಕೆನ್ನೆಗೆ
ಈರುಳ್ಳಿಯ ಘಾಟು ಘಮಕೂ,
ಸಾಸಿವೆ ಕಾಳು, ಜೀರಿಗೆಯ ನಗು
ಕುದಿವ ಎಣ್ಣೆಯಲೂ ಚಟ ಪಟ
ಹಿತವಾಗಿದೆ ಒಗ್ಗರಣೆಯ ರುಚಿ,
ಮುದವ ನೀಡಿದ್ದು, ಅರೆ ಬೆಂದರೂ
ತರಕಾರಿಯ ತಂಪು ಮನಸು
ಬೆಂಕಿ ನಾಲಗೆಯ ಮೇಲೆ ಬೆಂದು
ಕೊತ ಕೊತ ಕುದಿವ ನೀರ ಹಬೆಯಲ್ಲೂ
ಅನ್ನ ಶುಭ್ರ ನಗೆಯ ಬೀರಿ ಕೆಂಪಗಾಗದೆ
ಬಿಳಿಯ ಹೂವಾಗಿತ್ತು....

ಗುರುವಾರ, ಸೆಪ್ಟೆಂಬರ್ 15, 2011

ನೋವ ಬಿಸಿಲಿನ ಜಳದ ಸ್ಪರ್ಶ

ಹೂವ ಪಕಳೆಯಾಗಿತ್ತು ಹೃದಯ,
ಕರುಣೆಯ ಮಂಜು ತುಂಬಿದ ಕೊಡ
ಕರಗುತ್ತಿತ್ತು ಅನ್ಯರ ನೋವ ಬಿಸಿಲಿನ
ಜಳದ ಸ್ಪರ್ಶಕೂ, ಕೊರಡು ಮಳೆ
ಹನಿಯಾ ಇಬ್ಬನಿಯಾಗಿಸಿತ್ತಂದು
ಇಂದು ಸ್ವಾರ್ಥದ ಕಿರು ಸೂಜಿಯಾ
ಚುಚ್ಚಿ ಹೊರಟು ನಿಂತಿದ್ದನನ್ಯ,
ಮುಚ್ಚ ಲಾದೀತೇ ಸೋರಿ ನಿಂತ
ಸಂಬಂಧಗಳ ನದಿಯ ಒಡಲ?

ಮಂಗಳವಾರ, ಸೆಪ್ಟೆಂಬರ್ 13, 2011

ಪಯಣ ಮತ್ತದೇ ಬೆಂಗಾಡಿಗೆ

ನನ್ನ ಬಿಳಿಯ ಬಣ್ಣದ
ಕರವಸ್ತ್ರದ ಮುಖವೂ
ಕೆಂಪಗಾಗಿತ್ತು ಧೂಳ
ಸಿಂಚನವನುಂಡು....
ಕೆಸರ ರಾಡಿಯೊಳಗಿಂದ
ಎದ್ದು ಬಂದ ಹಂದಿಯದೂ
ಸವಿ ಚೀತ್ಕಾರ, ಶುಭಸ್ವಾಗತ,
ಜಡಿ ಮಳೆಗೆ ಹಿಡಿ ಶಾಪ
ಸೆಗಣಿ, ಧೂಳುಗಳೆಲ್ಲದರ
ವರ್ಣ ಚಿತ್ತಾರ ನಾ ತೊಟ್ಟ
ನೀಲಿ ಜೀನ್ಸಿನಲೂ ವೈಯಾರ..
ಕಿವಿಗಡರಿದ "ಏನ್ರೀ ಸರ್ರ"
ಆರಾಮದಿರೇನು? ಗಳ ನಡುವೆ
ಕ್ಷಣ ನಿಟ್ಟುಸಿರು ಬಿಟ್ಟು "ಹ್ಞೂ ರೀ"
"ಯಪ್ಪಾ", "ನೀವ್ರಿ ಸರ್ರ" ಮರು
ಪ್ರಶ್ನೆ ಒಗೆದಿದ್ದೆ .. ಕಾಲ ಮರೆಸಿತ್ತು
ಇಂದು ಪಯಣ ಮತ್ತದೇ ಬೆಂಗಾಡಿಗೆ
ರೊಕ್ಕದ ಬೆನ್ನ ಹತ್ತಿ, ಪಾದಗಳಿಗೆ
ಧೂಳು ಸೆಗಣಿಗಳ ನೆನಪ ಬಿಟ್ಟು.....

ಶನಿವಾರ, ಸೆಪ್ಟೆಂಬರ್ 10, 2011

ಜಗವ ಮರೆತ್ತಿದ್ದೇನೆ ಇಂದು ಜನುಮವೆತ್ತಲ್ಲಿ....

ಹಸಿರು ಹುಲ್ಲ ಹಾಸಿನ ಕೋಮಲತೆಯ
ಸವಿ ಮುತ್ತು ಪಾದ ಪಂಕ್ತಿಗಳಿಗೆ,
ಮನಸ್ಸು ಉಲ್ಲಸಿತ, ತೊರೆಯ
ಶುಭ್ರ ಜುಳು ಜುಳು ನಾದದ
ಕಂಪು ಕಿವಿ ತಮಟೆಯೊಳಗೆ,
ಬಾಳೆ ಗೊನೆಯೊಂದು ನಕ್ಕು
ಕನಕಾಂಬರ ಕಡು ಹಸಿರೆಲೆಗಳ
ನಡುವೆ ಕಡುಕೆಂಪು ಹೂವುಗಳು
ನನ್ನಕ್ಷಿಗಳಲಿ ಅಚ್ಚೊತ್ತಿವೆ ಆಹ್ಲಾದ,
ಮೇಲೆ ಸೂರ್ಯನೂ ಇಣುಕಿ
ನಗುತ್ತಿದ್ದಾನೆ, ಮೋಡಗಳ ಎಡೆಯಿಂದ
ಆನಂದ ಬಾಷ್ಪ ಹನಿ ಮಳೆಯದ್ದೂ.....
ಗಾಳಿಯೂ ಹೆತ್ತವಳ ಕೈರುಚಿಯ
ಸುವಾಸನೆಯ ಹೊತ್ತು ತಂದಿದೆ
ಜಗವ ಮರೆತ್ತಿದ್ದೇನೆ ಇಂದು ಜನುಮವೆತ್ತಲ್ಲಿ....

ಬುಧವಾರ, ಸೆಪ್ಟೆಂಬರ್ 7, 2011

ಕಾಮುಕರು

ಸುತ್ತ ಬಿಳಿಬಣ್ಣದ ನಾಲ್ಕು ಗೋಡೆ,
ಕೊಳವೆ ದೀಪದ ಬೆಳ್ಳಂಬೆಳಗು,
ಗೋಡೆಗೆ ಬಳಿದ ನೀರು ಸುಣ್ಣಕೂ
ಕಣ್ಣು ಮಿಟುಕಿಸುವಾಸೆ..........
ಗಣಕ ಯಂತ್ರದ ಕೀಲಿಮಣೆಯ
ಮೇಲಾಡುತ್ತಿರುವ ಕೈ ಬೆರಳಿನಲೂ
ಉದ್ರೇಕ, ಮನಸು ಮರ್ಕಟ..
ಗಿರಿಶಿಖರಗಳ ನೆನಪು, ಹಾರಾಟ
ಬಾನೆತ್ತರಕೆ, ಮನಸು ಬೆಲ್ಲದ ಮಂಡಿಗೆ,
ಇಲ್ಲಿ ಇರುವೆಗಳು ಒಂದೆರಡಲ್ಲ, ಸಾಲು
ಸಾಲು, ಮುತ್ತುವ ತವಕ.. ಮೆಲ್ಲನೆ
ಸೂರೆಗೊಳ್ಳುವುದೆಂದು?.. ನಗ್ನತೆ
ಬೆಳೆಯುತ್ತಿದೆ ಕನಸ ಹೊತ್ತು....
ಸಾಕಾರದ ದುಷ್ಟ ಗುರಿಯೆಡೆಗೆ
ವಿಫಲ ಪ್ರಯತ್ನ,ವ್ಯರ್ಥತೆಯ ಸುಖ
ಪಡೆದದ್ದು ಅವಳ ಮುಖದ ಚಿತ್ರವ
ಕಣ್ಣ ಪರದೆಯೊಳಗಿಟ್ಟು........

ಶನಿವಾರ, ಸೆಪ್ಟೆಂಬರ್ 3, 2011

ತೊಳಲಾಟ

ಒಂಟಿ ಜೀವ, ಕಣ್ಣ ನೀರ ಹನಿ
ಬಾಡಿದ ಕೆನ್ನೆಯ ಮೇಲೆ,
ಸುಕ್ಕುಗಟ್ಟಿದ ಮಿದುಳೊಳಗೆ
ಸಾವಿರ ನೆನಪ ಮಿಂಚುಗಳು

ಕೆಂಪಡರಿದ ಕಬ್ಬಿಣದ ಸಲಾಖೆಯ
ಬರೆಯೆಳೆದಂತೆ ಎದೆಯಲೆಲ್ಲೋ
ನಾ ಮಾಡಿದ ತಪ್ಪುಗಳ ಪ್ರಪಾತ
ಹೊಟ್ಟೆ ಬಗೆದು ಕರುಳು ಕೀಳುವ
ನೋವ ಬಿರುಮಳೆ... ಪ್ರಾಯಶ್ಚಿತ್ತವೆಲ್ಲಿ...?

ಕ್ಷಣ ನಿಶ್ಚಲ.. ಮೇಲೆ ಕರಿಮೋಡದ
ಆಕಾಶ, ಬದುಕು ಬರ್ಬರ..
ನೀರ ಮೇಲೆತ್ತಿದ ಮೀನಾಗುವ
ಬಯಕೆ, ಮರೆತು ಬಿಟ್ಟೀತೆ
ಜಗವು ನನ್ನ ಆ ಕೊಳಕುಗಳ?

ಧೃಡ ಮನಸ್ಸು, ಅಚಲತೆ...
ಮತ್ತೆ ಮಲ್ಲಿಗೆಯ ಹೂವಾಗುವೆ
ಮತ್ತದೇ ಪ್ರಶ್ನೆ.. ಕೊಳಕು ನಾರಿದ
ತಪ್ಪುಗಳ ಮೇಲೆ ಮಲ್ಲಿಗೆಯ
ಪರಿಮಳವು ಕಂಪನಿತ್ತೀತೆ..?

ಮಂಗಳವಾರ, ಆಗಸ್ಟ್ 23, 2011

ಬದುಕು


ಎಲೆ ಮಾಸಿದ ಮರ,
ತುತ್ತ ತುದಿಯಲೊಂದು
ಪುಟ್ಟ ಗೂಡೊಳಗೆ
ಮೂರು ಮರಿಗಳ ಜೀವ..
ರೆಕ್ಕೆ ಬಲಿತಿಲ್ಲ....

ಅಮ್ಮನಿಲ್ಲದ ದಿನ,
ಮೇಲೆ ಬಿಸಿಲ ಬೇಗೆ,
ಕಡಲತಡಿಯ ಸುಳಿರ್ಗಾಳಿಗೆ
ಗೂಡಿನ ಗರಿಗಳುದುರಿ
ಒಂದು ತೂತು......

ರೆಕ್ಕೆಯಿಲ್ಲದ ಹಾರಾಟ
ಕೆಳಗೆ ಕಲ್ಲು ಬಂಡೆ..
ಆಸೆಗಳ ತೊಟ್ಟಿಲ್ಲಿಲ್ಲ
ಕನಸುಗಳ ಬಲೆಯಿಲ್ಲ,
ಮೂರು ದಿನಗಳ ಬಾಳ
ಸಂಭ್ರಮ.............

ಶುಕ್ರವಾರ, ಆಗಸ್ಟ್ 19, 2011

ಬದುಕ ದಾರಿಯ ನೆನಪ ಹತ್ತಿ...

ಒಂದು ಬಡ ಜೀವ... ಮೂಳೆಯೇ ಮಾಂಸ ಖಂಡಗಳು
ತೂತು ಚಾಪೆಯ ಮೇಲೆ ಬೋರಲು,
ಕಂಬನಿಯ ಸುಳಿವಿಲ್ಲ, ತೊಟ್ಟಿಕ್ಕುವ ಮಳೆ ಹನಿಯ
ಸದ್ದು ಗೋಡೆಯಿಲ್ಲದ ಜೋಪಡಿಯೊಳಗೆ,
ನೊಣದ ಝೇಂಕಾರ ನೀರ ಲೋಟದ ಮೇಲೆ,
ನಾಯಿ ಬೊಗಳಿದ ಕೂಗು ಎಲ್ಲೋ ದೂರದಲಿ
ತಡಪಡಿಸುತಿದೆ ಒಂಟಿ ಜೀವ, ಆಸರೆಯ ಹಂಬಲ
ತುಟಿ ಕಲ್ಲು ಬಂಡೆ, ನಾಲಗೆಯೂ ಮರುಭೂಮಿ,
ಒಂದಿಂಚಿನ ಉಸಿರು ಮೂಗ ಹೊರಳೆಯೊಳಗೆ
ಕಾಲು ಮರಗಟ್ಟಿದೆ, ಕೈ ಬೆರಳು ಒಣ ಕೊರಡು,
ಹುಳಗಳೂ ಸತ್ತು ಮಲಗಿವೆ ಉದರದೊಳಗೆ....

ಉಸಿರುಗಟ್ಟಿದ ಮೆದುಳ ಮೂಲೆಯೊಳಗೆ ದೇವರ
ಹೆಸರ ಪಟ್ಟಿ, ಎಲೆಯಿಲ್ಲದ ಒಣಮರಗಳ ಸಾಲುಗಳಲಿ
ಸವೆದ ಬದುಕ ದಾರಿಯ ನೆನಪ ಹತ್ತಿ.....................

ಶನಿವಾರ, ಆಗಸ್ಟ್ 13, 2011

ತಂಗೀ.........

ನಾನು ನದಿ, ನೀನು ಮೀನು
ನನ್ನ ನೀರಿನ ಉಸಿರು ನಿನಗೆ,

ನಾನು ಮಣ್ಣು, ನೀನು ಗಿಡವು
ನನ್ನ ಸತುವಿನ ಪುಷ್ಟಿ ನಿನಗೆ

ನಾನು ಎಲೆ, ನೀನು ಹೂವು
ಒಂದೇ ಬಳ್ಳಿಯ ಹಿತವು ಎಮಗೆ,

ನಾನು ಮೋಡ, ನೀನು ಭೂಮಿ
ಹನಿ ಮಳೆಯ ತಂಪು ನಿನಗೆ

ನಾನು ರವಿ, ನೀನು ತಿಂಗಳು
ಹುಣ್ಣಿಮೆಯ ಬೆಳಕು ನಿನಗೆ,

ಇದೋ ಈ ರಕ್ಷೆ ನಿನಗೆ
ಭ್ರಾತೃತ್ವ ಬಂಧನದ
ಅವಿರತ ಪ್ರೀತಿಯಿಂದಲಿ!

ಶನಿವಾರ, ಆಗಸ್ಟ್ 6, 2011

ಕವಿ ನಾನು

ಕೆಸರಲಿ ಕದಡಿದ ಬಳ್ಳಿಗೆ
ಬಿಳಿಯ ಹೂವ ಬಿಡುವ ತವಕ
ತನ್ನುಸಿರ ಪಣವಿಟ್ಟು,

ಮುಳ್ಳು ತುಂಬಿದ ಗಿಡಕೆ
ಸಿಹಿ ಹಣ್ಣ ಕೊಡುವ ಹಂಬಲ
ನೋವ ತನ್ನೊಳಗಿಟ್ಟು

ಕರಿಮೋಡವಾದರೂ ನಿಡು
ಸುಯ್ಯುವಾಸೆ ಎಡೆಬಿಡದೆ
ಸೋನೆಯ ಸುವಾಸನೆ

ನೂರು ಕನಸುಗಳ ಕಂಡು
ಕವಿಯಾದೆ ನಾನಿಂದು
ಕನ್ನಡದ ಮಗನಾಗಿ....