ಮಂಗಳವಾರ, ಜನವರಿ 31, 2012

ಮುಳುಗದಿರು ಕರುವೇ!

ಎರಡು ದಿನವಾಗಿಲ್ಲ ನಿನ್ನೆ ಕಣ್ಣು ಬಿಟ್ಟ ಕರು
ಅದರ ಕಿವಿಯೊಳಗೆ ಜಗದ ಗಾಳಿ ಸೋಕಿ
ಕೊರಳಿಗೆ ಕಟ್ಟಿದ ನಯವಾದ ಬಟ್ಟೆಯ
ಉರುಳು ಬಿಚ್ಚಿ ನೆಗೆದಾಡಿತ್ತು ಕೈಗೆ ಸಿಗದೇ

ಹುಡುಕ ಹೊರಟೆ ತಪ್ಪಿಸಿಕೊಂಡ ಮುಗ್ಧತೆಯ,
ಎಲ್ಲಿ ಓಡಿತೋ ಎಲ್ಲಿ ಜಾರಿತೋ ಕಣ್ಣು ತಪ್ಪಿಸಿ
ಮಳೆ ಬಿದ್ದ ಇಳೆಯ ನಗುವ ನಾಲಿಗೆಯ
ಹಸಿರು ಇಣುಕುವ ಹುಲ್ಲಿನ ಪರಿಚಯವಿಲ್ಲವದಕೆ!

ಮುಂಜಾನೆಯ ಹೊಂಗಿರಣದ ಹಿತವ ಉಂಡು
ಕಣ್ಣು ತಂಪುಗೊಳಿಸಲು ಬರದದಕೆ
ಅಲ್ಲಿರಲಿಲ್ಲ ಹುಲ್ಲ ಹೊದಿಕೆಯ ಮೈದಾನದೊಳಗೆ
ಕಣ್ಣರಳಿಸಿ ಸವಿಯ ಉಣಬರದದಕೆ!

ಬರಡು ಆಲದ ಬುಡದ ಬಾವಿಯಲಿ ಇಣುಕಿದೆ
ಇಲ್ಲ, ಸುಳಿವಿಲ್ಲ ಕಲ್ಲು ಮುಳ್ಳಿನ ಕಾಡು ದಾರಿಯಲೂ
ಎತ್ತ ಓಡಿದೆ? ಅದೆಷ್ಟೂ ದೂರ? ಒಂಟಿಯದು
ನಿನ್ನೆ ಹುಟ್ಟಿದಷ್ಟೇ ಇನ್ನೂ ಬಲಿತಿಲ್ಲ ಹಲ್ಲುಗಳು!

ಮೊನ್ನೆ ಗರ್ಭದೊಳಗಿತ್ತು, ಇಂದು ಜಗದೊಳಗೆ
ಹೊಟ್ಟೆಯೊಳಗೆ ಕಾಲು ಅಲ್ಲಾಡಿಸುತ್ತಿರಲಿಲ್ಲ
ಇಂದು ಕೈಕಾಲು ನೆಗೆದಿದೆ, ಬಾಲ ನಿಗುರಿದೆ
ಓಟ, ಹರಿವ ನದಿಯ ಮೇಲೆ, ನೀರು ಬಂಡೆಯೇ?
ಮುಳುಗದಿರಲಷ್ಟೇ ಸಾಕು, ಕರಗದಿರಲಿ ಉತ್ಸುಕ!

ಶುಕ್ರವಾರ, ಜನವರಿ 27, 2012

ಮೌನದೊಳಗಿನ ನಾವಿಕ!

ಸೋತು ನಾ ಮೌನಿಯಲ್ಲ
ಹಿಂಜರಿಯಲು ನಾ ಸೋತಿಲ್ಲ
ಸಾವಿರದೊಂದರ್ಥದ ಮೌನಕೆ
ಶರಣಾದೆ ಈ ಲೋಕದ ನಡೆಗೆ!

ಮೌನವೇ ಪ್ರಿಯತಮೆಯೆನಗೆ
ನೋವ ತುಂಬಿದ ಮನಸಿನ
ಕೆನ್ನೆಗೆ ಸಿಹಿಮುತ್ತನೀವಾಕೆ
ಕದಡದಿರಲೆಂದು ಕಷ್ಟ
ನನ್ನೆದೆಯ ಕದ ತಟ್ಟುವಾಕೆ

ನೋವಿನ ಬೇಟೆಗೆ ಮೌನದ ಮೊರೆ ಹೊಕ್ಕೆ
ದುಃಖದ ಬಲೆಯೊಳಗೆ ಬೀಳದಿರಲೆಂದು
ಸಂತಸ ಹಾರಿಹೋಗದಿರಲೆಂದು
ಸಾವಿನ ಸದ್ದ ತರದಿರಲೆಂದು

ಭಯವಿಲ್ಲ ಮೌನದಾ ಮನದೊಳಗೆ
ಧೈರ್ಯ ಮುದುಡದಿರಲೆಂದು ಮೌನ
ಕಣ್ಣ ಹನಿ ಜಾರದಿರಲೆಂದು ಮೌನ
ಮನದ ಅಹಮಿಕೆಗೆ ಒದೆಯಲೆಂದು
ಅಳಿದುಳಿದ ಭಾವ ಬಾಡದಿರಲೆಂದು

ಅರಿವಿದೆ, ಬೆದರಿಲ್ಲ ನಾವಿಕನು
ಬದುಕು ನಂಬಿಕೆಯ ಪರಿ ಅರಿತೆ
ನೋವಿನೊಲುಮೆಯ ಅಲೆಯಲಿ ತೇಲಿ
ನೌಕೆ ಎತ್ತರೆತ್ತರ ಸಾಗುವಾ ಇಚ್ಚೆಯಾ
ತೊರೆದು ದಡ ಸೇರಿದರೆ ಸಾಕೆಂಬ
ಬಯಕೆ ಮೌನವೆತ್ತ ಮನದ ನಾವಿಕನಿಗೆ!

ಬುಧವಾರ, ಜನವರಿ 25, 2012

ನೋವ ನಗುವೊಳಗೊಬ್ಬ ಮೌನಿ

ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ
ನದಿಯ ತೆರೆಗಳ ಮೇಲೆ
ದೋಣಿಗೆ ಹುಟ್ಟು ಹಾಕುತ್ತಿದ್ದವ,
ಸಾಗರದ ಅಲೆಗಳ ಆರ್ಭಟದ
ನೋವಿಗೆ ಶರಣಾಗಿ
ಹುಟ್ಟು ತಪ್ಪಿದಂಬಿಗನಾಗಿ
ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ!

ಹುಟ್ಟು ತಪ್ಪಿದ ದೋಣಿ
ಬಳಲಿದ ಕೈಕಾಲು ನಡುಗಿದೆ
ಹರಿವ ನೆತ್ತರೂ ತವಕದಲಿ
ಬಿಳಿಯಾಗಿದೆ, ಬೆವರಿದೆ,
ಬೆವರ ಕಂಡು ನಾ
ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ!

ಮನದಿ ಕುದಿವ ನೋವಿದೆ,
ಅಲೆಗಳನೂ ಮೀರಿ ನಿಂತಿದೆ
ಮೀರಿ ನಿಂತೇನೂ ಆರ್ಭಟಕೆ
ಆದರೇನು ಬಲಹೀನ
ತೋಳ ಮಾಂಸ ಮುದುಡಿದೆ
ಚರ್ಮಕ್ಕಂಟಿದ ಎಲುಬುಗಳ
ಕಂಡು ಮೌನಿ ನಾನು
ಆ ನೋವ ನಗುವೊಳಗೂ
ಮೌನಿ, ಮತ್ತೆ ಮೌನಿ!

ಭಾನುವಾರ, ಜನವರಿ 22, 2012

ಬೇಲಿ, ಹೂ ಮತ್ತು ನಾನು

ಉದ್ಯಾನಕ್ಕೊಂದು ಬೇಲಿ
ಒಳಗೆ ಚಿತ್ರ ಚಿತ್ತಾರಗಳ
ಬಣ್ಣದಂಗಳಕೆ ಕಾವಲು ನಾ!
ಅಂದು ಕೊರಡಾಗಿದ್ದೆ
ಇಂದು ಬೇಲಿಯಲಿ
ಹಸಿರು ಪೂಸಿ ನಗುತ್ತಿದ್ದೇನೆ
ಅಲ್ಲಲ್ಲಿ ಮೊಗ್ಗುಗಳ ಮುಖದಲ್ಲಿ ನಗು
ನನ್ನ ಕಾವಲಿದೆ ಅನವರತ
ಒಳಗರಳಿ ನಿಂತ ಸುಮಗಳು
ಆಗಾಗ ನನಗೊಂದಿಷ್ಟು
ಪರಿಮಳದ ಕಾವ ನೀಡಿ
ಹರಸುತ್ತವೆ ನನ್ನ ಸತತ
***
ನನ್ನುಸಿರ ಬೇಲಿಯಲಿ
ಅರಳಿ ನಿಂತ ಸುಮಗಳೇ
ನಿಮಗೆ ನೋವಾಗದಿರಲೆಂದು
ನನ್ನ ಹಸಿರ ಚಿಗುರಗಳ
ಊಟವಿತ್ತಿದ್ದೇನೆ ಹಸಿದು
ಬಂದ ಕುರಿಮಂದೆಗಳಿಗೆ
ಭಯವಿತ್ತು ನನಗೆ ನಿಮ್ಮುಸಿರ
ಕಸಿಯಬಹುದೆಂದು ಕುರಿಗಳು..

ಮರೆಯದಿರಿ ಸುಮಗಳೇ
ನಿಮ್ಮ ನೆನಪ ಜೋಳಿಗೆಯಲ್ಲಿಡಿ
ಕಾಯುವ ಈ ಮನಸ ಮರೆಯದಿರಿ
****

ಭಾನುವಾರ, ಜನವರಿ 1, 2012

ಪುಟ್ಟ ಮನಸು...

ತಿಳಿನೀರ ತೊರೆ ಹರಿವ ಪರಿಯು ನಿನ್ನ ಮನಸು
ಹನಿ ಹನಿಯೂ ತಂಪು, ಕ್ಷಣ ಕ್ಷಣದ ಹರಿವಿನಲೂ
ನಿನ್ನೊಲವ ಧಾರೆಯಲಿ ಮೀಯಲೇನು?

ಬಿಳಿಯ ಮೋಡದ ತಿಳಿಯು ನಿನ್ನ ನೋಟವು
ಮಧುರ ಅತಿ ಮಧುರ, ಭಾವ ಭಾವಗಳಲೂ
ನಿನ್ನ ಮನಸ ತೆಕ್ಕೆಯ ಒಳಗೆ ತೂರಲೇನು?

ಹರಿವ ನದಿತೆರೆಯ ತೆರದಿ ಪುಟಿವ ನಿನ್ನ ನಗುವು
ನಯನ ಮನೋಹರ, ಅಲೆ ಅಲೆಗಳಲೂ
ನಿನ್ನೆದೆಯ ತಿಳಿಯಲೆಯೊಳಗೆ ಧುಮುಕಲೇನು?

ನಿನ್ನಪ್ಪುಗೆಯ ಬಂಧನದಲಿ ಬಂಧಿ ನನ್ನ ಮನಸು
ತೊದಲ ಸವಿ ಸವಿಯ ಮನದ ಹಿತ ಹಿತದಲೂ
ಬೆರೆತು ನಿನ್ನ ತೋಳಿನಪ್ಪುಗೆಯ ತೊಟ್ಟಿಲಲಿ
ತೂಗಬಿಡಲೇನು ಮನವ? ನಾ ಮಗುವಾಗಲೇನು?
***