ಸೋಮವಾರ, ಡಿಸೆಂಬರ್ 26, 2011

ದೈವವೆಲ್ಲಿದೆ ಗುಡಿಯೊಳಗೆ?

ಒಳಗೊಂದು ಮನುಷ್ಯ, ಸಿಂಗರಿಸಿ ಹೂವ ಮುಡಿಸಿ
ಸೊಂಟಕ್ಕೆ ಬೆಳ್ಳಿಯ ಪಟ್ಟಿ, ರೇಶಿಮೆಯ ಕೆಂಪು
ಹಣೆಗೆ ನಾಮ, ಉಗ್ರತೆಗೆ ವಿಚಿತ್ರ ರೂಪ ಬೊಟ್ಟು
ವೀಳ್ಯ, ಸುಣ್ಣ, ಅಡಿಕೆ ಮಿಶ್ರಿತ ರಂಗೋಲಿ ನಾಲಿಗೆ
ಆತನೀಗ ದೈವ ಸ್ವರೂಪಿ, ನಗಾರಿ, ನಾಗಸ್ವರಗಳಲಿ

ಹಿಂಗಾರದ ತುಂಡು, ಮಲ್ಲಿಗೆ ಎಸಳು, ಅಕ್ಕಿ ಕಾಳು
ಮುಖಕ್ಕಿಷ್ಟು ಮಂಗಲ ಅರಿಶಿನ, ಕುಂಕುಮಗಳ ಮೆತ್ತೆ
ಕಾಲಿನಲಿ ಗೆಜ್ಜೆದನಿ, ಎಡಕೈಲಿ ಘಂಟಾಮಣಿ ಸದ್ದು
ಚಿನ್ನ ಮುಚ್ಚಿದ ಕತ್ತಿ ಕಡಸಾಲೆಗಳ ಹೊಳಪು, ಭಯ
ರೌದ್ರ ಕಾಡಿಗೆಯ ಕಣ್ಣು ಉರಿವ ಸೂರ್ಯನಿದ್ದಂತೆ

ನಾಲ್ಕು ಗೋಡೆಯ ಮಧ್ಯೆ ಒಂದು ಕಲ್ಲುಗುಂಡ
ಮರದ ಪೀಠದ ಮೇಲೆ ಕುಳಿತ ದೈವವಾತ
ಅರೆ ಗಳಿಗೆಯ ಮುಂಚೆ ಮದ್ಯದಮಲಿನಲಿ ತೇಲುತ್ತಿದ್ದ
ಇವನು ಈಗ ಶುದ್ಧ, ಒಂದು ಕೊಡಪಾನದ ನೀರ ಸ್ನಾನ
ಮೈಮೇಲೆ ಆತನೇರಿದ್ದಾನೆ, ಕೈ ಕಾಲು ನಡುಗಿಸುತ್ತಾನೆ

ನುಡಿ ಕೊಡುತ್ತಾನೆ ನಡುಗುವ ಮೈ, ಒದರುವ ನಾಲಗೆ
ಮಾತು ಮಧು ಕೈ ಕಟ್ಟಿ ನಿಂತ ಕಲ್ಲು ಕೊರಡುಗಳಿಗೆ,
ಶೃಂಗಾರ ಹೂವ ಎಸಳಿನ ರಸಮಯ ವಾಸನೆಗೂ
ಒದ್ದೋಡದ ಕಲ್ಮಶ ಹೃದಯದ ಹುಲು ಮನಸುಗಳು
ಕೈ ಕಟ್ಟಿ ನಿಂತಿವೆ, ಸರಿ ಪಡಿಸುತ್ತಾನಂತೆ ಆ ಮಾಯಾವಿ

ತೇದಿದ ಗಂಧ ಹಲಸಿನೆಲೆಯ ಮಧ್ಯೆ, ಹಣೆಗೊಂದು ಬೊಟ್ಟು
ಹೊದ್ದ ಬಿಳಿಯ ಶಾಲಿನ ಮನಸಿನೊಳಗೆ ಮಸಿ ಕರಕಲು
ನಿಜವ ನುಡಿವುದಂತೆ ದೈವ, ಭರವಸೆಯ ಸಾಲುಮಾತು
ಕೇಳುತ್ತದೆ ಭೋಗ ಬರುವ ವರುಷದ ತವಕ, ಸ್ವರ್ಣದಾಸೆ
ಗುಡಿಗೋಪುರದ ವೈಭೋಗ ಭಾಗ್ಯ ಎಲ್ಲಾ ತೊರೆದವರಿಗೂ

ತಲೆಯಲ್ಲಾಡಿಸಿದ ತನುಗಳು ಹೊರಟು ನಿಂತಿವೆ ಎಲ್ಲಾ ಮರೆತು
ಒಪ್ಪಿದ್ದು ಗುಡಿಯೊಳಗಷ್ಟೆ, ಮನದೊಳಗಣ ಮಾತಲ್ಲ ನಾಲಗೆ ಮೇಲೆ
ಮೆದುಳು ಲೆಕ್ಕದ ಪರಿ ಕ್ಷಣ -ಹರಕೆ ಕುರಿಗಳ ತಲೆ ಕಡಿಯೋಣ
ಖುಷಿ ಪಟ್ಟಾನು, ಕಲ್ಲು ಗೋಡೆಯ ಮರದ ಗುಂಡದ ಒಳಗೆ
ನಾಲಗೆ ಹೊರಚಾಚಿ ಕಣ್ಣು ಬಿಟ್ಟು ಕೂತ ಮೂರ್ತಿಯೂ!

ಶನಿವಾರ, ಡಿಸೆಂಬರ್ 10, 2011

ತೃಪ್ತಿ!

ತಟ್ಟೆಯೊಳಗನ್ನ, ಒಂದು ಕ್ಷಣ ಮೌನ
ನೆಕ್ಕಲುಪ್ಪಿನ ಕಾಯಿ, ಹುಳಿ ಮೊಸರು!

ಹೊರಗೊಂದು ನಾಯಿ ಬಾಗಿಲ ಮುಂದೆ
ಎಲುವ ತಿನ್ನುವ ತವಕ, ಬೇಡುತ್ತಿದೆ ಕಣ್ಣಲಿ

ಹೊಟ್ಟೆ ಚುರುಗುಡುತಿತ್ತು, ಹಸಿವೆಯ ಬೆಂಕಿ
ನಾಲಗೆಯ ತುಂಬೆಲ್ಲಾ ಜೊಲ್ಲು, ನಾಯಿಯಂತೆ!

ಮುಷ್ಟಿಯಲಿ ತುತ್ತು, ತುಂಡು ಉಪ್ಪಿನಕಾಯಿ
ಬಾಡಿದ್ದ ಕರುಳು ಹೊಟ್ಟೆಯೊಳಗೆ ನರ್ತನ!

ತಟ್ಟೆಯೆತ್ತಿ ನಡೆದೆ, ಬಾಲ ಅಲುಗಾಡಿಸಿತ್ತು
ಕಚ್ಚಲು ಎಲುಬಿಲ್ಲದಿದ್ದರೂ ಅನ್ನದಗುಳಿತ್ತು!

ತಿಂದು ತೇಗಿ ಮೂಗಿಗೆ ನಾಲಗೆ ಒರೆಸಿ
ಒಂದು ದೃಷ್ಟಿ! ತೃಪ್ತಿ, ನನಗೂ ನಾಯಿಗೂ!

===
ಚಿತ್ರಕೃಪೆ: ಗೂಗಲ್ ಇಮೇಜಸ್

ಶನಿವಾರ, ಡಿಸೆಂಬರ್ 3, 2011

ಸಮಾಧಿ ಮತ್ತು ಮುಕ್ತಿ!

ಕಿವಿಗೊಟ್ಟು ಕೇಳಿದೆ
ಸಾಲುಗಟ್ಟಿದ ಇರುವೆಗಳ
ಕಾಲ ಸಪ್ಪಳದ ದನಿ ಕೇಳಿತು
ಏರಿಳಿತವಿಲ್ಲ ಎಲ್ಲವೂ ಒಂದೇ ರಾಗ

ಕಣ್ಣ ಅರಳಿಸಿದೆ, ತೆರೆದ ಕಿವಿ ಹಾಗೆ ಇತ್ತು
ಸತ್ತ ನೊಣದ ವಾಸನೆಗೆ
ಇರುವೆಯೊಂದು ಸಾಲು ಬಿಟ್ಟು
ನನ್ನ ಕಾಲ ಬುಡದಲಿ ನಗುತಿತ್ತು,
ಒಂದರೆಕ್ಷಣ ಈ ಒಂಟಿ ಇರುವೆಯ
ಬೆನ್ನ ಹತ್ತಿ ನಾಕಿರುವೆಗಳು....

ಮನಸು ತೆರೆದು ಕೊಂಡಿತು
ವಾಸ್ತವದ ಲೋಕ, ಅಲ್ಲಿ ಶವಯಾತ್ರೆ
ನೊಣವ ಹೊತ್ತ ನಾಲ್ಕಿರುವೆಗಳು,
ಯಾರಿಗಾರೋ ಬಾಂಧವರು
ಒಂದಕ್ಕೊಂದು ನಂಟಿಲ್ಲ,
ಕಾಲು, ಬುಡ, ತಲೆ, ಹೊಟ್ಟೆ
ಕಚ್ಚಿ ಹೊತ್ತೊಯ್ಯುತ್ತಿದ್ದವು
ಮೂಲೆ ಗೂಡಿನೊಳಗೆ

ಬಿಟ್ಟ ಕಣ್ಣು, ತೆರೆದ ಮನವ ಮೀರಿ
ನನ್ನ ನಾಲಗೆ ಪಿಸುಗುಟ್ಟಿತ್ತು
ಮುಕ್ತಿ ಯಾರಿಗೆ? ಹೌದು ಎಲ್ಲದಕೂ!

ಹೊತ್ತವರಿಗೆ ಸತ್ತದ್ದೂ ಶವವಾಗಲಿಲ್ಲ
ಹಸಿದ ಹೊಟ್ಟೆಯ ಬೆಂಕಿ ಸಮಾಧಿಗೆ
ಒಂದು ಹೂವಾಗಿತ್ತು ಉಸಿರು ನಿಲ್ಲಿಸಿದ ನೊಣ!