ಸೋಮವಾರ, ಡಿಸೆಂಬರ್ 26, 2011

ದೈವವೆಲ್ಲಿದೆ ಗುಡಿಯೊಳಗೆ?

ಒಳಗೊಂದು ಮನುಷ್ಯ, ಸಿಂಗರಿಸಿ ಹೂವ ಮುಡಿಸಿ
ಸೊಂಟಕ್ಕೆ ಬೆಳ್ಳಿಯ ಪಟ್ಟಿ, ರೇಶಿಮೆಯ ಕೆಂಪು
ಹಣೆಗೆ ನಾಮ, ಉಗ್ರತೆಗೆ ವಿಚಿತ್ರ ರೂಪ ಬೊಟ್ಟು
ವೀಳ್ಯ, ಸುಣ್ಣ, ಅಡಿಕೆ ಮಿಶ್ರಿತ ರಂಗೋಲಿ ನಾಲಿಗೆ
ಆತನೀಗ ದೈವ ಸ್ವರೂಪಿ, ನಗಾರಿ, ನಾಗಸ್ವರಗಳಲಿ

ಹಿಂಗಾರದ ತುಂಡು, ಮಲ್ಲಿಗೆ ಎಸಳು, ಅಕ್ಕಿ ಕಾಳು
ಮುಖಕ್ಕಿಷ್ಟು ಮಂಗಲ ಅರಿಶಿನ, ಕುಂಕುಮಗಳ ಮೆತ್ತೆ
ಕಾಲಿನಲಿ ಗೆಜ್ಜೆದನಿ, ಎಡಕೈಲಿ ಘಂಟಾಮಣಿ ಸದ್ದು
ಚಿನ್ನ ಮುಚ್ಚಿದ ಕತ್ತಿ ಕಡಸಾಲೆಗಳ ಹೊಳಪು, ಭಯ
ರೌದ್ರ ಕಾಡಿಗೆಯ ಕಣ್ಣು ಉರಿವ ಸೂರ್ಯನಿದ್ದಂತೆ

ನಾಲ್ಕು ಗೋಡೆಯ ಮಧ್ಯೆ ಒಂದು ಕಲ್ಲುಗುಂಡ
ಮರದ ಪೀಠದ ಮೇಲೆ ಕುಳಿತ ದೈವವಾತ
ಅರೆ ಗಳಿಗೆಯ ಮುಂಚೆ ಮದ್ಯದಮಲಿನಲಿ ತೇಲುತ್ತಿದ್ದ
ಇವನು ಈಗ ಶುದ್ಧ, ಒಂದು ಕೊಡಪಾನದ ನೀರ ಸ್ನಾನ
ಮೈಮೇಲೆ ಆತನೇರಿದ್ದಾನೆ, ಕೈ ಕಾಲು ನಡುಗಿಸುತ್ತಾನೆ

ನುಡಿ ಕೊಡುತ್ತಾನೆ ನಡುಗುವ ಮೈ, ಒದರುವ ನಾಲಗೆ
ಮಾತು ಮಧು ಕೈ ಕಟ್ಟಿ ನಿಂತ ಕಲ್ಲು ಕೊರಡುಗಳಿಗೆ,
ಶೃಂಗಾರ ಹೂವ ಎಸಳಿನ ರಸಮಯ ವಾಸನೆಗೂ
ಒದ್ದೋಡದ ಕಲ್ಮಶ ಹೃದಯದ ಹುಲು ಮನಸುಗಳು
ಕೈ ಕಟ್ಟಿ ನಿಂತಿವೆ, ಸರಿ ಪಡಿಸುತ್ತಾನಂತೆ ಆ ಮಾಯಾವಿ

ತೇದಿದ ಗಂಧ ಹಲಸಿನೆಲೆಯ ಮಧ್ಯೆ, ಹಣೆಗೊಂದು ಬೊಟ್ಟು
ಹೊದ್ದ ಬಿಳಿಯ ಶಾಲಿನ ಮನಸಿನೊಳಗೆ ಮಸಿ ಕರಕಲು
ನಿಜವ ನುಡಿವುದಂತೆ ದೈವ, ಭರವಸೆಯ ಸಾಲುಮಾತು
ಕೇಳುತ್ತದೆ ಭೋಗ ಬರುವ ವರುಷದ ತವಕ, ಸ್ವರ್ಣದಾಸೆ
ಗುಡಿಗೋಪುರದ ವೈಭೋಗ ಭಾಗ್ಯ ಎಲ್ಲಾ ತೊರೆದವರಿಗೂ

ತಲೆಯಲ್ಲಾಡಿಸಿದ ತನುಗಳು ಹೊರಟು ನಿಂತಿವೆ ಎಲ್ಲಾ ಮರೆತು
ಒಪ್ಪಿದ್ದು ಗುಡಿಯೊಳಗಷ್ಟೆ, ಮನದೊಳಗಣ ಮಾತಲ್ಲ ನಾಲಗೆ ಮೇಲೆ
ಮೆದುಳು ಲೆಕ್ಕದ ಪರಿ ಕ್ಷಣ -ಹರಕೆ ಕುರಿಗಳ ತಲೆ ಕಡಿಯೋಣ
ಖುಷಿ ಪಟ್ಟಾನು, ಕಲ್ಲು ಗೋಡೆಯ ಮರದ ಗುಂಡದ ಒಳಗೆ
ನಾಲಗೆ ಹೊರಚಾಚಿ ಕಣ್ಣು ಬಿಟ್ಟು ಕೂತ ಮೂರ್ತಿಯೂ!

5 ಕಾಮೆಂಟ್‌ಗಳು:

  1. ಇಡೀ ಕವನ ಚಿಂತನೆಗೆ ಗ್ರಾಸವೊದಗಿಸಿದೆ ಪುಷ್ಪಣ್ನ.ನವ ಸಮಾಜದ ನಿರ್ಮಾಣಕ್ಕೆ ಟೊಂಕ ಕಟ್ಟಿ ನಿಲ್ಲಬೇಕಾದ ನಾವಿಂದು ದಾಸ್ಯದ ದಾಸರಾಗುತ್ತಿದ್ದೇವೆ.ವೈಚಾರಿ,ವೈಜ್ಙಾನಿಕ ಮನೋಭಾವ,ಸಂಶೋಧನಾ ದೃಷ್ಠಿ ಹೊಂದ ಬೇಕಾದ ಸಮಾಜವಿಂದು ಅಜ್ಙಾನ,ಅಂಧಾನುಕರಣೆಯ ಕತ್ತಲೆಯೊಳಗೇನೇ ವಿಹರಿಸುತ್ತಿರುವುದು.ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಕು ನಾವು ಮತ್ತೆ ಪರಕೀಯರ ತುತ್ತಾಗುವ ದಿನಗಳು ಬಂದರೂ ಬಂದಾವು ಎಂಬ ಅಳಕು ನನ್ನದು ಪುಷ್ಪಣ್ನ, ಏನಂತೀರಿ.ಕೊನೆಗೆ ದೇಶ ಕಟ್ಟುವ,ರಟ್ಟೆ ಮುರಿದು ಶ್ರಮವಹಿಸಿ ಹೋರಾಡುವ ಸಾಮಾನ್ಯನಿಗೆ ಯಾವ ಮಂಚವೂ ಸಿಗದು.ಆಳುವರು ಯಾರೋ ಆಳಿಸಿಕೊಳ್ಳುವವರು ಯಾರೋ? ನವ ಸಮಾಜದ ನಿರ್ಮಾಣಕ್ಕೆ ಜಾಗೃತ ಮನಸ್ಸುಗಳು ಎಚ್ಚೆತ್ತುಕೊಳ್ಳಬೇಕು.ಈ ಪೂಜೆ ಪುನಸ್ಕಾರಗಳ ಭರಾಟೆಯಲ್ಲಿ ಮೌಢ್ಯದ ಪ್ರಪಾತಕ್ಕೆ ಬಿದ್ದು ದೇಶ ಕತ್ತಲೆಯ ಪಾಡಾಗುವುದು.ಈ ಜನರ ನಂಬಿಕೆಗಳಲ್ಲಿ ನಾನೆಂದೂ ಆಟವಾಡುವುದಿಲ್ಲ.ಆದರೆ ಅರಿವಿನ ಜ್ಯೋತಿ ಮಾತ್ರ ಸದಾ ಬೆಳಗುತ್ತಲೇ ಇರಬೇಕು.ಬದುಕು ಕಟ್ಟಿಕೊಡುವ ಹಾಗೂ ತಮಂಧದ ಕತ್ತಲೆ ಅಳಿಸುವ ಕಾಯಕ ನಿತ್ಯವೂ ನಡೆಯುತ್ತಿರಲೇಬೇಕು.ನಿಮ್ಮೀ ಕವಿತೆ ಅಂತ ಪ್ರಯತ್ನವನ್ನು ಮಾಡಿದೆ.ನನಗೆ ತುಂಬಾ ಇಷ್ಟವಾಯಿತು.
    ತಲೆಯಲ್ಲಾಡಿಸಿದ ತನುಗಳು ಹೊರಟು ನಿಂತಿವೆ ಎಲ್ಲಾ ಮರೆತು
    ಒಪ್ಪಿದ್ದು ಗುಡಿಯೊಳಗಷ್ಟೆ, ಮನದೊಳಗಣ ಮಾತಲ್ಲ ನಾಲಗೆ ಮೇಲೆ
    ಮೆದುಳು ಲೆಕ್ಕದ ಪರಿ ಕ್ಷಣ -ಹರಕೆ ಕುರಿಗಳ ತಲೆ ಕಡಿಯೋಣ
    ಖುಷಿ ಪಟ್ಟಾನು, ಕಲ್ಲು ಗೋಡೆಯ ಮರದ ಗುಂಡದ ಒಳಗೆ
    ನಾಲಗೆ ಹೊರಚಾಚಿ ಕಣ್ಣು ಬಿಟ್ಟು ಕೂತ ಮೂರ್ತಿಯೂ!...........ಮನಸು ಭಾವುಕವಾಗುವುದು.ನಾವೆತ್ತ ಸಾಗುತ್ತಿದ್ದೇವೆ?

    ಪ್ರತ್ಯುತ್ತರಅಳಿಸಿ
  2. ಜನ ಮರುಳೋ ಜಾತ್ರೆ ಮರುಳೋ ಅಂತಾರಲ್ಲ ಹಾಗೆ ಪುಷ್ಪಣ್ಣ.ನಿಮ್ಮ ಈ ಇಡೀ ಕವನವೇ ಪರಿಪೂರ್ಣ ಚಿಂತನೆಗೆ ಗ್ರಾಸವೊದಗಿಸಿದೆ.ನವ ಸಮಾಜದ ನಿರ್ಮಾಣ ಇಂದಿನ ಅಗತ್ಯ.ಆದರೆ ಪೂಜೆ-ಪುನಸ್ಕಾರಗಳ ಭರಾಟೆಯಲ್ಲಿ ನೈಜತೆಯ ಸದ್ದಡಗಿಸಿ ಮೌಢ್ಯತೆ ಬಿತ್ತನೆಯ ವ್ಯವಸ್ಥಿತ ಸಂಚಕಾರ ನಡೆಯುತ್ತಿರುವುದು ಇಂದಿನ ದುರಂತ.ನಮ್ಮ ನಮ್ಮ ನಂಬಿಕೆಗಳಿಗೆ ಸೀಮಿತವಾಗಬೇಕಾದ ಆಚರಣೆಗಳು ಸಾರ್ವತ್ರಿಕಗೊಂಡು ಮತ್ತಷ್ಟು ಹದಗೆಡುತ್ತಿರುವ ಸ್ಥಿತಿಯನ್ನು ನೋಡಿದರೆ ಮನ ರೋಷುವುದು.ಈ ಜನರಿಗೇನಾಗಿದೆಯೋ ನಾ ಕಾಣೆ.ಕನಿಷ್ಠ ಇನ್ನೂ 2 ತಲೆಮಾರು ಬೇಕಾಗಬಹುದೇನೋ ಈ ಕಂದಾಚಾರ.ಅಂಧಾನುಕರಣೆಗಳ ಹುಟ್ಟಡಗಲು!!!!!ಆದರೂ ಈ ಸಂಪ್ರದಾಯ ಹೀಗೆಯೇ ಮುಂದುವರೆದರೆ ವೈಚಾರಿಕ,ಸಂಶೋಧನಾ ಮನೋಭಾವ ,ವೈಜ್ಙಾನಿಕ ತಿಳುವಳಿಕೆ ಜಾಗೃತಗೊಳ್ಳದೇ ಹೋದರೆ ಮತ್ತೆ ಪರಕೀಯರು ನಮ್ಮನ್ನು ದಾಸ್ಯಕ್ಕೀಡುಮಾಡುವ ದಿನಗಳು ಬಂದಾವು ಎಂಬ ಅಳಕು ನನ್ನದು.ನಂಬಿಕೆಗಳೊಂದಿಗೆ ನಾನು ಆಟವಾಡಲು ಇಷ್ಟ ಪಡಲಾರೆ ಆದರೆ ಅರಿವಿನ ಜ್ಯೋತಿ ಮಾತ್ರ ಬೆಳಗುತ್ತಲೇ ಇರಬೇಕು.ಏನಂತೀರಾ? ಕೊನೆಗೆ ದೇಶ ಕಟ್ಟಲು,ರಟ್ಟೆ ಮುರಿಯಲು ಯಾರದೋ ಶ್ರಮ.ಆದರೆ ಆಳಿ ಅನುಭವಿಸುವವರು ಮಾತ್ರ ಇನ್ನಾರೋ......?

    ಪ್ರತ್ಯುತ್ತರಅಳಿಸಿ
  3. ಕವಿತೆಯ ಕುರಿತು ಹೇಳಬಹುದಾದ ಎಲ್ಲ ಪ್ರಶಂಸೆಯ ಮಾತುಗಳು ಈಗಾಗಲೇ ಬಂದಿವೆ,
    ಮೌಢ್ಯದ ವಿರುದ್ಧ ನಾವು ನೀವು ವೈಜ್ಞಾನಿಕವಾಗಿ ದನಿಯೆತ್ತಿದರೂ ಆ ಸಂಪ್ರದಾಯದ ಅವಶ್ಯಕತೆ ಕುರಿತು ಸೂಕ್ತ ಕಾರಣ ವಿವರಿಸಿ ದನಿಯೆತ್ತುವವರೂ ಇರಬಹುದು,ಅದರ ಆಳ ನಮಗೆ ಅರಿಯದಿರಬಹುದು.
    ಉತ್ತಮ ಲೇಖನ

    ಪ್ರತ್ಯುತ್ತರಅಳಿಸಿ
  4. ಅದ್ಭುತವಾದ ಪರಿಪೂರ್ಣ ಕವಿತೆ ಪುಷ್ಪಣ್ಣ.. ಕೇವಲ ಅವರಿವರ ಬಾಯಲ್ಲಿ, ಸಿನೆಮಾಗಳಲ್ಲಿ ಇಲ್ಲ ಕಲ್ಪನೆಯಲ್ಲಿ ಕಂಡು ಕೇಳರಿತ ತುಳು ನಾಡಿನ ಭೂತಾರಧನೆಯ ಕಪಟ ಮುಖವನ್ನು ಪರಿಪಕ್ವ ಪದಗಳ ಸಹಾಯ ಪಡೆದು ಬೆತ್ತಲು ಮಾಡಿದೆ ನಿಮ್ಮ ಕವಿತೆ.. ಕವಿತೆಯಲ್ಲಿ ಪರಿಪಕ್ವತೆ ತುಳುಕುತ್ತದೆ, ನೀವೇ ಕಣ್ಣೆದುರು ಕಂಡ ಅನುಭವಗಳ ಧಾರೆಯೇ ಕವಿತೆಯಾಗಿರುವುದು ಆ ಆರಾಧನೆಯಲ್ಲಿರುವ ಹುಳುಕುಗಳನ್ನು ಸಮರ್ಥವಾಗಿ ಅರ್ಥೈಸಿ ಕವನೀಕರಿಸುವಲ್ಲಿ ನಿಮಗೆ ಸಹಕರಿಸಿದೆ.. ನನಗಂತು ದೇವರು ಮಾನವನ ಮೇಲೆ ಅವಾಹನೆಗೊಳ್ಳುತ್ತಾನೆಂಬ ಕಲ್ಪನೆಯೇ ಅತಿಯೆನಿಸುತ್ತದೆ, ಸಹ್ಯವೆನಿಸುವುದೇ ಇಲ್ಲ.. ನನ್ನ ಭಾವಗಳೇ ಕವಿತೆಯಲ್ಲಿ ಮಾತನಾಡಿವೆನಿಸುತ್ತದೆ.. ಅವರ ಹಾವ ಭಾವಗಳಲ್ಲಿನ ನಿಮ್ಮ ವರ್ಣನೆ ಅವರ ವೇಷ-ಭೂಷಣಗಳಲ್ಲಿನ ಭಯಂಕರತೆಯನ್ನು ಮತ್ತು ಆಚಾರ-ವಿಚಾರಗಳಲ್ಲಿನ ಭೀಕರತೆಯ ನೈಜ ಅನಾವರಣ.. ದೇವರ ಹೆಸರಿನಲ್ಲಿ ಕ್ರೌರ್ಯ ಮತ್ತು ಅಮಾನವೀಯ ಕೃತಿಗಳೆ ವಿಜೃಂಭಿಸುತ್ತವೆ ಮತ್ತು ಅವುಗಳನ್ನು ಯಾವುದೇ ಚಕಾರವೆತ್ತದೆ ಒಪ್ಪಿಕೊಳ್ಳುತ್ತಿರುವ ನಮ್ಮ ಜನರ ಮನಸ್ಥಿತಿಗಳ ಬಗ್ಗೆ ಮನ ಮರುಗುತ್ತದೆ.. ಮೂಡನಂಬಿಕೆಗಳ ಜಾಡಿಗೆ ಜೋತುಬಿದ್ದ ಜನರ ಮನಸ್ಥಿತಿಗಳು ಹೇಗಿರುತ್ತವೆಂದರೆ ಅವುಗಳನ್ನು ವೈಚಾರಿಕ ನೆಲೆಯಲ್ಲಿ ಪ್ರಶ್ನಿಸಹೊರಟವರ ಮೇಲೆ ಆ ದೇವರ ಕೆಂಗಣ್ಣು.. ಚೆಂದವಾದ ಕವಿತೆ, ಮನದಲ್ಲಿನ ವೈಚಾರಿಕ ಮನಸ್ಥಿತಿಯನ್ನು ಬಡಿದೆಚ್ಚರಿಸುತ್ತದೆ..

    ಪ್ರತ್ಯುತ್ತರಅಳಿಸಿ
  5. ಅರೆ ಗಳಿಗೆಯ ಮುಂಚೆ ಮದ್ಯದಮಲಿನಲಿ ತೇಲುತ್ತಿದ್ದ
    ಇವನು ಈಗ ಶುದ್ಧ, ಒಂದು ಕೊಡಪಾನದ ನೀರ ಸ್ನಾನ....
    ಕವನದಲ್ಲಿ ತುಂಬಾ ನೈಜತೆ ಇದೆ, ನಗ್ನ ಸತ್ಯ ಕಣ್ಣಿಗೆ ರಾಚುತ್ತಿದೆ
    - ನಂದೀಶ್ ಕುಮಾರ್

    ಪ್ರತ್ಯುತ್ತರಅಳಿಸಿ