ಶನಿವಾರ, ಮಾರ್ಚ್ 31, 2012

ಜಡಮನಸ್ಸು ಮತ್ತು ಒಣಗದ್ದೆ!

ಮೊನ್ನೆ ಬೀಸಿದ ಬಿರುಸು ಮಳೆಗೆ
ತೊರೆಗಳಲಿ ಹರಿಯುತ್ತಿದ್ದ ನೀರಿಗೆ
ಅಡ್ಡಕಲ್ಲುಗಳನಿಟ್ಟು ನೀರು ಹಾಯಿಸಿದ್ದೆ
ಮೇ ತಿಂಗಳಿನ ಒಣಗಿದ ಗದ್ದೆಗೆ!

ಸೂರ್ಯಶಾಖಕೆ ಕಲ್ಲುಗಟ್ಟಿದ
ಕೆಸರಬಂಡೆ ಚುರುಗುಟ್ಟುತ್ತಿತ್ತು,
ನೀರ ಕುಡಿದು ಮತ್ತೆ ಉಸಿರು ಬಿಡುತ್ತಿತ್ತು!

ಹಾಯಿಸುತ್ತಲೇ ಇದ್ದೆ ಮಳೆನೀರ
ಮತ್ತೆ ಮತ್ತೆ, ಹೆಪ್ಪುಗಟ್ಟಿದ್ದ ಜಡ
ಮಣ್ಣಿನ ಗಂಟ ಬಿಡಿಸಲು!

ನೊಗ ಕಟ್ಟಿ ಎತ್ತ ಹೆಗಲಿಗೆ, ಮತ್ತೆ
ಅಣಿಯಾಗಿಸುವ ತವಕ ಕೆಸರಗದ್ದೆಯಲಿ
ಹದಗೊಳಿಸಿ ಪೈರ ಚಿಗುರಿಸಲು!

ಬೇಡುತ್ತೇನೆ ಮಳೆ ನಿಲ್ಲದಿರಲೆಂದು,
ಹರಿವ ತೋಡು-ತೊರೆಗಳು ಬತ್ತದಿರೆ
ನಾಟಿ ಚಿಗುರಿ, ಬಲಿತು ತೆನೆಗಟ್ಟಿದ
ಹಸಿರು ಪೈರ ಉಸಿರ ಸವಿಯಲು!

ಬುಧವಾರ, ಮಾರ್ಚ್ 28, 2012

ಮತ್ತೆ ಹನಿ, ಹಳ್ಳವಿಲ್ಲದ ಕಡಲು!

ಜೇಡಿ ಮಣ್ಣಿನ ಒಸರು, ಕಲ್ಲು ಬಂಡೆಯೂ ಮೆದುವು, ಅಲ್ಲಿ ನೀರ ಸೆಲೆ
ಹನಿ, ಮತ್ತೆ ಹನಿ, ಕೂಡಿ ಕೂಡಿ ಹಳ್ಳ, ಪಾಚಿಗಟ್ಟಿ ಹಸಿರು ನೀರು,
ಒಸರುತ್ತಲೇ ಇದೆ ಬದುಕು, ಹಳ್ಳ ದಿಣ್ಣೆಯೇರಿ ಊರ ಕೇರಿಯೊಳಗೆ!

ಹರಿಯುತ್ತಲೇ ಮುಂದೆ ಅಲ್ಲಲ್ಲಿ ಬೆಟ್ಟ ಗುಡ್ಡಗಳ ನಡುವೆ ಓಣಿ ಕಣಿವೆ
ಧುಮುಕಿ ಮತ್ತೆ ನಗುವು, ತಲೆ ಕೊಟ್ಟ ನೆಲಕ್ಕೊಂದಷ್ಟು ತೂತು ಹೊಂಡ
ನೊರೆ, ಬುರುಗು, ತೇಲಿಬಂದ ಒಣಕಡ್ಡಿ, ನರ ಸತ್ತ ಹೆಣ ಮಣ ಭಾರ!

ಕಾಡು ಮೇಡು ಕಲ್ಲು ಬಂಡೆ, ದಂಡೆಗೆ ಕಾಲನಿಟ್ಟು ನೀರು ಕುಡಿವ ನರಿ
ಹಸಿಮಾಂಸ ಮೆತ್ತಿದ ನಾಲಗೆಯ ಒಂದು ಹನಿ ರಕ್ತದ ತುಟುಕು ಹರಿವಿಗೆ,
ಕೆಂಪಾಗುವುದಿಲ್ಲ ಸಾವಿರಹನಿಗಳು ನೆತ್ತರು ಕರಗಿ ಮತ್ತೆ ನೊರೆ ಬುರುಗು!

ಮರಳ ಸೀಳಿ ಆಲದ ಬೇರು, ಹಸಿರ ನಾಲಗೆ ಚಾಚಿ ಚೂರಿ ಮುಳ್ಳು
ಎಲ್ಲಾ ನೀರ ಕುಡಿತ, ಆದರೂ ಆರುವುದಿಲ್ಲ ಜೇಡಿಯೊಸರು, ಜೀವಸೆಲೆ,
ಅಡ್ಡ ಮತ್ತದೇ ಮಣ್ಣ ಬುಡ್ಡೆ, ಅಣೆಕಟ್ಟು, ಉಬ್ಬುತ್ತವೆ ನೀರ ಕುಡಿವ ಹಲಗೆಗಳು!

ಹೊಲಸ ತೊರೆಗಳ ಕಚಗುಳಿ, ಎಡಬಲಕೆ ವಾಕರಿಕೆಯ ಮೀರಿ,
ಕಲ್ಲುಕರಗಿ ಮರಳು, ಸೀಳುನಾಲಿಗೆ ಹಾವು, ಮೀನ ಕಿವಿರ ಒಡಲಹಾಡು
ತಿಮಿಂಗಿಲದ ಚೂಪುಹಲ್ಲಿಗೆ ಹರಿವ ನೀರೂ ಸೀಳು, ಎಲುಬು ನಿತ್ರಾಣ!

ಒಸರಿದಲ್ಲಿಂದ ಹೀಗೆ ಕೊಸರಿ ಮತ್ತೀಗ ಕಡಲ ತಡಿ, ಅಲ್ಲಿ ಭೋರ್ಗರೆತ
ಕೋಟಿ ಹನಿಗಳ ಕೊತ್ತಲದೊಳಗೆ ಮತ್ತೆ ಹನಿಯಾಗಬೇಕು ಎಲ್ಲಾ ಮರೆತು
ಬಿಸಿಯಪ್ಪುಗೆ ಉಪ್ಪನೀರ ಸಾರದೊಳಗೆ, ಮತ್ತೆ ಹನಿ, ಹಳ್ಳವಿಲ್ಲದ ಕಡಲು!
======

ಶುಕ್ರವಾರ, ಮಾರ್ಚ್ 16, 2012

ಮತ್ತೆ ಬಾರದಿರು!

ಹೊತ್ತು ತರದಿರು ಮತ್ತೆ ದುರ್ಬರಗಳ ಮೆತ್ತೆ,
ಹನಿಯಿರದು ಕಣ್ಣೊಳಗೆ ಬರಿದು ಬರಡು
ಕೊನೆಯಾಗಿದೆ ಕಂಡ ಭಾವಗಳ ಕನಸು!
ಮತ್ತೆ ಬಾರದಿರು, ಬರಡೀಗ ಈ ಮನಸು!

ಕಣ್ಣೀರ ಕಡಲೊಳಗೆ ಮುಳುಗಿದ ಕೆನ್ನೆ
ಒಲವ ಚರ್ಮವೂ ಸುಕ್ಕು, ಒಣ ತುಟಿಯು
ಬಣಗುಡುವ ಮೆದುಳು ಹರಿವ ನೆತ್ತರು ನಿಂತು!

ತಲೆಕೆರೆವೆ ಅಲ್ಲಲ್ಲಿ ನೋವುಗಳ ಉಂಡು
ಎಳೆವ ಉಸಿರಲೂ ಬಿಸಿಯ ಕಾವ ಬುಗ್ಗೆ
ತಣ್ಣಗಾವುದಿಲ್ಲಿ ನೊಂದು ಬೆಂದ ಮನಕೆ?

ಮುರುಟಿಹೋದೀತು ಮಿಡಿವ ಹಿಡಿಜೀವ,
ಮರುಗದಿರು ಮನವೇ, ಮುದುಡದಿರು ನೀನು
ಮರಳಿ ತರದಿರು ನೋವ ಬದುಕಿನಂಗಳಕೆ!


ಸೋಮವಾರ, ಮಾರ್ಚ್ 12, 2012

ಜಾರಿತೇ ಮನ?

ಅಂಗಳದ ಬಾಗಿಲ ಗೋಡೆಗೆ ತಲೆಯಾನಿಸಿದ್ದೆ
ಅರಳಿದ ಒಂಟಿ ಗುಲಾಬಿಯಂದಕೆ ಮನಕರಗಿ
ಹಸಿರು ಪುಟಿದೆದ್ದ ಗೆಲ್ಲುಗಳಲಿ ಚೆಲುವ ಚಿಲುಮೆ!

ಕ್ಷಣ ನಕ್ಕೆ, ನಿನ್ನೆ ನೀರುಣಿಸಿದ ನೆನಪೊಳು
ಚುಚ್ಚಿದ ಮುಳ್ಳಿಗೆ ಕಿರುಬೆರಳಿನ ಗಾಯ-
ಮಾಸಿರಲಿಲ್ಲ, ಗುಲಾಬಿಯ ಮಂದಸ್ಮಿತ!

ನಗುತ್ತಾಳೆ ಎಳೆ ಪಕಳೆಗಳ ತುಟಿ ಬಿಚ್ಚಿ
ಸಹೋದರಿಯವಳೆನಗೆ ಸಂಬಂಧದೊಳು
ನೀರುಣಿಸಿ ಕಾಯ್ವ ಈ ಮನಸಿಗೆ!

ಗೋಡೆಗಾನಿಸಿದ ತಲೆ, ಮರೆವು ಕ್ಷಣ,
ನಲುಗುತ್ತಿದೆಯಲ್ಲಿ ಚೆಂಗುಲಾಬಿಯಧರ
ದುಂಬಿ ಹೀರುತ್ತಿದೆ ತುಟಿಯಿತ್ತು ಪರಾಗ!

ನಾ ಮರೆತ ಕ್ಷಣ ದುಂಬಿಗೇ ಮಧುರವೇ
ನಲುಗಿದೆಯೇ ಮಧುರ ಪಕಳೆಗಳು?
ಒಂದು ಹನಿ ಕಣ್ಣೀರು ಜಾರಿದಂತೆ ಅಲ್ಲಿ
ಗೋಡೆಯೂ ಹಾಡುತಿತ್ತು ದುಂಬಿಯಂತೆ!

ಶನಿವಾರ, ಮಾರ್ಚ್ 10, 2012

ದೇವರು ನಕ್ಕಿದ್ದಾನೆ!

ಗುಡಿ ಕಟ್ಟುತಾನಂತೆ ಗುಡಿ
ಅವರಿವರಿಂದ ಕಲ್ಲುಗಳ ಕೆತ್ತಿಸಿ.
ಗುಡಿ ಕಟ್ಟುತಾನಂತೆ ದೇವರನ್ನಿಡಲು
ಉರಿವ ದೀಪದ ಹಿಂದೆ ಹೊಗೆ-
ಬಿಡುವ ಊದುಬತ್ತಿಗಳ ಉರಿಸಿ
ದೇವರ ಕಣ್ಣುರಿಸಲು ಗುಡಿ ಕಟ್ಟುತಾನಂತೆ!

ಕಲ್ಲು ಕೆತ್ತಿ ಕೊಟ್ಟವನ ಕೈಹಿಡಿದವಳ
ಹೊಟ್ಟೆಯೊಳಗೆ ತನ್ನ ಬಿಳಿ ನೆತ್ತರು
ಚೆಲ್ಲಿ ಅವಳ ಗರ್ಭದ ಒಳಗೆ ತನ್ನ
ಹೆಸರ ಅಮೃತಶಿಲೆಯಲ್ಲಿ ಕೆತ್ತಿಸಿದ್ದಾನೆ!

ಗೊತ್ತಾಯಿತಲ್ಲ ನಿಮಗೆ ಅವನು ಕೂರಿಸಿದ್ದ
ದೇವರನ್ನಲ್ಲ, ಇನ್ನೂ ಕಣ್ಣು ಬಿಡದ ಆತ್ಮ!
ನಿನ್ನೆ ಪಾಳು ಬಿದ್ದಿದ್ದ ಕಲ್ಲಿಗೆ ಜೀವ ಕೊಟ್ಟವನ
ಕಣ್ಣಿಗೆ ಖಾರದ ಪುಡಿ ಎರಚಿ ಕಣ್ಣೀರು ಬರಿಸಿ
ಕೊಚ್ಚೆಯಲಿ ಕೊಳೆತು ಹೋಗುವ ಜೀವಕ್ಕೆ
ಅಡಿಪಾಯ ಹಾಕಿ ಗೋಪುರ ನಿಲ್ಲಿಸಿದ್ದ ಗುಡಿಗೆ!

ಏರಿ ನಿಂತ ಮಣ್ಣ ಗುಡ್ಡೆಗಳ ಹಿಚುಕಿ
ಗರ್ಭಗುಡಿಗೆ ತಳಪಾಯ ಅಗೆವಾಗ
ಹೊರಗೆ ಬಿಸಿಲಲ್ಲಿ ಬಿದ್ದ ಕಲ್ಲಿಗೆ
ಬೀಳುವ ಉಳಿಪೆಟ್ಟುಗಳ ಸದ್ದು
ಇವನ ಕಿವಿಯಲಿ ರುಂಯ್ಯ್ ಗುಡಲಿಲ್ಲ
ಕೆತ್ತುವವ ಕೆತ್ತುತ್ತಲೇ ಇದ್ದ,
ಸದ್ದು ಮಾತ್ರವಿಲ್ಲಿ ಹಂಚಿಲ್ಲದ ಢೇರೆಯೊಳಗೆ!

ಬಿಸಿಯ ಕಲ್ಲಿಗೆ ಬಿದ್ದ ನರಪೇತಲ ಬೆವರು
ಆವಿಯಾದದ್ದು ಕಾಣಲೇ ಇಲ್ಲ, ಪಸೆಯಾರಿದ
ನಾಲಗೆಯಲ್ಲೂ ಹನಿ ನೀರಿರಲಿಲ್ಲ..
ಕಣ್ಣು ಬರೆದಿದ್ದ, ಮೂಗು ಎಳೆದಿದ್ದ
ನಾಲಗೆ ಬಿಡಿಸಲಿನ್ನೂ ಬಾಕಿ,
ಮುಗಿದಿರಲಿಲ್ಲ ಒಳಗೆ ಕೂಡ
ದ್ವಾರ ಬಾಗಿಲಿನ ಮುಖವರ್ಣಿಕೆಗೆ
ಉಳಿಯ ಪೆಟ್ಟು ಬೀಳುತ್ತಲೇ ಇತ್ತು!

ಒಂಬತ್ತರ ಗಡುವು, ಕಲ್ಲ ಗುಡಿಯೊಳಗೆ
ದೇವರು ಅಗರಬತ್ತಿಯ ಹೊಗೆಯೆಳೆಯಬೇಕು
ಗೋಪುರದ ದೀಪವರಳಬೇಕು, ಮಂತ್ರಗಳ
ಉಲಿಯಿರಬೇಕು, ಉಳಿಯ ಪೆಟ್ಟನು ಮರೆತು
ನಿಂತ ದೇವರೂ ನಗಬೇಕು, ಕಲ್ಲು ಕಂಬಗಳೂ
ಕೆತ್ತಿದವನಿಗೇ ತೀರ್ಥಪ್ರಸಾದವನೀಯಬೇಕು!
*

*
ಚಿತ್ರಕೃಪೆ=ಗೂಗಲ್ ಇಮೇಜಸ್.

ಗುರುವಾರ, ಮಾರ್ಚ್ 1, 2012

ಚರಂಡಿ ಮತ್ತು ಮನೆಯ ಮನಸ್ಸು!

ನೆಲಕ್ಕಂಟಿದ ಧೂಳು, ಕಸಗಳ ಮೆತ್ತೆ
ಅಲ್ಲಲ್ಲಿ ಕರಿಛಾಯೆ, ದುರ್ನಾತಗಳ ಗೂಡು
ಮೂಗು ಹಿಡಿದಂತೆ, ಉಸಿರು ಅಸಹ್ಯ
ನವ ಬಾಗಿಲಲೂ ಚರಂಡಿಯ ಗಾಳಿ!

ಕಣ್ಣು ಬಿಟ್ಟ ಕಿಟಕಿಯ ಇಣುಕು
ತುಂಬುತ್ತದೆ ಒಳಗೆ ಧೂಳಕಣ
ಜಿರಲೆ,ಹಲ್ಲಿ, ತಿಗಣೆಗಳ ಹಿಕ್ಕೆಗೆ
ಕಿವಿಯೊಡ್ಡಿ ಮಲಗಿದೆ ಗೋಡೆ!

ತೇಲುತ್ತಿದೆ ಅಡುಗೆ ಮನೆಯಲಿ
ಬಾಯಿ ಬಿಟ್ಟ ಕೊಳೆಯ ಜಿಡ್ಡು
ರಾಶಿ ಬಿದ್ದ ಪಾತ್ರೆಗಳ ಮೈ
ವಾಕರಿಕೆ, ಹಳಸಲು ದುರ್ಗಂಧ!

ಪಾಚಿಗಟ್ಟಿದ ಪಾಯಖಾನೆ
ನಾರುತ್ತಿದೆ ಹೊಲಸು ತುಂಬಿ
ಹುಳವಲ್ಲಲ್ಲಿ ಇಣುಕುತ್ತಿದೆ
ನೀರಹನಿಯಿಲ್ಲ, ಬರಡು!

ನಾರುತ್ತಿದೆ ಹಾಸಿಗೆ, ಹಾಸಿದ
ರಗ್ಗಿನಲೂ ಬೆವರಿನ ಘಮಲು
ಸೋರಿದ ನಾಲಗೆಯ ಜೊಲ್ಲಿಗೆ
ತಲೆದಿಂಬಿಗಂಟಿದ ಜಿಡ್ಡು..!

ಎಲ್ಲವೂ ಕೊಳಕು ಗೂಡು-
ಗಟ್ಟಿದ ಜೇಡನ ಜೊತೆ,
ಸೊಳ್ಳೆಯ ತಿಣುಕಾಟ!
ಕೋಣೆಯಲಿ ಉರಿವ ಒಂಟಿ
ದೀಪದ ಮಂದ ಬೆಳಕಿಗೆ
ಮಸುಕಲಿ ನಗುವ ದೇವನ ಮುಂದೆ
ಮೂರು ಊದಿನಕಡ್ಡಿಯ
ಹೊಗೆ, ಜೊತೆಗೊಂದಿಷ್ಟು ಬೂದಿ!