ಗುರುವಾರ, ಮಾರ್ಚ್ 1, 2012

ಚರಂಡಿ ಮತ್ತು ಮನೆಯ ಮನಸ್ಸು!

ನೆಲಕ್ಕಂಟಿದ ಧೂಳು, ಕಸಗಳ ಮೆತ್ತೆ
ಅಲ್ಲಲ್ಲಿ ಕರಿಛಾಯೆ, ದುರ್ನಾತಗಳ ಗೂಡು
ಮೂಗು ಹಿಡಿದಂತೆ, ಉಸಿರು ಅಸಹ್ಯ
ನವ ಬಾಗಿಲಲೂ ಚರಂಡಿಯ ಗಾಳಿ!

ಕಣ್ಣು ಬಿಟ್ಟ ಕಿಟಕಿಯ ಇಣುಕು
ತುಂಬುತ್ತದೆ ಒಳಗೆ ಧೂಳಕಣ
ಜಿರಲೆ,ಹಲ್ಲಿ, ತಿಗಣೆಗಳ ಹಿಕ್ಕೆಗೆ
ಕಿವಿಯೊಡ್ಡಿ ಮಲಗಿದೆ ಗೋಡೆ!

ತೇಲುತ್ತಿದೆ ಅಡುಗೆ ಮನೆಯಲಿ
ಬಾಯಿ ಬಿಟ್ಟ ಕೊಳೆಯ ಜಿಡ್ಡು
ರಾಶಿ ಬಿದ್ದ ಪಾತ್ರೆಗಳ ಮೈ
ವಾಕರಿಕೆ, ಹಳಸಲು ದುರ್ಗಂಧ!

ಪಾಚಿಗಟ್ಟಿದ ಪಾಯಖಾನೆ
ನಾರುತ್ತಿದೆ ಹೊಲಸು ತುಂಬಿ
ಹುಳವಲ್ಲಲ್ಲಿ ಇಣುಕುತ್ತಿದೆ
ನೀರಹನಿಯಿಲ್ಲ, ಬರಡು!

ನಾರುತ್ತಿದೆ ಹಾಸಿಗೆ, ಹಾಸಿದ
ರಗ್ಗಿನಲೂ ಬೆವರಿನ ಘಮಲು
ಸೋರಿದ ನಾಲಗೆಯ ಜೊಲ್ಲಿಗೆ
ತಲೆದಿಂಬಿಗಂಟಿದ ಜಿಡ್ಡು..!

ಎಲ್ಲವೂ ಕೊಳಕು ಗೂಡು-
ಗಟ್ಟಿದ ಜೇಡನ ಜೊತೆ,
ಸೊಳ್ಳೆಯ ತಿಣುಕಾಟ!
ಕೋಣೆಯಲಿ ಉರಿವ ಒಂಟಿ
ದೀಪದ ಮಂದ ಬೆಳಕಿಗೆ
ಮಸುಕಲಿ ನಗುವ ದೇವನ ಮುಂದೆ
ಮೂರು ಊದಿನಕಡ್ಡಿಯ
ಹೊಗೆ, ಜೊತೆಗೊಂದಿಷ್ಟು ಬೂದಿ!

4 ಕಾಮೆಂಟ್‌ಗಳು:

  1. ಒಂದಕ್ಕೊಂದು ಬೆಸೆದುಕೊ೦ಡ ಗಟ್ಟಿ ಭಾವಗಳು ನೀವೇ ಉಲ್ಲೇಖಿಸಿದಂತೆ ಜೇಡನ ಬಲೆಯಲ್ಲಿ ಅಪ್ಪಿಕೊಂಡಿದೆ ಅಣ್ಣ. ಸಲೀಸಾಗಿ ಓದಿದಂತೆ ಅಗಾಧವಾಗಿ ತೆರೆದುಕೊಳ್ಳುವ ಸೂಕ್ಷ್ಮತೆಗಳು ಖುಷಿ ಕೊಡುತ್ತವೆ. ತುಂಬಾ ಚೆನ್ನಾಗಿದೆ ಕವಿತೆ.

    ಪ್ರತ್ಯುತ್ತರಅಳಿಸಿ
  2. ನಮಸ್ತೆ ಪುಷ್ಪಣ್ಣ.. ಕವಿತೆಯ ವಿಚಾರದ ಚಿಂತನೆ ಅರ್ಥಪೂರ್ಣ ಮತ್ತು ಮೇಲ್ನೋಟಕ್ಕೆ ಕಲ್ಪನೆಯಲ್ಲಿ ಕಾಣುವ ಕಸದ ಕೊಳಕು ಮಾನವನ ಜೀವನಕ್ಕೆ ಬದಲಾವಣೆಯ ಒಂದು ಸಂದೇಶ ಹೇಳುತ್ತಿದೆ.. ಸೂಕ್ಷ್ಮ ಚಿಂತನೆಯ ಅವಶ್ಯಕತೆ ಇಲ್ಲಿ ಆ ಸಂದೇಶವನ್ನು ಅರಿಯಲು .. ಸಾಮಾನ್ಯ ಸತ್ಯ ಆದರೂ ಕೊಳಕನ್ನು ಆದಷ್ಟು ಬೇಗನೆ ಶುದ್ದ ಮಾಡಲೇಬೇಕು (ಒಮ್ಮೆ ಮಾಡಿದರೂ ಸಹ ಮತ್ತೆ ಮತ್ತೆ ಮಾಡಲೇಬೇಕು) ಇದುವೇ ಜೀವನ ಸತ್ಯ .. ಕಾಯಕವೇ ಕೈಲಾಸ ಎನ್ನುವ ನುಡಿಯ ನೆನಪಾಗುತ್ತದೆ.. ಬರೆಯುತ್ತಾ ಹೋದಂತೆ ಹಲವಾರು ಭಾವ ಸೃಷ್ಟಿ ಅಡಗಿದೆ.. ಸಧ್ಯಕ್ಕೆ ಈಗ ಇಷ್ಟಕ್ಕೆ ನಿಲ್ಲಿಸುತ್ತಾ .. ಶುಭ ಕೋರುತ್ತಾ ವಂದನೆಗಳು.. :)

    ಪ್ರತ್ಯುತ್ತರಅಳಿಸಿ
  3. ದಿನಾ ಇಂತಹ ಕಷ್ಮಲಗಳನ್ನು ತೆಗೆದು ಹಾಕದಿದ್ದರೆ ತುಂಬಾ ಕಷ್ಟ
    ಮನವಾಗಲೀ ಮನೆಯಾಗಲೀ ಊರು ಕೇರಿಯಾಗಲೀ
    ದೂರವಿದ್ದರೂ ಸಹಾ ಗಾಳಿಯಾದರೂ ಬಂದೇ ಬರುತ್ತದೆ
    ತುಂಬಾ ಅರ್ಥ ಗರ್ಭಿತವಾಗಿದೆ ಪುಷ್ಪರಾಜರೇ

    ಪ್ರತ್ಯುತ್ತರಅಳಿಸಿ
  4. ಮನೆ ಮನಸ್ಸಿಗಂಟಿದ ಕಲ್ಮಶಗಳ ಕುರಿತ ಅದ್ಭುತ ಕವಿತೆ.. ಸರಾಗವಾಗಿ ಓದಿಸಿಕೊಂಡಿತು.. ಅದ್ಭುತ ಭಾವ ವೈಖರಿ.. ಬಹಳ ಹಿಡಿಸಿತು ಪುಷ್ಪಣ್ಣ :)

    ಪ್ರತ್ಯುತ್ತರಅಳಿಸಿ