ಮಂಗಳವಾರ, ಮೇ 28, 2013

ಆಯ್ಕೆ!

ಅಂದು ಕವಲೊಡೆದಿತ್ತು ಎಡಕೂ ಬಲಕೂ
ಸಾಗಲೆತ್ತ? ಮನವೇ ಆಯ್ಕೆ ನಿನಗಿತ್ತೆ!
ವೈಶಾಖದ ಝಳಕೆ ಒಣಗಿದೆಲೆಗಳ ಹಾಸು,
ಸವೆದು ನಿಂತಿದ್ದವೆರಡೂ ನನ್ನೆದುರು!

ಸಾಗಿದಂತಿದೆ ಬಂದವರೆಲ್ಲರೂ ಎಡಕೆ
ಕರಗಿ ನಿಂತಿದೆ ಹಾಸು ಪಾದಗಳ ಬಲಕೆ!
ಬಲವಿನ್ನೂ ಹಸಿರು, ಸಾಗಲೇ ನಾನಲ್ಲಿ?
ಅಹುದೆನುವ ನಿನ್ನುತ್ತರಕೆ ಹೆಜ್ಜೆ ಮರುಗಿತ್ತು!

ಎಡ ಬಿಡಬೇಕಲ್ಲವೆನುವ ಚಿಂತೆಯಲೂ
ನಾ ಬಲಕೆ ಎಡವೆನಗೆ ಬಲುದೂರವೀಗ,
ಮುಂದಡಿಯಿಡುವುದದೇನು ತಿರುಗುವುದಕೆ?

ಅಡಿಯಿಟ್ಟಾಗಿದೆ, ನಿಟ್ಟುಸಿರೊಂದೆ ಜೊತೆಯು
ಕೊಂಚವೂ ನೋವಿಲ್ಲ, ಚಿಂತೆಯೂ ಇಲ್ಲ,
ಹಸಿರಿರದಿರೂ, ಹಸಿವಿರೆ ನಡೆಯೊಳಗೆ!

===
ಚಿತ್ರಕೃಪೆ: ಗೂಗಲ್ ಇಮೇಜಸ್

ಮಂಗಳವಾರ, ಮೇ 21, 2013

ಹಾಸಿಗೆಯೂ, ಮನಸೂ!

ಮೇಲೆಳೆದ ಹೊದಿಕೆಯೊಳಗದರ ನಗು
ಒತ್ತಿದ್ದಷ್ಟು ತಗ್ಗುತ್ತದೆ ಮತ್ತೆ ಹಿಗ್ಗಿ,
ಮೆದುವದು ಮುದವನೀಯುತ್ತದೆರಗಿದೊಡೆ!

ಬಿದ್ದವನಿಗೊಂದಷ್ಟು ನಿದ್ದೆಯ ಸಾಂತ್ವನ
ಮಲಗಿದವನಿಗೊಂದಷ್ಟೊಳಗೊಳಗೆ ತಣಿವು
ಜ್ವರದುರಿ ಕೆಮ್ಮುಗಳಿಗೆಲ್ಲಾರಾಮದಿಂಬು!

ಮರುಗಿ, ಕೊರಗುವವನಿಲ್ಲಿ ಬರಿಯ
ಶಿರವಾನಿಸಿ ದೇಹವನೊರಗಿದರೆ ಕಾಲ ಚಾಚಿ
ಕಣ್ಣುರಿಯಿರದಲ್ಲಿ, ಹೀರಿ ಬಿಸಿ ಹನಿಯ!

ಮರದಮಂಚದಡಿಪಾಯದೊಳು ನಿಂದು
ಬೆಚ್ಚಗಿರಿಸುತ್ತದೆ ಬಹುಪಾಲು,
ಬೇಗನೊಣಗುವುದಿಲ್ಲ ಒದ್ದೆಯಾದೊಡೆ!

ಹತ್ತಿಯದು ಒಳಗೆ, ಮೆತ್ತನೆಯ ಮೆತ್ತೆ
ಮತ್ತೆ ಮತ್ತೆ ತಲೆಯಾನಿಸುತ್ತೇನೆ
ನೋವಾದಾಗಲೆಲ್ಲ, ಬಿಗಿದಪ್ಪಿಕೊಳುತ್ತೇನೆ...
ವ್ಯತ್ಯಾಸವೇನಿಲ್ಲವಿದಕೂ ಮನಕೂ!

===