ಗುರುವಾರ, ಮೇ 17, 2012

ಹಾವು - ಬೆಳಕು!

ಅಂಗಳದಲೊಂದು ಹಾವು
ಹಸಿರು ಹುಲ್ಲುಸಿರ ಮಧ್ಯೆ ವಿಷ!
ನರಗಳಲಿ ನೆತ್ತರಿಗೆ ಚಳಿ
ಬೆರಳು ನಡುಗುತ್ತದೆ ಬೆದರಿ!

ರಾತ್ರಿ, ನಡುಗತ್ತಲು!
ಒಂಟಿ ಮಿಂಚುಹುಳದ ಬೆಳಕು
ಕಣ್ಣು ಮಿಟುಕಿಸುತ್ತದೆ ಜೀವ
ಹಾವ ನಾಲಗೆಯ ಭಯಕೆ!

ತೆವಳುತ್ತದೆ ಪಾದ, ಮುಂದಿದೆಯೋ ?
ನೋವಿಣುಕುತ್ತದೆ ಮಂಡಿಯಲಿ
ಮೆದುಳಿಗೊಂದಷ್ಟು ಗುಡುಗು
ಹನಿ ಮಳೆ ಕೆನ್ನೆ ಮೇಲೆ!

ರಾತ್ರಿ ಕಳೆದು ಮುಂಜಾವು!
ತಂಪು, ಪೂರ್ವದಲಿ ಕಿರಣ!
ಬೆಳಕುಗಳ ಹೊತ್ತು ಭಾನು!
ಹಾವೆಲ್ಲಿ? ಬಿಲದೊಳಗೆ?!
====

ಚಿತ್ರ ಕೃಪೆ=ಫ್ಲಿಕರ್.ಕಾಂ

ಸೋಮವಾರ, ಮೇ 14, 2012

ಸಾಣೆ!

ಓ ಯೋಚನೆಯೇ,
ನನ್ನ ಮನವ ನಿನ್ನ ಬೆಂಕಿಯಲಿ
ಸಾಣೆ ಹಿಡಿಯುವಾಗ ಮೆದುಳು
ಕುದಿಯುತ್ತದೆ ನಾಳೆಗಳ ನೆನೆದು!

ನಿನ್ನೆಗಳ ಬೇಗುದಿಯಲಿ
ಮಾತಿಂದು ಅರಳುವಾಗ
ನೋವುಗಳ ಉಂಡ
ನಾಲಗೆ ತೊಡರುವುದಿಲ್ಲ!

ಕೆನ್ನೆಯಲಿ ಕಣ್ಣೀರ ಹನಿ
ಜಾರುವಾಗ ಎದೆಯದುರಿದ್ದು
ಜಗಕೆ ಕಾಣದ ದಿಟವು,
ಒಳಗೆ ಮಾತ್ರ ಪರಿಮಳ!

ಮೌನಗಳ ಸರಳೊಳಗೆ
ಮುದುಡಿದ ಕೈ, ಕೋಳ-
ತೆರೆಯುವ ಭಾಗ್ಯವೆಲ್ಲಿ?
ಅಲ್ಲಿ ನಿರೀಕ್ಷೆಗಳ ಮಳೆ!

ಕಣ್ಣು ಕಾಣದ ಬದುಕು
ಎಡವಿದ್ದೆಲ್ಲಿ? ತೊಡರುಗಳಲಿ
ಕಿವಿ ಬಿಟ್ಟರೆ ಕುಳಿರ್ಗಾಳಿ
ಶೀತದೊಸರಿನ ಮೂಗು!

ಕಾಯುತ್ತೇನೆ ಮತ್ತದೇ
ಬೆಂಕಿಗೆ, ಮತ್ತಷ್ಟು ಸಾಣೆ
ಉರಿಯಲಿ ನಿನ್ನೆಗಳು
ತುಟಿಯಂಚಿನಲಿ
ನಾಳೆಗಳ ನಗುವಿಗೆ!
=====

ಚಿತ್ರ ಕೃಪೆ: ಗೂಗಲ್ ಇಮೇಜಸ್