ಸೋಮವಾರ, ಮೇ 14, 2012

ಸಾಣೆ!

ಓ ಯೋಚನೆಯೇ,
ನನ್ನ ಮನವ ನಿನ್ನ ಬೆಂಕಿಯಲಿ
ಸಾಣೆ ಹಿಡಿಯುವಾಗ ಮೆದುಳು
ಕುದಿಯುತ್ತದೆ ನಾಳೆಗಳ ನೆನೆದು!

ನಿನ್ನೆಗಳ ಬೇಗುದಿಯಲಿ
ಮಾತಿಂದು ಅರಳುವಾಗ
ನೋವುಗಳ ಉಂಡ
ನಾಲಗೆ ತೊಡರುವುದಿಲ್ಲ!

ಕೆನ್ನೆಯಲಿ ಕಣ್ಣೀರ ಹನಿ
ಜಾರುವಾಗ ಎದೆಯದುರಿದ್ದು
ಜಗಕೆ ಕಾಣದ ದಿಟವು,
ಒಳಗೆ ಮಾತ್ರ ಪರಿಮಳ!

ಮೌನಗಳ ಸರಳೊಳಗೆ
ಮುದುಡಿದ ಕೈ, ಕೋಳ-
ತೆರೆಯುವ ಭಾಗ್ಯವೆಲ್ಲಿ?
ಅಲ್ಲಿ ನಿರೀಕ್ಷೆಗಳ ಮಳೆ!

ಕಣ್ಣು ಕಾಣದ ಬದುಕು
ಎಡವಿದ್ದೆಲ್ಲಿ? ತೊಡರುಗಳಲಿ
ಕಿವಿ ಬಿಟ್ಟರೆ ಕುಳಿರ್ಗಾಳಿ
ಶೀತದೊಸರಿನ ಮೂಗು!

ಕಾಯುತ್ತೇನೆ ಮತ್ತದೇ
ಬೆಂಕಿಗೆ, ಮತ್ತಷ್ಟು ಸಾಣೆ
ಉರಿಯಲಿ ನಿನ್ನೆಗಳು
ತುಟಿಯಂಚಿನಲಿ
ನಾಳೆಗಳ ನಗುವಿಗೆ!
=====

ಚಿತ್ರ ಕೃಪೆ: ಗೂಗಲ್ ಇಮೇಜಸ್

3 ಕಾಮೆಂಟ್‌ಗಳು:

  1. ಸರಿಯಾದ ಸಾಣೆ ಹಿಡಿಯುವ ಕೆಲಸಗಾರನನ್ನು ನಾನೂ ಯಾವ ಕಾಲದಿಂದಲೋ ಕಾಯುತ್ತಿದ್ದೇನೆ! :-)

    ಸಾಣೆಯ ನೆಪದಲ್ಲಿ ಇಲ್ಲಿ ಅನಾವರಣಗೊಂಡ ಮೊಂಡುಗಳಲ್ಲೇ ಬದುಕು ಕಳೆದಿದೆ.

    ಹೂವಪ್ಪನ ಈ ಕಾವ್ಯ ಸಿಂಚನ ಮನೋ ಚಿಕಿತ್ಸಕ.

    ಪ್ರತ್ಯುತ್ತರಅಳಿಸಿ
  2. "ಸಾಣೆ" ಕವಿತೆ ಗಲ್ಫ್ ಕನ್ನಡಿಗದಲ್ಲಿ ಪ್ರಕಟಗೊಂಡಿದೆ. ಧನ್ಯವಾದಗಳು ಆತ್ಮೀಯ ರವಿ ಮೂರ್ನಾಡ್ ಅವರಿಗೆ ಹಾಗೂ ಪ್ರಕಟಿಸಿದ ಗಲ್ಫ್ ಕನ್ನಡಿಗ ತಂಡಕ್ಕೆ.

    http://www.gulfkannadiga.com/news-65891.html

    ಪ್ರತ್ಯುತ್ತರಅಳಿಸಿ
  3. ಹೂವಪ್ಪನ ಕವಿತೆಯ ಸರಳತೆ ಮತ್ತು ಅದು ನೇರವಾಗಿ ನಮ್ಮನ್ನು ತಟ್ಟುವ ಪರಿಯೇ ಸೋಜಿಗ.

    ಸುಲಭ ಮಾತ್ರದಲ್ಲಿ ತಿದ್ದಬೇಕಾದ ಮನೋ ಬಾಧೆಯನ್ನು ಸಲೀಸಾಗಿ ತಿದ್ದಿ ಮುಗಿಸಬಲ್ಲ ಅವರ ನೈಪುಣೈತೆಗೆ ಶರಣು.

    ಪ್ರತ್ಯುತ್ತರಅಳಿಸಿ