ಭಾನುವಾರ, ಏಪ್ರಿಲ್ 22, 2012

ರಸ್ತೆಗಳು ನಕ್ಕಿವೆ.....!

ನಿನ್ನೆ ಕಾಲೆಡವಿನಂತಿದ್ದ ಕಲ್ಲು ತುಂಬಿದ ದಾರಿ
ಇಂದು ರಸ್ತೆಗಳಾಗಿ ನಕ್ಕಿವೆ ನಯವಾಗಿ ಜಾರಿ!
ಮೂರಡಿ ಅಗಲ, ಮೂವತ್ತು ಮೈಲು ನಿನ್ನೆಗೆ
ನೂರರ ವಿಸ್ತಾರ, ನಿಲುಕದ ದೂರ ನಾಳೆಗೆ!

ಮೇಲೆ ಮಳೆಮೋಡ, ಬಸುರ ಹನಿ ಒಳಮಣ್ಣಿಗೆ,
ಕೆಸರು ಉಬ್ಬಿ, ಅಲ್ಲಲ್ಲಿ ಹೊಟ್ಟೆ ಬಿಡುತ್ತವೆ ರಸ್ತೆಗಳು!
ಬಸುರ ಬಸಿದು ತೇಪೆ, ಉಬ್ಬು ಎಗರಿ ಮತ್ತೆ ಕೇಕೆ,
ಮಣ್ಣು ಎರಚಿ ನಿಂತು ರಾಡಿಯೊಳಗಿನ ಕನಸು!

ಎಲ್ಲ ಹೀರಿ ರಸ್ತೆಗಳು ನಕ್ಕಿವೆ.....!

ನಡುವೆ ಬಿಳಿಪಟ್ಟಿ ಇಬ್ಭಾಗ, ಧೂಳತಿಪ್ಪೆ ತೀರಕೆ
ಅಡ್ಡಗೋಡೆಯ ಸೇತುವೆ ನೀರು ಬತ್ತಿದ ನದಿಗೆ!
ಕ್ಷಣ ನಿಂತು ಮತ್ತೆ ಸಾಗಿದೆ ಅಲ್ಲಿ ಎಡತಿರುವು
ಪಕ್ಕಕ್ಕೆ ಕೊಂಚ ದಿಣ್ಣೆಗಳ ಏರು, ಮುಂದೆ ಕಾಣದೆ!

ಏರಿ ನಿಂತಂತೆತ್ತರಕ್ಕೇರಿದಷ್ಟು ಮತ್ತೆ ಕವಲು
ತಿರುಗಬೇಕೆಲ್ಲಿ ಎಡಕ್ಕೋ, ಇಲ್ಲ ಬಲಕ್ಕೋ?
ಗುಂಡಿ ಬಿದ್ದ ಒಂಟಿತನದಲೂ ಉಬ್ಬು ತಗ್ಗುಗಳ
ನೋವ ಬಿಗಿದಪ್ಪಿ ಮತ್ತಿಷ್ಟಗಲ ತೆರೆದು ನಗು!

ಎಲ್ಲ ಮೀರಿ ರಸ್ತೆಗಳು ನಕ್ಕಿವೆ.....!

ಮತ್ತೆ ಓಡುತ್ತವೆ ರಸ್ತೆಗಳು ಕಡಲ ತಡಿಯ
ಬುಡ, ಗುಡ್ಡಬೆಟ್ಟಗಳೆತ್ತರ ಸೀಳಿ, ಕವಲು
ಜಲಪಾತದಂಚಿಗೆ ಹರಿದು ಭೋರ್ಗರೆತ,
ಹಿಮಕಲ್ಲುಗಳೆರಚಿಕೊಂಡು ತಣ್ಣಗೆ ಬೆತ್ತಲು!

ಊರಕೇರಿಯಲಿ ಮೂರು ಭಾಗ, ಅಂಕುಡೊಂಕು
ಕಟ್ಟಡಗಳ ಸಂದಿನಲಿ ಪಟ್ಟಣ, ಉದ್ದಾನೇರವಲ್ಲಿ
ಕೈಮುಗಿದು ಧೂಳ ಚುಕ್ಕಿಯಿಟ್ಟ ರಂಗೋಲಿ
ಉಳಿದದ್ದು ಅಳಿದುಳಿದ ನಗು ಸವೆದು ಸವೆದು!

ಮತ್ತೆ ನಕ್ಕಿವೆ ರಸ್ತೆಗಳು ಹೀರಿ ಎಲ್ಲವನೂ ಮೀರಿ!
====

ಚಿತ್ರಕೃಪೆ:ಗೂಗಲ್ ಇಮೇಜಸ್

ಭಾನುವಾರ, ಏಪ್ರಿಲ್ 8, 2012

ನೂರಿಪ್ಪತ್ತು ತಿಂಗಳ ಊರು!

ನಿನ್ನೆ ಊರಿನ ದಾರಿಯಲಿದ್ದೆ,
ಒಮ್ಮೆ ತಿರುಗಿ ನೋಡಿದ್ದೆ!
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಕಾಲುದಾರಿ ಏರನೇರಿ ಹೊರಟಿದ್ದೆ
ಬೆನ್ನಿಗಂಟಿದ ಚೀಲದ ತೂತಿನಲಿ
ಜಿಡ್ಡುಗಟ್ಟಿದ ಕರವಸ್ತ್ರದ ಇಣುಕು!
ಬೇಲಿ ಬದಿಗಾನಿಸಿದ ಪಾಪಾಸು
ಅಂದು ನಕ್ಕಿತ್ತು ನನ್ನ ಕಂಡು!

ತೂತು ಬಿದ್ದ ಪಾದರಕ್ಷೆಯ ತುಣುಕು
ಜಲ್ಲಿ ರಸ್ತೆಯ ಕಲ್ಲಿಗೆ ಮುತ್ತನಿತ್ತು
ಜೀವ ಸವೆಸುವಾಗ ಕೆತ್ತೆ ಹಾರಿದ್ದು
ಚೂಪು ಕಲ್ಲು ಪಾದಕ್ಕೆ ಚುಚ್ಚಿ,
ಬೆವರ ಹಣೆಯಲ್ಲಿ ಮೂವತ್ತೆರಡು ರೇಖೆ!

ಈಗೆಲ್ಲ ನೆನಪುಗಳ ಡಾಂಬರಿನ ರಸ್ತೆ
ಹಳೆಯದ್ದೆಲ್ಲಾ ಕಪ್ಪುಗಟ್ಟಿ ಈಗ ಬಿಸಿಲ ಮಳೆ,
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಗೇರು ಸೊನೆ, ಮಿಡಿಮಾವ ಹುಳಿಗೆ
ಕೆರೆದ ಚರ್ಮ, ಅಲ್ಲಲ್ಲಿ ಗೀಚುಗೆರೆ
ರಕ್ತ ಒಸರದೇ ಕೆಂಪುಗಟ್ಟಿದ ಗಾಯ
ತುರಿಕೆಗಳ ಹಿತಕೆ ಹೊಸ ಊರಿನ ಬಯಕೆ!

ಹೊಗೆಯುಗುಳುವ ಬಸ್ಸು, ಹರಿದ ಸೀಟು
ಯಾರೋ ಮಲಗಿ ಎದ್ದ ರಗ್ಗಿಗೊರಗಿ,
ಬೆವರ ವಾಸನೆ ಹೊತ್ತು ಎಡೆಯಲಿ
ಬೀಸುವ ಗಾಳಿಗೆ ಕಣ್ಣು ಮುಚ್ಚದೇ ನಿದ್ದೆ!

ಈಗೆಲ್ಲ ನೆನಪುಗಳ ಗುಂಡಿ
ಬಣ್ಣಮಾಸಿದ ಎಲೆ ಕೊಳೆತು ಗೊಬ್ಬರ,
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಬಾಲವಲ್ಲಾಡಿಸಿ ಪಾದ ನೆಕ್ಕಿದ ನಾಯಿ
ರೋಮವುದುರಿ ಸರಪಳಿಗೆ ಶರಣು,
ನಾನೆತ್ತಿ ತಂದ ಪಟ್ಟಣದ ಬಿಸ್ಕತ್ತು
ಗಂಟಲಲಿ ಸಿಕ್ಕಿ ನೀರ ಹುಡುಕುತ್ತದಿಂದು!

ಅಂಗಳದ ಗುಲಾಬಿ ಹೂವ ಪರಿಮಳದ,
ತುಳಸಿಯ ಮುದಿತನದ ಗಾಳಿಯಲಿ ತೇಲಿ
ನಗುತ್ತೇನೆ, ನೆನಪುಗಳ ಬಿಸಿಯುಸಿರ ಬಿಟ್ಟು
ಕನಸು ಕಟ್ಟಿದ ಮನ ತೊಳೆದು ನಿಂತ
ಬರಿಯ ನೆನಪಿಗೆ ನೂರಿಪ್ಪತ್ತು ತಿಂಗಳು!

ಬುಧವಾರ, ಏಪ್ರಿಲ್ 4, 2012

ಒಲವ ದೀಪದ ಬೆಳಕ ಚೆಲ್ಲಿ!

ಇರುಳ ಹೊತ್ತ ಮನಕೆ ಒಲವ ದೀಪದ ಬೆಳಕ ಚೆಲ್ಲಿ
ಹಸಿರಾದೆ ನೀ ಗೆಳತೀ ಉಸಿರ ಮರೆತ ಬದುಕಿನಲಿ
ಮತ್ತುಸಿರ ತಂದಿತ್ತು, ಮುತ್ತುಗಳ ಹಿತವಿತ್ತು ನಗುವಿನಲಿ!

ನಿನ್ನ ಮಾತಿನ ಬಳುಕಿನಲಿ ನನ್ನ ದುಗುಡಗಳ ದೂರಸರಿಸಿ
ಒಂಟಿ ಬಾಳಿನ ಒಸರಿಗೆ ಜೊತೆಯಾಗಿ ತೊರೆಯಾದೆ
ಪ್ರೀತಿ ಹರಿವ ನೀರಲ್ಲಿ ನಿನ್ನೊಳಗೆ ನನ್ನ ಬೆರೆಸಿ!

ಅರಳಿ ನಿಂತಿತು ಪ್ರೀತಿಯೊರತೆ ಕಾಣದ ಬರಡು ತುಟಿ
ಅದು ನಿನ್ನ ಪ್ರೇಮ ಲೇಪನದ ಹಿತದಾಲಿಂಗನದೊಳಗೆ
ಹೃದಯಕ್ಕಂಟಿದ ನೋವ ಮರೆಸಿ ಮನ ಭಾವಸ್ಪುರಣ!

ಹಾತೊರೆವೆ ಅನುದಿನವೂ ನಿನ್ನೊಲವ ಸಿಂಚನಕೆ
ಒಲ್ಲೆಯೆನದಿರು ನಲ್ಲೆ ಒಲವ ದೀಪದ ಬೆಳಗಿಗೆ
ಜತೆಯಾಗಿ ಕೈ ಹಿಡಿದು ಬೆಳಗೋಣ ಬಾ ಬದುಕ!
===
ಚಿತೃಕೃಪೆ: ಮೈಅಪೆರಾ.ಕಾಮ್

ಸೋಮವಾರ, ಏಪ್ರಿಲ್ 2, 2012

ಮರಳ ಕಣದೊಳಗೆ!

ಕೊಂಚ ಹನಿ ನೀರ ಹೊತ್ತ ಒಂಟಿ ಒಯಸಿಸ್ ನಾನು
ಮೂವತ್ತಾರು ಮೈಲಿಯ ಮರುಭೂಮಿಯೊಳಗೆ
ಎಲ್ಲೆಲ್ಲೂ ಮರಳೇ, ಕಣ್ಣು ಹಾಯಿಸಿದಷ್ಟೂ ದೂರ!

ಮೇಲೆ ಕೆಲವೊಮ್ಮೆ ನೀಲ ಬಾನು ಕೂಡ
ಬಿಳಿಮೋಡಗಳ ನಗುವ ಹೊತ್ತು, ನನಗಣಕಿಸಿ
ಮತ್ತೆ ನೀಲಿಯಾಗುತ್ತವೆ ಬರಿಯ ಸೂರ್ಯನ
ಬಿಸಿಯುಸಿರ ಗಾಳಿ ಬಿಟ್ಟು, ಮರಳು ಮತ್ತಷ್ಟು ಬಿಸಿ!

ಒಂಟೆಯ ನಾಲಗೆಗೂ ರುಚಿಯೇನೋ, ಕೆಲವೊಮ್ಮೆ
ನೀರ ಡಿಬ್ಬ ತುಂಬಿಸಿ ನಗುತ್ತದೆ, ಮೂಟೆಗಳ ಹೊತ್ತು
ಪಯಣ ಸಾಗುತ್ತದೆ, ಬಿಸಿಮರಳ ಬೇಗೆಯಲಿ....
ನನಗೂ ನಗುವೂ, ನೆನೆಯುತ್ತೇನೆ ಒಂಟೆಯನು,
ಹದಿನೈದು ದಿನದ ದಾಹನೀಗಿಸಿದ ತೃಪ್ತಿಗೆ!

ಮರೆಯಾಗುತ್ತದೆ ಕುಳಿರ್ಗಾಳಿ ಮರಳ ಕಸ-ಕಡ್ಡಿಗಳ
ಪುಡಿ ಎರಚಿ ಹನಿನೀರ ಹೊತ್ತ ನನ್ನೆದೆಯೊಳಗೆ
ಕಸದಕುಣಿಕೆಯೊಳಗೆ ಮತ್ತೆ ಕಾಯುತ್ತೇನೆ
ಆಸೆ ಮರೀಚಿಕೆಯ ಹೊತ್ತು, ಮತ್ತೊಂದು
ಒಂಟೆ ಬರಬಹುದೆಂದು, ಹನಿನೀರ ನಾ ಉಣಬಡಿಸಬಹುದೆಂದು!