ಭಾನುವಾರ, ಏಪ್ರಿಲ್ 8, 2012

ನೂರಿಪ್ಪತ್ತು ತಿಂಗಳ ಊರು!

ನಿನ್ನೆ ಊರಿನ ದಾರಿಯಲಿದ್ದೆ,
ಒಮ್ಮೆ ತಿರುಗಿ ನೋಡಿದ್ದೆ!
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಕಾಲುದಾರಿ ಏರನೇರಿ ಹೊರಟಿದ್ದೆ
ಬೆನ್ನಿಗಂಟಿದ ಚೀಲದ ತೂತಿನಲಿ
ಜಿಡ್ಡುಗಟ್ಟಿದ ಕರವಸ್ತ್ರದ ಇಣುಕು!
ಬೇಲಿ ಬದಿಗಾನಿಸಿದ ಪಾಪಾಸು
ಅಂದು ನಕ್ಕಿತ್ತು ನನ್ನ ಕಂಡು!

ತೂತು ಬಿದ್ದ ಪಾದರಕ್ಷೆಯ ತುಣುಕು
ಜಲ್ಲಿ ರಸ್ತೆಯ ಕಲ್ಲಿಗೆ ಮುತ್ತನಿತ್ತು
ಜೀವ ಸವೆಸುವಾಗ ಕೆತ್ತೆ ಹಾರಿದ್ದು
ಚೂಪು ಕಲ್ಲು ಪಾದಕ್ಕೆ ಚುಚ್ಚಿ,
ಬೆವರ ಹಣೆಯಲ್ಲಿ ಮೂವತ್ತೆರಡು ರೇಖೆ!

ಈಗೆಲ್ಲ ನೆನಪುಗಳ ಡಾಂಬರಿನ ರಸ್ತೆ
ಹಳೆಯದ್ದೆಲ್ಲಾ ಕಪ್ಪುಗಟ್ಟಿ ಈಗ ಬಿಸಿಲ ಮಳೆ,
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಗೇರು ಸೊನೆ, ಮಿಡಿಮಾವ ಹುಳಿಗೆ
ಕೆರೆದ ಚರ್ಮ, ಅಲ್ಲಲ್ಲಿ ಗೀಚುಗೆರೆ
ರಕ್ತ ಒಸರದೇ ಕೆಂಪುಗಟ್ಟಿದ ಗಾಯ
ತುರಿಕೆಗಳ ಹಿತಕೆ ಹೊಸ ಊರಿನ ಬಯಕೆ!

ಹೊಗೆಯುಗುಳುವ ಬಸ್ಸು, ಹರಿದ ಸೀಟು
ಯಾರೋ ಮಲಗಿ ಎದ್ದ ರಗ್ಗಿಗೊರಗಿ,
ಬೆವರ ವಾಸನೆ ಹೊತ್ತು ಎಡೆಯಲಿ
ಬೀಸುವ ಗಾಳಿಗೆ ಕಣ್ಣು ಮುಚ್ಚದೇ ನಿದ್ದೆ!

ಈಗೆಲ್ಲ ನೆನಪುಗಳ ಗುಂಡಿ
ಬಣ್ಣಮಾಸಿದ ಎಲೆ ಕೊಳೆತು ಗೊಬ್ಬರ,
ಮೊನ್ನೆ ಮೊನ್ನೆ ಊರು ಬಿಟ್ಟು
ಬರಿಯ ನೂರಿಪ್ಪತ್ತು ತಿಂಗಳು!

ಬಾಲವಲ್ಲಾಡಿಸಿ ಪಾದ ನೆಕ್ಕಿದ ನಾಯಿ
ರೋಮವುದುರಿ ಸರಪಳಿಗೆ ಶರಣು,
ನಾನೆತ್ತಿ ತಂದ ಪಟ್ಟಣದ ಬಿಸ್ಕತ್ತು
ಗಂಟಲಲಿ ಸಿಕ್ಕಿ ನೀರ ಹುಡುಕುತ್ತದಿಂದು!

ಅಂಗಳದ ಗುಲಾಬಿ ಹೂವ ಪರಿಮಳದ,
ತುಳಸಿಯ ಮುದಿತನದ ಗಾಳಿಯಲಿ ತೇಲಿ
ನಗುತ್ತೇನೆ, ನೆನಪುಗಳ ಬಿಸಿಯುಸಿರ ಬಿಟ್ಟು
ಕನಸು ಕಟ್ಟಿದ ಮನ ತೊಳೆದು ನಿಂತ
ಬರಿಯ ನೆನಪಿಗೆ ನೂರಿಪ್ಪತ್ತು ತಿಂಗಳು!

4 ಕಾಮೆಂಟ್‌ಗಳು:

  1. ಪದ ಬಳಕೆಯಲ್ಲಿ ಹಿಡಿತ ಬಂದಿದೆ. ಭಾವ ಪಲ್ಲಟವನ್ನು ಗಮನಿಸುತ್ತಿದ್ದೇನೆ. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  2. ಇಡೀ ಕಥೆಯನ್ನ ಹೇಳುವ ಪ್ರಯತ್ನ ಚೆನ್ನಾಗಿದೆ. ಶುಭಾಶಯಗಳು :)

    ಪ್ರತ್ಯುತ್ತರಅಳಿಸಿ
  3. ಚೆನ್ನಾಗಿದೆ ಕವನ ಪುಷ್ಪಣ್ಣ. ಆದರೆ ಇಲ್ಲಿ ಹಿಂಬಾಲಿಸಲು (Follow ) ಅವಕಾಶವೇ ಕಾಣ್ತಿಲ್ಲ ಎಲ್ಲೂ..
    ತಿಂಗಳುಗಳ ಲೆಕ್ಕದಲ್ಲಿ ಹೇಳೋದ್ರಲ್ಲಿ ನೀವು ಬಲು ನಿಪುಣರು. ವಯಸ್ಸು ಹೇಳುವಾಗ ೨೫ ವರ್ಶ, ೮೪ ತಿಂಗಳು ಅಂತಲೋ ಈಗ ೧೦ ವರ್ಶದ ಬ್ದಲು ನೂರಿಪ್ಪತ್ತು ತಿಂಗಳು ಅಂತಲೋ.. ಕವನವೂ ಚೆನ್ನಾಗಿದೆ:-)

    ಪ್ರತ್ಯುತ್ತರಅಳಿಸಿ
  4. ಊರಿನ ಗಾಢ ನೆನಪು ಬಹಳ ಚೆನ್ನಾಗಿ ಬ೦ದಿದೆ

    ಪ್ರತ್ಯುತ್ತರಅಳಿಸಿ