ಗುಡಿ ಕಟ್ಟುತಾನಂತೆ ಗುಡಿ
ಅವರಿವರಿಂದ ಕಲ್ಲುಗಳ ಕೆತ್ತಿಸಿ.
ಗುಡಿ ಕಟ್ಟುತಾನಂತೆ ದೇವರನ್ನಿಡಲು
ಉರಿವ ದೀಪದ ಹಿಂದೆ ಹೊಗೆ-
ಬಿಡುವ ಊದುಬತ್ತಿಗಳ ಉರಿಸಿ
ದೇವರ ಕಣ್ಣುರಿಸಲು ಗುಡಿ ಕಟ್ಟುತಾನಂತೆ!
ಕಲ್ಲು ಕೆತ್ತಿ ಕೊಟ್ಟವನ ಕೈಹಿಡಿದವಳ
ಹೊಟ್ಟೆಯೊಳಗೆ ತನ್ನ ಬಿಳಿ ನೆತ್ತರು
ಚೆಲ್ಲಿ ಅವಳ ಗರ್ಭದ ಒಳಗೆ ತನ್ನ
ಹೆಸರ ಅಮೃತಶಿಲೆಯಲ್ಲಿ ಕೆತ್ತಿಸಿದ್ದಾನೆ!
ಗೊತ್ತಾಯಿತಲ್ಲ ನಿಮಗೆ ಅವನು ಕೂರಿಸಿದ್ದ
ದೇವರನ್ನಲ್ಲ, ಇನ್ನೂ ಕಣ್ಣು ಬಿಡದ ಆತ್ಮ!
ನಿನ್ನೆ ಪಾಳು ಬಿದ್ದಿದ್ದ ಕಲ್ಲಿಗೆ ಜೀವ ಕೊಟ್ಟವನ
ಕಣ್ಣಿಗೆ ಖಾರದ ಪುಡಿ ಎರಚಿ ಕಣ್ಣೀರು ಬರಿಸಿ
ಕೊಚ್ಚೆಯಲಿ ಕೊಳೆತು ಹೋಗುವ ಜೀವಕ್ಕೆ
ಅಡಿಪಾಯ ಹಾಕಿ ಗೋಪುರ ನಿಲ್ಲಿಸಿದ್ದ ಗುಡಿಗೆ!
ಏರಿ ನಿಂತ ಮಣ್ಣ ಗುಡ್ಡೆಗಳ ಹಿಚುಕಿ
ಗರ್ಭಗುಡಿಗೆ ತಳಪಾಯ ಅಗೆವಾಗ
ಹೊರಗೆ ಬಿಸಿಲಲ್ಲಿ ಬಿದ್ದ ಕಲ್ಲಿಗೆ
ಬೀಳುವ ಉಳಿಪೆಟ್ಟುಗಳ ಸದ್ದು
ಇವನ ಕಿವಿಯಲಿ ರುಂಯ್ಯ್ ಗುಡಲಿಲ್ಲ
ಕೆತ್ತುವವ ಕೆತ್ತುತ್ತಲೇ ಇದ್ದ,
ಸದ್ದು ಮಾತ್ರವಿಲ್ಲಿ ಹಂಚಿಲ್ಲದ ಢೇರೆಯೊಳಗೆ!
ಬಿಸಿಯ ಕಲ್ಲಿಗೆ ಬಿದ್ದ ನರಪೇತಲ ಬೆವರು
ಆವಿಯಾದದ್ದು ಕಾಣಲೇ ಇಲ್ಲ, ಪಸೆಯಾರಿದ
ನಾಲಗೆಯಲ್ಲೂ ಹನಿ ನೀರಿರಲಿಲ್ಲ..
ಕಣ್ಣು ಬರೆದಿದ್ದ, ಮೂಗು ಎಳೆದಿದ್ದ
ನಾಲಗೆ ಬಿಡಿಸಲಿನ್ನೂ ಬಾಕಿ,
ಮುಗಿದಿರಲಿಲ್ಲ ಒಳಗೆ ಕೂಡ
ದ್ವಾರ ಬಾಗಿಲಿನ ಮುಖವರ್ಣಿಕೆಗೆ
ಉಳಿಯ ಪೆಟ್ಟು ಬೀಳುತ್ತಲೇ ಇತ್ತು!
ಒಂಬತ್ತರ ಗಡುವು, ಕಲ್ಲ ಗುಡಿಯೊಳಗೆ
ದೇವರು ಅಗರಬತ್ತಿಯ ಹೊಗೆಯೆಳೆಯಬೇಕು
ಗೋಪುರದ ದೀಪವರಳಬೇಕು, ಮಂತ್ರಗಳ
ಉಲಿಯಿರಬೇಕು, ಉಳಿಯ ಪೆಟ್ಟನು ಮರೆತು
ನಿಂತ ದೇವರೂ ನಗಬೇಕು, ಕಲ್ಲು ಕಂಬಗಳೂ
ಕೆತ್ತಿದವನಿಗೇ ತೀರ್ಥಪ್ರಸಾದವನೀಯಬೇಕು!
*
*
ಚಿತ್ರಕೃಪೆ=ಗೂಗಲ್ ಇಮೇಜಸ್.
ನಿಮ್ಮೊಳಗಿನ ಶಿಲ್ಪಿ ಹೀಗೆ ಮಾತಾಡುತ್ತಾನೆ ಅಂತ ನನಗೆ ಅನ್ನಿಸಿರಲಿಲ್ಲ. ಅದು ಶಿಲ್ಪದೊಳಗಿನ ದೇವರು ನಗುತ್ತಾ ಪ್ರತಿಮೆಯಾದ ರೀತಿ. ಲಹರಿಯೋಳಗದ್ದಿದ ಭಾವ ಮುಚ್ಚು ಮರೆಯಿಲ್ಲದೆ ಪ್ರತಿಮೆ ಕೆತ್ತನೆಯಲ್ಲಿ ತಲ್ಲೀನನಾಗಿದ್ದಾನೆ. ಎಲ್ಲವನ್ನೂ ಕೆತ್ತಿದ ಮೇಲೆ ಅದಕ್ಕೆ ಜೀವ ಬ೦ದಾಗಲೂ ಕಣ್ಣು ಬಿಡದ ಒಂದು ಅಂಶವನ್ನು ಕಂಡಿದ್ದೇನೆ.
ಪ್ರತ್ಯುತ್ತರಅಳಿಸಿನಾಲಗೆ ಬಿಡಿಸಲಿನ್ನೂ ಬಾಕಿ,
ಮುಗಿದಿರಲಿಲ್ಲ ಒಳಗೆ ಕೂಡ
ದ್ವಾರ ಬಾಗಿಲಿನ ಮುಖವರ್ಣಿಕೆಗೆ
ಉಳಿಯ ಪೆಟ್ಟು ಬೀಳುತ್ತಲೇ ಇತ್ತು!
ಯಾವುದೇ ಶಿಲ್ಪಿ ಎಲ್ಲವನ್ನೂ ಮುಗಿಸಿದ ಮೇಲೆ ಒಂದನ್ನು ಬಾಕಿ ಉಳಿಸುತ್ತಾನೆ. ಅದು ಕಣ್ಣು ಕೊಟ್ಟ ನಂತರ ಅದನ್ನು ಕಟ್ಟಿ ಬಿಡುತ್ತಾನೆ. ಒಂದು ಸುಸಂರ್ಭದಲ್ಲಿ ಕಣ್ಣ ಬಟ್ಟೆ ಬಿಚ್ಚುತ್ತಾನೆ. ರೆಪ್ಪೆ ತೆರೆದ ಪ್ರತಿಮೆ ಕಣ್ಣು ಬಿಟ್ಟ ಗಳಿಗೆ ಪ್ರತಿಮೆಯ ಮೂರ್ತ ರೂಪದ ಜಗತ್ತು. ಇದೇ ಪ್ರತಿಮೆಯ ಕೆತ್ತನೆ ತಾಯಿಯ ಗರ್ಭದಲ್ಲಿ ನವಮಾಸದ ಮಗುವಿನದ್ದು ಆಗಿದೆ. ಗರ್ಭದಿಂದ ಹೊರಬಂದ ಆ ಕ್ಷಣ ಅದಕ್ಕೆ ಕಣ್ಣಿದ್ದರೂ ಕಣ್ಣು ಬರುವುದು. ಅದು ಮೂರ್ತ ಪ್ರತಿಮೆ. ವಿಭಿನ್ನ ಆಲೋಚನೆಯ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ.
ದೇವರು ನಕ್ಕಿದ್ದಾನೆ!
ಪ್ರತ್ಯುತ್ತರಅಳಿಸಿನಗೆದೆ ಏನು ಮಾಡಿಯಾನು ಪಾಪ. ಎಲ್ಲ ರೂಪಗಳೂ ಅವನೇ ಅಂದಮೇಲೂ, ನಮ್ಮಿಷ್ಟದಂತೆ ಅವನಿಗೊಂದು ರೂಪ. ಅದನ್ನು ಉಂಟುಮಾಡುವವನ ಜೀವನ ಮಾತ್ರ ಕುರೂಪ.
ನಗೆದೆ ಏನು ಮಾಡಿಯಾನು ಪಾಪ. ಪ್ರತಿ ಜೀವಿಯಲ್ಲೂ ಆ ದೇವರೇ ಇರುವನೆಂಬ ವೇದಾಂತದ ಮಾತನ್ನು ಮತ್ತು ಆ ದೇವರ ರೂಪವನ್ನು ಕೆತ್ತುವ ಶಿಲ್ಪಿಯ ಬವಣೆಯನ್ನೂ ಪ್ರತಿಮಾ ರೂಪದಲ್ಲಿ ತಂದು ಬರೆದ ಈ ಕವಿತೆ ತುಂಬಾ ಚೆನ್ನ.
ಪುಷ್ಪರಾಜರೇ
ಪ್ರತ್ಯುತ್ತರಅಳಿಸಿಮಾನವನೇ ನಿರ್ಮಾತೃನಾಗುವಾಗ ದೇವರ ಗತಿ......ದೇವರೇ ಗತಿ
ಅಬ್ಬಾ ಎನ್ನುವಂತ ಕವನ..
ಇಂತಹದ್ದು ನಿಮ್ಮ ಮನದ ಮೂಸೆಯಲ್ಲೇ ಅರಳಬೇಕು
ಆಗಲೇ ಇಂತಹಾ ಕವಿತೆ ನಮ್ಮೆಲ್ಲರ ಮನದಾಳಕ್ಕಿಳಿಯಬೇಕು
ಅದ್ಭುತವಾದ ಕವಿತೆ ಪುಷ್ಪಣ್ಣ ಸಾರ್ವಕಾಲಿಕ ಸತ್ಯವನ್ನು ಹೆಕ್ಕಿದ್ದೀರಿ ಕವಿತೆಯಲ್ಲಿ.. ಬೂಟಾಟಿಕೆ ಜನರ ಡಂಬಾಚರಣೆಗಳನ್ನು ಜಾಡಿಸಿ ಅವರನ್ನು ಬೆತ್ತಲು ಮಾಡಿದೆ ಕವಿತೆ.. ಕವಿತೆ ಒಂದು ಸಾಂಕೇತಿಕ ಪ್ರತಿಮೆಯಾಗಿ ನಿಂತಿದೆ, ದೇವರ ಹೆಸರಿನಲ್ಲಿ ಮಾಡಬಾರದ ಅನ್ಯಾಯ ಮಾಡುತ್ತಾ ಅವರಿವರ ಹೊಟ್ಟೆ ಕೊಯ್ದು, ತಲೆ ಹೊಡೆದು ದೇವಾಲಯದಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಹಿಡಿಗಾಯಿ ಒಡೆದು ಪಾಪ ಕಳೆಯಿತೆಂಬ ಬೂಟಾಟಿಕೆ ನಟಿಸುವವರ ಬಣ್ಣಗಳನ್ನು ಬಟಾಬಯಲು ಮಾಡಿದೆ ಕವಿತೆ.. ನಿಜವಾದ ಭಕ್ತಿ ಮಾನವತೆಯಲ್ಲದೆ ಬೂಟಾಟಿಕೆಯಲ್ಲಿ ಸಿಗುವುದೆ? ಅದರ ಸಣ್ಣ ಅರಿವೂ ಇಲ್ಲದವರನ್ನು ತೀಕ್ಷ್ಣ ಮಾತುಗಳಲ್ಲಿ ವಿಡಂಬಿಸಿದ ಪರಿ ಮನೋಜ್ಞ.. ಈ ಕವಿತೆಯನ್ನು ಬರೆಸಿದ ನಿಮ್ಮ ಲೇಖನಿಗೊಂದು ಸಲಾಂ..
ಪ್ರತ್ಯುತ್ತರಅಳಿಸಿಆ ಗರ್ಭಗುಡಿಯ ಅಂತರಂಗ ಸದಾ ದೇವರಿಲ್ಲದ ಪ್ರದೇಶ! ಆತ್ಮವೂ ನಿರುತ್ತರವಾಗೋ ನಿರ್ವಾತ ವಾತಾವರಣ. ಯಾವುದೋ ತೆವಲಿನಾವರ್ತಕ್ಕೆ ಮಕ್ಕಳು ಮಾಡೋ ಜನಾಂಗ ಇನ್ನಾದರೂ ಕಲಿತೀತೆ ಭೂ ತೂಕದ ಲೆಕ್ಕ?
ಪ್ರತ್ಯುತ್ತರಅಳಿಸಿವಾಹ್ ಬಹಳ ವಿವೇಚನೆಗೆ ಹಚ್ಚುವ ಕವನ...