ಜೇಡಿ ಮಣ್ಣಿನ ಒಸರು, ಕಲ್ಲು ಬಂಡೆಯೂ ಮೆದುವು, ಅಲ್ಲಿ ನೀರ ಸೆಲೆ
ಹನಿ, ಮತ್ತೆ ಹನಿ, ಕೂಡಿ ಕೂಡಿ ಹಳ್ಳ, ಪಾಚಿಗಟ್ಟಿ ಹಸಿರು ನೀರು,
ಒಸರುತ್ತಲೇ ಇದೆ ಬದುಕು, ಹಳ್ಳ ದಿಣ್ಣೆಯೇರಿ ಊರ ಕೇರಿಯೊಳಗೆ!
ಹರಿಯುತ್ತಲೇ ಮುಂದೆ ಅಲ್ಲಲ್ಲಿ ಬೆಟ್ಟ ಗುಡ್ಡಗಳ ನಡುವೆ ಓಣಿ ಕಣಿವೆ
ಧುಮುಕಿ ಮತ್ತೆ ನಗುವು, ತಲೆ ಕೊಟ್ಟ ನೆಲಕ್ಕೊಂದಷ್ಟು ತೂತು ಹೊಂಡ
ನೊರೆ, ಬುರುಗು, ತೇಲಿಬಂದ ಒಣಕಡ್ಡಿ, ನರ ಸತ್ತ ಹೆಣ ಮಣ ಭಾರ!
ಕಾಡು ಮೇಡು ಕಲ್ಲು ಬಂಡೆ, ದಂಡೆಗೆ ಕಾಲನಿಟ್ಟು ನೀರು ಕುಡಿವ ನರಿ
ಹಸಿಮಾಂಸ ಮೆತ್ತಿದ ನಾಲಗೆಯ ಒಂದು ಹನಿ ರಕ್ತದ ತುಟುಕು ಹರಿವಿಗೆ,
ಕೆಂಪಾಗುವುದಿಲ್ಲ ಸಾವಿರಹನಿಗಳು ನೆತ್ತರು ಕರಗಿ ಮತ್ತೆ ನೊರೆ ಬುರುಗು!
ಮರಳ ಸೀಳಿ ಆಲದ ಬೇರು, ಹಸಿರ ನಾಲಗೆ ಚಾಚಿ ಚೂರಿ ಮುಳ್ಳು
ಎಲ್ಲಾ ನೀರ ಕುಡಿತ, ಆದರೂ ಆರುವುದಿಲ್ಲ ಜೇಡಿಯೊಸರು, ಜೀವಸೆಲೆ,
ಅಡ್ಡ ಮತ್ತದೇ ಮಣ್ಣ ಬುಡ್ಡೆ, ಅಣೆಕಟ್ಟು, ಉಬ್ಬುತ್ತವೆ ನೀರ ಕುಡಿವ ಹಲಗೆಗಳು!
ಹೊಲಸ ತೊರೆಗಳ ಕಚಗುಳಿ, ಎಡಬಲಕೆ ವಾಕರಿಕೆಯ ಮೀರಿ,
ಕಲ್ಲುಕರಗಿ ಮರಳು, ಸೀಳುನಾಲಿಗೆ ಹಾವು, ಮೀನ ಕಿವಿರ ಒಡಲಹಾಡು
ತಿಮಿಂಗಿಲದ ಚೂಪುಹಲ್ಲಿಗೆ ಹರಿವ ನೀರೂ ಸೀಳು, ಎಲುಬು ನಿತ್ರಾಣ!
ಒಸರಿದಲ್ಲಿಂದ ಹೀಗೆ ಕೊಸರಿ ಮತ್ತೀಗ ಕಡಲ ತಡಿ, ಅಲ್ಲಿ ಭೋರ್ಗರೆತ
ಕೋಟಿ ಹನಿಗಳ ಕೊತ್ತಲದೊಳಗೆ ಮತ್ತೆ ಹನಿಯಾಗಬೇಕು ಎಲ್ಲಾ ಮರೆತು
ಬಿಸಿಯಪ್ಪುಗೆ ಉಪ್ಪನೀರ ಸಾರದೊಳಗೆ, ಮತ್ತೆ ಹನಿ, ಹಳ್ಳವಿಲ್ಲದ ಕಡಲು!
======
ಲಯಬದ್ಧ ಕವಿತೆ, ಚೆನ್ನಾಗಿದೆ.ಆಳಕ್ಕಿಳಿದಂತೆ ವಿಸ್ತಾರಗೊಳ್ಳುತ್ತವೆ ನಮಗರಿವಿಲ್ಲದಂತೆ.
ಪ್ರತ್ಯುತ್ತರಅಳಿಸಿಆಗಸದಿಂದ ನೀರ ಹನಿಗಳು ಈ ಧರೆಗೆ ಜೀವ ಜಲವಾಗಿ , ಮಣ್ಣಲ್ಲಿ ಸೇರಿ , ಊರೂರು ತುಂಬೆಲ್ಲಾ ಹರಡಿ ಕೊನೆಯಲ್ಲಿ ಸಾಗರ ಸೇರುವ ಸುಂದರ ಕಲ್ಪನೆಯ ರೂಪಕ ಈ ಕವನ.. ನಿಜಕ್ಕೂ ಸ್ವಲ್ಪ ಅರ್ಥ ಮಾಡಿಕೊಳ್ಳಲು ಕಷ್ಟವೇ ಆದರೂ ನಿಮ್ಮ ಕವನ ರೂಪದ ಕಥೆಗಳು ಅತೀ ಸೊಗಸು .. ಸರ್.. :) :) & ಶುಭ ಮುಂಜಾನೆ .. ಶುಭ ದಿನ .. :) :)
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ ಚೌಟರೆ . ಹೀಗೆಯೇ ಬರೆಯುತ್ತಿರಿ :) ಹಾರೈಕೆಗಳು.
ಪ್ರತ್ಯುತ್ತರಅಳಿಸಿ