ಬುಧವಾರ, ಜನವರಿ 25, 2012

ನೋವ ನಗುವೊಳಗೊಬ್ಬ ಮೌನಿ

ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ
ನದಿಯ ತೆರೆಗಳ ಮೇಲೆ
ದೋಣಿಗೆ ಹುಟ್ಟು ಹಾಕುತ್ತಿದ್ದವ,
ಸಾಗರದ ಅಲೆಗಳ ಆರ್ಭಟದ
ನೋವಿಗೆ ಶರಣಾಗಿ
ಹುಟ್ಟು ತಪ್ಪಿದಂಬಿಗನಾಗಿ
ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ!

ಹುಟ್ಟು ತಪ್ಪಿದ ದೋಣಿ
ಬಳಲಿದ ಕೈಕಾಲು ನಡುಗಿದೆ
ಹರಿವ ನೆತ್ತರೂ ತವಕದಲಿ
ಬಿಳಿಯಾಗಿದೆ, ಬೆವರಿದೆ,
ಬೆವರ ಕಂಡು ನಾ
ಮೌನಿಯಾಗಿದ್ದೇನೆ
ಮತ್ತೆ ಮೌನಿಯಾಗಿದ್ದೇನೆ!

ಮನದಿ ಕುದಿವ ನೋವಿದೆ,
ಅಲೆಗಳನೂ ಮೀರಿ ನಿಂತಿದೆ
ಮೀರಿ ನಿಂತೇನೂ ಆರ್ಭಟಕೆ
ಆದರೇನು ಬಲಹೀನ
ತೋಳ ಮಾಂಸ ಮುದುಡಿದೆ
ಚರ್ಮಕ್ಕಂಟಿದ ಎಲುಬುಗಳ
ಕಂಡು ಮೌನಿ ನಾನು
ಆ ನೋವ ನಗುವೊಳಗೂ
ಮೌನಿ, ಮತ್ತೆ ಮೌನಿ!

5 ಕಾಮೆಂಟ್‌ಗಳು:

  1. ಚೆನ್ನಾಗಿದೆ ಚೌಟರೆ.. ಖುಷಿಯಾಯ್ತು ಓದಿ.:)

    ಪ್ರತ್ಯುತ್ತರಅಳಿಸಿ
  2. ಕವಿತೆಯ ತಲೆಬರಹವೇ ಓದುಗನನ್ನು ಆಕರ್ಷಿಸುತ್ತದೆ ಮತ್ತು ಒಂದು ಉತ್ಕೃಷ್ಟವಾದ ಕವಿತೆ ಪುಷ್ಪಣ್ಣ.. 'ನೋವ ನಗುವೊಳಗೊಬ್ಬ ಮೌನಿ’ ಒಂದು ಸೂಕ್ಷ್ಮವಾದ ಯಾತನಾಮಯ ಭಾವ, ಮನದಲ್ಲಿ ಎಲ್ಲ ದುಗುಡಗಳ ಹರಿವೂ ಕವಿತೆಯಲ್ಲಿ ಮನೆ ಮಾಡಿದೆ.. ತೀವ್ರವಾದ ಭಾವಸ್ರಾವ, ಕಣ್ಣಾಲಿಗಳಲ್ಲಿನ ನೋವನ್ನು ಕಣ್ಣೀರು ಪ್ರತಿಬಿಂಬಿಸುವುದಂತೆ.. ಆದರೆ ಮನದ ಕಣ್ಣೀರನ್ನು ಮೌನ ಪ್ರತಿಬಿಂಬಿಸಬಹುದು ಎಂಬು ಸೂಕ್ಷ್ಮ ನಿರೂಪಣೆ ಇದೆ ಕವಿತೆಯಲ್ಲಿ.. ಮೌನ ಮನಸ್ಸಿಗೆ ಸಾಂತ್ವಾನ ನೀಡಿ ಮನಸ್ಸನ್ನು ಗಟ್ಟಿಗೊಳಿಸುತ್ತದೆ.. ಮತ್ತು ಆತ್ಮಕ್ಕೆ ನೆಮ್ಮದಿಯನ್ನು ದೊರಕಿಸಿ ಮುಂದಿನ ಬದುಕಿಗೆ ಮನಸ್ಸನ್ನು ಸಿದ್ದಗೊಳಿಸುತ್ತದೆ.. ತುಂಬಾ ಅರ್ಥಪೂರ್ಣವಾದ ಕವಿತೆ ಮತ್ತು ಪದಗಳ ಪ್ರಯೋಗ ಮನಸೂರೆಗೊಳ್ಳುತ್ತದೆ..

    ಪ್ರತ್ಯುತ್ತರಅಳಿಸಿ
  3. ಪುಷ್ಪರಾಜ್ ಸರ್.. ಹೋರಾಟಕ್ಕೆ ಇಳಿದವನ ಬಸವಳಿಕೆ ಬಿಂಬಿಸುವ ಕವನ..
    ನದಿಯ ತೆರೆಗಳ ಮೇಲೆ
    ದೋಣಿಗೆ ಹುಟ್ಟು ಹಾಕುತ್ತಿದ್ದವ,
    ಸಾಗರದ ಅಲೆಗಳ ಆರ್ಭಟದ
    ನೋವಿಗೆ ಶರಣಾಗಿ
    ಹುಟ್ಟು ತಪ್ಪಿದಂಬಿಗನಾಗಿ
    ಮೌನಿಯಾಗಿದ್ದೇನೆ...
    ಆದರೆ..ಪ್ರಯತ್ನ ಮುಂದುವರೆದಿದೆ ಎನ್ನುವುದೇ ಸಾಮಾಧಾನ ತರುವಂತಹುದು...
    ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ...

    ಪ್ರತ್ಯುತ್ತರಅಳಿಸಿ
  4. ಹಳೆಯ ನೋವುಗಳಿಗೆ ಮತ್ತೊಂದು ಸಾಂತ್ವನ ..ಮನಮುಟ್ಟುವಂತ ಭಾವ ..

    ಪ್ರತ್ಯುತ್ತರಅಳಿಸಿ
  5. ಚೆನಾಗಿದೆ ಸಾರ್..ಇಷ್ಟವಾಯ್ತು..ಭಾವಪೂರ್ಣ ಕಾವ್ಯ..ಇಷ್ಟವಾಯ್ತು ಕಾವ್ಯವನ್ನು ತೆಗೆದುಕೊಂಡು ಹೋದ ಬಗೆ...
    ಕಾಲನಾಟಕ್ಕೆ ಎಲ್ಲರೂ ತಲೆಬಾಗಲೇಬೇಕು...ಆದರೂ ನಮ್ಮ ಕೈಲಾದ ಪ್ರಯತ್ನ ಮುಂದುವರೆಸೋಣ..ಬರೆಯುತ್ತಿರಿ..
    ಹಾಂ ಬೆಳಿಯ ರಕ್ತ ಅನ್ನುವದಕ್ಕೇನಾದರೂ ವಿಶೇಷ ಅರ್ಥವಿದೆಯೇ???

    ಪ್ರತ್ಯುತ್ತರಅಳಿಸಿ