ಇಂದು ಆ ಹಿರಿಯ ಜೀವದ ಕಣ್ಣುಗಳಲಿ ತೊಟ್ಟಿಕ್ಕಿದ ಒಂದು ಹನಿ ಕಣ್ಣೀರ ಧಾರೆ ಆ ಹೆಣ್ಣು ಮುಖದ ಕೆನ್ನೆಗಳಲ್ಲಿ ಕೃತಜ್ಞತೆಯಲ್ಲಿ ಜಾರಿದ ಕಣ್ಣೀರು ಆಸ್ಪತ್ರೆಯ ಹಾಸಿಗೆಯ ಮೇಲೆ ಲೀನವಾದಾಗ ಮತ್ತೊಂದು ತಾಯಿ ಕರುಳ, ಕರುಣೆಯ ಕಣ್ಣಿನ ಆ ಒಲವ ಕಂಡು ಮತ್ತೊಮ್ಮೆ ಆ ಅಮ್ಮನ ಹೊಟ್ಟೆಯಲಿ ಮಗುವಾಗಿ ಭುವಿ ಕಾಣುವ ಆಸೆ ಹುಟ್ಟಿತ್ತು ಮನದಲ್ಲಿ.
**************************************************************
ಸೂರ್ಯನ ನೋಡದ ನಾವುಗಳು ಕಚೇರಿಗೆ ಬರುವುದು ಬೆಳಿಗ್ಗಿನ ಐದುವರೆಗೆ. ಬೆಳಗ್ಗೆ ಸರಿ ಸುಮಾರು ಆರೂವರೆಯ ಸಮಯ. ಲೆಕ್ಕಶಾಸ್ತ್ರದ ಕಾಗುಣಿತ ದಲ್ಲೇ ಮುಳುಗಿದ್ದ ನನ್ನ ತಲೆಗೆ ಎಚ್ಚರದ ಗಂಟೆ ಕೊಟ್ಟಿದ್ದು ನನ್ನ ಡೆಸ್ಕ್ ಫೋನಿನ ರಿಂಗಣ. ಅನಿರೀಕ್ಷಿತ ಕರೆ. ನಂಬರ್ ವೀಕ್ಷಿಸಿದೆ, ತಕ್ಷಣಕ್ಕೆ ಅರಿವಾದದ್ದು ನನ್ನದೇ ಕಚೇರಿಯಲ್ಲಿ ನನ್ನ ತಂಗಿಯೆಂದೆ ಕರೆಯಲ್ಪಡುವ ನನ್ನ ಸಹವರ್ತಿಗೆ ಬಂದ, (ಮದುವೆಯಾದ ಮೇಲೆ ಅಮೇರಿಕ ಪಾಲಾದ) ಅವಳ ಅಕ್ಕನ ಕರೆಯೆಂದು. ಸ್ವೀಕರಿಸಿ ಹಲೋ ಎಂದವನೇ ಕರೆದೆ ತಂಗಿ ಸುನೀತಿಯನ್ನು. ಮತ್ತೆ ಮುಳುಗಿದ್ದು ಅದೇ ಲೆಕ್ಕಾಚಾರದಲ್ಲಿ. ಆದರೂ ನಡು ನಡುವೆ ಕರೆಯಲ್ಲಿ ಮುಳುಗಿದ ಸುನೀತಿಯ ಹಣೆಯಲ್ಲಿ ಮೂಡಿಬಂದ ಗೆರೆಗಳು ನನ್ನ ಕಣ್ಣುಗಳಲ್ಲಿ ಹಾಗೆ ದಾಖಲಾಗುತ್ತಿದ್ದವು.
ಫೋನಿನ ಕರೆ ಮುಗಿಸಿ ಡೆಸ್ಕಿಗೆ ಹಿಂತುರಿಗಿದವಳ ಕಣ್ಣಾಲಿಗಳಲಿ ಕಂಬನಿಯ ಕೆರೆ ಕಂಡು ದಂಗಾದೆ. ಕರೆದ ನನ್ನ ಮೆದು ಮಾತಿನಲಿ ಅವಳ ನೋವ ನಿಗೂಢತೆಯ ಅರಿವ ಹಂಬಲವಿತ್ತು. ಪಾಪ ಒಂಟಿ ಹೆಣ್ಣು ಮಗಳು ಅಮ್ಮನ ಜೊತೆ. ಐದನೇ ತರಗತಿಯಲಿದ್ದಾಗಲೇ ಅಪ್ಪನ ಕಳಕೊಂಡಿದ್ದ ಬಾಲೆ. ಸಂಬಂಧಿಕರ ಕೆಂಗಣ್ಣು, ವಾರೆನೋಟ, ಕುಹಕಗಳಿಗೆ ಬಲಿಪಶು. ಹೆಣ್ಣು ಜೀವಗಳು ಎಂಬ ನಿಷ್ಕೃಷ್ಟ ಮನೋಭಾವ . ಇವಿಷ್ಟು ನನಗೆ ಗೊತ್ತಿತ್ತು. ಈಗಿನ ಕಣ್ಣೀರ ಕತೆ ಕೇಳಿದೆ. ಅಮ್ಮನ ಪರಿಸ್ತಿತಿ ಬಿಗಡಾಯಿಸಿದೆ ಎಂದಳು. ಅನುಮತಿಯಿತ್ತೆ. ಒಂದು ಕ್ಷಣ ಅವಳ ಮುಖ ನೋಡಿ ದಂಗಾದೆ. ಅಷ್ಟೇ.
**************************************************************
ಮನಸು ಹೊರಳಾಡಿತ್ತು , ನನ್ನ ನೆನಪ ಸರಮಾಲೆ ಬೆಂಗಳೂರಿನ ಸೈಂಟ್ ಫಿಲೋಮಿನ ಆಸ್ಪತ್ರೆಯ 'ಈ-ವಾರ್ಡ್' ಕೊಠಡಿ ಸಂಖ್ಯೆ ಹದಿನಾರರಲ್ಲಿ ನೆಟ್ಟಿತ್ತು .ಕಚೇರಿಯಿಂದ ಹೊರಟು, ಆ ಅಮ್ಮನ ಆಸ್ಪತ್ರೆಗೆ ಸೇರಿಸಿ, ಗೈನಾಕಾಲೋಜಿಸ್ಟ್ ಡಾ. ಸುಜಾತರ ಸಲಹೆಯ ನಂತರ ನಿಟ್ಟುಸಿರು ಬಿಟ್ಟು ವಾಪಸು ನಾನು ಮನೆ ತಲುಪಿದ ನಂತರವೂ ಎಲ್ಲೋ ನೋವ ಕ್ಷಣದಲ್ಲೂ ಮನದ ಮೂಲೆಯಲಿ ಮಗದೊಂದು ಮಾತೆಯ ಪ್ರೀತಿಯ ಬಿಸಿಯಪ್ಪುಗೆ.
ಈಗ ಈ ಕತೆ ಬರೆಯುತ್ತ ಕೂತಿದ್ದೇನೆ. ಮೆದುಳು ಮಾತ್ರ ಮೆಲುಕು ಹಾಕಿದ್ದು - "ಅಮ್ಮ ಸಿಕ್ಕಿದಳು ಮತ್ತೊಮ್ಮೆ".
:)
ಪ್ರತ್ಯುತ್ತರಅಳಿಸಿ