ಇಂದು ಕಂದು ಕುಡಿ, ಮೊಗ್ಗೆನಲೇ?
ಸುಳಿವ ಗಾಳಿಗೆ ಕಿವಿ ನಿಮಿರಿಸಿ
ಜೀವವಿತ್ತ ಕೊಂಬೆಯ ರಸವ ಹಿಂಡಿ
ಬಣ್ಣ ಬದಲಾಯಿಸಿ,ಮತ್ತೆ ಹಸಿರ
ನರಗಳು ಬಲಿತಾಗ ಕ್ಷಣ ನಕ್ಕೆ..
ಈಗ ಎದೆಯೊಡ್ಡಿ ನಿಲ್ಲುವ ಚಿಗುರು,
ಗಾಳಿಯೇನು? ಬಿರುಗಾಳಿಯಾಗಲಿ,
ಕೊಂಬೆಯ ಹೊಯ್ದಾಟ, ಶಕ್ತಿಹೀನ
ಮತ್ತೆ ನಕ್ಕಿದ್ದು ಬಲಿತ ಹಸಿರ ಎಲೆ
ಉಸಿರಾಟದಲೇ ಗಾಳಿಯ ತಿಂದು
ಸಿಪ್ಪೆ ಎದ್ದ ಕೊಂಬೆಗಳ ಹಳಿದು
ಮೂರು ದಿನ ಎಲ್ಲೋ ತೂತು
ಹೊಡೆದಿತ್ತು, ಮೂರು ಎಲೆಗಳ
ಒಟ್ಟು ಪೋಣಿಸಿ, ಗೂಡು ಕಟ್ಟಿ
ಇರುವೆ ನಕ್ಕಾಗ ಹಸಿರೆಲೆಯ
ತೊಟ್ಟು ಕಮರಿ, ನೇತಾಡಿದ್ದು
ಇರುವೆ ಬಾಯಿಯ ಹುಳಿಯಂಟಿಗೆ
ಮತ್ತದೇ ಕಂದುಗಟ್ಟಿತ್ತು, ಹೊದಿಕೆ
ಕಳಚಿ ನಿಂತು, ನರ ನಾಡಿ ಮಾತ್ರ,
ಈಗ ಎಲೆಯಲ್ಲ, ತರಗೆಲೆ ಕಾಲಡಿ
ಗಾಳಿಯೂ ಮೂಸಿ ನೋಡದ
ಇರುವೆಯೂ ಮುತ್ತದ, ಮುದಿಗೊಡ್ಡು
ಮಲಗಿದ್ದು ಅಂಗಾತ, ಕಿಡಿ ಹತ್ತುವ
ಪುಡಿಗಲ್ಲುಗಳ ರಾಶಿಯ ಜೊತೆ...!
-------
ಚಿತ್ರಕೃಪೆ: ಗೂಗಲ್ ಇಮೇಜಸ್
ತರಗೆಲೆಗಳಾದರೆ ಕಷ್ಟ... ಯಾವಾಗ ಬೆಂಕಿ ಹಚ್ಚುತ್ತಾರೋ, ಯಾವಾಗ ಗಾಳಿ ಬಂದು ತೂರಿಕೊಂಡು ಹೋಗುತ್ತವೋ ಗೊತ್ತಿಲ್ಲ. ಕವನ ತುಂಬಾ ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿ