ಒಂಟಿ ತಾನೆಂದು ಬೆಂಕಿಯಾದನೆ ಸೂರ್ಯ
ಹೊತ್ತಿ ಉರಿವವನಿಗೊಂದು ಪ್ರಶ್ನೆ ಕೇಳಬಹುದೇ ?
ಸೂಕ್ತ ಯಾವುದು ಸಮಯ ಯಾವ ಕಾಲ
ಎಷ್ಟು ಹೊತ್ತಿಗೆ ಪ್ರಶ್ನೆಗಳ ಇಡಲೆಂಬ ಕಸಿವಿಸಿ...
ಪೂರ್ವ ತೀರದ ಗರ್ಭ ಸೀಳಿ, ಒಳ ಹೊಕ್ಕು
ಅವನು ಹುಟ್ಟುವ ಮೊದಲೇ ಗುಣುಗುಣಿಸಲೇ?
ಇನ್ನು ಎಚ್ಚೆತ್ತಿರದ ಬಾನಲಿ ನೆತ್ತರ ಬಣ್ಣ ತುಂಬಿ
ಎಳೆ ನಗುವ ಚೆಲ್ಲಿ, ಕಣ್ಣು ಮಿಟುಕಿಸುವ ಕಾಲ
ಮುಂಜಾವಿನಲಿ ಮುದ್ದಿಟ್ಟು ಮಾತನಾಡಿಸಲೇ?
ನಡುನೆತ್ತಿಯಾ ಮೇಲೆ ಕೊತ ಕೊತ ಕುದಿವ
ಬಿಸಿ ಘಳಿಗೆ, ನಡು ಮಧ್ಯಾಹ್ನ, ಕಡು ಹಳದಿ
ಕಿರಣಗಳ ನಡುವೆ ತೂರಿ ಗಹಗಹಿಸಿ ಕೇಳಲೇ?
ಚಿತ್ತಾರದ ಗೋಧೂಳಿ, ಚಿಲಿಪಿಲಿಗಳ ನಾದ,
ಉದರ ತುಂಬಿ ಗೂಡು ಸೇರುವ ತವಕಗಳ
ನಡುವೆ ಪಡುವಣದ ಕಡಲ ತೆಕ್ಕೆಯಲಿ ಸೇರಿ
ನೀಲ ಸಾಗರದ ನೀರ ಬಣ್ಣವ ಕೆಂಪಗಾಗಿಸಿ
ಮೋಕ್ಷ ಪಡೆವ ಕ್ಷಣದಲಿ ನಾ ಅರುಹಲೇ?
ಹೇಳು ಭಾನು, ಮೂಡಣದಲ್ಲಿ ಮುತ್ತ ಸಿಂಚನ
ನಡುನೆತ್ತಿಯ ಮೇಲೆ ಬೆಂಕಿಯುಗುಳು, ಕೆಂಡ,
ಮುಸ್ಸಂಜೆಯಾ ಮುಪ್ಪಿಗೆ ಮುದವನೀವ ನೀನು,
ಹೇಳು ಒಬ್ಬಂಟಿ ಯಾಕಾದೆ ಇಡಿಯ ಬಾನಿಗೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ