ಭಾನುವಾರ, ಅಕ್ಟೋಬರ್ 23, 2011

ಬಳ್ಳಿ ಬೆಳೆಸಿ ಹಣ್ಣಾಗಿ!

ಒಂದೆಳೆಯ ಬಳ್ಳಿ, ಹದಿಮೂರು ಚಿಗುರುಗಳ ಬಳುಕಲಿ
ತೆಂಗಿನ ಮರವಪ್ಪಿ ಆಕಾಶ ನೋಡುವ ಆಸೆಯೇನೋ
ಮೊನ್ನೆ ಊರಿನಂಗಳದಿಂದ ಕಿತ್ತು ತಂದ ಬೇರ ಕುಡಿ
ಇಂದು ಚಿಗುರೊಡೆದು, ನನ್ನನೇ ಏರಿ ನಿಂತು
ಹಸಿರಲೇ ನಕ್ಕು ಕಿಸಕ್ಕೆಂದಾಗ, ಮೆದುಳಿಗೆ ಸೂಜಿ...!

ಪೋಷಿಸಿದ್ದೆ, ಎಲ್ಲಿಂದಲೋ ಎಮ್ಮೆ ಕರುಗಳ ಸೆಗಣಿ ಎತ್ತಿ
ನನ್ನ ನಯವಾದ ಕೆಂಪನೆಯ ಸೂಕ್ಷ್ಮ ಅಂಗೈಗಳಿಗೆ ಮೆತ್ತಿ,
ಮೂಗಿನ ನರಗಳೂ ಅದುರಿದ್ದವು ನಾತಕೆ, ಹಿತವಿತ್ತು
ಬಯಕೆ ಕಂಗಳ ಹೊತ್ತ ಹೊಟ್ಟೆಗೆ ಅನ್ನದಗುಳಿನ ತುತ್ತು!

ಇಂದು ನಕ್ಕರೂ ಬೇರ ಬುಡಕೆ ನೀರನೀವೆ ಎಲ್ಲ ಮರೆತು
ಮತ್ತದೇ ಸೆಗಣಿಯ ಅಮೃತ ಕೊಂಕ ತೊರೆದು,
ಏರಿ ನಿಂತ ಬಳ್ಳಿಗದೋ ಕುಹಕ, ಭುಜ ನೆಕ್ಕುವ
ಕಾಗೆಯ ಹಸಿ ಹಿಕ್ಕೆಯಾ ಕಂಡು ನಕ್ಕಿತ್ತೇನೋ?

ಕ್ಷಣ ಯೋಚಿಸುವೆ, ಕುಡುಗೋಲು ಕೈಗೆತ್ತಿಕೊಳಲೇ
ಒಂದೇಟಿನಲಿ ಬುಡವಿಲ್ಲದೆಯೇ ನಿಂತೀತೆ ಅಹಂ ತೊರೆದು?
ಬೇಡವೆನುತದೆ ಮರುಘಳಿಗೆ ಮನಸು, ಮೆರೆಯ ಬಿಡು...
ಹಸಿರ ಅಹಮಿಗೆ ಹುಳದ ಹುಳುಕ ತೋರಣ ಮೆತ್ತಿ
ಬುಡದ ಬೇರ ಉಸಿರಿನಲೂ ನನ್ನ ಕರೆದೀತು ಎಂಬ ಭಾವ!
=======

ಚಿತ್ರಕೃಪೆ: ಗೂಗಲ್ ಇಮೇಜಸ್

3 ಕಾಮೆಂಟ್‌ಗಳು:

  1. ಸತ್ಯವಾದ ಮಾತುಗಳು.. ಮನಸ್ಸು ನುಡಿದದ್ದು ಈ ರೀತಿ...

    ನಮ್ಮ ಕಲ್ಪನೆಯಲ್ಲಿ ಕಂಡದ್ದು ... ಹಿರಿಯರ ಮಾತು ಕೇಳದ ಮಕ್ಕಳ ಕುರಿತು ಚಿಂತಿಸುವ ಒಂದು ಭಾವನೆ..
    ಎಷ್ಟೇ ಆಗಲೇ ಅವರು ನಮ್ಮ ಮಕ್ಕಳು ತಾನೇ ಎಂಬ ಮನದ ಅಳಲು , ಎಲ್ಲೋ ಒಂದು ಮನಸ್ಸಿನ ಮೂಲೆಯಲ್ಲಿ ಮನೆಮಾಡಿರುತ್ತದೆ..
    ನಮ್ಮತನವನ್ನು ಸ್ವಲ್ಪವಾದರೂ ತೊರೆದು ಮಕ್ಕಳ ಮನಸ್ಸನ್ನು ಅರಿತು ಅವರನ್ನು ಉತ್ತಮ ದಾರಿ ತೋರಬೇಕು ಎಂಬ ಭಾವನೆ ಇಲ್ಲಿ ಕಂಡದ್ದು...

    ಆ ಸಣ್ಣ ಬಳ್ಳಿ , ಅದನ್ನು ಬೆಳೆಸಿದ ರೀತಿ , ಬೆಳೆದು ನಿಂತ ಮೇಲೆ ಅದರ ವರ್ತನೆ , ಅಲ್ಲಿ ನಮ್ಮ ಪೋಷಣೆಯ ಶ್ರಮ ಈ ಎಲ್ಲಾ ಅಂಶಗಳು ...
    ನಮ್ಮನ್ನು ನಾವಿಲ್ಲಿ ಹೇಳಿದ ರೀತಿಯ ಕಲ್ಪನೆ ಮೂಡಲು ಕಾರಣ...

    ಇದನ್ನು ಬಿಟ್ಟರೆ ... ನಿಮ್ಮ ಈ ಕವಿತೆಯ ಭಾವನೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ... ಒಂದಲ್ಲ ಎರಡಲ್ಲ .... ಆರು ಏಳು ಭಾರಿ ಓದಿದರೂ ಸಹ
    ಅದೇ ಮಕ್ಕಳ ಮತ್ತು ಹಿರಿಯರ ಕಲ್ಪನೆಯೇ ಕಾಡುತ್ತಿದೆ... ನಿಮ್ಮ ಕವಿತೆಗೆ ನಮ್ಮ ಕಲ್ಪನೆ ಎಷ್ಟರ ಮಟ್ಟಿಗೆ ಹೋಲುತ್ತದೆ ಎಂಬುದು ಗೊತ್ತಿಲ್ಲ..

    ನೀವೇ ಇದರ ಕಲ್ಪನೆಯನ್ನು ವಿವರವನ್ನು ಎರಡು ಸಾಲಿನಲ್ಲಿ ತಿಳಿಸಿಕೊಟ್ಟರೆ ಸ್ವಲ್ಪ ಅರ್ಥಮಾಡಿಕೊಳ್ಳಲು ಸುಲಭ ನಮ್ಮಂತಹ ಓದುಗರಿಗೆ... :)

    ಪ್ರತ್ಯುತ್ತರಅಳಿಸಿ
  2. ನೀರೆರೆದು, ನಲ್ಮೆಯಿಂದ ಬೆಳೆಸಿದ ತೃಪ್ತಿಯಿದೆಯಲ್ಲ! ಅದು ಸಾರ್ಥಕ್ಯ. ಬೆಳೆದು ನಿಂತ ಮರ ಒಳ್ಳೆಯ ಒಳ್ಳೆಯ ಫಲ ಕೊಡುತ್ತದೆಯೋ, ಮುಳ್ಳಿಂದ ಚುಚ್ಚುತ್ತದೆಯೋ ಅದರ ಕರ್ಮ. ಪಾಪದ ಕೊಡ ತುಂಬಿದರೆ ತಾನಾಗೇ ಬಿರುಗಾಳಿ ಬಂದು ಬುಡಮೇಲಾಗಿ ನಿಮ್ಮ ಕಾಲಡಿ ಬೀಳಬಹುದು. ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಶು ಕದಾಚನ! ಉತ್ತಮ ಉಪಮೆಯೊಂದಿಗೆ ಚೆನ್ನಾಗಿ ಮೂಡಿ ಬಂದಿದೆ!

    ಪ್ರತ್ಯುತ್ತರಅಳಿಸಿ
  3. ಒಂದು ಉತ್ಕೃಷ್ಟ ಗೀತ ಪ್ರಸ್ತುತಿ.ಬಳ್ಳಿ ಬೆಳೆಸಿ ಹಣ್ಣಾಗುವ ಪರಿಯನ್ನು ಸೊಗಸಾಗಿ ಬಣ್ಣಿಸಿದೆ.ಮನದ ಕೊರಗು,ಕಳವಳವನ್ನುಂಟು ಮಾಡುತ್ತದೆಯಾದರೂ ಸುಖಭೋಗಗಳ ಲಾಲಸೆಯಲ್ಲಿ ಅನುರಕ್ತನಾಗಿರುವ ಇಂದಿನ ಮಾನವಜೀವಿಯ ವಾಸ್ತವ ಚಿತ್ರಣವಿದು.ಅಂತರಂಗ ಬಹಿರಂಗ ಶುದ್ಧಿಯಿಲ್ಲದೇ ಸಾಗುತ್ತಿರುವ ಬದುಕಿನಲ್ಲಿ ಈ ವ್ಯತ್ಯಾಸಗಳೂ ಸಹಜವಾಗುವುವು.ಒಮ್ಮೊಮ್ಮೆ ನಮ್ಮ ನೆರಳೆ ನಮ್ಮನ್ನು ಭಯಭೀತರನ್ನಾಗಿ ಯಾತನೆಯನ್ನು ನೀಡುವುದಿಲ್ಲವೇ,ಬದುಕಿನ ಈ ನೆರಳು-ಬೆಳಕಿನಾಟದಲ್ಲಿ ನಮ್ಮತನವು ಮರೆಯಾಗಿ ಯಾಂತ್ರಿಕವಾಗಿರುವುದು ಘೋರವಾದುದು.ಸ್ವಾಭಿಮಾನಕ್ಕೆ ಕೊಡಲಿ ಏಟು ಬೀಳುವಂಥ ಅನೇಕ ಸನ್ನೀವೇಷಗಳು ಬಂದೆರುಗುತ್ತವೆ.ತನ್ನ ತಾನರಿತು ಮನದ ಒಳತೋಟಿಯಲ್ಲಿದ್ದು ಜೀವನ್ಮುಖಿಯಾಗಿ ಸಹಜ, ಸರಳ ಜೀವನಕ್ಕೆ ತನ್ನನ್ನು ಒಡ್ಡಿಕೊಂಡಾಗ,ಏನಿದೆ,ಏನಿಲ್ಲ!!!? ಅಲ್ಲವೇ.ಯೋಚನೆಗೆ ಹಚ್ಚುವ ಸುಂದರ ಪದಪುಷ್ಪಗಳಿಂದ ಅಲಂಕೃತವಾದ ಕವಿತೆ ಇದು.

    ಪ್ರತ್ಯುತ್ತರಅಳಿಸಿ