ಅಂಗಳದಲಿ ನಿಂತಿದ್ದೆ, ಅವಳ ನೆನೆಯುತ್ತ
ನೆನಪು ಮಾತ್ರ ಅವಳು, ಈ ಇಳಿ ಸಂಜೆಗೆ
ಮನೆ ಮುಂದೆ ಒಂದು ಗಿಡ, ಕೆಂಪು ಬಣ್ಣ,
ದಾಸವಾಳದ ಹೂವು ನಕ್ಕಿತ್ತು, ಎಳೆ ನಗು,
ಅವಳದೇ ಮುದ್ದು ನಗುವಿನಂತೆ, ಆಹ್ಲಾದ..
ಕಲ್ಲು ಮಣ್ಣೊಳಗಿಂದೆದ್ದ ಕುರುಚಲು ಹುಲ್ಲುಗಳ
ನಡುವೆ ಕಾಲ ಮೇಲೆತ್ತಿ ಬಂದ ಇರುವೆ ಕೂಡ
ನನ್ನ ಮೆದುಳೊಳಗೆ ಹರಿದಂತೆ ಕಚಗುಳಿ..
ಅಪ್ಪಿ ಅವಳಿತ್ತ ಮುತ್ತಿನಂತೆ, ರಸಸ್ವಾದ..
ಅಂಗಳದಲಿ ಚಳಿ ಹೊತ್ತ ತಿಳಿಗಾಳಿ ನನ್ನ
ಕಿವಿ ಕಚ್ಚಿ ಎಳೆದಾಗ ಅದರಲೂ ಅವಳದೇ
ನೆನಪು, ತಲೆಯಾನಿಸಿ ಭುಜಕೆರಗಿ ಕೂತಂತೆ
ಅವಳದೇ ಮನದ ತಣ್ಣನೆಯ ಪಿಸುಮಾತು
ನನ್ನ ಕಿವಿಯೊಳಗೆ ಗುನುಗುನಿಸಿದಂತೆ....
ಅಂದು ಇಳಿಸಂಜೆಯಲಿ ಬದುಕಿಗೆ
ಬಣ್ಣದ ಚಿತ್ತಾರ ಬರೆದ ಅವಳು, ಇಂದು
ಕತ್ತಲೆಯ ಮುಸುಕೆಳೆದು ಸೂರ್ಯನಂತೆ
ಮರೆಯಾಗುತ್ತಾಳೆ ಎಲ್ಲೋ ನೆನಪ ಬರೆದು
ಹೂವು, ಇರುವೆ, ಗಾಳಿಗಳ ಮಧ್ಯೆ ಬಂದು
ತೂರುತ್ತಾಳೆ, ಕಚಗುಳಿಯಿಡುತ್ತಾಳೆ
ನಾನೆಷ್ಟೇ ಬೇಡವೆಂದರೂ...!
ನವೀರಾದ ಭಾವ ಹೊತ್ತು ಮುದ್ದಾಗಿ,ಮನಕೆ ಹತ್ತಿರವಾಗಿ ಸುಖಿ ಅನುಭವ ನೀಡುವ ಮನಮೋಹಕ ಕವನವಿದು.ಅಂಗಳದಲ್ಲಿ ಚಳಿ ಹೊತ್ತ ತಿಳಿಗಾಳಿ ಕವಿಯ ಕಿವಿ ಕಚ್ಚಿ ಎಳೆದಾಗಲೂ ಅವಳದೇ ಪ್ರೀತಿಯ ಸ್ಪರ್ಷ ನೀಡಿದ ಅನುಭವ ಚಿತ್ತಾಕರ್ಷಕವಾಗಿದೆ.ನಾನೆಷ್ಟು ಬೇಡವೆಂದರೂ ಮತ್ತೆ ಮತ್ತೆ ನೆನಪಾಗಿ ಬಂದು ಮೈ ಮನ ಫುಳಕಗೊಳಿಸುತ್ತಾಳೆಂಬ ಗೆಳತಿಯ ನೆನಪಿನ ಸಂಜೆ ಮೋಹಕವಾದುದು.ಸೊಗಸಾಗಿದೆ ಕವನ.
ಪ್ರತ್ಯುತ್ತರಅಳಿಸಿನಿಮ್ಮ ಅನುಭವದಲ್ಲಿ ಬಂದ ಕವಿತೆಯೋ ಅಥವಾ ಸುಂದರ ಕಲ್ಪನೆಯೋ... ಒಟ್ಟಿನಲ್ಲಿ ಸುಂದರವಾಗಿ ಇದೆ.. :)
ಪ್ರತ್ಯುತ್ತರಅಳಿಸಿ