ಭಾನುವಾರ, ನವೆಂಬರ್ 27, 2011

ಒಂದು ಹುಳು ಮತ್ತು ಸಾವಿನ ಬೆಳಕು

ಒಂಟಿ ಕೊಳವೆ ದೀಪ, ಒಂದು ಹುಳು
ಜೊತೆಗೆ ನಾನು, ಸವಿದದ್ದು ಬೆಳಕು
ಅದೂ ಒಂಟಿ ನನ್ನ ಹಾಗೆ, ಬೆಳಕ
ಅರಸಿ ನನ್ನ ಜೊತೆಗೂಡಿತ್ತು!

ಎಲ್ಲಿತ್ತೋ ಈ ಮೊದಲು
ಯಾವ ಬೆಳಕ ಮೂಲೆಯಾ
ಆಸರೆಯ ಬಿಗಿದಪ್ಪಿ, ನನ್ನ ಹಾಗೆ
ಕೊರಗುತಿತ್ತೋ ಕತ್ತಲಿಲ್ಲದ
ಕೋಣೆಯೊಳಗೆ ಬಂಧಿಯಾದಂತೆ.

ಎದೆಯ ಒಂದು ನರದೊಳಗೆ
ನಡುಗಿಸಿದ್ದು ಭಯದ ಹನಿ ರಕ್ತ
ಹಲ್ಲಿ ಲೊಚಗುಟ್ಟಿದಂತೆ, ಹೇಳಿ
ಬರದ ಕೊನೆ ಎಂಬ ಅಳುಕು!
ಹಲ್ಲಿಯದೋ ಹೊಟ್ಟೆಪಾಡು
ಹುಳಕ್ಕೆ ಇವತ್ತು ಸಾವೇನೋ
ನನ್ನದು(?) ಉತ್ತರ ಗೊತ್ತಿಲ್ಲದ ಪ್ರಶ್ನೆ!

ನೋಡುತ್ತಲೇ ಇದ್ದೆ,
ಹಲ್ಲಿ ಹೊಟ್ಟೆ ತುಂಬಿಸಿ ಕೊಂಡಿತ್ತು
ನನ್ನದಿನ್ನೂ ಊಟವಾಗಿಲ್ಲ
ಅನ್ನದ ತಟ್ಟೆ ಕರೆದರೂ
ಹುಳ ನನ್ನ ಹೊಟ್ಟೆಯೊಳಗೆ
ಮರುಗಿದಂತಿತ್ತು,

ದೀಪ ಮಾತ್ರ ಬೆಳಗುತ್ತಲೇ ಇತ್ತು
ಎಲ್ಲದರ ಅರಿವ ಬಿಟ್ಟು
ಅದಕ್ಕೇನು ದಿನ ರೂಢಿ
ಇಂದು ಹುಳ, ನಾಳೆ ನಾನು
ಮತ್ತದೇ ಬೆಳಕು, ಮತ್ತೊಂದು ದಿನ
ತಿಂದು ತೇಗಿದ ಹಲ್ಲಿ ಕೂಡ
ಕರಗಲೇ ಬೇಕು ಅದರ ಬೆಳಕೊಳಗೆ..

2 ಕಾಮೆಂಟ್‌ಗಳು:

  1. ಸುಂದರವಾಗಿ ಕವಿತೆ ಹೆಣೆದಿದ್ದೀರಿ.ಅದರೊಳಗೆ ಆಸ್ವಾಧಿಸುತ್ತಾ ಮಲಗಿಬಿಟ್ಟಿದ್ದೇವೆ. ನಮ್ಮ ಮತ್ತು ನಮ್ಮೆಲ್ಲರ ಪ್ರೋತ್ಸಾಹ ಸದಾ ಇದೆ. ಅದು ಕನ್ನಡ ಸಾಹಿತ್ಯ ಲೋಕಕ್ಕೆ ನಿಮ್ಮ ಶಾಶ್ವತ ಅರ್ಪಣೆಯಾಗುವವರೆಗೆ. ಈ ಹಿಂದೆಯೂ ಭವಿಷ್ಯ ನುಡಿದಿದ್ದೆ.ಅದು ಶೀಘ್ರದಲ್ಲೇ ನೆರವೇರಲಿ. ಹಾರೈಕೆಗಳು.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಕವನಗಳನ್ನು ಓದುವಾಗ ಬದುಕಲ್ಲಿ ಬಹಳಷ್ಟು ಕಹಿ, ನೋವು ಉ೦ಡ ಯೋಚನೆ ಬರುತ್ತದೆ. ಸಾಕಷ್ಟು ದೂರ ಕ್ರಮಿಸಿದ್ದೀರಿ

    ಪ್ರತ್ಯುತ್ತರಅಳಿಸಿ