ಮಂಗಳವಾರ, ನವೆಂಬರ್ 8, 2011

ಎಲ್ಲ ಶೂನ್ಯ ಅದರೊಳಗೊಂದು ಮೌನ....!!!

ಒಂದು ಕೆರೆ ತಟದ ಕಲ್ಲು ಬಂಡೆಯ ಮೇಲೆ ಕೂತಿದ್ದೆ
ಮುಷ್ಠಿ ತುಂಬಿಟ್ಟಿದ್ದ ಕಲ್ಲುಗಳು ಒಂದೊಂದಾಗಿ
ಕೆರೆ ನೀರ ಮೌನವ ಮುರಿದು ವೃತ್ತ ರಂಗೋಲಿ
ಮಾತು ಹೊರಡುತ್ತಿಲ್ಲ, ಮೌನ ಮಡುಗಟ್ಟಿ...

ಕಿರಣಗಳ ರೆಕ್ಕೆ ಬಿಚ್ಚಿದ್ದ, ತಲೆಯ ಮೇಲೆ ಸೂರ್ಯ,
ಬಿಸಿ ಉಸಿರ ಮಳೆ, ಮನದ ಮೂಲೆಯಲಿ
ಬಿಳಿ ಮೋಡದ ಒಂದು ತುಂಡು ಹೊತ್ತ ಬಾನು
ಕಪ್ಪು ಅಡರಿ ಶುಭ್ರ ನೀಲಿ ಮರೆ ಮಾಚಿತ್ತು ...

ಎಲ್ಲಿ? ಗಾಳಿಯು ಮುಸುಕು ಹೊದ್ದು ಮಲಗಿತ್ತೇನೋ?
ತಿಳಿಯಲಿಲ್ಲ, ಅಲುಗಾಡದ ಮರದ ಎಲೆಗಳ ಮೇಲೆ
ನಿನ್ನೆ ರಾತ್ರಿಯೇ ಬಿದ್ದ ಮಂಜು ಹನಿ, ಕಣ್ಣೀರ
ಪೋಣಿಸಿ ಇಟ್ಟಂತೆ ಭಾಸ, ಅದು ಕಣ್ಣೀರಲ್ಲ!

ಚಿಟ್ಟೆಯೊಂದು ಹೆಗಲ ತಾಕಿ, ಹುಡುಕಿತ್ತು
ಅಲ್ಲಿ ಮಕರಂದವೆಲ್ಲಿಯದು, ಬರಿಯ ಚರ್ಮ
ಮತ್ತೆ ಹೂವ ಅರಸಿ ನಿಂತಾಗ ಅದರ ರೆಕ್ಕೆಯಲಿ
ಕಂಡ ಬಣ್ಣ ಚಿತ್ತಾರ ಕಣ್ಣ ಒಳಗೆ ಅಂಟಿಕೊಳಲಿಲ್ಲ!

ದಿಟ್ಟಿಸಿದೆ, ಎಲ್ಲೋ ಕಂಡ ತೀರ ಅತ್ತ ಕಡೆ
ಒಂದು ದೋಣಿ, ಹುಟ್ಟು ಹಾಕುವವನ ಕೈ
ಅಲುಗಾಟವಷ್ಟೇ ಕಂಡಿದ್ದು ತೇವ ತುಂಬಿದ
ಕಣ್ಣುಗಳ ನೀರ ಪರದೆಯಲ್ಲಿ, ಅವಿತು ನಿಂತು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ