ಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!
ಅಲ್ಲಲ್ಲಿ ನೀರಾಳದ ಮೀನುಗಳ
ಮೆದುತುಟಿಯ ಮುತ್ತು, ಖುಷಿ,
ನನಗೆ ಕಚಗುಳಿ, ಅದೂ ಕ್ಷಣಿಕ
ಮತ್ತೆ ಪಾಚಿಗಟ್ಟುತ್ತವೆ ಮೈಮೇಲೆ
ನಿನ್ನೆ ಹರಿದ ಕೆಸರ ರಾಡಿಗೆ;
ಆಮೆ ಬೆನ್ನೊರೆಸುತ್ತದೆ,
ಸೀಳುನಾಲಿಗೆ ಹಾವ ನಗು
ಅಲ್ಲಲ್ಲಿ ಭಯ ಹುಟ್ಟಿಸುತ್ತದೆ!
ಮೀನ ಹುಡುಕಿ ಮಿಂಚುಳ್ಳಿ
ನನ್ನ ತಲೆಮೇಲೆ ಹೊಂಚು
ಒಂದು ಜೀವ ಕೊಕ್ಕಿನಲಿ
ಹೊಟ್ಟೆಪಾಡು ಅದರದ್ದು,
ನನಗದರ ದುರ್ನಾತ,
ತಲೆಕೆರೆಯುತ್ತೇನೆ ಅಲ್ಲಲ್ಲಿ!
ತೇಲಿಬರುವ ಮರದ ದಿಮ್ಮಿ
ಜೀವ ಬಿಟ್ಟ ಮೀನ ಮರಿ
ಎಲ್ಲ ತಿವಿಯುತ್ತವೆ ನನಗೆ,
ನಾನೋ ನಿಂತಂತೇ ಅಲ್ಲೇ
ಕಲ್ಲು, ಗಟ್ಟಿ ಕಲ್ಲು ಬಂಡೆ,
ನದಿ ಮಾತ್ರ ಹರಿಯುತ್ತಲೇ ಇದೆ,
ಹೊಸ ನೀರ ಹೊತ್ತು ತಂದು
ರಾಡಿಯೋ, ತಿಳಿಯೋ
ಪರಿವೇ ಇಲ್ಲದೇ!
[ಚಿತ್ರಕೃಪೆ: ಗೂಗಲ್ ಇಮೇಜಸ್]
ಜೀವನದಲ್ಲಿ ಏನೇ ಕಷ್ಟ ಬಂದರೂ ಒಂದಿಂಚೂ ಆಸಕ್ತಿಯಿಂದ ಕುಗ್ಗದೆ ಇರುವ ತಟಸ್ತ ಮನಸ್ಸಿಗೆ ನಿಮ್ಮ ಬಂಡೆಗಲ್ಲ ಕವಿತೆಯನ್ನು ಹೋಲಿಸಬಹುದು . ಕವಿತೆ ಬಹಳ ಸೊಗಸಾಗಿದೆ ಪುಷ್ಪಣ್ಣ ....
ಪ್ರತ್ಯುತ್ತರಅಳಿಸಿಬದುಕ ಬಂಡೆಯ ಸುಂದರ ಅನಾವರಣ.ಇತ್ತೀಚೆಗೆ ರಚಿತವಾಗುತ್ತಿರುವ ನಮ್ಮ ಕವಿಗಳ ಕವಿತೆಗಳು ತುಂಬಾ ಭಾವುಕರನ್ನಾಗಿಸುತ್ತಿವೆ.ರವಿ ಸರ್,ಭದ್ರಿ ಸರ್,ನಾನು ಹಾಗೇ ಇನ್ನಿತರರು ಮನಭಾರವಾಗಿಸಿಕೊಂಡು ಕವಿತೆಯ ರಚನೆ ಮಾಡುತ್ತಿರುವರು.ಹೆಚ್ಚಾಗಿ ಮನದ ನೋವು ಯಾತನೆಗಳು ಕವಿತೆಯಾಗುತ್ತಿವೆ.ಈ ಕವಿ ಸಹೃದಯಿಗೂ ಈ ಕವಿತೆಯಲ್ಲಿ ಅಂಥ ಭಾವ ಹರಿದಾಡಿದೆ ಎನಿಸುವುದು.ದಿವ್ಯ ಮೌನಾನುಭೂತಿ ಕವಿಗೆ ಆನಂದ ನೀಡುತ್ತಿರುವಂತೆ ಗೋಚರವಾಗುವುದು.ಜೀವನವೇ ಹಾಗೆ ಇಂದು,ನಾಳೆ,ನಾಡಿದ್ದು ಏನೆಲ್ಲಾ ಬದಲಾವಣೆಗಳನ್ನು ಕಾಣುತ್ತೇವೆ.ಇದು ಚಕ್ರ.ಪ್ರತಿಯೊಂದೂ ಬದಲಾಗಲೇಬೇಕು.ಮೈರಾಡಿ ಮಾಡಿಕೊಳ್ಳಲೇ ಬೇಕು.ಪ್ರಕೃತಿ ನಿಯಮ ತಾನೇ ಇದೆಲ್ಲ!ತಟಸ್ತವಾಗಿದ್ದು ನೋಡುತ್ತೇನೆ ಈ ವಿಸ್ಮಯದ ಗಾಢ ಮೌನವನ್ನು ಎನ್ನುವ ಕಲ್ಪನೆ ಅದ್ಭುತವಾದ,ದಿವ್ಯಾನುಭೂತಿ ನೀಡಿದೆ.ನದಿ ಮಾತ್ರ ಹರಿಯುತ್ತಲೇ ಇದೆ,
ಪ್ರತ್ಯುತ್ತರಅಳಿಸಿಹೊಸ ನೀರ ಹೊತ್ತು ತಂದು
ರಾಡಿಯೋ, ತಿಳಿಯೋ
ಪರಿವೇ ಇಲ್ಲದೇ!
ನೋವು ನಲಿವು
ಪ್ರತ್ಯುತ್ತರಅಳಿಸಿಸೋಲು ಗೆಲುವು
ದ್ವೇಷ ಒಲವು
ಎಲ್ಲವನ್ನೂ ಸಮವಾಗಿ ಎದುರಿಸಿ ಎಂದೂ ಕದಲದೆ ಸಮ ಮನಸ್ಕರಾಗಿ ಬಾಳಬೇಕೆಂಬ ಸಂದೇಶ ಸಾರುವಂತಹ ಅದ್ಭುತ ಕವನ.. ನಿಮ್ಮ ಪ್ರೌಢಿಮೆಗೆಗೊಂದು ಮನಃಪೂರ್ವಕ ನಮನ..
ನಾನು ಸದ್ಯಕ್ಕೆ ಓದಿದ ಕವಿತೆಗಳಲ್ಲಿ ಅತ್ಯಧ್ಬುತ ಕವಿತೆ ಇದು.. ಶುಭವಾಗಲಿ ಸರ್ :)
ಉತ್ತಮ ಪ್ರತಿಮೆಯನ್ನು ಸರಿ ಮಟ್ಟದಲ್ಲಿ ಅರಳಿಸಿದ ಕವಿತೆ ಅಂತ ಸಂತಸ ಪಡುತ್ತೇನೆ.ಬದುಕು ಬಂಡೆಯೇ ಅಂತ ಕೇಳಿದ ಪ್ರಶ್ನೆಯ ಮಾತು ಮತ್ತು ಅದಕುತ್ತರವಾಗಿ ಹಂತ ಹಂತವಾಗಿ ಉತ್ತರವಾಗಿ ತೆರೆದುಕೊಂಡ ಭಾವಗಳು ಸುಂದರ ಅನ್ನಿಸಿತು. ಅಭಿನಂದನೆಗಳು.
ಪ್ರತ್ಯುತ್ತರಅಳಿಸಿಕಲ್ಲಾಗು ಕಷ್ಟಗಳ ವಿಧಿಯ ಮಳೆಸುರಿಯೆ
ಪ್ರತ್ಯುತ್ತರಅಳಿಸಿಎಂಬಂತೆ ಕುಗ್ಗದೆ ಹಿಗ್ಗದೆ ಎಲ್ಲಕ್ಕೂ ಸಿದ್ಧವಾಗಿರಬೇಕಲ್ಲವೇ
ಕವಿತೆಯಲ್ಲಿ ಮೂಡಿಸಿರುವ ಚಿತ್ರಣ ಕಲ್ಪನೆಯ ಲೋಕದಲ್ಲಿ ಇದನ್ನು ಮಾನವನ ಜೀವನಕ್ಕೂ ಹೋಲಿಸಿದರೆ ಎಷ್ಟೆಲ್ಲಾ ಅರ್ಥಗಳ ಸಂದೇಶ ಮತ್ತು ವಿಶ್ಲೇಷಣೆ ದೊರಕಬಹುದು .. ಅದು ಓದುಗರಲ್ಲಿ ಮನವರಿಕೆಯಾದರೆ ನಿಮ್ಮ ಈ ಒಂದು ಕವನ ಕೆಲವು ಜೀವನ ಬಗೆಯಲ್ಲಿ ಬದಲಾವಣೆಯ ಅಲೆಯನ್ನೇ ಎಬ್ಬಿಸುವ ಶಕ್ತಿ ಹೊಂದಿದೆ.. ಸಾಲು ಸಾಲಿಗೂ ವರ್ಣಿಸುತ್ತ ಬಂದ ವಿಚಾರ ಸುಂದರ ಕವಿತೆಯಾಗಿದೆ.. :)
ಪ್ರತ್ಯುತ್ತರಅಳಿಸಿನಿಮ್ಮ ರಚನಗಳಲ್ಲೆಲ್ಲಾ ನನಗೆ ಇಷ್ಟವಾದ ಕವಿತೆ ಇದು ಪುಷ್ಪಣ್ಣ.. ಉತ್ಕೃಷ್ಟವಾದ ಕವಿತೆ..:) ಒಂದು ಅಚಲವಾದ, ತಟಸ್ಥ ಕಲ್ಲು ಬಂಡೆಯ ಜೀವನವನ್ನು ಕವಿ ತನ್ನ ಜೀವನಕ್ಕೆ ಸಮೀಕರಿಸಿಕೊಳ್ಳುವ ಭಾವಗಳು ಉತ್ಕೃಷ್ಟವಾಗಿ ನಿಲ್ಲುತ್ತವೆ.. ಸಾಲುಗಳನ್ನು ಹದವಾಗಿ ಹರಡಿ, ಜೀವನಾಮೃತದ ಜೊತೆಗೆ ಅನುಭವದ ರಸಧಾರೆಯನ್ನು ಬೆರೆಸಿ ಪಕ್ವತೆಗೊರಳಿಸಿದರೆ ಅರಳಬಹುದಾದ ಮುತ್ತು ಈ ಕವಿತೆ.. ಉಪಮೆಗಳ ಮೂಲಕ ಮೇಲೆದ್ದ ಕವಿತೆ, ಕವಿಯ ಪ್ರೌಢಿಮೆಯಿಂದ ಬೃಹದಾಕಾರವಾಗಿ ಬೆಳೆದು ನಿಂತಿದೆ..
ಪ್ರತ್ಯುತ್ತರಅಳಿಸಿಎಡತಟಕ್ಕೊಂದು ಬಂಡೆ ನಾನು
ನಗುತ್ತೇನೆ ಹರಿವ ನದಿನೀರ ಕಂಡು
ದಿನಕ್ಕೊಂದು ರುಚಿ, ನಿನ್ನೆ ಕೆಸರು
ಇಂದು ತಿಳಿ, ನಾಳೆ ಬರಿದು
ಆಗಲೂ ಬಹುದು, ಭಯವಿಲ್ಲ
ನಾನು ಮಾತ್ರ ತಟಸ್ಥ!
ಈ ಸಾಲುಗಳಂತೂ ಕಾಡುತ್ತಲೇ ಇವೆ.. ಮರೆತರೂ ಮರೆಯಲಾಗದ ಭಾವ ಮತ್ತು ಉತ್ಕೃಷ್ಟವಾದ ರಚನೆ..