ಮಂಗಳವಾರ, ಅಕ್ಟೋಬರ್ 1, 2013

ವಲಸೆ ಹಕ್ಕಿಯ ಕತೆ!

ಕಣ್ಣಬಿಟ್ಟವನೆದ್ದು ನಡೆದದ್ದು
ದೂರದೂರಿಗೆ, ಅಲ್ಲಿ ಬರವಿತ್ತೋ,
ಬಾಂದಳದಲಿ ರೆಕ್ಕೆ ಬೀಸುವಾಗ
ನೀರ ಸುಳಿವು, ಕೆರೆ ಮಿಂಚುತ್ತಿತ್ತೋ!

ಇರಬಹುದಿನ್ನೆರಡು ತಿಂಗಳಿಲ್ಲಿ
ಕಾಳಕೂಳನು ಹೆಕ್ಕಿ ತಿನ್ನುತ
ಹಸಿರೊಡಲಲಿ ಉಸಿರ ನೆಕ್ಕುತ
ಹುಡುಕಬೇಕಷ್ಟೇ ಹೊಸಗೂಡು!

ಹುಟ್ಟಿದೂರಲ್ಲ, ಭಯ ಒಳಗೊಳಗೆ
ಚಿಂತೆ, ಮೊಟ್ಟೆ ಇಡಬಹುದೇ ಇಲ್ಲಿ?
ನೆಲೆಯಿಲ್ಲ, ನೆಲೆಯಲ್ಲ, ನೆಲದ ಋಣವಷ್ಟೇ
ಇದ್ದೆರಡು ದಿನವಿಲ್ಲಿ ಉದರ ತಂಪು!

ಮತ್ತೆ ನೀಲಿಯಾಕಾಶ, ಮೇಲೆ ಸೂರ್ಯ,
ಕಾಲಡಿಗೆ ಒಣಗಿದೆಲೆ, ಅಲ್ಲಲ್ಲಿ ಬೆಂಕಿ
ಕೆರೆಬತ್ತಿ ಕೆಸರು ತಳದಿ ಒಣ ಹೆಂಟೆ,
ಬಿಚ್ಚಿ ಬೀಸಬೇಕಿದೆ ಮತ್ತೆ ರೆಕ್ಕೆ!

ಹುಡುಕಬೇಕಿದೆ ಊರು, ಹೊಸತು
ಕತ್ತಲೋ, ಬೆತ್ತಲೋ ನಿಲುಕದಲ್ಲಿ
ನಿಲ್ಲಲಾಗದು ಸ್ಪಷ್ಟ, ಸಾಗಬೇಕೆತ್ತಲೋ!
ಗೆಲ್ಲಹುಡುಕಬೇಕಿದೆ ಕತ್ತಲಾವರಿಸಿದಲ್ಲಿ!

====
ಚಿತ್ರಕೃಪೆ:http://siliconangle.com

1 ಕಾಮೆಂಟ್‌:

  1. ಗುಳೆ ಬಂದವರ ಕಥೆ. ಅಲ್ಲಿ ಹಸಿದ ಹೊಟ್ಟೆಗಳ ತುಂಬಲು ಇಲ್ಲಿ ಹಸಿವನ್ನೂ ಮೀರಿ ದುಡಿಯುವವರ ವ್ಯಥೆ.
    ಬದುಕಿನ ಮಾರ್ಮಿಕ 'ನೆಲೆಯಿಲ್ಲ, ನೆಲೆಯಲ್ಲ, ನೆಲದ ಋಣವಷ್ಟೇ' ನಿಮ್ಮ ಈ ಸಾಲುಗಳು.

    ಪ್ರತ್ಯುತ್ತರಅಳಿಸಿ