ಮಂಗಳವಾರ, ಜೂನ್ 19, 2012

ನಿರಾಳ!

ತಲೆಯಲೊಂದಿಷ್ಟು ಕೂದಲು, ಮೂರಿಂಚಿನ ಹಣೆ
ಕಣ್ಣು ಬಿಟ್ಟು ಕೂತವಗೆ ಮೂಗು ಜೊತೆಗಾರ
ಚಪಲಕೆ ಬಾಯುಂಟು ಇಣುಕ ಬಿಟ್ಟು ನಾಲಗೆಯ!

ತಲೆಯಲ್ಲಾಡಿಸುತ್ತದೆ ಕುತ್ತಿಗೆ ಅಹುದೆನುತ
ಎಲ್ಲದಕೂ ಕೈ ಮುಂದು ಎದೆಗಾನಿಸಿ ನಿಂತು!
ಉಸಿರ ಹಿಡಿದದ್ದು ಬಿಟ್ಟದ್ದು ಶ್ವಾಸಕೋಶದ ಒಳಗೆ
ತಿಂದದ್ದು ತಿಂದುಳಿದದ್ದು ಜಠರ ಹೊತ್ತ ಹೊಟ್ಟೆಯದು!

ರಾತ್ರಿ ಕಳೆದು ಮುಂಜಾನೆ ಹೊರನಡೆಯುತ್ತದೆ ನಿನ್ನೆ,
ಅದರ ಜೊತೆಗೊಂದಿಷ್ಟು ಕಲ್ಮಶ ತೂತ ಹೊರಗೆ
ನೀರೋ, ಘನವೋ ನಿನ್ನೆ ತೇಗಿದ್ದು ಇಂದು ರದ್ದಿ,
ಕಾಲು ನೆಲವೂರಿದ ರಭಸಕೆ ಎರಡಡಿಯ ಮಣ್ಣು ಗಟ್ಟಿ
ಬಾಗಿಲಲಿ ನಿಂತು ಬದುಕು ದೂಡುವವಗೆ!
====

5 ಕಾಮೆಂಟ್‌ಗಳು:

  1. ಚೆಂದದ ಕವನ.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ಪ್ರತ್ಯುತ್ತರಅಳಿಸಿ
  2. ಪ್ರಿಟಿಯ ಹೂವಪ್ಪ...

    ಹೀಗೆಲ್ಲ ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಬರೆಯಬಾರದು ಕಣಪ್ಪ...

    ತತ್ವಿಕತೆಯ ಭಾವಾತಿರೇಕದ ಕಾವ್ಯ ಸೃಷ್ಟಿ.

    ದೇಹ ಮತ್ತು ಆತ್ಮಗಳು ಇಂದಿಗೆ ನಮ್ಮಲ್ಲಿ ಅವಿಭಾಜ್ಯ. ದೇಹದ ವ್ಯಾಪಾರಕ್ಕೆ ಆತ್ಮದ ಸಾಥ್.

    ಜೀವನದಲ್ಲಿ ಏನೂ ಸಾಧಿಸದ. ಬರೀ ಎದ್ದು ಉಂಡು ಮಲಗಿ ಜೀವನ ಸಾಗಿಸುವ ಎಷ್ಟೋ ಸೋಮಾರಿಗಳಿದಾರೆ. ಅವರು ಈ ಕವನದ ಭಾವದಂತೆ ಕೊರಗಬೇಕು. ಆದರೆ, ಅನುಕ್ಷಣ ಬದುಕಿನ ಓಘವನ್ನು ಅರಗಿಸಿಕೊಳ್ಳುವ ನೀವು ಹಾಡಬೇಕಾದ್ದು

    "ಸಂತೋಷಕ್ಕೆ ಹಾಡು ಸಂತೋಷಕ್ಕೆ..." ಎಂದು.

    ಪ್ರತ್ಯುತ್ತರಅಳಿಸಿ
  3. ಬದುಕು ನೀರ ಮೇಲ ಗುಳ್ಳೆಯಂತೆ ಶಾಶ್ವತವಲ್ಲ ಎಂಬ ಸತ್ಯದ ಅರಿವು ಮೂಡಿಸುತ್ತಿದೆ.ನಿಮ್ಮ ಕವನ ಚೆನ್ನಾಗಿದೆ ಅರ್ಥಪೂರ್ಣವಾಗಿದೆ.ಬದುಕಿನ ಇನ್ನೊಂದು ಮುಖವೂ ಇದೆ.ಬದುಕು ಚಹಾದ ಬಟ್ಟಲಿನ ಹಾಗೆ ಕೊನೆಯ ಗುಟುಕು ಇರುವವರೆಗೂ ಅಸ್ವಾದಿಸಿದಾಗ ನಿಜವಾದ ತೃಪ್ತಿ ಸಿಗುತ್ತದೆ ಎನ್ನತ್ತಾರೆ ದೊಡ್ಡವರು. ನನಗೂ ಸತ್ಯವೆನ್ನಿಸುತ್ತದೆ ಕೆಲವೊಮ್ಮೆ.

    ಪ್ರತ್ಯುತ್ತರಅಳಿಸಿ
  4. ರಾತ್ರಿ ಕಳೆದು ಮುಂಜಾನೆ ಹೊರನಡೆಯುತ್ತದೆ ನಿನ್ನೆ,
    ಅದರ ಜೊತೆಗೊಂದಿಷ್ಟು ಕಲ್ಮಶ ತೂತ ಹೊರಗೆ
    ಚಂದದ ಸಾಲುಗಳು.
    ಚೆನ್ನಾಗಿದೆ
    ಸ್ವರ್ಣಾ

    ಪ್ರತ್ಯುತ್ತರಅಳಿಸಿ
  5. ಸರಳ ಪದಗಳ ಸತ್ವಭರಿತ ಸುಂದರ 'ನಿರಾಳ' ಕವಿತೆ..
    ಕಡಿಮೆ ಪದಗಳಲ್ಲಿ ವಿಶಾಲ ಅರ್ಥಕೊಡುವ ನಿಮ್ಮ ಶೈಲಿಗೆ ನಾ ಸೋತೆ! :-)

    ಪ್ರತ್ಯುತ್ತರಅಳಿಸಿ