ಧೂಳೆಬ್ಬಿಸುವ ಹಗ್ಗಕೆ ತೊಟ್ಟಿಲು ತೂಗುವಾಗ
ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ
ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ
ಅದೇ ಕನ್ನಡಕದಲಿ ನಗು ಬೀರಿದ ನೆನಪು!
ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ
ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ
ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!
ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು
ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ-
ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ
ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ!
ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು
ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ
ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ!
ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು
ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು
ನೂರರ ನೋಟಿನಲಿ ನೂರೆನುವಾಗಲೂ
ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ!
ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ
ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ
ಮತ್ತೆ ಐನೂರರ ಗಾಳಿ ಬೀಸುವಾಗಲೂ
ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!
=======
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಅನೇಕ ಭಾವಗಳ ಸಮ್ಮಿಲನವಾದ ಕವಿತೆ.. ಮೂರ್ನಾಲ್ಕು ವಿಚಾರಗಳ ನಗುವಿನ ಕಾವ್ಯ ಕಥೆಯು ತುಂಬಾ ಸೊಗಸಾಗಿದೆ ಸರ್.. :)
ಪ್ರತ್ಯುತ್ತರಅಳಿಸಿಕವನ ಚೆನ್ನಾಗಿದೆ ಗಾಂಧಿ ಹೆಸರು ಹೇಳುತ್ತಲೇ , ಜನರ ಬದುಕಿನಲ್ಲಿ ದುಡ್ಡಿಗೆ ಎಷ್ಟು ಮಹತ್ವ ಹೆಚ್ಚಾಗಿದೆ ಎಂದು ಗಾಂಧಿ ಪೆಚ್ಚಾಗಿದ್ದಾನೆ ಪಾಪ. ಅದಕ್ಕೆ ಆ ತುಂಟ ನಗು.
ಪ್ರತ್ಯುತ್ತರಅಳಿಸಿನಿಗೂಢಾರ್ಥಗಳನ್ನೊಳಗೊಂಡು ಮೂಡಿದ ಸೋಜಿಗದ ಕವಿತೆ.ಮನಸಿನ ತಾಕಲಾಟಗಳಿಗೂ ಗಾಂಧಿಯ ಕನ್ನಡಕದೊಳಗಿಂದ ನೋಡುವ ಕನ್ನಡಕಕ್ಕೂ ನೋಟಿನ ನಂಟನ್ನು ಅರ್ಥಪೂರ್ಣವನ್ನು ಬಳಸಿಕೊಂಡು ಸುಂದರ ಪ್ರತಿಮೆಯೊಂದಿಗೆ ಚಿತ್ರಿಸಿ ಮೂಡಿಸಿರುವ ಕವನದ ಆಶಯ ಇಷ್ಟವಾಯಿತು.
ಪ್ರತ್ಯುತ್ತರಅಳಿಸಿಗಾಂಧಿಯ ಆ ಮಾಸದ ನಗೆಯ ಹಿಂದೆ, ದುಡ್ಡಿನ ಪೊಳ್ಳುತನ, ದರ್ಭಾರು, ನಿರಂತರ ಚಲನತೆ ಮತ್ತು ಅದರ ಅಶಾಶ್ವತೆಯ ಸಂಪೂರ್ಣ ಸಾರವಿದ್ದಂತಿದೆ.
ಪ್ರತ್ಯುತ್ತರಅಳಿಸಿಹಲವು ಆಯುಮಾನಗಳಲ್ಲಿ ತೆರೆದುಕೊಳ್ಳುವ ನಿಮ್ಮ ಕವನದಲ್ಲಿ ಹಣ ಮತ್ತು ಅದಕ್ಕೆ ಎಂದೂ ಬೆಲೆಕೊಡದ ಗಾಂಧಿ ವ್ಯಕ್ತಿತ್ವದ ಹೇಳದ ಹಿನ್ನಲೆಯಿದೆ.
3K - ಸಂಭ್ರಮದ ಸಲುವಾಗಿ ಆಚರಿಸಲ್ಪಟ್ಟ ನವೆಂಬರ್ ತಿಂಗಳಿನ ಅತ್ಯುತ್ತಮ ಕವನಗಳ ಸ್ಪರ್ದೆಯಲ್ಲಿ ನನ್ನ ಕವನ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರತ್ಯುತ್ತರಅಳಿಸಿನನ್ನ ಮೆಚ್ಚಿನ ಕವಿ ಗೆಳೆಯ ಪುಷ್ಪರಾಜ್ ಚೌಟ ರವರ "ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!” ಕವನದ ಜೊತೆ ಹಂಚಿಕೊಂಡದ್ದು ಇನ್ನಷ್ಟು ತೃಪ್ತಿ ತಂದಿದೆ.