ಕೊರಗಿಸಬೇಡ ಓ ಬದುಕೆ ಹೀಗೆ
ಕೆರೆದಡದ ಬುಡಕೆ ಒಂಟಿ ಗಿಡದಂತೆ
ಬರಿಯ ಚಳಿಯನಿತ್ತು ಬೇರಿಗೆ
ಒಣಗಿಸಬೇಡ ನನ್ನೆಲೆಗಳ ಹಸಿರ!
ಆ ಭಾನಿಗೂ ಹೇಳು ನಗಲು
ಅವ ಬೀರುವ ಬಿರು ಬಿಸಿಲಿಗೆ
ಕೆರೆಯ ಕೆಸರ ಕದಡಿಯಾದರೂ
ಕೊಸರುತ್ತೇನೆ ಕಿರು ಚಿಗುರಲಿ!
ಓಲೆಗಳ ಬರೆದು ಕಳುಹಿಸು
ತೇಲುವ ಗಾಳಿಯಲಿ ಜೋಡಿ
ಹಕ್ಕಿಗಳ ಕಲರವಕ್ಕಾದರೂ
ರೆಂಬೆಗಳು ಓಲಾಡಲಿ ಮೈದೂಗಿ!
ಆ ದುಂಬಿಗಳಿಗೂ ಹೇಳು ನನ್ನೆದೆಯ
ಹೂವಿನಲಿ ಪರಾಗ ಬಿತ್ತಿ ಕಾಯಿ
ಕಣ್ಣು ತೆರೆದು ಹಣ್ಣು ಬಣ್ಣದಲಿ
ಬಸಿರಾಗಿ ಯಾರದೋ ಬಾಯಿಯಲಿ
ನೀರೂರಿದಾಗ ನಾನು ಎಲೆಯುದುರಿಸಿ
ನೆಮ್ಮದಿಯಲಿ ನೆಲಕ್ಕೊರಗಬೇಕು!
==========
ಚಿತ್ರಕೃಪೆ: ಮೆಟ್-ಮ್ಯೂಸಿಯಮ್.ಆರ್ಗ್
ನೆಮ್ಮದಿಯನ್ನು ಹೋಲಿಸಿ ವರ್ಣಿಸಿರುವ ಸಾಲುಗಳು ತುಂಬಾ ತುಂಬಾ ಸೊಗಸಾಗಿವೆ .. ಮತ್ತು ಓಲೆಗಳ ಬರೆದು ಕಳುಹಿಸು ...... ರೆಂಬೆಗಳು ಓಲಾಡಲಿ....... ಈ ಕಲ್ಪನೆಯ ವಿಶೇಷತೆ ತುಂಬಾ ಇಷ್ಟ ಆಗಿದೆ ಸರ್.. ಒಟ್ಟಾರೆ ಒಂದು ಆಸಕ್ತಿಯುತ ಆಕರ್ಷಣೆ ಹುಟ್ಟಿಸುವ ಕವಿತೆ.. :)
ಪ್ರತ್ಯುತ್ತರಅಳಿಸಿಬದುಕಿನ ಸಾರ್ಥಕತೆಯಲ್ಲಿ ನೆಮ್ಮದಿಯನ್ನು ಕಾಣುವ ಪರಿಯ ಚಿತ್ರಣ ಸ್ವಾರಸ್ಯಕರವಾಗಿದೆ.
ಪ್ರತ್ಯುತ್ತರಅಳಿಸಿಭಿನ್ನಹ ಸಮಂಜಸವಾಗಿದೆ. ಬದುಕು ಬದುಕಲು ಬಿಡು ತತ್ವದ ಅನಾವರಣ ಇಲ್ಲಿದೆ.
ಪ್ರತ್ಯುತ್ತರಅಳಿಸಿ