ಗುರುವಾರ, ಜುಲೈ 19, 2012

ನನ್ನ ಬರವಣಿಗೆ, ಮಗು ಮೀಸೆ ಮತ್ತು ಜಂಬ!

ಮೊನ್ನೆ ಅಮ್ಮನ ಸೆರಗಿನಡಿಯಲ್ಲಿ
ಮೊಲೆ ಹಾಲು ಕಸಿದು ಕುಡಿವಾಗ
ಕಣ್ಣು ಮಿಟುಕಿಸುತಿತ್ತು ಚಂದದಲಿ!

ಒಂದೆರಡು ದಿನ ಮೊಣಕಾಲೂರಿ
ನೆಲಕೆ ಮುತ್ತಿಕ್ಕಿ ಮಣ್ಣು ನೆಕ್ಕುವಾಗ
ನಾಲಗೆಗೊಂದಿಷ್ಟು ರುಚಿ ಒಗರು!

ಅಲ್ಲಲ್ಲಿ ತೆವಳು ಹೊಟ್ಟೆಯುಜ್ಜಿ ಅಳು
ಗೋಡೆಗಾನಿಸಿ ಕೈ, ಕಾಲೆತ್ತಿ ಹೆಜ್ಜೆ
ಬಾಗಿಲ ಬೆಳಕಿನಲಿ ತುಟಿಯಂಚ ನಗು!

ಚೆಂಡು ಕಂಡಿದೆ ಅಂಗಳದಲಿ ಆಟ
ಪರಚು ಗಾಯಕೆ ಅಮ್ಮನ ಚಾಟಿ
ಹಾಸಿಗೆಯಲಿ ಉಚ್ಚೆಯಿಲ್ಲದೇ ಈಗ
ಮಗುವಲ್ಲ, ತುಟಿ ಮೇಲ್ಗಡೆ ಮೀಸೆ!

ಗಡ್ದ ಬಲಿತಿದೆ, ಪುಟಿಯುತ್ತಿದೆ ಮನ
ಹೆಜ್ಜೆಹೆಜ್ಜೆಗೂ ಧೂಳು, ಸೂರ್ಯ ಮಂಕು!
ನೆನಪಿಲ್ಲವೀಗ ಅಮ್ಮನ ದುಂಡು ಮೊಲೆ!

ಹಾಲು ಎಳೆದ ಹಲ್ಲು-ಬಾಯಿ ವಾಸನೆ
ಕಿಸಿಯುತ್ತಿದೆ ಮೂಗುಮುರಿದು ಮಗು
ಮೀಸೆ ಬೆಳೆಸಿ ಗಡ್ದ ಬಲಿತು ಹಣ್ಣಾಗಿ!

2 ಕಾಮೆಂಟ್‌ಗಳು:

  1. ಒಂದು ಬದುಕಿನ ಚಿತ್ರ ಕಟ್ಟಿಕೊಟ್ಟಿದ್ದೀರ.

    ಬಾಲ್ಯದಿಂದ ಯವ್ವನಾವಸ್ಥೆಯವರೆಗಿನ ಈ ಯಾನ ಮತ್ತು ಅಮ್ಮ ಎರಡೂ ತಟ್ಟಿದವು.

    ಪ್ರತ್ಯುತ್ತರಅಳಿಸಿ
  2. ಮಾನವ ಬದುಕನ್ನು ಚನ್ನಾಗಿ ನಿರೂಪಿಸಿದ್ದೀರಿ.ತಾಯೊಡಲಿಂದ ಬಂದ ಮಗು ಮುಪ್ಪಾಗುವವರೆಗೆ,ಅಂತ್ಯವಾಗುವವರೆಗೆ ಅಥವಾ ಆಯುಷ್ಯ ತೀರುವವರೆಗೆ ತನ್ನ ಯಾನವನ್ನು ಪೂರೈಸಲೇಬೇಕು.ಈ ಸ್ಥಿತಿಯನ್ನು ಕಣ್ಣಿಗೆ ಕಟ್ಟಿದ್ದೀರಿ.ಚನ್ನಾಗಿದೆ.

    ಪ್ರತ್ಯುತ್ತರಅಳಿಸಿ