ಸೋಮವಾರ, ಆಗಸ್ಟ್ 6, 2012

ಸ್ವಾತಂತ್ರ್ಯ!

ಮೊನ್ನೆ ಬ್ರಿಟಿಷರ ಕಂಕುಳಲ್ಲಿ ಮಲಗಿದ್ದ ಮಗು
ಆ ಇಂಗ್ಲಿಷ್ ಜೋಗುಳದಲಿ ಅಮಲೇರುವಾಗ
ತೊಟ್ಟಿಕ್ಕಿದ ಉಚ್ಚೆಯ ವಾಸನೆ ಇನ್ನೂ ನಿಂತಿಲ್ಲ!

ನೋಟಿನ ಕಂತುಗಳಲ್ಲಿ ಗಾಂಧಿಯ ನಗು ಚೆಲ್ಲಿ
ಭದ್ರಕೋಣೆಗಳಲ್ಲಿ ಬಂಧಿಯಾದಾಗ ಬಿಳಿಟೊಪ್ಪಿ-
ಕರಿಕೋಟಿನ ತುಟಿಗಳಲ್ಲಿ ಕೆಂಪು ಎಲೆಯಡಿಕೆ!

ಉರಿಸೂರ್ಯನ ನೀಲಿ ಬಿಸಿಲಿಗೆ ಸೆಟೆದೆದ್ದ ಗದ್ದೆಯ-
ಒಣಹೆಂಟೆಗಳು ಕೊಳೆತ ಈರುಳ್ಳಿಯ ಚಿಗುರಿನಲಿ
ಹೇಲುವಾಸನೆಯ ಪುಟಿದೇಳಿಸುವಾಗ ವಾಕರಿಕೆ ವಾಂತಿ!

ಸರಳುಗಳ ಹಿಂದೆ ಸೆರೆಯಾದವರ ಮನೆಗಳಲಿ
ಬಂಗಾರದ ಬೆಳಕಿನ್ನೂ ಕಣ್ಣು ಬಿಡುವಾಗ
ಬೀಡಿಯ ಹೊಗೆ ಬೀದಿ ಕಾವಲುಗಾರನ ಕಿಸೆಗಳಲಿ!

ಕರೆಂಟಿನ ಸ್ಮಶಾನದಲಿ ತಿಂದು ತೇಗಿದವನ ಹೆಣ
ಸುಟ್ಟು ಬೂದಿಯಾದಾಗಲೂ ತಲೆ ಬೋಳಿಸುವವನ
ಕತ್ತರಿ ಕಿಚಗುಡುತ್ತಲೆ ಕತ್ತರಿಸುತ್ತದೆ ಬೋಳುತಲೆ!

ನಾವೆಲ್ಲ ಸ್ವತಂತ್ರರು ನಮ್ಮ ಮನೆಯ ಮೂಲೆಯಲಿ
ಎಣ್ಣೆಯೆರೆದು ಬತ್ತಿಹಾಕಿ ದೀಪ ಉರಿಸಲು
ಇನ್ನೊಬ್ಬರ ಮನೆಯ ಸುಡಲು ಆ ಬೆಂಕಿಯಲೇ!
=====
ಚಿತ್ರಕೃಪೆ: ಫ್ಲಿಕರ್.ಕಾಮ್

4 ಕಾಮೆಂಟ್‌ಗಳು:

  1. ಸ್ವಾತಂತ್ರ್ಯದ ನಿಜ ಅರ್ಥ ಅನ್ವೇಶಣೆಗೆ ಹೊರಟ ಕವಿ, ಸ್ವಾತಂತ್ರ್ಯಾ ನಂತರದ ವೈರುಧ್ಯಗಳನ್ನು ಮನಮುಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ.

    ಕೊಳೆತ ಈರುಳಿ, ಕರೆಂಟಿನ ಸ್ಮಶಾನ ಮತ್ತು ಅಪರಾತ್ರಿಯ ಸ್ವಾತಂತ್ರ್ಯ ಘೋಷಣೆ ಹೀಗೆ ಸಾಲು ಸಾಲು ಬರುವ ಚಿತ್ರಗಳಲ್ಲಿ ಕವಿಯ ಗ್ರಹಿಕೆಯು ನಮಗೆ ಅಚ್ಚರಿ ತರಿಸುತ್ತದೆ.

    ಉತ್ತಮ ಕವನವಿದು. ಮುಂದೊಮ್ಮೆ ತಾವು ಕವನ ಸಂಕಲನ ಮಾಡುವಾಗ, ಮೊದಲ ಕವನ ಇದೇ ಆಗಿರಲಿ.

    ಪ್ರತ್ಯುತ್ತರಅಳಿಸಿ
  2. ಕವಿ ಮನಸು ವ್ಯವಸ್ಥೆಗೆ ಘಾಸಿಗೊಂಡು ಕಳವಳ,ಚಟಪಡಿಕೆಯನ್ನು ತನ್ನ ರೋಷವನ್ನು ಸ್ವಾತಂತ್ರ್ಯದ ಈ ಸಂದರ್ಭದಲ್ಲಿ ಈ ಕವಿತೆಯ ಮೂಲಕ ಹೊರಹಾಕಿದೆ.ಶಕ್ತಿಶಾಲಿ ಮತ್ತು ಗಟ್ಟಿ ಕವಿತೆ.ಅಗಾಧವಾದ ಚಿಂತನೆ,ಸುಂದರ ನಿರೂಪಣೆ.

    ಪ್ರತ್ಯುತ್ತರಅಳಿಸಿ
  3. ಸ್ವಾತಂತ್ರ್ಯ ದ ಬಗ್ಗೆ ಉತ್ತಮ ಕವನ...
    ಕವಿತೆ ಹಾಗೆ ಓದುಗನನ್ನು ಆವರಿಸುತ್ತ ಹೋಗುತ್ತದೆ.. ಚಿಂತನೆಗೆ ಹಚ್ಚುತ್ತದೆ...
    ಚೆನ್ನಾಗಿದೆ ಸರ್...

    ಪ್ರತ್ಯುತ್ತರಅಳಿಸಿ
  4. vaav... sundara kaviteya svaatantrya..... vaastavadeDegina rosha, hesige ellaa tumbide kavanadalli... tumbaa sogasaagide sir..

    ಪ್ರತ್ಯುತ್ತರಅಳಿಸಿ