ಜಾತಿ-ಜನಿವಾರಗಳ ಗಂಟೆಳೆದು ನೇಣು ಹಾಕಹೊರಟವರೆ
ಕೇಳಿ ನೀವರೆಕ್ಷಣ ನಿಮ್ಮ ಸೊಂಟದೊಳು ನೂಲಿಹುದೆ?
ಕೀಳ ಹೊರಟಿರಿ ಎಂದೆನದಿರಿ ಬೇದಭಾವಗಳ ಬರಿದೆ ಬಾಯಲಿ
ನಿಮ್ಮ ನರನಾಡಿಗಳಲಿ ಹರಿವ ನೆತ್ತರು ಕೆಂಪಗಿರಲಿ ಮೊದಲು!
ಬೀಳದಿರಿ ಹೊಟ್ಟೆಯೊಳಗಿಂದ ನೇರನೆಲಕೆ ಮಣ್ಣಾದೀತು ಜೋಕೆ,
ಮೊಲೆಹಾಲು ಉಂಡುಬನ್ನಿ, ನಾಲಗೆಯ ಕೆಸರು ತೊಳೆದೀತು,
ಕರುಳಕರೆಗೊಮ್ಮೆ ಕಿವಿಗೊಟ್ಟು, ಕಣ್ತೆರೆದು ಜೊಲ್ಲು ಸುರಿಸೆ,
ರುಚಿಯಾದೀತು ತಾಯ್ನೆಲ, ಬಳಿಕ ಕಿರುಚುವಿರಂತೆ ಬಾಯ್ತೆರೆದು!
ಕೊರೆಯದಿರಿ ಕನ್ನ, ಕಂದರಗಳ ಅಗೆದು ಕುಹಕಿಯಾಗದಿರಿ
ಕಹಿಯುಣ್ಣುವವರು ನೀವೇ ಮುಂದೊಮ್ಮೆ ಬಿದ್ದು ಅದರೊಳಗೆ!
ಸಾವನಪ್ಪದಿರಿ ಉಸಿರ ಒಳಗಿಟ್ಟು ಕೆಸರೊಳು ಹೂತಂತೆ ಜೀವ,
ಕಳೆಯಾಗದಿರಿ ಹಸಿರ ಪೈರೊಳಗೆ ಬುಡ ಕೊರೆವ ಹುಳದಂತೆ!
ತೆರೆಯ ಬನ್ನಿ ನಿಮ್ಮೆದೆಯನು, ಮುದ್ದಿನಲಿ ಮಾನವತೆಯ ಸಾರ ಬನ್ನಿ,
ಸವಿಯ ಬನ್ನಿ ಸತ್ವವಿಹುದು ಐಕ್ಯದಲಿ, ಭಾವೈಕ್ಯದ ಬೆಸುಗೆಯಲಿ!
====
ಚಿತ್ರಕೃಪೆ: ಗೂಗಲ್ ಇಮೇಜಸ್
ಜೀವಕ್ಕೆ ಭಾವ ಬೇಕು...
ಪ್ರತ್ಯುತ್ತರಅಳಿಸಿಭಾವಕ್ಕೆ ಸ್ನೇಹ ಬೇಕು
ಸ್ನೇಹಕ್ಕೆ ಸುಮಧುರ ಮನ ಬೇಕು..
ಮನಕ್ಕೆ ಭಾವಯೋಗ ಬೇಕು..
ಎಲ್ಲದ್ದಕ್ಕೂ ಮನೋಭಾವ ಇರಬೇಕು..
ಅಂತಹ ಮನೋಭಾವದ ಸುಂದರ ಸಾಲುಗಳು...ಅಭಿನಂದನೆಗಳು