ಗುರುವಾರ, ಜುಲೈ 11, 2013

ಕಷ್ಟ-ಕಡಲು!

ಪಡುವಣದೆದೆಯಾಳದೊಳಗಿಂದೆದ್ದ
ಕರಿಮೋಡಗಳ ದಿಟ್ಟಿಸುತ್ತಾ ನಡೆದೆ,
ನೀಲಬಾನವಿತು ಕಪ್ಪಡರತೊಡಗಿತ್ತು ಕಣ್ಣು!

ಕುಳಿರ್ಗಾಳಿಯೊಡಗೂಡಿಯೊಂದಷ್ಟು
ಕಡಲಲೆಯ ಲವಣ ಮುಖಕೆರಚುತಿದ್ದಂತೆ
ಬಿರುಸ ಹೆಜ್ಜೆಗಳು ಮರಳೊಳಗಡಗುತಿದ್ದವು!

ಕರುಳಾಳದೊಳಗಿನಾಕ್ರಂದನವು
ಅಲೆಗಳಟ್ಟಹಾಸದಿ ಮಸುಕಾಗಿ
ಬಲೆಬೀಸಿ ಸೆಳೆದಂತೆ ಉಸಿರಕಣ!

ಮುಳುಗುತಿರಬಹುದೆನುವಂತೆ ಅನತಿ
ದೂರದೀ ನೌಕೆ, ತಾಳಿ ಹೊಡೆತಗಳ
ತೀರದಾಸೆ, ಮರಳಿ ದಡವ ಪಡೆವುದೆಂತು?

ಕಾಯುತ್ತಿದೆ ಕಾಲ? ಎತ್ತಿಡಲು
ಮರಳೊಳಗಿಂದ ಹೂತಹೆಜ್ಜೆಗಳ,
ಗಾಳಿ ಬಂದೆಡೆಗೆ ಹಾಯಿ, ನೌಕೆ!
======
ಚಿತ್ರಕೃಪೆ: ಗೂಗಲ್ ಇಮೇಜಸ್

2 ಕಾಮೆಂಟ್‌ಗಳು:

  1. ಬದುಕನ್ನು ಸಮೀಕರಿಸಿದ ರೀತಿಯಲ್ಲೇ ಈ ಕವನದ ಗೆಲುವಿದೆ.

    ಅಗಾಧ ಕಡಲಂತಿರುವ ಬದುಕಿನಲ್ಲಿ ಸೂತ್ರ ಸಂಬಂಧಗಳಿಲ್ಲದ ಹಾಯಿ ದೋಣಿಯ ಅನಿಶ್ಚಿತ ಬದುಕು ನಮ್ಮದು. ತೇಲುವೆವೋ ಮುಳುಗುವೆವೋ ಅರಿವಿಗೆ ಬಾರದಲ್ಲ!

    ಒಳ್ಳೆಯ ಕವನ.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ಕವನ... ಹಾಯು ದೋಣಿಯ ಅವಲಂಬಿಸಿರುವ ಜನರೆಷ್ಟೋ ಅವರ ಬದುಕು ಕಡಲನ್ನೇ ಆವರಿಸಿರುತ್ತೆ.
    ಕಾಯುತ್ತಿದೆ ಕಾಲ? ಎತ್ತಿಡಲು
    ಮರಳೊಳಗಿಂದ ಹೂತಹೆಜ್ಜೆಗಳ,
    ಗಾಳಿ ಬಂದೆಡೆಗೆ ಹಾಯಿ, ನೌಕೆ! - ಈ ಸಾಲುಗಳು ತುಂಬಾ ಇಷ್ಟವಾಯ್ತು

    ಪ್ರತ್ಯುತ್ತರಅಳಿಸಿ