ಗುರುವಾರ, ಆಗಸ್ಟ್ 8, 2013

ಬಿದ್ದಂತೆಲ್ಲ ಕಾಯಿ?

ಯಾರದೋ ಕೊಕ್ಕಿನ ಪರಾಗಸ್ಪರ್ಶಕೆ
ಅದಾವುದೋ ಗಿಡದಿ ಹೂ ಚಿಗುರಿ ಕಾಳಾಗಿ
ಬಲಿತು ಹಣ್ಣಾಗಿ, ಒಳಗೊಳಗೆ ಬೀಜ
ಹೊರಗಣ ಒಡೆಯಲಾಗದ ನಿಷ್ಠುರ ಸಿಪ್ಪೆ!

ನಾರುತ್ತದೆ ಕೊಳೆತು, ಕಾಲ ಮೀರಿದರೆ,
ಇನ್ನಾರದೋ ಕೈಚಾಚುತ್ತಾರೆ ಆಸೆಯಲಿ
ಕಿತ್ತು ತಿನ್ನುವುದಕೆ, ಅರ್ಧ ಕಚ್ಚುವುದಕೆ!
ನಿಲ್ಲಬೇಕೆನಿಸುತ್ತದೆ ಎಲ್ಲೋ ಮೇಲೆ, ಇಲ್ಲಲ್ಲ!

ಹುಳಿ ಒಗರು ಕಾಯಿ ಸೊನೆ ಸೇರುವುದಿಲ್ಲ,
ಕೆಲವೊಮ್ಮೆ ಬಲಿತರೂ, ನಾಲಗೆಗೆ ಸಪ್ಪೆ,
ಒಪ್ಪುವುದಿಲ್ಲ ಸಿಹಿ, ಹುಳುಕಿರುವಾಗ,
ಹಿತ ಕಹಿ ಹಲಬಾರಿ ಕಚಗುಳಿಯಿಡುತ್ತದೆ!

ದಿನ ಬಂದಂತೆಲ್ಲ ತೊಗಟೆಗೂ ಭಾರ
ಒಣಗಿಬಿಡುತ್ತದೆ ಕಿತ್ತೆಸೆದು ದೊಪ್ಪನೆ
ಬಿದ್ದುದಕೆ ಮುಖಕೆ ಹಸಿ ಸೆಗಣಿಯ ಬಣ್ಣ,
ಓಹ್ ಗೊಬ್ಬರ, ನಗು ಬೀಜದೊಳಗೆ!

ಸುತ್ತ ಸುಡುಮಣ್ಣು, ಬಿಸಿಯೆದೆಯ ಬಿಸಿಲು,
ಬಾನಲಿ ಕಡಲ ಹನಿ ಹೀರಿದಾ ಕರಿ ಮೋಡ,
ಹಾರಿ ಬರುವ ಗಾಳಿ, ಧೂಳಕಣಗಳ ನಡುವೆ
ಮೊಳಕೆಯೊಡೆಯಬೇಕೆನಿಸುತ್ತದೆ ಅದರ ಮನಕೆ!

======
ಚಿತ್ರಕೃಪೆ:
http://www.123rf.com

2 ಕಾಮೆಂಟ್‌ಗಳು:

  1. "ಕೆಲವೊಮ್ಮೆ ಬಲಿತರೂ, ನಾಲಗೆಗೆ ಸಪ್ಪೆ" ಎನ್ನುವ ಹಾಗೆ ನನ್ನಂತಹ ಕೆಲ ಕವಿಗಳ ಒರತೆಗಳು! ನಿಜ ಅವು ತೊಗಟೆಗೂ ಭಾರ!!

    ಆದ ಮೀರಿಯೂ ನೂರು ಹಿಂಸೆಗಳ ನಡುವೆಯೂ ಅಜ್ಞಾತ ಬೀಜಕ್ಕೆ ನಿಂತ ನೆಲದಲ್ಲೇ 'ಮೊಳಕೆಯೊಡೆಯಬೇಕೆನಿಸು' ಆಶಯ ತುಂಬುತಿದ್ದೆ ಈ ಕವಿತೆ. ನಿಜವಾಗಲೂ ನಾಟಿತು.

    ಪ್ರತ್ಯುತ್ತರಅಳಿಸಿ
  2. ಹುಟ್ಟು ಎಂದಿಗೂ ಪ್ರಕೃತಿಕ ಸಂಕೇತ...ಮನಕ್ಕೆ ಬೇಕೆನಿಸಿದರೂ ಬೇಕೆನಿಸದೆ ಇದ್ದರು ಮೊಳಕೆಯೊಡೆಯಲೇ ಬೇಕು.

    ಪ್ರತ್ಯುತ್ತರಅಳಿಸಿ