ಸೋಮವಾರ, ಜನವರಿ 6, 2014

ಮುಂದೆ ಬರುವವರಿಗೆ...?

ಘೀಳಿಡದಿರಿ ಪ್ರೇತಗಳೇ ಮಸಣದೊಳಗೆ
ಹಳೆಯ ಗೋರಿಗಳ ಕೆದಕಿ ಒಳಹೊಕ್ಕು,
ಉರಿದೆಲುಬುಗಳ ಬರಿಯ ಬೂದಿಯಿಹುದಲ್ಲಿ,
ಕತ್ತಲದು, ನೋಡಿ ಗುಡ್ಡಗಳೆಡೆಯಲಿ ಬೆಳಕು!

ನರಳದಿರಿ ಆತ್ಮಗಳೇ ಒಣಬಿದಿರ ಚಟ್ಟದೊಳಗೆ
ಕರಕಲಾಗಿಹುದು ತೊಗಲೆಂದು, ಸುಡುವುದಷ್ಟೇ
ಬಾಕಿಯಿಹುದಲ್ಲಿ, ಬೇಯುವುದು ಸಲ್ಲ ಬಿಸಿಲಲ್ಲಿ
ಉಸಿರಾಡಿ ಒಂದಡಿಯನಿಡಿ ಬುವಿಗೆ, ತಂಪಿಹುದು!

ಎಲ್ಲ ನೋಡುವರೆಂದು ಎಗರದಿರಿ ಬಿಸಿರುಧಿರದಲಿ
ಮರುಕವಲ್ಲಿ ಕಣ್ಣ ಬಿಡುವವರೊಳಗೆ, ಒಣಗಿಸದಿರಿ
ನರಗಳನು, ಬರಿದೆ ದಣಿವಾಗಬಹುದು ನಾಲಗೆಯಾರಿ,
ತಿಳಿನೀರ ಕುಡಿಯಿರೊಮ್ಮೆ ನಿಮ್ಮ ಹುಚ್ಚಿಳಿಯಬಹುದು!

ಹಗ್ಗಬಿಚ್ಚುವವರಿಲ್ಲ ನಿದ್ದೆಯೊಳಗಿರಿ, ಅರಚುವಿರೇಕೆ?
ನಿಮ್ಮದೇ ತೊಟ್ಟಿಲು, ತೂಗಬಹುದೆಲ್ಲ ಹಿತವಾಗಿ,
ಎಲ್ಲ ನಾಲಗೆಯಲೂ ಅಮ್ಮನದೇ ಮೊಲೆಹಾಲು,
ಮುಂದಿಲ್ಲವೆನದಿರಿ, ಹಿಂದುಳಿಯದಿರಿ ಮುಂದೆಬನ್ನಿ!

===
ಚಿತ್ರಕೃಪೆ:wodumedia.com

3 ಕಾಮೆಂಟ್‌ಗಳು:

  1. ತಮ್ಮದೇ ಕೂಪದಿ ಈಸುಬಿದ್ದ ಅಲ್ಪ ತೃಪ್ತರು ಅರಿಯಬೇಕಿದೆ ಇನ್ನಾದರೂ ಪಥವ.
    ಮುಂದಿಲ್ಲವೆನ್ನದೆಯೇ, ಹಠಕ್ಕೆ ಬಿದ್ದಾದರೂ ಸೈ 'ಹಿಂದುಳಿಯದಿರಿ ಮುಂದೆಬನ್ನಿ!' ಎಂಬ ಧೈಯವಾಕ್ಯವ ನೆನೆಯುತ.

    ಪ್ರತ್ಯುತ್ತರಅಳಿಸಿ
  2. ತಾತ್ವಿಕ ಸಂದೇಶ ಹೊತ್ತುಕೊಂಡು ಎಚ್ಚರಿಕೆಯಿಂದ ಹೆಜ್ಜೆಯಿಟ್ಟು ಜಾಗೃತರಾಗಿ ಮುಂದೆ ಬನ್ನಿ ಎನ್ನುವ ಕವಿವಾಣಿ ಇಷ್ಟವಾಗುವುದು.ಇಲ್ಲಿ ಎಲ್ಲರೂ ಒಂದೇ ಹಿಂದುಳಿಯದೇ ಮುಂದೆ ಸಾಗಲು ಪ್ರಯತ್ನಿಸಿರಿ ಎನ್ನುವ ಸಮಾಜಮುಖಿ ಆಲೋಚನೆ ಹಿತ ನೀಡುತ್ತದೆ.ಸುಂದರ ಗಟ್ಟಿ ಅಕ್ಷರ ಸಂಪತ್ತಿನ ಪದ ಸಮೂಹ ಕವಿತೆ ವಾಚಿಸಲು ಹಿತ ನೀಡುವುದು.ಅತ್ಯಂತ ಧ್ಯಾನದಿಂದ ಕೂಡಿದ ರಚನೆ,ನರಳದಿರಿ ಆತ್ಮಗಳೇ ಒಣಬಿದಿರ ಚಟ್ಟದೊಳಗೆ,ಘೀಳಿಡದಿರಿ ಪ್ರೇತಗಳೇ ಮಸಣದೊಳಗೆ,ಎಗರದಿರಿ ಬಿಸಿರುಧಿರದಲಿ,ಎಲ್ಲ ನಾಲಗೆಯಲೂ ಅಮ್ಮನದೇ ಮೊಲೆಹಾಲು,.....ಈ ಮುಂತಾದ ಸಾಲುಗಳು ಹೆಚ್ಚು ಅರ್ಥಪೂರ್ಣವಾಗಿದ್ದು ಚಿಂತನೆಗೆ ಹಚ್ಚುವ ಬದ್ಧತೆಯನ್ನು ಮೆರೆದಿವೆ.

    ಪ್ರತ್ಯುತ್ತರಅಳಿಸಿ
  3. ಸಮಾಜಮುಖಿಯಾದ ಕವನ, ಧ್ವನಿಯಲ್ಲಿ ಹಿಂದುಳಿದವರನ್ನು ಮುಂದೆ ಬನ್ನಿ ಎನ್ನುವ ಸಹೃದಯತೆಯಿದೆ. ಸಮಾನಾವಕಾಶ, ಸಮಾನ ಸಾಧ್ಯತೆಗಳಿದ್ದರೂ ಸೋಮಾರಿತನಕ್ಕೋ, ಅಜ್ಞಾನದ ಭ್ರಮೆಯಲ್ಲೋ ಹಿಂದೆ ಉಳಿಯುವವರನ್ನು ಛಾಟಿಯೇಟು ಕೊಡುವ ಮೂಲಕ ಎಚ್ಚರಿಸಿದಂತಿದೆ. ಎಂದಿನಂತೆ ಸುರುಳಿ ಸುತ್ತಿ ಇಳಿಯುವ ಕವಿತೆ. ಇಷ್ಟ ಆಯ್ತು ಪುಷ್ಪಣ್ಣ :)

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ