ಬುಧವಾರ, ಅಕ್ಟೋಬರ್ 17, 2012

ಮಾಧ್ಯಮದಧಮರಿಗೆ!

ಕೊರೆವ ಕೊರೆತಕೆ ಕೊನೆಯಿರದ
ಕೊನೆಮೊದಲಿಲ್ಲದ ಅರಿವಿನ ರೇಸು ಕುದುರೆ!
ಇದು ಮೀಡಿಯಾ ಕಣಣ್ಣ, ಮಾಯಾ ಮಾಧ್ಯಮ!

ಅಕಾಲ ಕವಡೆ, ಹಣೆಗೆ ಮೂರುಪಟ್ಟಿ
ಹೇಳಿದ್ದೆಲ್ಲ ವೇದವಾಕ್ಯ, ವೀಡಿಯೋ ಸಾಕ್ಷಿ!
ನೇರಪ್ರಸಾರಕೆ ನರಮಂಡಲವಿಲ್ಲದೆಯೆ ರಕ್ತ!

ಬಿಳೀಪಂಚೆ, ಕರಿಕೋಟು, ಕಾವಿಗಳ ನೆರಳು
ಕೋವಿ ಕಳುವಾದರೂ ನಡುರಾತ್ರಿಯಲಿ ಗುಂಡು!
ನೋಡುವವ ಇಣುಕಿದಾಗಲೆಲ್ಲ ನಿನ್ನೆಯದೇ ಚೆಂಡು!

ಎನಲುಂಟೆ ಹೀಗೂ ಉಂಟೆ? ತಡರಾತ್ರಿಯಲಿ ಕಟ್ಟೆಚ್ಚರ!
ಹುಚ್ಚರಬ್ಬರ ನಡುರಾತ್ರಿಯ ಕಡಲಳೆಗಳಂತೆ ಭೋರ್ಗರೆತ
ಕೆಡಿಸದಿರಿ ಸ್ವಾಸ್ಥ್ಯ ರಾಮನಗರ ಸ್ವಾಮಿಗಳ ಎಳೆತಂದು!

ಖಾಲಿಯಾಗಿವೆ ನಿಮ್ಮ ತಲೆಗಳು ಬೋರು ಹೊಡೆಸದಿರಿ,
ಬ್ರೇಕಿಂಗುಗಳಲ್ಲ ಎಲ್ಲ ವಾರ್ತೆಗಳು ಹಂದಿ ನೆಗೆದಂತೆ ಗುಂಡಿಗೆ!
ಮಂಡೆ ಬೋಳಿಸಿ ಕೈಕಟ್ಟಿದೊಡೆ ನೀವಲ್ಲ ಉತ್ತಮರು ವರದಿಗೆ!

ಮೊಂಡುತನ ಬಿಡಿ, ನಾವೆಲ್ಲವ ನೋಡುವ ಮರುಳರಲ್ಲ
ಮರುಗುತ್ತವೆ ನಮ್ಮ ಮನಗಳೆಂದು ನೀವೆಣಿಸದಿರಿ
ನಿಮ್ಮ ಬುಡುಬುಡಿಕೆ ನಾಲಗೆ ಕೆದರೋ ಕಾಟಕೆ!
======
ಚಿತ್ರಕೃಪೆ: ಗೂಗಲ್ ಇಮೇಜಸ್
============
ಪ್ರೇರಣೆ: Pavan Parupattedara [https://www.facebook.com/parupattedara]
ಮೂಲವಿಷಯ, ಕೆಲ ಸಾಲುಗಳ ಉದಾಹರಣೆಗಳು ನನ್ನಾತ್ಮೀಯ, ಪ್ರಿಯ ಮಿತ್ರ ಪವನ ಪಾರುಪತ್ತೇದಾರರ ಒಂದು ರಚನೆಯಿಂದ

1 ಕಾಮೆಂಟ್‌:

  1. ಪುಷ್ಪಣ್ಣ.., ಮಾಧ್ಯಮದ ಅಧಮರಿಗೆ ಮುಟ್ಟಿ ನೋಡಿಕೊಳ್ಳುವಂತೆ ಜಾಡಿಸಿದ್ದೀರಿ. ಈ ಮಾಯಾ ಪೆಟ್ಟಿಗೆಯಲ್ಲಿ ಕುಳಿತು ಮೂಢನಂಬಿಕೆಗಳನ್ನು ವೈಭವೀಕರಿಸುವ, ಜನರ ನಂಬಿಕೆಗಳ ಮೇಲೆ ಸವಾರಿ ಮಾಡುತ್ತಿರುವ ನರೇಂದ್ರ ಶರ್ಮನಂತಹ ಬೂತ ಬಿಡಿಸುವ ವ್ಯಕ್ತಿಯ ಬಾಯಲ್ಲಿ ಭಗವದ್ಗೀತೆ ಬೋಧಿಸುವ ಕಾರ್ಯಕ್ಕೆ ಮುಂದಾಗಿರುವ ವಾಹಿನಿಗಳಿಗೆ ಚನ್ನಾಗಿ ಉಗಿದಿದ್ದೀರಿ. ಕ್ರೈಂ ಸ್ಟೋರಿ ಎಂಬ ಹೆಸರಲ್ಲಿ, ಕ್ರೈಂ ಮಾಡುವುದು ಹೇಗೆಂದು ತೋರಿಸುವ ಸುದ್ಧಿ ವಾಹಿನಿಗಳು ಸಮಾಜಮುಖಿಯೇ ಎಂಬ ನಿಮ್ಮ ಪ್ರಶ್ನೆ ಸಕಾಲಿಕವಾಗಿದೆ. ನಿಮ್ಮ ಬುಡುಬುಡಿಕೆಯನ್ನು ಕೇಳಲು ನಾವು ಕುರಿಗಳಲ್ಲ ಎಂದು ಸಾತ್ವಿಕ ಎಚ್ಚರಿಕೆ ನೀಡಿರುವುದು ಸರಿಯಾಗಿಯೇ ಇದೆ. ನಿಜಕ್ಕೂ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಾಗಿದೆ. ಸುದ್ದಿಯ ಹುಚ್ಚಿಗೆ ಬಿದ್ದು, ಬಚ್ಚಲು ಸಂಡಾಸು ವಿಷಯಗಳೆನ್ನದೆ ಎಲ್ಲವನ್ನು ಬಡಪಾಯಿ ವೀಕ್ಷಕರ ಮೇಲೆ ಎಸೆಯುವ ಪರಿಪಾಠ ಇತ್ತೀಚೆಗೆ ಸ್ವಲ್ಪ ಹೆಚ್ಚೇ ಆದಂತಿದೆ. ಬೇಯುತ್ತಿರುವ ಮನೆಯಲ್ಲಿ ಮೈ ಕಾಯಿಸಿಕೊಳ್ಳುವ , ಬೀಡಿ ಹಚ್ಚಿಕೊಳ್ಳುವ ನೀಚ ಮನಸ್ಥಿತಿಯನ್ನು ಈ ಸುದ್ದಿ ಮಾಧ್ಯಮದವರು ನೀನು ತಾನೆನದೆ ಒಂದೇ ರೀತಿಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಇವರ ಸುದ್ದಿಯ ಹುಚ್ಚು ಹೇಗಿದೆಯಂದರೆ '' ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತ ಪಟ್ಟು ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಎಂದು ಪ್ರತ್ಯಕ್ಷದರ್ಶಿ ವರದಿ ಮಾಡಿದರೆ, ಮುಖ್ಯ ವರದಿಗಾರ್ತಿ ಕೇಳುವ ಪ್ರಶ್ನೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ನಿಮಗನಿಸುತಿದೆಯೇ..? ಕೇಳುತ್ತಾಳೆ.'' ಇವರಿಗೆ ಏನಾದ್ರೂ ನೀತಿ ನಿಯಮ ಮನುಷ್ಯತ್ವದ ಅರಿವಿದೆಯೇ..? ಗಂಡ ತಪ್ಪು ಮಾಡಿದ್ರೆ, ಪಾಪಾ ನೋವು ಅವಮಾನದಿಂದ ಮೂಲೆಯಲ್ಲಿರುವ ಹೆಂಡತಿಯನ್ನು ಸ್ಟುಡಿಯೋಗೆ ಕರೆ ತಂದು ಕೇಳುವ ಪ್ರಶ್ನೆ ನಿಮ್ಮ ಯಜಮಾನರು ಈ ರೀತಿಯ ಮೋಸಗಾರ ಎಂದು ತಿಳಿದಿದ್ದರೆ ನೀವು ಮದುವೆಯಾಗುತಿದ್ದಿರ..? ಈಗ ನಿಮ್ಮ ಗಂಡನ ಬಗ್ಗೆ ನಿಮಗೆ ಏನನಿಸುತ್ತದೆ..? ಕಾಳಿ ಸ್ವಾಮಿಯ ಪತ್ನಿಗೆ ಕೇಳಿದ ಪ್ರಶ್ನೆ. ಹಾಗೆ ಕೇಳುತ್ತಿರುವವನನ್ನು ಕಾಲಿನಿಂದ ಜಾಡಿಸುವ ಮನಸ್ಸು ನಿಜಕ್ಕೂ ನೋಡುತ್ತಿರುವವರಿಗೆ ಬಂದಾರೆ ಸಾಲದು ಹುಡುಕಿ ಒದೆಯಬೇಕು. ಇನ್ನು ಕ್ರೈಂ ವರದಿಗಳ ಬಗ್ಗೆ, ಇವರದೇ ತನಿಖೆ, ಎಪ್ ಐ ಆರ್, ಚಾರ್ಜ್ ಶೀಟ್. ಎಲ್ಲಾ. ಪೋಲೀಸಿನವರ ತನಿಖೆ, ನ್ಯಾಯಾಲಯದಲ್ಲಿ ವಿಚಾರಣೆ, ನ್ಯಾಯಾಧೀಶರ ತೀರ್ಪಿಗೆ ಕಾಯುವ ತಾಳ್ಮೆ ಇವರಿಗಿಲ್ಲ. ಇವರೇ ಮುಂಚಿತವಾಗಿ ಪಂಚನಾಮೆಯನ್ನು ಸೇರಿಸಿ ಶಿಕ್ಷೆಯ ಅವಧಿಯನ್ನು ಪ್ರಕಟಿಸಿ ಬಿಡುತ್ತಾರೆ. ಅದಕ್ಕೆ ಸಂಬಂಧಿಸಿಲ್ಲದ ವ್ಯಕ್ತಿಗಳ ತೇಜೋವಧೆ ಮಾಡುತ್ತಾರೆ. ಈ ಅಧಿಕಾರವನ್ನು ಅದ್ಯಾವ ಕಾನೂನು ಕೊಟ್ಟಿದೆಯೋ ಕಾಣೆ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕಾದ, ಅನೀತಿ ಅಕ್ರಮಗಳನ್ನು ಬಯಲಿಗೆಳೆದು ಸಾಮಾಜಿಕ ಕಳಕಳಿ ಮೆರೆಯಬೇಕಾಗಿದ್ದ ಮಾಧ್ಯಮದವರು ಈ ದಿನ trp ರೇಟ್ ಎಂಬ ಅನಿಷ್ಟಕ್ಕೆ ಬಿದ್ದು, ವೀಕ್ಷಕರ ಮುಂದೆ ಬೆತ್ತಲಾಗುತಿದ್ದಾರೆ. ಇವರಿಗೆ ಕಾಲ ಬುದ್ಧಿ ಕಲಿಸುವ ತನಕ ಕಾಯಬಾರದು. ಜನರೇ ಬುದ್ಧಿ ಕಲಿಸಬೇಕು.

    ಪ್ರತ್ಯುತ್ತರಅಳಿಸಿ