ಭಾನುವಾರ, ಸೆಪ್ಟೆಂಬರ್ 2, 2012

ಕೊಳವೆಬಾವಿ ಮತ್ತು ಕವಿ!

ಶಬ್ದ ಮಾಡುತ್ತಲೇ ಇದೆ ಯಂತ್ರ
ಮುಂಜಾವಿನಿಂದ ನಡುರಾತ್ರಿವರೆಗೂ
ಹನಿ ಚಿಮ್ಮಲು ಸಾವಿರದಡಿ ಕೊರೆತ!

ಮುನ್ನೂರಕೆ ಬಂದದ್ದೆಲ್ಲ ಬರಿ ಹುಲ್ಲು
ಆರ್ನೂರರ ಆಳಕ್ಕೆಲ್ಲ ಕರಿ ಧೂಳು
ಕೊರೆದಷ್ಟು ಬರಲಿ ಜೇಡಿ ನುಣುಪು!

ಹುಡುಕಬೇಕು ತಳ ಚಿಮ್ಮಲದು ಜಲ
ಬಿಸಿಯೇರದಿರದೇ ಬಸಿಯಲು ನೀರ
ಕೊರೆವ ಕೊಳವೆಗೆ ಕಲ್ಲ ರುಚಿ!

ನಿಟ್ಟುಸಿರು, ಸುಸ್ತು ಯಂತ್ರ
ತಳದಿ ನೀರು ಬರಲೆಂಬ ತವಕ
ಕೊರೆಕೊರೆದು ಚಿಮ್ಮುವ ತನಕ !

ಸ್ವಗತಃ;
ಬರವಿಲ್ಲಿ ಬಸಿರ ಮೋಡವು ಉಸಿರುಬಿಡದೇ
ಕೊರೆಯಲೇ ಬೇಕಲ್ಲ ಹೊಟ್ಟೆ ತಣಿಸಲು
ಸುಸ್ತಾಗಲೊಲ್ಲೆ ಹನಿಚಿಮ್ಮಿಸುವ ಕಾಯಕದಿ!
====
ಚಿತ್ರಕೃಪೆ: ಗೂಗಲ್ ಇಮೇಜಸ್

ಸೋಮವಾರ, ಆಗಸ್ಟ್ 6, 2012

ಸ್ವಾತಂತ್ರ್ಯ!

ಮೊನ್ನೆ ಬ್ರಿಟಿಷರ ಕಂಕುಳಲ್ಲಿ ಮಲಗಿದ್ದ ಮಗು
ಆ ಇಂಗ್ಲಿಷ್ ಜೋಗುಳದಲಿ ಅಮಲೇರುವಾಗ
ತೊಟ್ಟಿಕ್ಕಿದ ಉಚ್ಚೆಯ ವಾಸನೆ ಇನ್ನೂ ನಿಂತಿಲ್ಲ!

ನೋಟಿನ ಕಂತುಗಳಲ್ಲಿ ಗಾಂಧಿಯ ನಗು ಚೆಲ್ಲಿ
ಭದ್ರಕೋಣೆಗಳಲ್ಲಿ ಬಂಧಿಯಾದಾಗ ಬಿಳಿಟೊಪ್ಪಿ-
ಕರಿಕೋಟಿನ ತುಟಿಗಳಲ್ಲಿ ಕೆಂಪು ಎಲೆಯಡಿಕೆ!

ಉರಿಸೂರ್ಯನ ನೀಲಿ ಬಿಸಿಲಿಗೆ ಸೆಟೆದೆದ್ದ ಗದ್ದೆಯ-
ಒಣಹೆಂಟೆಗಳು ಕೊಳೆತ ಈರುಳ್ಳಿಯ ಚಿಗುರಿನಲಿ
ಹೇಲುವಾಸನೆಯ ಪುಟಿದೇಳಿಸುವಾಗ ವಾಕರಿಕೆ ವಾಂತಿ!

ಸರಳುಗಳ ಹಿಂದೆ ಸೆರೆಯಾದವರ ಮನೆಗಳಲಿ
ಬಂಗಾರದ ಬೆಳಕಿನ್ನೂ ಕಣ್ಣು ಬಿಡುವಾಗ
ಬೀಡಿಯ ಹೊಗೆ ಬೀದಿ ಕಾವಲುಗಾರನ ಕಿಸೆಗಳಲಿ!

ಕರೆಂಟಿನ ಸ್ಮಶಾನದಲಿ ತಿಂದು ತೇಗಿದವನ ಹೆಣ
ಸುಟ್ಟು ಬೂದಿಯಾದಾಗಲೂ ತಲೆ ಬೋಳಿಸುವವನ
ಕತ್ತರಿ ಕಿಚಗುಡುತ್ತಲೆ ಕತ್ತರಿಸುತ್ತದೆ ಬೋಳುತಲೆ!

ನಾವೆಲ್ಲ ಸ್ವತಂತ್ರರು ನಮ್ಮ ಮನೆಯ ಮೂಲೆಯಲಿ
ಎಣ್ಣೆಯೆರೆದು ಬತ್ತಿಹಾಕಿ ದೀಪ ಉರಿಸಲು
ಇನ್ನೊಬ್ಬರ ಮನೆಯ ಸುಡಲು ಆ ಬೆಂಕಿಯಲೇ!
=====
ಚಿತ್ರಕೃಪೆ: ಫ್ಲಿಕರ್.ಕಾಮ್

ಗುರುವಾರ, ಜುಲೈ 19, 2012

ನನ್ನ ಬರವಣಿಗೆ, ಮಗು ಮೀಸೆ ಮತ್ತು ಜಂಬ!

ಮೊನ್ನೆ ಅಮ್ಮನ ಸೆರಗಿನಡಿಯಲ್ಲಿ
ಮೊಲೆ ಹಾಲು ಕಸಿದು ಕುಡಿವಾಗ
ಕಣ್ಣು ಮಿಟುಕಿಸುತಿತ್ತು ಚಂದದಲಿ!

ಒಂದೆರಡು ದಿನ ಮೊಣಕಾಲೂರಿ
ನೆಲಕೆ ಮುತ್ತಿಕ್ಕಿ ಮಣ್ಣು ನೆಕ್ಕುವಾಗ
ನಾಲಗೆಗೊಂದಿಷ್ಟು ರುಚಿ ಒಗರು!

ಅಲ್ಲಲ್ಲಿ ತೆವಳು ಹೊಟ್ಟೆಯುಜ್ಜಿ ಅಳು
ಗೋಡೆಗಾನಿಸಿ ಕೈ, ಕಾಲೆತ್ತಿ ಹೆಜ್ಜೆ
ಬಾಗಿಲ ಬೆಳಕಿನಲಿ ತುಟಿಯಂಚ ನಗು!

ಚೆಂಡು ಕಂಡಿದೆ ಅಂಗಳದಲಿ ಆಟ
ಪರಚು ಗಾಯಕೆ ಅಮ್ಮನ ಚಾಟಿ
ಹಾಸಿಗೆಯಲಿ ಉಚ್ಚೆಯಿಲ್ಲದೇ ಈಗ
ಮಗುವಲ್ಲ, ತುಟಿ ಮೇಲ್ಗಡೆ ಮೀಸೆ!

ಗಡ್ದ ಬಲಿತಿದೆ, ಪುಟಿಯುತ್ತಿದೆ ಮನ
ಹೆಜ್ಜೆಹೆಜ್ಜೆಗೂ ಧೂಳು, ಸೂರ್ಯ ಮಂಕು!
ನೆನಪಿಲ್ಲವೀಗ ಅಮ್ಮನ ದುಂಡು ಮೊಲೆ!

ಹಾಲು ಎಳೆದ ಹಲ್ಲು-ಬಾಯಿ ವಾಸನೆ
ಕಿಸಿಯುತ್ತಿದೆ ಮೂಗುಮುರಿದು ಮಗು
ಮೀಸೆ ಬೆಳೆಸಿ ಗಡ್ದ ಬಲಿತು ಹಣ್ಣಾಗಿ!

ಭಾನುವಾರ, ಜುಲೈ 15, 2012

ಚಿಗುರು, ಹಣ್ಣು ಮತ್ತು ನೆಮ್ಮದಿ!

ಕೊರಗಿಸಬೇಡ ಓ ಬದುಕೆ ಹೀಗೆ
ಕೆರೆದಡದ ಬುಡಕೆ ಒಂಟಿ ಗಿಡದಂತೆ
ಬರಿಯ ಚಳಿಯನಿತ್ತು ಬೇರಿಗೆ
ಒಣಗಿಸಬೇಡ ನನ್ನೆಲೆಗಳ ಹಸಿರ!

ಆ ಭಾನಿಗೂ ಹೇಳು ನಗಲು
ಅವ ಬೀರುವ ಬಿರು ಬಿಸಿಲಿಗೆ
ಕೆರೆಯ ಕೆಸರ ಕದಡಿಯಾದರೂ
ಕೊಸರುತ್ತೇನೆ ಕಿರು ಚಿಗುರಲಿ!

ಓಲೆಗಳ ಬರೆದು ಕಳುಹಿಸು
ತೇಲುವ ಗಾಳಿಯಲಿ ಜೋಡಿ
ಹಕ್ಕಿಗಳ ಕಲರವಕ್ಕಾದರೂ
ರೆಂಬೆಗಳು ಓಲಾಡಲಿ ಮೈದೂಗಿ!

ಆ ದುಂಬಿಗಳಿಗೂ ಹೇಳು ನನ್ನೆದೆಯ
ಹೂವಿನಲಿ ಪರಾಗ ಬಿತ್ತಿ ಕಾಯಿ
ಕಣ್ಣು ತೆರೆದು ಹಣ್ಣು ಬಣ್ಣದಲಿ
ಬಸಿರಾಗಿ ಯಾರದೋ ಬಾಯಿಯಲಿ
ನೀರೂರಿದಾಗ ನಾನು ಎಲೆಯುದುರಿಸಿ
ನೆಮ್ಮದಿಯಲಿ ನೆಲಕ್ಕೊರಗಬೇಕು!
==========
ಚಿತ್ರಕೃಪೆ: ಮೆಟ್-ಮ್ಯೂಸಿಯಮ್.ಆರ್ಗ್

ಶನಿವಾರ, ಜೂನ್ 23, 2012

ಗಾಂಧಿ ನಗುತ್ತಿದ್ದಾನೆ ನೋಟಿಗಂಟಿ!

ಧೂಳೆಬ್ಬಿಸುವ ಹಗ್ಗಕೆ ತೊಟ್ಟಿಲು ತೂಗುವಾಗ
ಪಿಳಿಪಿಳಿ ಕಣ್ಣುಬಿಡುವ ನನ್ನ ತಲೆಯಡಿಗೆ
ಅಜ್ಜನಿಟ್ಟ ನೂರರ ನೋಟಿನಲಿ ಗಾಂಧಿ
ಅದೇ ಕನ್ನಡಕದಲಿ ನಗು ಬೀರಿದ ನೆನಪು!

ಸೆಗಣಿ ಸಾರಿದ ನೆಲಕೆ ನನ್ನುಚ್ಚೆಯ ತೇವ
ಅಪ್ಪನ ಕಿಸೆಯ ಹರಿದ ಐವತ್ತರ ಪರಿಮಳ
ನೂಲು ಬಿಟ್ಟ ನೋಟಿನಲೂ ಗಾಂಧಿ ನಗು!

ಎಣ್ಣೆ ಜಿಡ್ಡಿನ ಕೈಯಲಿ, ಮೂಗೊರೆಸಿ ನಕ್ಕು
ಅಂಗಡಿಯಾತ ಹಲ್ಲು ಬಿಟ್ಟು ಕೋಲು ಸಿಕ್ಕಿಸಿದ-
ಚಾಕಲೇಟು ಕೊಡುವಾಗಲೂ, ಬೆನ್ನೆಲುಬಿಲ್ಲದ
ಒಂದರ ನೋಟಿನಲೂ ಕಣ್ಣು ಬಿಡುತ್ತಾನೆ ಗಾಂಧಿ!

ತೂತು ಚಡ್ದಿಯ ತೆರೆದ ಕಿಸೆಯೊಳಗೊಂದು
ಹತ್ತರ ನೋಟಿನಿಣುಕು, ನಾಸಿಕಕೆ ಕನ್ನಡಕ
ಸಿಗಿಸಿ, ವಾಸನೆಗೂ ನಗುತ್ತಾನೆ ಗಾಂಧಿ!

ಮೀಸೆ ತಿರುವಿ, ಆಡುಗಡ್ಡದ ಮೇಲೊಂದಿಷ್ಟು
ಕೈಯಾಡಿಸಿ ಜೇಬಿನಲಿ ಪೆನ್ನು ತೆಗೆದು
ನೂರರ ನೋಟಿನಲಿ ನೂರೆನುವಾಗಲೂ
ಹಣೆ ಮುದುಡಿಸಿದ ಗಾಂಧಿ ನಗು ಶುಭ್ರ!

ತಲೆದಿಂಬಿಗೊಂದಿಷ್ಟು ತುರುಕಿ, ಹಾಸಿಗೆ ಹಾಸಿ
ಬೊಜ್ಜು ಬೆಳೆದ ಸೊಂಟಕ್ಕಂಟಿದ ಚೀಲದಲಿ
ಮತ್ತೆ ಐನೂರರ ಗಾಳಿ ಬೀಸುವಾಗಲೂ
ಗಾಂಧಿ ನಗುತ್ತಲೇ ಇರುತ್ತಾನೆ, ಕನ್ನಡಕದೊಳಗಿಂದ!
=======


ಮಂಗಳವಾರ, ಜೂನ್ 19, 2012

ನಿರಾಳ!

ತಲೆಯಲೊಂದಿಷ್ಟು ಕೂದಲು, ಮೂರಿಂಚಿನ ಹಣೆ
ಕಣ್ಣು ಬಿಟ್ಟು ಕೂತವಗೆ ಮೂಗು ಜೊತೆಗಾರ
ಚಪಲಕೆ ಬಾಯುಂಟು ಇಣುಕ ಬಿಟ್ಟು ನಾಲಗೆಯ!

ತಲೆಯಲ್ಲಾಡಿಸುತ್ತದೆ ಕುತ್ತಿಗೆ ಅಹುದೆನುತ
ಎಲ್ಲದಕೂ ಕೈ ಮುಂದು ಎದೆಗಾನಿಸಿ ನಿಂತು!
ಉಸಿರ ಹಿಡಿದದ್ದು ಬಿಟ್ಟದ್ದು ಶ್ವಾಸಕೋಶದ ಒಳಗೆ
ತಿಂದದ್ದು ತಿಂದುಳಿದದ್ದು ಜಠರ ಹೊತ್ತ ಹೊಟ್ಟೆಯದು!

ರಾತ್ರಿ ಕಳೆದು ಮುಂಜಾನೆ ಹೊರನಡೆಯುತ್ತದೆ ನಿನ್ನೆ,
ಅದರ ಜೊತೆಗೊಂದಿಷ್ಟು ಕಲ್ಮಶ ತೂತ ಹೊರಗೆ
ನೀರೋ, ಘನವೋ ನಿನ್ನೆ ತೇಗಿದ್ದು ಇಂದು ರದ್ದಿ,
ಕಾಲು ನೆಲವೂರಿದ ರಭಸಕೆ ಎರಡಡಿಯ ಮಣ್ಣು ಗಟ್ಟಿ
ಬಾಗಿಲಲಿ ನಿಂತು ಬದುಕು ದೂಡುವವಗೆ!
====

ಶನಿವಾರ, ಜೂನ್ 9, 2012

ಚಳಿ, ಉಬ್ಬು ಮತ್ತು ಸೊಕ್ಕು!

ನಡುಕ, ಚಳಿಯಿತ್ತು, ಅಮಾವಾಸ್ಯೆಯ ಕತ್ತಲು
ಧನುರ್ಮಾಸದ ಕುಳಿರ್ಗಾಳಿ ಕಳೆದು ಮಕರ,
ನಡುರಾತ್ರಿಯ ಅಪ್ಪುಗೆ, ಕೈಗೊಂದಿಷ್ಟು ಖುಷಿ
ಕಾಲು ಕುಣಿದು ಸುಸ್ತು, ಬೆಳಗು ಹರಿದ ಹೊತ್ತು!
ಬಾನ ಮೇಲಿನ ಬೆಳಕಿಗೆ ಶಾಂತ ಸಾಗರ!

ಬಿಳಿಯ ಮೋಡದ ಸಾಲು ಆಕಾಶದಲಿ ಕಪ್ಪು,
ಮೊನ್ನೆ ಮೇ ತಿಂಗಳಿನಲ್ಲಿ ಸೂರ್ಯ ಕಾಮುಕ,
ಬಿಸಿಲ ಹೊಡೆತಕೆ ಕಡಲ ನೀರು ವೀರ್ಯವಾಗಿ,
ಮೋಡ ಬಸುರಿ, ನಗುವುದಷ್ಟೇ ಬಾಕಿ ಮಳೆಮಗು!

ಮೇ ತಿಂಗಳ ಕಾಲಗರ್ಭದಿ ಬಿಸಿಲ ಕಾಮ
ನೀರು ಮೇಲೇರಿ ಹೆಪ್ಪುಗಟ್ಟಿ ಕರಿಮೋಡ!
ಹೊಟ್ಟೆಯುಬ್ಬಿ ಮೂರು ತಿಂಗಳು, ಅಲ್ಲಿ ವಾಂತಿ!
ನೀಲಿ ಬಾನಿಗೆ ಬಾಣಂತನ ಮಾಡುವ ಭಾಗ್ಯ!

ಅಳುವೆಲ್ಲಿ? ಕೈಕಾಲು ಬಿಟ್ಟ ಮಗುವಿನದು
ಹನಿ ನೀರು ಘನೀಭವ, ಮತ್ತೆ ಭುವಿಗೆ,
ಒಂದೆರಡು ಹುಲ್ಲುಹುಟ್ಟಿಸುವ ತವಕ,
ಹಲ್ಲು ಬಿಟ್ಟು ಹುಲ್ಲು ನಗುತ್ತದೆ ಚಿಗುರಿ!
ಒಂದಿಷ್ಟು ಗಾಳಿಗೆ ಕೈಕಾಲು ಬಿಡುತ್ತವೆ
ತಲೆಯಲ್ಲಾಡಿಸಿ ತೂಗುತ್ತವೆ, ಬಲಿತ ಹುಲ್ಲು!

ಮೋಡ ಬಸುರಾಗುತ್ತಲೇ ಇದೆ, ಸೂರ್ಯ-
ತೃಷೆ, ಕಡಲು ಖಾಲಿಯಾಗುವ ತನಕ!
ಬಾಣಂತನದ ಹೊರೆ ಹೊತ್ತ ನೀಲಿ ಬಾನು
ನೀಲಿಯಾಗಿಯೇ ಉಳಿಯಬಹುದೇನೋ
ನಾನು, ಮಗು ಮತ್ತು ಹುಲ್ಲು ಒಣಗಿದರೂ!
=======
ಚಿತ್ರಕೃಪೆ: ಗೂಗಲ್