ಶನಿವಾರ, ಮೇ 21, 2016

ಪುನರ್ಜನ್ಮ?

ಕಾಲವಾಯಿತು ನಗುವ ಹೊತ್ತು
ಹರಿವ ಕಂಬನಿಯೂ ಸುಸ್ತು!

ಬರೆವ ಲೇಖನಿಯೊಳಗಿಟ್ಟು ಬಾಳು
ಬರಡು ಕಾಗದದೊಳಗೊಂದು ಗೋಳು

ನಡೆವ ದಾರಿಯಲೆಲ್ಲ ಬಿರುಕು ಕಣಿವೆ
ಪಡೆದುದೆಲ್ಲವೂ ಪರರ ಸೊತ್ತು, ಬೆಂಕಿ ಬಣವೆ!

ತೇಗು ತೇಲುತಿದೆ ಹಸಿದ ಕರುಳೊಳಗಿಂದ
ಕೂಗುವುದಕೆ ತ್ರಾಣವಿಹುದೆ? ಮೌನವದೇ ಚೆಂದ!

ಕಾಲವಾಗಿದೆ ನಗುವ ಹೊತ್ತು
ಹರಿವ ಕಂಬನಿಯದೂ ಸತ್ತು

ಮತ್ತೆ ಬರಬಹುದೇ ಈ ಕಾಲ ಸತ್ತು? ನಗುವ ಹೊತ್ತು?

-----
Pic Credit:Sylvain CordierPhotolibraryGetty Images

ಸೋಮವಾರ, ಜೂನ್ 16, 2014

ವಾಸ್ತವ?

ಅಪ್ಪ ತುಂಬಿ ತುಳು-
ಕಾಡುತಿದ್ದಾನೆ ಇಂದು
ಎಲ್ಲರ ಮನದ ಗೋಡೆಯಲ್ಲೂ
ಎಲ್ಲರ ಮುಖದ ಮೇಲೂ,
ವಾಲಲಿ ಹೀಗೆ ಪ್ರೀತಿ
ಪ್ರತಿದಿನವೂ ಎಂದರೆ ತಪ್ಪು,
ಅವರವರ ದಿನ ಬಂದಾಗ
ಮಾತ್ರ ಅವರವರ ನೆನಪು,
ಮರುದಿನ ಅಪ್ಪನಿರುತ್ತಾನೆಯೆ?

ಇವತ್ತು ಅಪ್ಪ ಬಂದಿದ್ದಾರೆ
ಗೋಡೆಯ ಮೇಲೆ ಪ್ರೀತಿ ವಾಲುತ್ತಿದೆ,
ನಾಳೆ ಅಪ್ಪ ಅದೇ ಗದ್ದೆಯ ಬದುಗಳಲ್ಲಿ
ಕಾಲಿಗೆ ಕೆಸರು ಮೆತ್ತಿಕೊಂಡು
ಒಂದೆರಡು ತೆಂಗೋ, ಅಡಿಕೆಯನ್ನೋ
ಹೆಕ್ಕುತ್ತಾ ಎಂದಿಗೂ ವಾಲದ ಪ್ರೀತಿಯ
ಅರಿವಿಲ್ಲದೆ ಆಕಾಶ ನೋಡುತ್ತಾನೆ,
ಮಳೆ ಸುರಿಯುತ್ತದೆ, ನೇಗಿಲಿನ ನೆನಪಲಿ
ಕೆಸರಿನ ರುಚಿಗೆ ಹಾತೊರೆಯುತ್ತಾನೆ,
ಎತ್ತು ಸಾಥ್ ನೀಡುತ್ತಿದೆ, ಹನಿಗಳ(?) ಜೊತೆ!

ಇತ್ತ ಮಗನ 'ಅಪ್ಪ ಐ ಲವ್ ಯೂ'ಗೆ
ಕಮೆಂಟುಗಳ ಮಹಾಪೂರ, ಲೈಕಿನ ಸುರಿಮಳೆ

ಕೊನೆಗೊಮ್ಮೆ ಲ್ಯಾಪ್ಟಾಪ್ ಮುಟ್ಟಿದ ಮಗನ
ಪಾಪವನು ಡೆಟ್ಟಾಲ್ ಸ್ಯಾನಿಟೈಸರಿನ ಬುರುಗು
ತೊಳೆದು ಬಿಡುತ್ತದೆ ಕ್ಷಣಮಾತ್ರಕೆ!

ಅಲ್ಲಿ ಅಪ್ಪ ಸುಸ್ತಾಗಿ ಹರಿವ ತೊರೆನೀರಿನ
ತಂಪಿನಲಿ ಮುಖವರಳಿಸುತ್ತಾನೆ, ಖುಶಿಯಲಿ
ಮಳೆ ಹನಿ ಕಮೆಂಟಿಸುತ್ತಲೇ ಇರುತ್ತದೆ!

ಬುಧವಾರ, ಮೇ 21, 2014

ಪರಿಮಳವು...

ಅಂಗಳದ ಕುಂಡದಲಿ ಅರಳಿರುವ ಪುಷ್ಪಗಳ
ಅಂದವನು ಕಂಗಳೊಳು ಸಂತಸದಿ ಸವಿದಿರಲು
ನೊಂದಮನಕೊಂದಿನಿತು ತಂಗಾಳಿ ತೀಡಿದಂತೆ!

ಮಂದವಾದುವು ನೋವು ಬೆಂದ ಹೃದಯದೊಳಗೆ,
ಇಂದೆನಗೆ ಸುಖವು ಅಂದು ಒಲವಿನಲಿ ನೀರೆರೆದುದಕೆ
ಬಂದು ನಿಂತಿರಿ ಎನ್ನ ಅಂಗಳದಿ ನಲಿವ ತಂದೆನಗೆ!

ನಂಬುವೆನು ನಿಮ್ಮೆಸಳ, ಘಮ್ಮೆನುವ ಪರಿಮಳಕೆ
ಕುಂದುಬರದಿರಲೆಂಬುದೆನ್ನಯ ಹಂಬಲವು ಎಂದೂ...


====


ಸೋಮವಾರ, ಜನವರಿ 6, 2014

ಮುಂದೆ ಬರುವವರಿಗೆ...?

ಘೀಳಿಡದಿರಿ ಪ್ರೇತಗಳೇ ಮಸಣದೊಳಗೆ
ಹಳೆಯ ಗೋರಿಗಳ ಕೆದಕಿ ಒಳಹೊಕ್ಕು,
ಉರಿದೆಲುಬುಗಳ ಬರಿಯ ಬೂದಿಯಿಹುದಲ್ಲಿ,
ಕತ್ತಲದು, ನೋಡಿ ಗುಡ್ಡಗಳೆಡೆಯಲಿ ಬೆಳಕು!

ನರಳದಿರಿ ಆತ್ಮಗಳೇ ಒಣಬಿದಿರ ಚಟ್ಟದೊಳಗೆ
ಕರಕಲಾಗಿಹುದು ತೊಗಲೆಂದು, ಸುಡುವುದಷ್ಟೇ
ಬಾಕಿಯಿಹುದಲ್ಲಿ, ಬೇಯುವುದು ಸಲ್ಲ ಬಿಸಿಲಲ್ಲಿ
ಉಸಿರಾಡಿ ಒಂದಡಿಯನಿಡಿ ಬುವಿಗೆ, ತಂಪಿಹುದು!

ಎಲ್ಲ ನೋಡುವರೆಂದು ಎಗರದಿರಿ ಬಿಸಿರುಧಿರದಲಿ
ಮರುಕವಲ್ಲಿ ಕಣ್ಣ ಬಿಡುವವರೊಳಗೆ, ಒಣಗಿಸದಿರಿ
ನರಗಳನು, ಬರಿದೆ ದಣಿವಾಗಬಹುದು ನಾಲಗೆಯಾರಿ,
ತಿಳಿನೀರ ಕುಡಿಯಿರೊಮ್ಮೆ ನಿಮ್ಮ ಹುಚ್ಚಿಳಿಯಬಹುದು!

ಹಗ್ಗಬಿಚ್ಚುವವರಿಲ್ಲ ನಿದ್ದೆಯೊಳಗಿರಿ, ಅರಚುವಿರೇಕೆ?
ನಿಮ್ಮದೇ ತೊಟ್ಟಿಲು, ತೂಗಬಹುದೆಲ್ಲ ಹಿತವಾಗಿ,
ಎಲ್ಲ ನಾಲಗೆಯಲೂ ಅಮ್ಮನದೇ ಮೊಲೆಹಾಲು,
ಮುಂದಿಲ್ಲವೆನದಿರಿ, ಹಿಂದುಳಿಯದಿರಿ ಮುಂದೆಬನ್ನಿ!

===
ಚಿತ್ರಕೃಪೆ:wodumedia.com

ಮಂಗಳವಾರ, ಅಕ್ಟೋಬರ್ 1, 2013

ವಲಸೆ ಹಕ್ಕಿಯ ಕತೆ!

ಕಣ್ಣಬಿಟ್ಟವನೆದ್ದು ನಡೆದದ್ದು
ದೂರದೂರಿಗೆ, ಅಲ್ಲಿ ಬರವಿತ್ತೋ,
ಬಾಂದಳದಲಿ ರೆಕ್ಕೆ ಬೀಸುವಾಗ
ನೀರ ಸುಳಿವು, ಕೆರೆ ಮಿಂಚುತ್ತಿತ್ತೋ!

ಇರಬಹುದಿನ್ನೆರಡು ತಿಂಗಳಿಲ್ಲಿ
ಕಾಳಕೂಳನು ಹೆಕ್ಕಿ ತಿನ್ನುತ
ಹಸಿರೊಡಲಲಿ ಉಸಿರ ನೆಕ್ಕುತ
ಹುಡುಕಬೇಕಷ್ಟೇ ಹೊಸಗೂಡು!

ಹುಟ್ಟಿದೂರಲ್ಲ, ಭಯ ಒಳಗೊಳಗೆ
ಚಿಂತೆ, ಮೊಟ್ಟೆ ಇಡಬಹುದೇ ಇಲ್ಲಿ?
ನೆಲೆಯಿಲ್ಲ, ನೆಲೆಯಲ್ಲ, ನೆಲದ ಋಣವಷ್ಟೇ
ಇದ್ದೆರಡು ದಿನವಿಲ್ಲಿ ಉದರ ತಂಪು!

ಮತ್ತೆ ನೀಲಿಯಾಕಾಶ, ಮೇಲೆ ಸೂರ್ಯ,
ಕಾಲಡಿಗೆ ಒಣಗಿದೆಲೆ, ಅಲ್ಲಲ್ಲಿ ಬೆಂಕಿ
ಕೆರೆಬತ್ತಿ ಕೆಸರು ತಳದಿ ಒಣ ಹೆಂಟೆ,
ಬಿಚ್ಚಿ ಬೀಸಬೇಕಿದೆ ಮತ್ತೆ ರೆಕ್ಕೆ!

ಹುಡುಕಬೇಕಿದೆ ಊರು, ಹೊಸತು
ಕತ್ತಲೋ, ಬೆತ್ತಲೋ ನಿಲುಕದಲ್ಲಿ
ನಿಲ್ಲಲಾಗದು ಸ್ಪಷ್ಟ, ಸಾಗಬೇಕೆತ್ತಲೋ!
ಗೆಲ್ಲಹುಡುಕಬೇಕಿದೆ ಕತ್ತಲಾವರಿಸಿದಲ್ಲಿ!

====
ಚಿತ್ರಕೃಪೆ:http://siliconangle.com

ಗುರುವಾರ, ಸೆಪ್ಟೆಂಬರ್ 12, 2013

ಹುತ್ತದೊಳಗಿನ ಗೆಲುವು!

ಹುತ್ತದೊಳಗಣ ಹಾವು ಬುಸುಗುಡುವಾಗ
ಮೆತ್ತಗೆ ಚಿಂತಿಸುತ್ತಾ ಕೂತೆ, ಮಣ್ಣು ಯಾರದ್ದು?
ಗೆದ್ದೆನೆನಬಹುದು ನಾಗರ ನಾಲಗೆಯ ಹೊರಚಾಚಿ,
ಗೆದ್ದಲನು ನೆನಪಿನೆದೆಯೊಳಗಿಟ್ಟರೆಕ್ಷಣ ನಕ್ಕೆ!

ಹರಿಸಿ ಬೆವರನು ಬೆರೆಸಿ ಜೊಲ್ಲ ಮುದ್ದೆಗೈದು
ಕೊರೆದು ನೆಲವನು ಮಣ್ಣ, ಮೇಲೆತ್ತಿ ಗೂಡ
ಬದುಕಬೇಕೆನುವಾಗ ನುಸುಳುವವನಿಲ್ಲಿ ವಿಷ!

ಹೆಡೆಯೆತ್ತಿ ನಿಲುವುದಕೆ ಶ್ವಾಸ ಸಾಲುವುದಿಲ್ಲ
ಹಾವಹಲ್ಲ ಗಾತ್ರದ ಜೀವವು, ತೂತ ತೊರೆದು
ತೆರಳಬೇಕಲ್ಲಿ, ಉರಗದುದರದಿ ಉರಿವ ಮೊದಲು!

ಹೆಸರೆನಿತು ಬಲುಜೋರು, ಹೆಡೆಬಿಚ್ಚುವವರಿಗೆ,
ಮುರಿಯದಿದ್ದರೂ ಮೈ, ಬಲದೊಳಗೆ ಹುದ್ದೆ!
ಗೆದ್ದಲ ಗೆಲುವೇ? ಇಲ್ಲ, 'ಶೇಷ' ಸೋಲು ಎನಲೇ?
==

ಚಿತ್ರಕೃಪೆ: ಗೂಗಲ್ ಇಮೇಜಸ್

ಗುರುವಾರ, ಆಗಸ್ಟ್ 8, 2013

ಬಿದ್ದಂತೆಲ್ಲ ಕಾಯಿ?

ಯಾರದೋ ಕೊಕ್ಕಿನ ಪರಾಗಸ್ಪರ್ಶಕೆ
ಅದಾವುದೋ ಗಿಡದಿ ಹೂ ಚಿಗುರಿ ಕಾಳಾಗಿ
ಬಲಿತು ಹಣ್ಣಾಗಿ, ಒಳಗೊಳಗೆ ಬೀಜ
ಹೊರಗಣ ಒಡೆಯಲಾಗದ ನಿಷ್ಠುರ ಸಿಪ್ಪೆ!

ನಾರುತ್ತದೆ ಕೊಳೆತು, ಕಾಲ ಮೀರಿದರೆ,
ಇನ್ನಾರದೋ ಕೈಚಾಚುತ್ತಾರೆ ಆಸೆಯಲಿ
ಕಿತ್ತು ತಿನ್ನುವುದಕೆ, ಅರ್ಧ ಕಚ್ಚುವುದಕೆ!
ನಿಲ್ಲಬೇಕೆನಿಸುತ್ತದೆ ಎಲ್ಲೋ ಮೇಲೆ, ಇಲ್ಲಲ್ಲ!

ಹುಳಿ ಒಗರು ಕಾಯಿ ಸೊನೆ ಸೇರುವುದಿಲ್ಲ,
ಕೆಲವೊಮ್ಮೆ ಬಲಿತರೂ, ನಾಲಗೆಗೆ ಸಪ್ಪೆ,
ಒಪ್ಪುವುದಿಲ್ಲ ಸಿಹಿ, ಹುಳುಕಿರುವಾಗ,
ಹಿತ ಕಹಿ ಹಲಬಾರಿ ಕಚಗುಳಿಯಿಡುತ್ತದೆ!

ದಿನ ಬಂದಂತೆಲ್ಲ ತೊಗಟೆಗೂ ಭಾರ
ಒಣಗಿಬಿಡುತ್ತದೆ ಕಿತ್ತೆಸೆದು ದೊಪ್ಪನೆ
ಬಿದ್ದುದಕೆ ಮುಖಕೆ ಹಸಿ ಸೆಗಣಿಯ ಬಣ್ಣ,
ಓಹ್ ಗೊಬ್ಬರ, ನಗು ಬೀಜದೊಳಗೆ!

ಸುತ್ತ ಸುಡುಮಣ್ಣು, ಬಿಸಿಯೆದೆಯ ಬಿಸಿಲು,
ಬಾನಲಿ ಕಡಲ ಹನಿ ಹೀರಿದಾ ಕರಿ ಮೋಡ,
ಹಾರಿ ಬರುವ ಗಾಳಿ, ಧೂಳಕಣಗಳ ನಡುವೆ
ಮೊಳಕೆಯೊಡೆಯಬೇಕೆನಿಸುತ್ತದೆ ಅದರ ಮನಕೆ!

======
ಚಿತ್ರಕೃಪೆ:
http://www.123rf.com

ಸೋಮವಾರ, ಆಗಸ್ಟ್ 5, 2013

ಹಸಿವ-ಗುರಿ!

ಹಸಿವ ಬೆನ್ನ ಹತ್ತಿ ಹುಲ್ಲನರಸುತ್ತಾ
ಬಯಲಿಗಿಳಿದಿದ್ದೇವೆ ಬರಡಿಲ್ಲ ನೆಲ!
ಮೊಳೆತಿರಬಹುದಲ್ಲಿ ಹಸಿರಚಿಗುರು,
ಮೋಡಗಳಲ್ಲಿ ಹನಿಯಾಗಿ ಮುತ್ತಿಕ್ಕಿ!

ಹರಿವ ತೊರೆಗಳ ದಾಟಿ ಜಿಗಿದು
ನಡುವ ಬೇಲಿಯೊಳು ನುಸುಳಿ
ಹುಡುಕಬೇಕಲ್ಲಿ ಬದುಕ ಮುಗುಳ,
ಮಣ್ಣೊಳಗಿಂದೆದ್ದ ಮೆಲ್ಲುಬಳ್ಳಿ!

ಮೆರೆಯುವಂತಿಲ್ಲ ಬರಿಯ ನಡೆಯಲ್ಲಿ
ಮರೆಯಾಗಬಹುದುಸಿರು ಬಳಲಿ,
ಮರಿಯಾಸೆ ಮನದೊಳಗೆ ಮರಳಿ,
ಹೊರಳಿಯಿರಬಹುದೆಂಬ ಹರುಷದಲಿ!

=====

ಗುರುವಾರ, ಜುಲೈ 11, 2013

ಕಷ್ಟ-ಕಡಲು!

ಪಡುವಣದೆದೆಯಾಳದೊಳಗಿಂದೆದ್ದ
ಕರಿಮೋಡಗಳ ದಿಟ್ಟಿಸುತ್ತಾ ನಡೆದೆ,
ನೀಲಬಾನವಿತು ಕಪ್ಪಡರತೊಡಗಿತ್ತು ಕಣ್ಣು!

ಕುಳಿರ್ಗಾಳಿಯೊಡಗೂಡಿಯೊಂದಷ್ಟು
ಕಡಲಲೆಯ ಲವಣ ಮುಖಕೆರಚುತಿದ್ದಂತೆ
ಬಿರುಸ ಹೆಜ್ಜೆಗಳು ಮರಳೊಳಗಡಗುತಿದ್ದವು!

ಕರುಳಾಳದೊಳಗಿನಾಕ್ರಂದನವು
ಅಲೆಗಳಟ್ಟಹಾಸದಿ ಮಸುಕಾಗಿ
ಬಲೆಬೀಸಿ ಸೆಳೆದಂತೆ ಉಸಿರಕಣ!

ಮುಳುಗುತಿರಬಹುದೆನುವಂತೆ ಅನತಿ
ದೂರದೀ ನೌಕೆ, ತಾಳಿ ಹೊಡೆತಗಳ
ತೀರದಾಸೆ, ಮರಳಿ ದಡವ ಪಡೆವುದೆಂತು?

ಕಾಯುತ್ತಿದೆ ಕಾಲ? ಎತ್ತಿಡಲು
ಮರಳೊಳಗಿಂದ ಹೂತಹೆಜ್ಜೆಗಳ,
ಗಾಳಿ ಬಂದೆಡೆಗೆ ಹಾಯಿ, ನೌಕೆ!
======
ಚಿತ್ರಕೃಪೆ: ಗೂಗಲ್ ಇಮೇಜಸ್

ಶುಕ್ರವಾರ, ಜೂನ್ 7, 2013

ನನ್ನದಲ್ಲದ ಕವಿತೆ!

ನಡೆಯುತ್ತಾರೆಲ್ಲರೂ ರಸ್ತೆಯಲಿ
ನಿಧಾನವೋ, ಅವಸರವೋ,
ಅವರವರದೇ ಅವರವರಿಗೆ,
ಎಲ್ಲರದೂ ಒಂದು ಕತೆ, ವ್ಯಥೆ!

ಒಬ್ಬರಿಲ್ಲಿ ಕಿಟಕಿ ಮುಚ್ಚುವರಂತೆ,
ಮೊನ್ನೆ ಬಿದ್ದ ಮಳೆಗೆ ಧೂಳು ಬರದಿರಲೆಂದು,
ಮತ್ತೊಬ್ಬರಿಗಿದು ಊಟದ ಸಮಯ,
ಹೊಟ್ಟೆಬಿರಿದೆದ್ದು ಆಕಳಿಸುವರು ಕಡಲಲೆಯಂತೆ!

ಯಾರದೋ ಮನೆಯ ಕೋಣೆಗಳಲೊಂದಿಷ್ಟು
ರಾಗರಂಗು, ಪ್ರಣಯ ಕೇಳಿ!
ಮತ್ಯಾರದೋ ಅಂಗಳದಲಿ ಹೂವಿನ ಘಮ,
ಸೂರ್ಯ ನಗದಿದ್ದರೂ ಮೋಡ ಕವಿದು!

ಬಾಲಬಿಚ್ಚುತ್ತವೆ ಆಸ್ಪತ್ರೆಯ ಹೊಟ್ಟೆಗಳಿಂದ,
ಹೊಸಮುಖಗಳಲ್ಲಿ, ನಿಲ್ಲಿಸುವವರಿಲ್ಲ!
ಗಿಡುಗಗಳೂ ಹೊಂಚು ಹಾಕುತ್ತವಲ್ಲಿ
ಉರಿವ ಒಣ ಎಲುಬಿಗೆ, ಹಸಿದು
ನಿಲ್ಲಿಸುವವರಾರು ಕಾಲವನು?

ಯಾರೋ ಉಡುದಾರವನೆಳೆಯುತ್ತಾರೆ
ತಾವುಟ್ಟ ಉಡುಗೆಯದು ಜಾರಿದ್ದರೂ,
ಮಡಿಯೆನ್ನುವವರಿದ್ದಾರೆ ಒಳಗೆ ಮಣ್ಣಿಟ್ಟು
ಕಣ್ಣು ಕಾಣದವರಿದ್ದಾರೆ, ಕಿವಿಗೊಡದವರಿದ್ದಾರಂತೆ!
ಎಲ್ಲರಿಗೂ ಕಾಲ, ಎಲ್ಲದಕೂ ಕಾಲ
ಕಾಲ ನಿಲ್ಲುವುದಿಲ್ಲವಂತೆ ಕಾದು!

ಇದು ಕವಿತೆ, ನನ್ನದಲ್ಲದ ಕಾಲದ್ದು!

=======
ಚಿತ್ರಸೌಜನ್ಯ: ಗೂಗಲ್ ಇಮೇಜಸ್

ಮಂಗಳವಾರ, ಮೇ 28, 2013

ಆಯ್ಕೆ!

ಅಂದು ಕವಲೊಡೆದಿತ್ತು ಎಡಕೂ ಬಲಕೂ
ಸಾಗಲೆತ್ತ? ಮನವೇ ಆಯ್ಕೆ ನಿನಗಿತ್ತೆ!
ವೈಶಾಖದ ಝಳಕೆ ಒಣಗಿದೆಲೆಗಳ ಹಾಸು,
ಸವೆದು ನಿಂತಿದ್ದವೆರಡೂ ನನ್ನೆದುರು!

ಸಾಗಿದಂತಿದೆ ಬಂದವರೆಲ್ಲರೂ ಎಡಕೆ
ಕರಗಿ ನಿಂತಿದೆ ಹಾಸು ಪಾದಗಳ ಬಲಕೆ!
ಬಲವಿನ್ನೂ ಹಸಿರು, ಸಾಗಲೇ ನಾನಲ್ಲಿ?
ಅಹುದೆನುವ ನಿನ್ನುತ್ತರಕೆ ಹೆಜ್ಜೆ ಮರುಗಿತ್ತು!

ಎಡ ಬಿಡಬೇಕಲ್ಲವೆನುವ ಚಿಂತೆಯಲೂ
ನಾ ಬಲಕೆ ಎಡವೆನಗೆ ಬಲುದೂರವೀಗ,
ಮುಂದಡಿಯಿಡುವುದದೇನು ತಿರುಗುವುದಕೆ?

ಅಡಿಯಿಟ್ಟಾಗಿದೆ, ನಿಟ್ಟುಸಿರೊಂದೆ ಜೊತೆಯು
ಕೊಂಚವೂ ನೋವಿಲ್ಲ, ಚಿಂತೆಯೂ ಇಲ್ಲ,
ಹಸಿರಿರದಿರೂ, ಹಸಿವಿರೆ ನಡೆಯೊಳಗೆ!

===
ಚಿತ್ರಕೃಪೆ: ಗೂಗಲ್ ಇಮೇಜಸ್

ಮಂಗಳವಾರ, ಮೇ 21, 2013

ಹಾಸಿಗೆಯೂ, ಮನಸೂ!

ಮೇಲೆಳೆದ ಹೊದಿಕೆಯೊಳಗದರ ನಗು
ಒತ್ತಿದ್ದಷ್ಟು ತಗ್ಗುತ್ತದೆ ಮತ್ತೆ ಹಿಗ್ಗಿ,
ಮೆದುವದು ಮುದವನೀಯುತ್ತದೆರಗಿದೊಡೆ!

ಬಿದ್ದವನಿಗೊಂದಷ್ಟು ನಿದ್ದೆಯ ಸಾಂತ್ವನ
ಮಲಗಿದವನಿಗೊಂದಷ್ಟೊಳಗೊಳಗೆ ತಣಿವು
ಜ್ವರದುರಿ ಕೆಮ್ಮುಗಳಿಗೆಲ್ಲಾರಾಮದಿಂಬು!

ಮರುಗಿ, ಕೊರಗುವವನಿಲ್ಲಿ ಬರಿಯ
ಶಿರವಾನಿಸಿ ದೇಹವನೊರಗಿದರೆ ಕಾಲ ಚಾಚಿ
ಕಣ್ಣುರಿಯಿರದಲ್ಲಿ, ಹೀರಿ ಬಿಸಿ ಹನಿಯ!

ಮರದಮಂಚದಡಿಪಾಯದೊಳು ನಿಂದು
ಬೆಚ್ಚಗಿರಿಸುತ್ತದೆ ಬಹುಪಾಲು,
ಬೇಗನೊಣಗುವುದಿಲ್ಲ ಒದ್ದೆಯಾದೊಡೆ!

ಹತ್ತಿಯದು ಒಳಗೆ, ಮೆತ್ತನೆಯ ಮೆತ್ತೆ
ಮತ್ತೆ ಮತ್ತೆ ತಲೆಯಾನಿಸುತ್ತೇನೆ
ನೋವಾದಾಗಲೆಲ್ಲ, ಬಿಗಿದಪ್ಪಿಕೊಳುತ್ತೇನೆ...
ವ್ಯತ್ಯಾಸವೇನಿಲ್ಲವಿದಕೂ ಮನಕೂ!

===

ಭಾನುವಾರ, ಏಪ್ರಿಲ್ 28, 2013

ಕೃತಿ!

ಯಾರೋ ಸಾರನೆರೆಯಬಹುದೆಂದು
ಎಲೆಯಲೊಂದಿಷ್ಟು ಅನ್ನವ
ಗುಡ್ಡೆ ಮಾಡಿಟ್ಟು ಕಾಯುತ್ತಿದ್ದೇನೆ
ಸೌಟುಗಳು ಯಾರ ಕೈಯಲ್ಲೂ ಕಾಣುವುದಿಲ್ಲ!

ಸಾರಿನ್ನೂ ಕುದಿಯುತ್ತಿರಬಹುದೋ?
ಸಾರೊಳಗಿನ ಬೇಳೆಯಿನ್ನೂ ಬೆಂದಿಲ್ಲದಿರದೋ
ಕೇಳಬೇಕೆಂದರಲ್ಲಾರದೂ ಸುಳಿವಿಲ್ಲ....
ಅಪ್ಪಣೆಯ ವಿನಹ ಅಡುಗೆ
ಮನೆಗವಕಾಶವಿಲ್ಲವೆಂಬ ಬೋರ್ಡಿದೆ ಹೊರಗೆ!

ನಾನು ಕಾಯುತ್ತಿಲ್ಲ, ನನ್ನೆಲೆಯೊಳಗಣ ಅನ್ನ,
ಹೊಟ್ಟೆ ಕೇಳುತಿಲ್ಲ, ನಿಜಕೂ ಹಸಿವಿಲ್ಲ ನನಗೆ!
ಎಲೆಯನ್ನ ಖಾಲಿ ಮಾಡುವುದು ಧರ್ಮವೆನಗೆಂದು
ಪಕ್ಕದವರಂದರೆಂದು ಕಾಯುವೇ ಸಾರಿನ ಸಾರಕೆ,
ಸೌಟುಗಳಿಲ್ಲದಿರಬಹುದೆನುವ ಚಿಂತೆ ನನಗಿಲ್ಲ!

====

ಸೋಮವಾರ, ಮಾರ್ಚ್ 18, 2013

ಬರೆವವರು!

ಬಣ್ಣಬಳಿದ ಗೋಡೆಗಂಟಿದ ಹಲಗೆಯಲೊಂದಿಷ್ಟು
ರೇಖೆಗಳ ಎಳೆದು ಬಿಡಿಸಿ ಗೀಚಿಹೋದವರೆಷ್ಟೋ?
ನಿನ್ನೆ ಬಂದವರಿಂದಿಲ್ಲ,ಇಂದಿನವರದು ಮುಂದಿಲ್ಲ
ನಿಂತಲ್ಲೇ ನಿಲಲಿಲ್ಲ, ಭಿನ್ನವದು ಚಿತ್ರ ಹಲಗೆಯೊಳು!

ಕರಿಬಣ್ಣದ ಕಡ್ಡಿಯೊಳು ಬರೆಯೆಳೆವ ಹಲವರು
ಹಲಗೆ ಬಿಳಿ ಕಂಡರಾಗದಂತೆ ಕೆಂಡವವರ ಮೊಗ,
ಅರಿಯಲಾಗದಕ್ಷರಗಳ ಬರವಣಿಗೆ ಕೆಲವರದು
ಮೊಂಡ-ಮೋಟು ಗೀಚುಗಳಲ್ಲೇ ನೀತಿಪಾಠ!

ಕರಿಯದಾದರೇನು ಕಡ್ಡಿ, ಗೀಚಿ ದುಂಡಗೆ
ದೋಚುವವರಿಹರು ಮನಸ, ಬೆರೆಯುವರು
ಗೆರೆಗಳಲೇ ಬರೆದು, ಬರೆಗಳ ಬಿಡಿಸೊರೆಸಿ
ಮರೆಯಲಾಗದಂತೆ ಮರೆಯಾಗುವವರಿಹರು!

ಬಂದವರೆಲ್ಲ ಬಳಿಯಿರಲಿ, ಬರೆಯುತಲಿ ದಿನವೂ
ಬರೆಯಾದರೂ ಬರೆಯಿರಿ, ಬರೆದು ಬೆರೆಯಿರಿ
ಮರೆಯದಿರಿ ಹಲಗೆಯ ನಿಮ್ಮದೇ ಗೀಚುಗಳಲಿ
ನೋವು-ನಲಿವುಗಳ ಅದರೆದೆಯ ಆಳಕ್ಕಿಳಿಸಿ!

=====
ಚಿತ್ರಕೃಪೆ: ಗೂಗಲ್ ಇಮೇಜಸ್

ಸೋಮವಾರ, ಫೆಬ್ರವರಿ 4, 2013

ಚರಂಡಿ ಮತ್ತು ನನ್ನೆದೆ!

ಯಾರದೋ ಬಚ್ಚಲೊಳಗಿಂದೊಸರುವೊಂದಷ್ಟು ರಾಡಿಗೆ,
ಕೊಳೆತು ನಾರಿದವೆಲ್ಲವೂ ಒಳಸೇರುತ್ತವೆ ಎಲ್ಲಿಂದಲೋ
ಇಣುಕುತ್ತವಲ್ಲಲ್ಲಿ ಹುಳು ಇಲಿ ಹೆಗ್ಗಣಗಳು ಒಳನುಸುಳಲು!

ಒಳಗೊಳಗಿನ ವಾಸನೆಗೆ ಹಾಸಿದ ಕಲ್ಲುಚಪ್ಪಡಿ ಮೌನ
ಹಾಯ್ವ ದಾರಿಹೋಕರ ಮೂಗಿಗೊಂದಿಷ್ಟು ದಿವ್ಯದ್ರವ್ಯ
ಅವರಿವರು ಉಗಿವ ಜೊಲ್ಲನೀರ ಜೊತೆ ಧೀರ್ಘಧ್ಯಾನ!

ಸಾಗುತ್ತಿದೆ ಪಯಣ ತೆರೆ ತೆರೆದು ಹರಿಹರಿದು ಮತ್ತಷ್ಟು
ಕೊಳಕಿಗೇನು ಬರವೇ ಇಲ್ಲೆಲ್ಲ, ಉಚಿತ ಸುರಿವವರಿರುವೆಡೆ
ಎಸೆದೆಸೆದು ಕಸವ ನನ್ನೆದೆಯ ಹರಿವಿಗೆ, ಸುರಿಸುರಿದು!

ಇನ್ನೇನು ಕಾಲಬರಬೇಕು ಬಾನೊಳು ಮೋಡಮೂಡಲು
ನೀರ ಬಸಿರಹೊತ್ತು ನಲಿನಲಿದು ಬಿರುಸಿನಲಿ ಹರಿದುಬರಬೇಕು
ಕೊಳೆಯುಳಿಸದಂತೆ ಚರಂಡಿಯೆನುವ ನನ್ನೆದೆಯಲಿ!

==============================
ಚಿತ್ರಕೃಪೆ: ದಿ ಹಿಂದು ಡಾಟ್ ಕಾಮ್.

ಶನಿವಾರ, ಡಿಸೆಂಬರ್ 22, 2012

ಹೊರಬನ್ನಿ ಜಾತಿಗಳೇ...!

ಜಾತಿ-ಜನಿವಾರಗಳ ಗಂಟೆಳೆದು ನೇಣು ಹಾಕಹೊರಟವರೆ
ಕೇಳಿ ನೀವರೆಕ್ಷಣ ನಿಮ್ಮ ಸೊಂಟದೊಳು ನೂಲಿಹುದೆ?
ಕೀಳ ಹೊರಟಿರಿ ಎಂದೆನದಿರಿ ಬೇದಭಾವಗಳ ಬರಿದೆ ಬಾಯಲಿ
ನಿಮ್ಮ ನರನಾಡಿಗಳಲಿ ಹರಿವ ನೆತ್ತರು ಕೆಂಪಗಿರಲಿ ಮೊದಲು!

ಬೀಳದಿರಿ ಹೊಟ್ಟೆಯೊಳಗಿಂದ ನೇರನೆಲಕೆ ಮಣ್ಣಾದೀತು ಜೋಕೆ,
ಮೊಲೆಹಾಲು ಉಂಡುಬನ್ನಿ, ನಾಲಗೆಯ ಕೆಸರು ತೊಳೆದೀತು,
ಕರುಳಕರೆಗೊಮ್ಮೆ ಕಿವಿಗೊಟ್ಟು, ಕಣ್ತೆರೆದು ಜೊಲ್ಲು ಸುರಿಸೆ,
ರುಚಿಯಾದೀತು ತಾಯ್ನೆಲ, ಬಳಿಕ ಕಿರುಚುವಿರಂತೆ ಬಾಯ್ತೆರೆದು!

ಕೊರೆಯದಿರಿ ಕನ್ನ, ಕಂದರಗಳ ಅಗೆದು ಕುಹಕಿಯಾಗದಿರಿ
ಕಹಿಯುಣ್ಣುವವರು ನೀವೇ ಮುಂದೊಮ್ಮೆ ಬಿದ್ದು ಅದರೊಳಗೆ!
ಸಾವನಪ್ಪದಿರಿ ಉಸಿರ ಒಳಗಿಟ್ಟು ಕೆಸರೊಳು ಹೂತಂತೆ ಜೀವ,
ಕಳೆಯಾಗದಿರಿ ಹಸಿರ ಪೈರೊಳಗೆ ಬುಡ ಕೊರೆವ ಹುಳದಂತೆ!

ತೆರೆಯ ಬನ್ನಿ ನಿಮ್ಮೆದೆಯನು, ಮುದ್ದಿನಲಿ ಮಾನವತೆಯ ಸಾರ ಬನ್ನಿ,
ಸವಿಯ ಬನ್ನಿ ಸತ್ವವಿಹುದು ಐಕ್ಯದಲಿ, ಭಾವೈಕ್ಯದ ಬೆಸುಗೆಯಲಿ!

====
ಚಿತ್ರಕೃಪೆ: ಗೂಗಲ್ ಇಮೇಜಸ್

ಶನಿವಾರ, ಡಿಸೆಂಬರ್ 15, 2012

ನಕ್ಕು ಬಿಡು!

ಬೆರೆಯಗೊಡು ತೆರೆದು ಹಗುರವಾಗಲಿ
ಮನವು ಮಗುವ ಮಂದಹಾಸದಲಿ ತೇಲಿ
ಸುಳ್ಳ ಸುಳಿವಿರದ ಮನದಾಳದ ಕೋಡಿ
ಹರಿದು ತಿಳಿನೀರ ತೊರೆಯಂದದಿ ಮೋಡಿ!

ತೋಳತೆಕ್ಕೆಯಲಪ್ಪಿ ಬಲು ಹರುಷದಲಿ
ಮರೆವೆ ನನ್ನ ನಾ ಮುದವಿತ್ತು ಮನದಿ
ಏನನಿಟ್ಟಿರುವೆ ಬಾಲೆ ನಿನ್ನ ನಗುವೊಳಗೆ
ಎನ್ನ ಹೃದಯದ ನೋವ ಅಳಿಸುವಂದಕೆ!

ನಾ ಮಗುವಾಗಿ ಜಗದಿ ನಲಿಯಬೇಕು
ಗುರುವಾಗೆನಗೆ ನಗೆಯ ಧಾರೆಯೆರೆದು
ಹಗುರಾಗಿಬಿಡಬೇಕು ಮನವು ನಿನ್ನಂತೆ
ತೊದಲಬೇಕಿನ್ನು ತೊರೆದು ಚಿಂತೆ!

ನಕ್ಕು ಬಿಡು ನಕ್ಕು ಬಿಡು ನೀ ಮಗುವೇ
ನೋವ ಸಿಕ್ಕ ಬಿಡಿಸಿಬಿಡು ಬಾ ನಗುವೇ!
====

ಭಾನುವಾರ, ಡಿಸೆಂಬರ್ 2, 2012

ಮಣ್ಣಾಗಬೇಕು!

ತೊಳೆದು ಬಿಡಬೇಕು ಒಳಗೊಳಗೆ
ಕುದಿವ ಹೊಲಸುಗಳ ಹುಟ್ಟಡಗಿಸಿ
ತಿಳಿಯಾಗಬೇಕು ತನುವು ತೆರೆದು!

ಬೆಳೆದು ನಿಲಬೇಕು ಬೆಳಕೊಳಗೆ
ಕತ್ತಲ ಕಸುಬುಗಳ ಕಟ್ಟಲೆಯಿರದೆ
ಸವಿಯಾಗಬೇಕು ಮನವು ಮೆರೆದು!

ಬೆಸೆದು ಬಂಧಗಳ ಒಲವೊಳಗೆ,
ಕಠಿಣ ಕಾಲಗಳ ಮೆಟ್ಟಿಮುರಿದು
ಮೆದುವಾಗಬೇಕು ಹೂವಂತೆ ಬಿರಿದು!

ಹೊಳೆದು ನಗಬೇಕು ಜಗದೊಳಗೆ
ಕಸುವ ಹಿರಿಮೆಗಳ ಪಟ್ಟಗಳಿಸಿ
ಮಣ್ಣಾಗಬೇಕು ಬದುಕು ಸವೆದು!
=====

ಚಿತ್ರಕೃಪೆ:ಗೂಗಲ್ ಇಮೇಜಸ್

ಮಂಗಳವಾರ, ನವೆಂಬರ್ 6, 2012

ಕಾದವರು!

ತೆರೆದವರಾರು ಕದವ
ಕರುಣೆಯಿರದ ನೋವ
ಬರಮಾಡಿ ಸೆಳೆದು?

ಹೊರದೂಡದಿರಲೆನ್ನ
ಹರುಕುಗೊಳಿಸಿ ಬಾಳ-
ಬಾಣಲೆಯಲಿ ಹುರಿದು!

ಬರದ ಬಿಸಿಯನೀಯೆ
ಬರಡು ಮರುಭೂಮಿ
ನೀರ ಕಾಣುವೆನೆಲ್ಲಿ?

ಕೊರಗು ಎನಗಿತ್ತು
ಪೊರೆವ ಮನಸಿರದೆ
ಕಠಿಣನೇಕೆ ಕಣ್ಣಮುಚ್ಚಿ?

ಕರೆದುಕೋ ಅಕ್ಕರದಿ
ನಿನ್ನ ಬಳಿ ಬಿಗಿದಪ್ಪಿ
ಬವಣೆ ಕೊನೆ ಜಗದಿ
ಅತಿ ಕಾದ ಮನಕೆ!

====
ಚಿತ್ರಕೃಪೆ:
en.sanofi.com


ಭಾನುವಾರ, ಅಕ್ಟೋಬರ್ 28, 2012

ಹೂವಾದವರು!

ಇನ್ನೂ ಕತ್ತಲು ಭಾನಿರದ ಬಾನು
ಮೂಡಣದ ಕತ್ತಲಲಿ ಬೆಳಕು ಬಿರಿದಂತೆ
ಹೂವ ನಗು, ಹಸಿರ ಗಿಡದಿ ಸೂರ್ಯ!

ಬಿರಿದರಳಿ ಪುಷ್ಪ, ಯಾರ ಮುಡಿಗೋ?
ಅರೆಘಳಿಗೆ ಅರಿವಿರದಂತೆ ಘಮದಚ್ಚರಿ!
ಮನವ ಕಲಕಿ ಬರಸೆಳೆದು ನಾನಾತ್ಮೀಯ!

ಬಿರಿದಿದ್ದಾನೆ ಭಾನು ಬಿಸಿಲ ನಗು ಬಾನು,
ಅರಳಿ ನಿಂತ ಬದುಕರೆಘಳಿಗೆ ಬಸವಳಿದು,
ಬಾಡಿ ನಿಂತಾಗ, ಗೆಲ್ಲಿಗೂ ಭಾರ!

ಎಲೆ ದೂರ? ಹಸಿರ ತೊಟ್ಟು ಬಿಟ್ಟು
ಬಾಡಿದೆಸಳು ಬುವಿಗೆ, ಅಲ್ಲಿ ಮಣ್ಣು,
ಮುಚ್ಚಿ ಅರೆ ಕ್ಷಣ ಕಣ್ಣು, ಕಣ್ಣೀರು!
======